ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ

    ಹೈದ್ರಾಬಾದ-ಕರ್ನಾಟಕ ವಿಮೋಚನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಸ್ವಾತಂತ್ರ್ಯ ಹೋರಾಟಗಾರರೆ, ಚುನಾಯಿತ ಪ್ರತಿನಿಧಿಗಳೆ, ಸಾರ್ವಜನಿಕ ಬಂಧುಗಳೆ,  ಅಧಿಕಾರಿ ಮಿತ್ರರೆ, ಶಿಕ್ಷಕ ಬಳಗದವರೆ, ಮುದ್ದುಮಕ್ಕಳೆ, ಮಾಧ್ಯಮದ ಸ್ನೇಹಿತರೆ, ತಮ್ಮೆಲ್ಲರಿಗೂ ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆಯ ಶುಭಾಷಯಗಳು.    ಹೈದ್ರಾಬಾದ್-ಕರ್ನಾಟಕ ಪ್ರದೇಶ ನಿಜಾಮರ ಆಳ್ವಕೆಯಿಂದ ಸ್ವಾತಂತ್ರ್ಯಗೊಂಡು ೬೮ ವರ್ಷಗಳಾದ ನೆನಪಿನಲ್ಲಿ ಇಂದು ಏರ್ಪಡಿಸಿರುವ ವಿಮೋಚನಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ನನಗೆ ಸಂತೋಷವೆನಿಸುತ್ತದೆ.  ಇದಕ್ಕಾಗಿ ಹೋರಾಡಿದ ಎಲ್ಲ ಮಹನೀಯರಿಗೆ ನಮ್ಮ ನಿಮ್ಮೆಲ್ಲರ ಪರವಾಗಿ ಗೌರವದ ವಂದನೆಗಳು.    ನಿಜಾಮರ ಕಪಿಮುಷ್ಠಿಯಿಂದ ಬಿಡುಗಡೆ ಹೊಂದಿ, ಹೈದ್ರಾಬಾದ್-ಕರ್ನಾಟಕ ಭಾಗದ ಜಿಲ್ಲೆಗಳಿಗೆ ಸ್ವಾತಂತ್ರ್ಯ ದೊರೆತಿದ್ದು ಒಂದು ರೋಚಕ ಇತಿಹಾಸವಾಗಿ ಜನಮಾನಸಲ್ಲಿ ಉಳಿದಿದೆ. ಸುದೀರ್ಘ ಹೋರಾಟದ ಫಲವಾಗಿ ನಮ್ಮ ದೇಶ ಆಗಸ್ಟ್ ೧೫, ೧೯೪೭ ರಂದು ಸ್ವಾತಂತ್ರ್ಯ ಪಡೆಯಿತು.
ಆದರೆ, ಹೈದರಾಬಾದ್ ನಿಜಾಮರ ಆಳ್ವಿಕೆಯ ಭಾಗವಾಗಿದ್ದ ಕೊಪ್ಪಳ, ರಾಯಚೂರು, ಗುಲಬರ್ಗಾ, ಬೀದರ್   ಹಾಗೂ ಇತರ ಪ್ರದೇಶಗಳು ಸ್ವಾತಂತ್ರ್ಯದ ಸವಿ ಸವಿಯಲು ಒಂದು ವರ್ಷ ಹೆಚ್ಚು ಕಾಯಬೇಕಾಯಿತು.  ಇಡೀ ದೇಶ ಸ್ವಾತಂತ್ರ್ಯದ ಸಂಭ್ರಮದಲ್ಲಿದ್ದರೆ, ಹೈದ್ರಾಬಾದ್-ಕರ್ನಾಟಕ ಭಾಗದ ಜನರು ರಜಾಕಾರರ ದಬ್ಬಾಳಿಕೆಗೆ ಸಿಕ್ಕಿ ಶೋಷಣೆಯನ್ನು ಅನುಭವಿಸುತ್ತಿದ್ದರು. ಇಲ್ಲಿನ ಜನ ಬ್ರಿಟೀಷರ ವಿರುದ್ಧ ಹೋರಾಡಿದ್ದಲ್ಲದೆ, ನಿಜಾಮ ಶಾಹಿಯ ವಿರುದ್ಧವೂ ಹೋರಾಡಿದ್ದು ಚರಿತ್ರಾರ್ಹ ಸಂಗತಿ.  ಬ್ರಿಟೀಷರ ಕುಮ್ಮಕ್ಕಿನಿಂದ ಹೈದರಾಬಾದ್ ಪ್ರಾಂತ್ಯವನ್ನು ತನ್ನ ವಶದಲ್ಲಿ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದ ನಿಜಾಮರು ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಒಕ್ಕೂಟ ವ್ಯವಸ್ಥೆಗೆ ಸೇರಲು ನಿರಾಕರಿಸಿದರು.  ಹೈದ್ರಾಬಾದಿನ ನಿಜಾಮರು ಸ್ವತಂತ್ರ ಭಾರತದಲ್ಲಿ ವಿಲೀನಗೊಳ್ಳದೆ ತಾನು ಪ್ರತ್ಯೇಕವಾಗಿ ಉಳಿದು, ತಮ್ಮದೇ ಒಂದು ದೇಶವನ್ನಾಗಿ ಆಳ್ವಿಕೆ ನಡೆಸುವ ಮೊಂಡುತನವನ್ನು ಪ್ರದರ್ಶಿಸಿದರು.
