ಕುಷ್ಟಗಿ-ಯಲಬುರ್ಗಾ ತಾಲೂಕುಗಳಿಗೆ ಶುದ್ಧ ಕುಡಿಯುವ ನೀರು

????????????????????????????????????

ಕೊಪ್ಪಳ – ಕುಡಿಯುವ ನೀರಿನ ತೀವ್ರ ತೊಂದರೆ ಎದುರಿಸುತ್ತಿರುವ ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನ ೩೫೯ ಜನವಸತಿ ಪ್ರದೇಶಗಳಿಗೆ ಆಲಮಟ್ಟಿಯಿಂದ ಕೃಷ್ಣಾ ನೀರನ್ನು ಪೂರೈಕೆ ಮಾಡುವ ೬೫೦ ಕೋಟಿ ರೂ. ಗಳ ಶಾಶ್ವತ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಗೆ ಟೆಂಡರ್ ಕರೆಯಲಾಗಿದ್ದು, ಬರುವ ಜನವರಿ ತಿಂಗಳಿನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.

????????????????????????????????????

     ಕುಷ್ಟಗಿ ಪಟ್ಟಣದ ಬುತ್ತಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಸಾರ್ವಜನಿಕ ಕುಂದುಕೊರತೆಗಳ ಅರ್ಜಿ ವಿಚಾರಣೆ ಮತ್ತು ಅಹವಾಲು ಆಲಿಸುವ ಸಲುವಾಗಿ ಶನಿವಾರದಂದು ಆಯೋಜಿಸಲಾಗಿದ್ದ ಜನಸಂಪರ್ಕ ಸಭೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ ೩೫೯ ಜನವಸತಿ ಪ್ರದೇಶಗಳಿಗೆ ಕೃಷ್ಣಾ ನದಿಯಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವದ ಯೋಜನೆಗೆ ನಮ್ಮ ಸರ್ಕಾರ ಆದ್ಯತೆ ನೀಡಿದ್ದು, ಈಗಾಗಲೆ ೬೫೦ ಕೋಟಿ ರೂ. ವೆಚ್ಚದ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಿ, ಟೆಂಡರ್ ಕರೆಯಲಾಗಿದೆ.  ಬರುವ ಡಿಸೆಂಬರ್ ಅಂತ್ಯ ಅಥವಾ ಜನವರಿ ತಿಂಗಳಿನಲ್ಲಿ ಯೋಜನೆಯ ಕಾಮಗಾರಿಗೆ ಚಾಲನೆ ನೀಡಲಾಗುವುದು.  ಯೋಜನೆಯ ಜಾರಿಯಿಂದ ಸುಮಾರು ೦೬ ಲಕ್ಷ ಜನರು ಶುದ್ಧ ಕುಡಿಯುವ ನೀರಿನ ಸೌಲಭ್ಯ ಪಡೆಯಲಿದ್ದಾರೆ.  ಕಳೆದ ೦೩ ವರ್ಷಗಳಿಂದ ನೀರಾವರಿ ಯೋಜನೆಗಳಿಗೆ ನಮ್ಮ ಸರ್ಕಾರ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದು, ಸುಮಾರು ೩೬ ಸಾವಿರ ಕೋಟಿ ರೂ. ಗಳನ್ನು ನೀರಾವರಿ ಯೋಜನೆಗಳಿಗೆ ವೆಚ್ಚ ಮಾಡಿದೆ. ಕೊಪ್ಪಳ ಜಿಲ್ಲೆಗೆ ಕೃಷ್ಣಾ ನ್ಯಾಯಾಧೀಕರಣ-೦೨ ರ ಆದೇಶದಂತೆ ೧೨. ೮೩ ಟಿ.ಎಂ.ಸಿ. ನೀರು ಬಳಕೆ ಮಾಡಿಕೊಳ್ಳಲು ಕ್ರಮ ಕೈಗೊಂಡಿದ್ದು,  ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕುಷ್ಟಗಿ, ಯಲಬುರ್ಗಾ, ಕನಕಗಿರಿ ಮತ್ತು ಕೊಪ್ಪಳ ತಾಲೂಕಿನ ಆಯ್ದ ಪ್ರದೇಶಗಳಿಗೆ ನೀರಾವರಿಗಾಗಿ ಮುಖ್ಯ ಕಾಲುವೆ ಕಾಮಗಾರಿಗಾಗಿ ಕೃಷ್ಣಾ ಭಾಗ್ಯ ಜಲನಿಗಮ ವತಿಯಿಂದ ೧,೨೦೦ ಕೋಟಿ ರೂ. ಗಳಿಗೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲಿಯೇ ಇದಕ್ಕೆ ಅನುಮೋದನೆ ನೀಡಿ, ಟೆಂಡರ್ ಕರೆಯಲಾಗುವುದು.  