ದೀನ ದಲಿತರ ಏಳ್ಗೆಗೆ ಶ್ರಮಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು- ಶೇಖರಪ್ಪ ನಾಗರಳ್ಳಿ

????????????????????????????????????

ಕೊಪ್ಪಳ: ದೀನ ದಲಿತರ, ಹಿಂದುಳಿದವರ ಏಳಿಗೆಗೆ ಶ್ರಮಿಸಿದ, ದೇಶ ಕಂಡ ಅದ್ಭುತ ದಾರ್ಶನಿಕರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಬಣ್ಣಿಸಿದರು.

????????????????????????????????????

????????????????????????????????????

ಕೊಪ್ಪಳ ಜಿಲ್ಲಾಡಳಿತದಿಂದ ನಗರದ ಸಾಹಿತ್ಯ ಭವನದಲ್ಲಿ ಬುಧವಾರದಂದು ಇದೇ ಮೊದಲ ಬಾರಿಗೆ ಸರ್ಕಾರಿ ಕಾರ್ಯಕ್ರಮವನ್ನಾಗಿ ಏರ್ಪಡಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಕೇರಳ ರಾಜ್ಯದಲ್ಲಿ ಹುಟ್ಟಿ, ದಕ್ಷಿಣ ಭಾರತದ ದೀನ ದಲಿತರು, ಹಿಂದುಳಿದ ವರ್ಗಗಳ ಏಳಿಗೆಗೆ ಶ್ರಮಿಸಿದ ಅದ್ಭುತ ದಾರ್ಶನಿಕರು ಬ್ರಹ್ಮಶ್ರೀ ನಾರಾಯಣ ಗುರುಗಳು. ಅಸ್ಪೃಷ್ಯತೆಯ ನಿವಾರಣೆ ನಿಟ್ಟಿನಲ್ಲಿ ಮಹಾತ್ಮಾಗಾಂಧೀಜಿ ಅವರೊಂದಿಗೆ ಜೊತೆಯಾಗಿ ಸಮಾಜಕ್ಕೆ ಜಾಗೃತಿ ಮೂಡಿಸಲು ಶ್ರಮಿಸಿದರು. ಮನುಷ್ಯ, ಮನುಷ್ಯನಂತೆ ಜೀವಿಸಬೇಕು ಎಂಬ ಅರ್ಥಗರ್ಭಿತ ನುಡಿಗಳನ್ನು ತಮ್ಮ ಜಾಗೃತಿ ಸಂದೇಶಗಳಲ್ಲಿ ನುಡಿದ ನಾರಾಯಣ ಗುರುಗಳು, ಪ್ರಾಣಿಬಲಿ ಕೊಡುವಂತಹ ಪದ್ಧತಿಯನ್ನು ಆಗಿನ ಸಂದರ್ಭದಲ್ಲಿಯೇ ವಿರೋಧಿಸಿದ್ದರು. ದಲಿತ ವರ್ಗದವರಿಗೆ ದೇವಾಲಯದ ಪ್ರವೇಶ ನಿರಾಕರಿಸುವ ವ್ಯವಸ್ಥೆ ಇರುವ ಸಂದರ್ಭದಲ್ಲಿ, ದಲಿತರ ಪ್ರವೇಶಕ್ಕಾಗಿಯೇ ತಾವೇ ಅನೇಕ ದೇವಾಲಯಗಳನ್ನು ಕಟ್ಟಿದರು. ಸಮಾಜ ಸುಧಾರಣೆಯ ನಿಟ್ಟಿನಲ್ಲಿ ದಿಟ್ಟತನದಿಂದ ನಾರಾಯಣ ಗುರುಗಳು ಕೈಗೊಂಡ ಮಹತ್ವದ ಕಾರ್ಯಗಳೇ, ಇಂದಿಗೂ ಅವರನ್ನು ಜನಮಾನಸದಲ್ಲಿ ಉಳಿಯುವಂತೆ ಮಾಡಿದೆ ಎಂದು ಜಿ.ಪಂ. ಅಧ್ಯಕ್ಷ ಶೇಕರಪ್ಪ ನಾಗರಳ್ಳಿ ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು, ಮಾನವೀಯ ಮೌಲ್ಯಯುತ ಸಿದ್ಧಾಂತಗಳು ಕುಸಿಯುತ್ತಿರುವ ಈ ಸಂದರ್ಭದಲ್ಲಿ, ದಾರ್ಶನಿಕರ ಜಯಂತಿ ಆಚರಣೆಗಳು, ಮನುಕುಲದ ಶ್ರೇಯಸ್ಸಿಗೆ ಪೂರಕವೆನಿಸುತ್ತಿವೆ. ಮನುಕುಲ ಒಂದೇ ಆಗಿರುವಾಗ, ಜಾತಿಗಳಿಂದ ಬೇರೆ, ಬೇರೆ ಮಾಡುವುದು ಸಲ್ಲದೆ ಎಂಬುದು ಬ್ರಹ್ಮಶ್ರೀ ನಾರಾಯಣ ಗುರುಗಳ ನಿಲುವಾಗಿತ್ತು. ಎಲ್ಲ ಸಮಾಜದ ಅಭಿವೃದ್ಧಿಯಾದಾಗಲೇ ದೇಶದ ಸಮಗ್ರ ಅಭಿವೃದ್ಧಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಣದಿಂದ ಮಾತ್ರ, ಸಮಾಜ ಸುಧಾರಣೆ ಹಾಗೂ ಅಭಿವೃದ್ಧಿ ಸಾಧ್ಯವಿದೆ ಎಂದರು.