ಕೃಷಿ, ನೀರಾವರಿ, ರೈತರ ಅಭಿವೃದ್ಧಿ ಆದ್ಯತೆ – ಸಿದ್ದರಾಮಯ್ಯ

ಕೊಪ್ಪಳ – ರೈತ ಸ್ವಾವಲಂಬಿಯಾಗದಿದ್ದರೆ, ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಕೃಷಿ, ನೀರಾವರಿ ಮತ್ತು ರೈತರ ಅಭಿವೃದ್ಧಿಗೆ ಆದ್ಯತೆ ಹಾಗೂ ಸಾಮಾಜಿಕ ನ್ಯಾಯಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಕೃಷಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕೊಪ್ಪಳದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಉತ್ತರ ಕರ್ನಾಟಕದ 12 ಜಿಲ್ಲೆಗಳ ಕೃಷಿ ಭಾಗ್ಯ ಯೋಜನೆಯ ಸ್ವಾವಲಂಬಿ ಸ್ವಾಭಿಮಾನಿ ರೈತರ ಸಮಾವೇಶದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರೈತ ಸಮಾವೇಶ ಸಂದರ್ಭದಲ್ಲಿ ಮಳೆ ಬಂದಿದ್ದರಿಂದ, ಮಳೆ ರೈತರಿಗೆ ಶುಭ ಸಂಕೇತವಾಗಿದೆ ಎಂದು ತಮ್ಮ ಮಾತನ್ನು ಪ್ರಾರಂಭಿಸಿದ ಮುಖ್ಯಮಂತ್ರಿಗಳು, 12 ಜಿಲ್ಲೆಗಳಿಂದ ರೈತರು ಬಂದಿದ್ದೀರಿ, ಕೃಷಿ ಸಚಿವರು, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಶ್ರಮದಿಂದ ಸಮಾವೇಶ ಅದ್ಭುತ ಯಶಸ್ಸನ್ನು ಕಂಡಿದೆ. ರೈತ ಸಮಾವೇಶವು ಯಾವುದೇ ಪಕ್ಷಕ್ಕೆ ಸೀಮಿತವಾದ ಕಾರ್ಯಕ್ರಮವಾಗಿಲ್ಲ. ಅಲ್ಲದೆ ಈ ಕಾರ್ಯಕ್ರಮವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡಿಲ್ಲ. ಇದು ಸ್ವಾವಲಂಬಿ-ಸ್ವಾಭಿಮಾನಿ ರೈತರ ಸಮಾವೇಶವಾಗಿ ಬಿಂಬಿತವಾಗಿದ್ದು ಸಂತೋಷ ತಂದಿದೆ. ನಮ್ಮ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ರೈತರಿಗಾಗಿ ಏನನ್ನು ಮಾಡಿದ್ದೇವೆ ಎಂಬುದನ್ನು ತಿಳಿಸಬೇಕಿತ್ತು. 2015-16 ರಲ್ಲಿ ಮೊದಲ ಬಾರಿಗೆ ನಮ್ಮ ಸರ್ಕಾರ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರ ಆಸಕ್ತಿಯಿಂದ ರೂಪಿತವಾಗಿದ್ದೇ ಕೃಷಿ ಭಾಗ್ಯ ಯೋಜನೆಯಾಗಿದೆ. ಕೃಷಿ ಭಾಗ್ಯ ಯೋಜನೆಯಿಂದ ರಾಜ್ಯದ 01 ಲಕ್ಷ ಕುಟುಂಬಕ್ಕೆ ಅನುಕೂಲವನ್ನು ತಂದಿದೆ ಎಂದರು. ಕೃಷಿ ಹೊಂಡ ಯೋಜನೆ ಅತ್ಯಂತ ಉಪಯುಕ್ತ ಯೋಜನೆಯಾಗಿದೆ ಎಂಬುದಾಗಿ ಕೃಷಿಕರೇ ಹೇಳಿಕೊಳ್ಳುತ್ತಿದ್ದಾರೆ. ಆದ್ದರಿಂದಲೇ ಕೃಷಿ ಭಾಗ್ಯ ಯೋಜನೆಯನ್ನು ರೈತರಿಗೇ ಸಮರ್ಪಣೆ ಮಾಡುತ್ತಿದ್ದೇವೆ. ಕೃಷಿ ಭಾಗ್ಯ ಯೋಜನೆ ನಿಮಗೆಲ್ಲ ಅನುಕೂಲವನ್ನು ತಂದಿದೆಯೇ ಇಲ್ಲವೋ ಎಂದು ರೈತ ಸಮೂಹಕ್ಕೆ ಮುಖ್ಯಮಂತ್ರಿಗಳು ಕೇಳಿದ ಪ್ರಶ್ನೆಗೆ, ಹೌದು, ಅನುಕೂಲವಾಗಿದೆ ಎಂಬ ಹರ್ಷೋದ್ಘಾರ ರೈತರಿಂದ ಕೇಳಿಬಂದಿತು.