ಫೆಬ್ರುವರಿ ೨೦೧೬ ರಲ್ಲಿ ಸರ್ಕಾರವು ಇನ್‌ವೆಸ್ಟ್ ಕರ್ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕುಷ್ಟಗಿ ತಾಲೂಕಿನ ಬೋದೂರು ಗ್ರಾಮದಲ್ಲಿ ಸುಮಾರು ೩ ಸಾವಿರ ಎಕರೆ ಜಮೀನಲ್ಲಿ ಇಂಡಸ್ಟ್ರೀಯಲ್ ಟೌನ್‌ಶಿಪ್ ಸ್ಥಾಪಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಈಗಾಗಲೆ ಕ್ರಮ ಕೈಗೊಂಡಿದ್ದಾರೆ.  ಗದಗ-ವಾಡಿ ರೈಲ್ವೆ ಮಾರ್ಗದ ಕಾಮಗಾರಿಗೆ ಭೂಸ್ವಾಧೀನ ಮಾಡಿಕೊಳ್ಳುವ ಕಾರ್ಯ ತಿಂಗಳಾಂತ್ಯದೊಳಗೆ ಪೂರ್ಣಗೊಳ್ಳಲಿದ್ದು, ಬರುವ ಡಿಸೆಂಬರ್ ತಿಂಗಳಿನಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ.  ಕುಷ್ಟಗಿ-ಕೊಪ್ಪಳ ರಸ್ತೆಯನ್ನು ೫೫ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಈಗಾಗಲೆ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ.  ಕುಷ್ಟಗಿಯಲ್ಲಿ ಉನ್ನತ ಶಿಕ್ಷಣ ಕೇಂದ್ರ ಪ್ರಾರಂಭಿಸಲು ಅಗತ್ಯ ಭೂಮಿಯನ್ನು ಗುರುತಿಸಿ ನೀಡಿದಲ್ಲಿ, ಇಲಾಖೆಯಿಂದ ಅಗತ್ಯ ಅನುದಾನ ಒದಗಿಸಿ, ಉನ್ನತ ಶಿಕ್ಷಣ ಕುಷ್ಟಗಿ ತಾಲೂಕಿನಲ್ಲಿಯೂ ದೊರೆಯುವಂತೆ ಮಾಡಲು ತಾವು ಸಿದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.
ಬರದ ಆತಂಕ- ಮುಂಜಾಗ್ರತೆಗೆ ಕ್ರಮ : ಜಿಲ್ಲೆಯಲ್ಲಿ ಈ ಬಾರಿಯೂ ಬರದ ಛಾಯೆ ಕಂಡುಬರುತ್ತಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿಲ್ಲ.  ಅಕ್ಟೋಬರ್ ೦೧ ರಂದು ಜಿಲ್ಲಾ ಮಟ್ಟದಲ್ಲಿ ಇಲಾಖಾ ಅಧಿಕಾರಿಗಳ ಪರಿಶೀಲನಾ ಸಭೆಯನ್ನು ಕರೆಯಲಾಗಿದ್ದು, ಕುಡಿಯುವ ನೀರು ಹಾಗೂ ಬರ ಪರಿಸ್ಥಿತಿಯ ಬಗ್ಗೆ ಪರಾಮರ್ಶೆ ನಡೆಸಲಾಗುವುದು.  ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಕ್ರಿಯಾ ಯೋಜನೆ ರೂಪಿಸಲು ಸೂಕ್ತ ರೀತಿಯಲ್ಲಿ ಅಧಿಕಾರಿಗಳಿಗೆ ತಿಳಿಸಲಾಗುವುದು.  ಬರ ಪರಿಸ್ಥಿತಿಯ ಪರಾಮರ್ಶೆ ಕುರಿತಂತೆ ರಾಜ್ಯ ಮಟ್ಟದ ಉನ್ನತ ಅಧಿಕಾರಿಗಳ ಸಭೆ ಸಧ್ಯದಲ್ಲಿಯೇ ಬೆಂಗಳೂರಿನಲ್ಲಿ ಜರುಗಲಿದ್ದು, ಈ ಸಂದರ್ಭದಲ್ಲಿ ಬರ ಪರಿಸ್ಥಿತಿಯ ಸಮಗ್ರ ಚಿತ್ರಣ ದೊರೆಯಲಿದೆ ಎಂದು ಸಚಿವರು ಹೇಳಿದರು.