ಜವಳಗೇರಾದ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ. ಎಸ್. ಶಿವರಾಜ ಅವರು ವಿಶೇಷ ಉಪನ್ಯಾಸ ನೀಡಿ, ಬಸವಣ್ಣನವರು, ಮಹಾತ್ಮಾ ಗಾಂಧೀಜಿ, ಅಂಬೇಡ್ಕರ್ ನಂತಹ ಅನೇಕ ಮಹನೀಯರು ಮನುಕುಲಕ್ಕೆ ಕೊಡುಗೆಯನ್ನು ನೀಡಿದ್ದಾರೆ. ೧೨ ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಶ್ರಮಿಸಿದ ಬಸವಣ್ಣನವರು ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತಗಳಲ್ಲಿ ಸಾಮಿಪ್ಯವಿದೆ. ಮನುಕುಲದ ಒಳಿತಿಗಾಗಿ ದುಡಿದ ಯಾವುದೇ ಮಹನೀಯರನ್ನು ಒಂದೇ ಜಾತಿಗೆ ಸೀಮಿತರನ್ನಾಗಿಸಬಾರದು. ೧೮೫೪ ರಲ್ಲಿ ಕೇರಳದಲ್ಲಿ ನಾರಾಯಣ ಗುರುಗಳು ಜನಿಸಿದ ಕಾಲಘಟ್ಟದಲ್ಲಿ, ದೇಶದಲ್ಲಿ ಬ್ರಿಟೀಷರ ಆಳ್ವಿಕೆಯಿತ್ತು. ಕೆಲ ರಾಜಮನೆತನಗಳು ಬ್ರಿಟೀಷರ ಆಜ್ಞಾ ಪಾಲಕರಾಗಿದ್ದರು. ಜನರ ಮೇಲೆ ನಾನಾ ತರದ ತೆರಿಗೆಗಳನ್ನು ವಿಧಿಸಲಾಗುತ್ತಿತ್ತು. ಕೇರಳ ರಾಜ್ಯದಲ್ಲಿ ಆಗಿನ ಸಂದರ್ಭದಲ್ಲಿ ಸ್ತ್ರೀಯರು ಕುಪ್ಪಸ ತೊಡಲೂ ಸಹ ರಾಜರ ಅನುಮತಿ ಪಡೆಯುವಂತಹ ಸ್ಥಿತಿ ಹಾಗೂ ಅಸ್ಪೃಷ್ಯತೆ ವ್ಯವಸ್ಥೆ ತಾಂಡವವಾಡುತ್ತಿತ್ತು. ಇವುಗಳ ಮಧ್ಯೆಯೇ ಬೆಳೆದ ನಾರಾಯಣ ಗುರುಗಳು, ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯವೆಂದರಿತು. ವೇದ, ಸಂಸ್ಕೃತಗಲ ಅಧ್ಯಯನ ಮಾಡುವುದರ ಜೊತೆಗೆ, ಆಯುರ್ವೇದಲ್ಲೂ ಪಾಂಡಿತ್ಯವನ್ನು ಪಡೆದುಕೊಂಡರು. ಆಯುರ್ವೇದ ಚಿಕಿತ್ಸೆಯನ್ನು ನೀಡುವ ಅವಕಾಶವನ್ನೂ ಸಹ ಜನರಲ್ಲಿ ಜಾಗೃತಿ ಮೂಡಿಸಲು ಬಳಸಿಕೊಂಡರು. ಕೇರಳ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಸಂಚರಿಸಿ, ಸಮಾಜದ ಸುಧಾರಣೆಗೆ ಶ್ರಮಿಸಿದರು. ಅವರ ಕೀರ್ತಿ ಶ್ರೀಲಂಕಾ ದೇಶಕ್ಕೂ ಹಬ್ಬಿದ್ದು, ಶ್ರೀಲಂಕಾದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅಂಚೆ ಚೀಟಿಯನ್ನು ಅಲ್ಲಿನ ಸರ್ಕಾರ ಬಿಡುಗಡೆ ಮಾಡಿದೆ. ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವುದು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಗೌರವ ಸಲ್ಲಿಸಿದಂತೆ ಎಂದು ಶಿವರಾಜ ಅವರು ಹೇಳಿದರು.ತಾಲೂಕಾ ಪಂಚಾಯತಿ ಅಧ್ಯಕ್ಷ ಬಾಲಚಂದ್ರನ್, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿ.ಪಂ. ಸದಸ್ಯರುಗಳಾದ ಗವಿಸಿದ್ದಪ್ಪ ಕರಡಿ, ರಾಮಣ್ಣ ಚೌಡ್ಕಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಖಾಜಾವಲಿ ಬನ್ನಿಕೊಪ್ಪ, ಸದಸ್ಯ ಮುತ್ತು ಕುಷ್ಟಗಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುನ್ನ ನಗರದ ಸಿರಸಪ್ಪಯ್ಯನ ಮಠದ ಆವರಣದಿಂದ ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನದವರೆಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರದ ಮೆರವಣಿಗೆ ರಥದಲ್ಲಿ ಅದ್ಧೂರಿಯಿಂದ ಸಾಗಿತು. ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ಕಲಾತಂಡಗಳನ್ನು ಒಳಗೊಂಡಂತೆ ವಿವಿಧ ವೇಷಧಾರಿಗಳ ನೃತ್ಯವು ಮೆರವಣಿಗೆಯನ್ನು ಆಕರ್ಷಕವಾಗಿಸಿತು.

Please follow and like us:
error