ಆಗಿನ ಭಾರತದ ಕೇಂದ್ರ ಗೃಹ ಸಚಿವರಾಗಿದ್ದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರು ದಿಟ್ಟತನದಿಂದ ಕೈಗೊಂಡ ಪೊಲೀಸ್ ಕಾರ್ಯಾಚರಣೆಯಲ್ಲಿ ನಿಜಾಮ ಶರಣಾಗಿ ಭಾರತದ ಒಕ್ಕೂಟಕ್ಕೆ ಸೇರಿದ್ದರಿಂದ  ಹೈದ್ರಾಬಾದ್-ಕರ್ನಾಟಕ ೧೯೪೮ ಸೆಪ್ಟಂಬರ್ ೧೭ ರಂದು ಸ್ವಾತಂತ್ರ್ಯ ಪಡೆಯಿತು.  ಈ ಭಾಗದ ಜನರೂ ಸಹ ಸ್ವಾತಂತ್ರ್ಯದ ಸಂಭ್ರಮ ಅನುಭವಿಸುವಂತಾಯಿತು.
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಎಷ್ಟು ರೋಚಕತೆಯನ್ನು ಹೊಂದಿದೆಯೇ, ಅಷ್ಟೇ ರೋಚಕತೆಯನ್ನು ಹೈದ್ರಾಬಾದ್-ಕರ್ನಾಟಕ ವಿಮೋಚನೆಯ ಹೋರಾಟದ ಇತಿಹಾಸ ಹೊಂದಿದೆ.  ಹೈದ್ರಾಬಾದ್-ಕರ್ನಾಟಕ ಪ್ರಾಂತ್ಯದ ವಿಮೋಚನೆಗೊಂಡ ಇತಿಹಾಸ ಕುರಿತು ಈ ಭಾಗದ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಹೈದ್ರಾಬಾದ್-ಕರ್ನಾಟಕ ವಿಮೋಚನೆಯ ಹೋರಾಟದಲ್ಲಿ ಕೊಪ್ಪಳ ಜಿಲ್ಲೆಯ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಮುಂಚೂಣಿಯಲ್ಲಿದ್ದರು.  ಶ್ರೀ ಶಿವಮೂರ್ತಿ ಸ್ವಾಮಿ ಅಳವಂಡಿ, ಪುಂಡಲೀಕಪ್ಪ ಜ್ಞಾನಮೋಠೆ, ವೀರಭದ್ರಪ್ಪ ಶಿರೂರು, ಸಿ.ಎಂ. ಚುರ್ಚಿಹಾಳ ಮಠ, ಸೋಮಪ್ಪ ಡಂಬಳ, ಯರಾಶಿ ಶಂಕ್ರಪ್ಪ, ಎಂ. ವಿರುಪಾಕ್ಷಪ್ಪ, ನರಸಿಂಗರಾವ್, ಜನಾರ್ಧನರಾವ್ ದೇಸಾಯಿ, ದೇವೇಂದ್ರಕುಮಾರ ಹಕಾರಿ, ಡಾ: ಪಂಚಾಕ್ಷರಿ ಹಿರೇಮಠ ಹಾಗೂ ಇನ್ನೂ ಹಲವಾರು ಹೋರಾಟಗಾರರ ತ್ಯಾಗ ಬಲಿದಾನಗಳಿಂದ ಹೈದ್ರಾಬಾದ್-ಕರ್ನಾಟಕ ವಿಮೋಚನಾ ಹೋರಾಟಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡರು. ಇವರ ಹೋರಾಟ ಈ ನಾಡಿನ ಭವ್ಯ ಇತಿಹಾಸವಾಗಿ ಉಳಿದಿದೆ. ಶಿಕ್ಷಣಕ್ಕೆ ಪುರಾತನ ಕಾಲದಿಂದಲೂ ಹೆಚ್ಚಿನ ಮಹತ್ವ ಕೊಡಲಾಗುತ್ತಿದೆ.  ಸಿಂಧೂ ನದಿ ನಾಗರೀಕತೆಯ ನಂತರದ ದಿನಗಳಲ್ಲಿ ಭಾರತ ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಮುಂದುವರೆದ ಭಾಗವಾಗಿತ್ತು.  ದುರಾದೃಷ್ಟವಷಾತ್, ಪರಕೀಯರ ಆಳ್ವಿಕೆಗೆ ಒಳಗಾದ ನಂತರ ನಮ್ಮ ದೇಶದಲ್ಲಿ ಪ್ರಾಥಮಿಕ ಹಂತದ ಶಿಕ್ಷಣ ನಿರ್ಲಕ್ಷ್ಯಕ್ಕೆ ಒಳಗಾಗಬೇಕಾಯಿತು.  ಆಗ ಆಳ್ವಿಕೆ ನಡೆಸಿದ ಪರಕೀಯರು ನಮ್ಮ ದೇಶದ ಸಂಪತ್ತು ಲೂಟಿ ಹೊಡೆಯಲು ಆದ್ಯತೆ ನೀಡಿದರೇ ಹೊರತು, ಇಲ್ಲಿನ ಶಿಕ್ಷಣ ಅಭಿವೃದ್ಧಿಗೆ ಕಿಂಚಿತ್ತೂ ಯತ್ನಿಸಲಿಲ್ಲ.  ಅದರಲ್ಲೂ ಹೈದ್ರಾಬಾದ್-ಕರ್ನಾಟಕ ಪ್ರಾಂತ್ಯದಲ್ಲಿ ಆಳ್ವಿಕೆ ನಡೆಸುತ್ತಿದ್ದ ನಿಜಾಮರು ಶಿಕ್ಷಣಕ್ಕೆ ಯಾವುದೇ ಆದ್ಯತೆ ನೀಡದ ಕಾರಣದಿಂದ ಈ ಭಾಗದ ಜಿಲ್ಲೆಗಳು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿಯಲು ಕಾರಣವಾಯಿತು.

????????????????????????????????????

????????????????????????????????????

Leave a Reply