ಜನಸಂಪರ್ಕಕ್ಕೆ ಆದ್ಯತೆ : ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳೀಯ ಮಟ್ಟದಲ್ಲಿಯೇ ಬಗೆಹರಿಸುವ ಸಲುವಾಗಿ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಆಶಯದಂತೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಜನಸಂಪರ್ಕ ಸಭೆಯನ್ನು ಆಯೋಜಿಸಲಾಗುತ್ತಿದೆ.  ಜನರ ಹಿತದೃಷ್ಟಿಯಿಂದ ಜನಸಂಪರ್ಕ ಸಭೆಯನ್ನು ತಾಲೂಕು ಮಟ್ಟದಲ್ಲಿಯೂ ಹಮ್ಮಿಕೊಳ್ಳಲಾಗುತ್ತಿದೆ.  ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಜನಪರ ಕೆಲಸ ಮಾಡಬೇಕು.  ಪ್ರಜಾಪ್ರಭುತ್ವದಲ್ಲಿ ಜನರೇ ಸರ್ಕಾರದ ಮಾಲೀಕರು, ಜನರ ಸಮಸ್ಯೆಗಳಿಗೆ ಅಧಿಕಾರ ವರ್ಗ ಸ್ಪಂದಿಸುವ ಕೆಲಸ ಆಗಬೇಕು.  ಅಧಿಕಾರಿಗಳು ಕಚೇರಿಗಳಲ್ಲಿ ಕುಳಿತು ಕೆಲಸ ಮಾಡಿದರೆ, ಜನರ ಸಮಸ್ಯೆಗಳು ಅರಿವಿಗೆ ಬರುವುದಿಲ್ಲ.  ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ಷೇತ್ರಗಳಿಗೆ ಭೇಟಿ ಮಾಡಿ, ಜನರೊಂದಿಗೆ ಬೆರೆತರೆ ಮಾತ್ರ ಜನಸಾಮಾನ್ಯರ ತೊಂದರೆಗಳು ಗೊತ್ತಾಗುತ್ತವೆ ಎಂದು ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.  ಜನಸಂಪರ್ಕ ಸಭೆಯ ಅಂಗವಾಗಿ ಸಾರ್ವಜನಿಕರು ತಮ್ಮ ಕುಂದುಕೊರತೆ, ಅಹವಾಲು ಅರ್ಜಿಗಳನ್ನು ಸಲ್ಲಿಸಿದರು.  ಸುಮಾರು ೮೫ ಅರ್ಜಿಗಳು ಸಾರ್ವಜನಿಕರಿಂದ ಜನಸಂಪರ್ಕ ಸಭೆಗೆ ಸಲ್ಲಿಕೆಯಾದವು.  ಹೆಣ್ಣು ಮಕ್ಕಳಿಗೆ ರಾಜ್ಯ ಸರ್ಕಾರದ ಭಾಗ್ಯಲಕ್ಷ್ಮಿ ಯೋಜನೆಯಡಿ ಕೊಡಮಾಡುವ ಎಲ್‌ಐಸಿ ಬಾಂಡ್ ಗಳನ್ನು ಇದೇ ಸಂದರ್ಭದಲ್ಲಿ ಸಚಿವರು ವಿತರಿಸಿದರು.
ಜನಸಂಪರ್ಕ ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ, ತಾ.ಪಂ. ಅಧ್ಯಕ್ಷೆ ಮಹಾಂತಮ್ಮ ಪೂಜಾರ್, ಉಪಾಧ್ಯಕ್ಷೆ ಮಂಜುಳಾ ಪಾಟೀಲ, ಜಿ.ಪಂ. ಸದಸ್ಯರುಗಳಾದ ಕೆ. ಮಹೇಶ್, ವಿಜಯ ನಾಯಕ್, ವಿಜಯಲಕ್ಷ್ಮಿ ಪಲ್ಲೇದ, ಭೀಮಣ್ಣ ಅಗಸಿ ಮುಂದಿನ, ಹನುಮಂತಗೌಡ ಕಿಲ್ಲಾರಟ್ಟಿ, ಪುರಸಭೆ ಅಧ್ಯಕ್ಷ ಕಲ್ಲೇಶ್ ತಾಳದ, ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ತಹಸಿಲ್ದಾರ್ ಗಂಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Please follow and like us:
error