ರೈತ ಸ್ವಾವಲಂಬಿಯಾಗದಿದ್ದರೆ, ನಮ್ಮ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ರೈತರನ್ನು ನಾವು ಮರೆತರೆ, ಆಹಾರ ಉತ್ಪಾದನೆ ಸಾಧ್ಯವಿಲ್ಲ. ರಾಜಸ್ಥಾನ ರಾಜ್ಯ ಬಿಟ್ಟರೆ ಅತಿ ಹೆಚ್ಚು ಒಣಭೂಮಿ ಇರುವುದು ಕರ್ನಾಟಕದಲ್ಲಿಯೇ. ರಾಜ್ಯದಲ್ಲಿ 1. 21 ಲಕ್ಷ ಹೆ. ಕೃಷಿ ಯೋಗ್ಯ ಭೂಮಿ ಇದೆ. ಈ ಪೈಕಿ ಶೇ. 66 ರಿಂದ 70 ರಷ್ಟು ಒಣಭೂಮಿ ಬೇಸಾಯಕ್ಕೆ ಒಳಪಟ್ಟಿದೆ. ಮಳೆಯಾಶ್ರಿತ ರೈತರೇ ಹೆಚ್ಚಾಗಿ ಇರುವುದರಿಂದ, ದೊಡ್ಡ ಸಂಖ್ಯೆಯಲ್ಲಿರುವ ರೈತರ ಅಭಿವೃದ್ಧಿ ನಿಟ್ಟಿನಲ್ಲಿ ನಮ್ಮ ಸರ್ಕಾರ ಅಧ್ಯಯನ ನಡೆಸಿಯೇ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ. ಮಳೆ ನೀರು ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸಂಗ್ರಹಿಸಿ ಪಂಪ್‍ಸೆಟ್, ಸ್ಪ್ರಿಂಕ್ಲರ್ ಅಳವಡಿಸಿಕೊಂಡು ರೈತರು ನೀರು ಬಳಸುತ್ತಿದ್ದಾರೆ. ಒಣಭೂಮಿ ಆಶ್ರಿತ ರೈತರಿಗೆ ಕೃಷಿ ಭಾಗ್ಯ ಯೋಜನೆ ವರದಾನವಾಗಿದ್ದು, ಕೃಷಿ ಭಾಗ್ಯ ಯೋಜನೆಗಾಗಿಯೇ 1121 ಕೋಟಿ ರೂ. ಅನುದಾನವನ್ನು ನಮ್ಮ ಸರ್ಕಾರ ಒದಗಿಸಿದೆ. ಕೃಷಿ ಹೊಂಡ ಮಾಡಿಕೊಂಡಿರುವ ರೈತರು ಕನಿಷ್ಟ 03 ರಿಂದ 08 ಎಕರೆಗೆ ನೀರು ಪೂರೈಸಿಕೊಂಡು, ಬೆಳೆಯನ್ನು ಪಡೆಯುತ್ತಿದ್ದಾರೆ. ಕೃಷಿ ಭಾಗ್ಯ ಯೋಜನೆಯ ಬಗ್ಗೆ ಕೃಷಿಕರೇ ಕೊಂಡಾಡುತ್ತಿದ್ದಾರೆ. ರಾಜ್ಯದಲ್ಲಿ ಕೃಷಿಹೊಂಡ, ಪಾಲಿಹೌಸ್, ನೆರಳು ಪರದೆ ಘಟಕಕ್ಕೆ ವ್ಯಾಪಕ ಬೇಡಿಕೆ ಸಿಗುತ್ತಿದೆ. ಬೇರೆ ಇಲಾಖೆಗೆ ಅನುದಾನದ ಕೊರತೆಯಾದರೂ ಚಿಂತೆಯಿಲ್ಲ, ಕೃಷಿ ಇಲಾಖೆಗೆ ಹೆಚ್ಚಿನ ಅನುದಾನ ನೀಡುವಂತೆ ಆರ್ಥಿಕ ಇಲಾಖೆಗೆ ಸೂಚನೆ ನೀಡಲಾಗಿದೆ. ಕೃಷಿ ಇಲಾಖೆಯಿಂದ ಹೆಚ್ಚುವರಿಯಾಗಿ 600 ಕೋಟಿ ರೂ. ಗೆ ಬೇಡಿಕೆ ಸಲ್ಲಿಸಿದ್ದು, ಈಗಾಗಲೆ ಹೆಚ್ಚುವರಿಯಾಗಿ 300 ಕೋಟಿ ರೂ. ಗಳ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

Please follow and like us:
error