ಜಿಲ್ಲೆಯ ಎಲ್ಲಾ ಶಾಲಾ ಮಕ್ಕಳಿಗೆ ಆಧಾರ್ ಕಾರ್ಡ್ -ಜಿಲ್ಲಾಧಿಕಾರಿ ಕನಗವಲ್ಲಿ

ಕೊಪ್ಪಳ – : ಜಿಲ್ಲೆಯ ಎಲ್ಲ ಶಾಲಾ ಮಕ್ಕಳಿಗೆ ಡಿಸೆಂಬರ್ ತಿಂಗಳ ಒಳಗಾಗಿ ಆಧಾರ್ ಕಾರ್ಡ್ ನೋಂದಣಿ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.ಜಿಲ್ಲೆಯ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲೇ ಆಧಾರ್ ಕಾರ್ಡ್ ನೋಂದಣಿ ಮಾಡಿಸಬೇಕು. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ೨,೬೮,೨೫೮ ಮಕ್ಕಳಿದ್ದು, ಈ ಪೈಕಿ ೧,೫೫,೧೮೮ ಮಕ್ಕಳು ಆಧಾರ್ ಕಾರ್ಡ್ ಪಡೆದುಕೊಂಡಿದ್ದಾರೆ. ಇನ್ನೂ ೬೩,೪೭೯ ಮಕ್ಕಳು ಆಧಾರ್ ಕಾರ್ಡ್‌ಗೆ ನೋಂದಣಿ ಮಾಡಿಸುವುದು ಬಾಕಿ ಇದೆ. ಆಯಾ ತಾಲೂಕು ಕ್ಷೇತ್ರ ಶಿಕ್ಷಣಾದಿಕಾರಿಗಳು ಎಲ್ಲ ಮಕ್ಕಳ ಆಧಾರ್ ನೋಂದಣಿ ಮಾಡಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವುದರ ಜೊತೆಗೆ, ಇದಕ್ಕಾಗಿ ರೂಟ್ ಮ್ಯಾಪ್ ಮಾಡಿಕೊಳ್ಳಬೇಕು. ಆಧಾರ್ ನೋಂದಣಿ ಕಾರ್ಯವನ್ನು ಕೂಡಲೆ ಶಾಲಾ ಹಂತದಲ್ಲಿ ಪ್ರಾರಂಭಿಸಬೇಕು. ಅಗತ್ಯವಿದ್ದಲ್ಲಿ ಪ್ರತಿ ಬ್ಲಾಕ್‌ಗೆ ಕನಿಷ್ಟ ೦೨ ವಾಹನವನ್ನು ಟೆಂಡರ್ ಮೂಲಕ ಬಾಡಿಗೆಗೆ ಪಡೆದು, ಆಧಾರ್ ನೋಂದಣಿ ಕಾರ್ಯವನ್ನು ಡಿಸೆಂಬರ್ ತಿಂಗಳ ಅಂತ್ಯದೊಳಗೆ ಎಲ್ಲ ಶಾಲಾ ಮಕ್ಕಳ ಆಧಾರ್ ನೋಂದಣಿ ಕಾರ್ಯ ಪೂರ್ಣಗೊಳಿಸಬೇಕು. ಅದೇ ರೀತಿ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಂಬಂಧಿತ ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಮಕ್ಕಳ ಆಧಾರ್ ಕಾಡ್ ನೊಂದಣಿ ಆಗಿದೆಯೇ ಇಲ್ಲವೆ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ, ಇದುವರೆಗೂ ನೋಂದಣಿ ಆಗದಿರುವ ವಿದ್ಯಾರ್ಥಿಗಳ ಆಧಾರ್ ನೋಂದಣಿ ಪೂರ್ಣಗೊಳಿಸಬೇಕು. ಪದವಿಪೂರ್ವ ಶಿಕ್ಷಣ ಇಲಾಖೆ ವ್ಯಾಪ್ತಿಯ ಪದವಿಪೂರ್ವ ಕಾಲೇಜುಗಳಲ್ಲಿ ಸುಮಾರು ೫೦೦೦ ವಿದ್ಯಾರ್ಥಿಗಳು ಆಧಾರ್ ನೋಂದಣಿ ಮಾಡಿಸುವುದು ಬಾಕಿ ಇದೆ. ಶೀಘ್ರ ಕಾಲೇಜು ವಿದ್ಯಾರ್ಥಿಗಳ ಆಧಾರ್ ನೋಂದಣಿ ಕಾರ್ಯವೂ ಪೂರ್ಣಗೊಳ್ಳಬೇಕು ಎಂದು  ಅವರು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ತಾಕೀತು ಮಾಡಿದರು. ಮಾಸಾಶನ ಫಲಾನುಭವಿಗಳು ಆಧಾರ್ ವ್ಯಾಪ್ತಿಗೆ : ಜಿಲ್ಲೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಸಂಧ್ಯಾಸುರಕ್ಷಾ, ವಿಧವಾ ವೇತನ, ಅಂಗವಿಕಲರ ವೇತನ ಸೇರಿದಂತೆ ವಿವಿಧ ಮಾಸಾಶನ ಫಲಾನುಭವಿಗಳನ್ನು ಕಡ್ಡಾಯವಾಗಿ ಆಧಾರ್ ನೋಂದಣಿ ವ್ಯಾಪ್ತಿಗೆ ಸೇರಿಸಬೇಕು. ಜಿಲ್ಲೆಯಲ್ಲಿ ೧,೫೩,೫೯೫ ಫಲಾನುಭವಿಗಳು ಮಾಸಾಶನವನ್ನು ಪಡೆಯುತ್ತಿದ್ದು, ಇದುವರೆಗೂ ೭೮,೯೭೯ ಫಲಾನುಭವಿಗಳ ಆಧಾರ್ ನೋಂದಣಿ ಪೂರ್ಣಗೊಂಡಿದೆ. ಇನ್ನೂ ೭೪೬೧೬ ಮಾಸಾಶನ ಫಲಾನುಭವಿಗಳು ಆಧಾರ್ ನೋಂದಣಿ ಮಾಡಿಸಿಲ್ಲ. ಮಾಸಾಶನ ಫಲಾನುಭವಿಗಳ ಆಧಾರ್ ನೋಂದಣಿ ಕಾರ್ಯ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಬಾಕಿ ಫಲಾನುಭವಿಗಳ ಆಧಾರ್ ನೋಂದಣಿ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.dcಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಡಿಡಿಪಿಐ ಶ್ಯಾಮಸುಂದರ್, ಸರ್ವಶಿಕ್ಷಣ ಅಭಿಯಾನದ ಸಮನ್ವಯಾಧಿಕಾರಿ ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರೇಮಾನಂದಸಾಗರ್, ಸೇರಿದಂತೆ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಬಿಆರ್‌ಸಿ, ಸಿಆರ್‌ಸಿಗಳು ಭಾಗವಹಿಸಿದ್ದರು.

Please follow and like us:
error