ಕರ್ನಾಟಕದ ೦೬ ರಾಜ್ಯ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೇರಿಕೆ- ಸಚಿವ ನಿತಿನ್ ಗಡ್ಕರಿ

 ಕೊಪ್ಪಳ:
ಕರ್ನಾಟಕದ ೦೬ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ನೌಕಾಯಾನ ಸಚಿವ ನಿತಿನ್ ಗಡ್ಕರಿ ಅವರು ಕೊಪ್ಪಳದಲ್ಲಿ ಘೋಷಿಸಿದರು.


ರಾಷ್ಟ್ರೀಯ ಹೆದ್ದಾರಿ-೬೩ ರ ಹುಬ್ಬಳ್ಳಿ-ಹೊಸಪೇಟೆ ವಿಭಾಗದ ೧೪೩. ೨೯ ಮೀ. ಉದ್ದ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸುವ ಕಾಮಗಾರಿ, ರಾ.ಹೆ-೬೩ ಹೊಸಪೇಟೆ-ಬಳ್ಳಾರಿ ಕರ್ನಾಟಕ/ಆಂಧ್ರ ಪ್ರದೇಶ ಗಡಿ ವಿಭಾಗದ ಒಟ್ಟು ೯೫. ೩೭೦ ಕಿ.ಮೀ. ಉದ್ದ ರಸ್ತೆಯನ್ನು  ರಾ.ಹೆ-೬೩ ಮತ್ತು ರಾ.ಹೆ.-೨೧೮ ಸಂಪರ್ಕಿಸುವ ಹುಬ್ಬಳ್ಳಿ ಬೈಪಾಸ್ ನಿರ್ಮಾಣ ಕಾಮಗಾರಿಗಳಿಗೆ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರದಂದು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ದೇಶದಲ್ಲಿ ಹಲವಾರು ವರ್ಷಗಳಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ.  ವಾಹನಗಳ ಸಂಖ್ಯೆಯೂ ಅಧಿಕವಾಗುತ್ತಿದೆ.  ಆದರೆ ಅದಕ್ಕೆ ಪೂರಕವಾಗಿ ರಸ್ತೆಗಳ ವಿಸ್ತರಣೆ ಹಾಗೂ ಸಂಪರ್ಕ ಜಾಲ ವಿಸ್ತರಣೆ ಆಗಿಲ್ಲ.  ಇದರಿಂದಾಗಿ ದೇಶದಲ್ಲಿ ಪ್ರತಿ ವರ್ಷ ೦೫ ಲಕ್ಷ ರಸ್ತೆ ಅಪಘಾತಗಳಿಂದ ಸುಮಾರು ೧. ೫ ಲಕ್ಷ ಜನ ಅಕಾಲಿಕವಾಗಿ ಸಾಯುತ್ತಿದ್ದಾರೆ.  ದೇಶದ ರಸ್ತೆಗಳು ಅಭಿವೃದ್ಧಿಯಾಗಬೇಕು.  ಅಪಘಾತಗಳ ಸಂಖ್ಯೆ ಅತ್ಯಲ್ಪ ಪ್ರಮಾಣಕ್ಕೆ ಇಳಿಯಬೇಕು, ಕೈಗಾರಿಕೆಗಳು ಹೆಚ್ಚಬೇಕು.  ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬೇಕು ಎನ್ನುವುದು ಕೇಂದ್ರ ಸರ್ಕಾರದ ಸಂಕಲ್ಪವಾಗಿದೆ ಎಂದರು.


೦೬ ಹೊಸ ರಾಷ್ಟ್ರೀಯ ಹೆದ್ದಾರಿಗಳ ಘೋಷಣೆ : ಕಾರವಾರ-ಕೈಗಾ-ಮುಂಡಗೋಡ-ಬಂಕಾಪುರ-ಸವಣೂರು-ಲಕ್ಷ್ಮೇಶ್ವರ-ಗದಗ-ಗಜೇಂದ್ರಘಡ ಮಾರ್ಗದ ೩೧೮ ಕಿ.ಮೀ. ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.  ಅಣ್ಣಿಗೇರಿ-ನವಲಗುಂದ-ಹೆಬಸೂರ-ಧಾರವಾಡ-ಕಳಸ ಮಾರ್ಗದ ೨೦೦ ಕಿ.ಮೀ.ರಸ್ತೆ,  ನರಗುಂದ-ಜಗಳೂರು ಮಾರ್ಗದ ೨೬೦ ಕಿ.ಮೀ. ರಸ್ತೆ, ಅಫ್ಜಲ್‌ಪುರ-ಅಲಮೇಲ-ಇಂಡಿ-ಲೋಕಾಪುರ ಮಾರ್ಗದ ೧೮೦ ಕಿ.ಮೀ. ರಸ್ತೆ.  ಸಂಕೇಶ್ವರ-ಗೋಕಾಕ್-ಯರಗಟ್ಟಿ-ನರಗುಂದ ಮಾರ್ಗದ ೧೫೦ ಕಿ.ಮೀ. ರಸ್ತೆ.  ನರಗುಂದ-ರೋಣ-ಗಜೇಂದ್ರಘಡ-ಕುಷ್ಟಗಿ ಮಾರ್ಗದ ೧೫೦ ಕಿ.ಮೀ. ರಸ್ತೆ ಸೇರಿದಂತೆ ಒಟ್ಟು ೦೬ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಘೋಷಿಸಿದರು.
ಭೂಸ್ವಾಧೀನ ತ್ವರಿತವಾಗಲಿ :  ರಾಜ್ಯದಲ್ಲಿ ೭ ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಇದೆ.  ರಾಜ್ಯ ಸರ್ಕಾರ ಸಹಕಾರ ಕೊಟ್ಟಲ್ಲಿ ಇದನ್ನು ೧೪ ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನಾಗಿ ಅಭಿವೃದ್ಧಿಪಡಿಸಲು ತಮ್ಮ ಸರ್ಕಾರ ಸಿದ್ಧವಿದೆ.  ರಾಜಕೀಯ ಏನಿದ್ದರೂ ಚುನಾವಣೆಗೆ ಮಾತ್ರ ಸೀಮಿತ.  ಅಭಿವೃದ್ಧಿಯ ವಿಷಯ ಬಂದಾಗ ಪಕ್ಷಾತೀತವಾಗಿ ದೇಶದ ಅಭಿವೃದ್ಧಿಗೆ ಆದ್ಯತೆ ಕೊಡುತ್ತೇವೆ.  ಹೊಸದಾಗಿ ಘೋಷಣೆ ಮಾಡಿರುವ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಸದ್ಯ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಭೂ-ಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರವೇ ಮಾಡಿಕೊಡಬೇಕಾಗುತ್ತದೆ.  ಭೂಸ್ವಾಧೀನ ಹೊಸ ಕಾಯ್ದೆಯನ್ವಯವೇ ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ಪರಿಹಾರ ದೊರೆಯಬೇಕು.  ಇದಕ್ಕಾಗಿ ಈಗಾಗಲೆ ಕೇಂದ್ರ ಸರ್ಕಾರ ೦೪ ಸಾವಿರ ಕೋಟಿ ರೂ. ಗಳನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ.  ತ್ವರಿತವಾಗಿ ಭೂಸ್ವಾಧೀನ ಕಾರ್ಯ ಮಾಡಿಕೊಟ್ಟಲ್ಲಿ, ರಸ್ತೆಗಳ ಅಭಿವೃದ್ಧಿ ಕಾರ್ಯವೂ ತ್ವರಿತವಾಗಿ ಪೂರ್ಣಗೊಳ್ಳಲು ಸಾಧ್ಯವಾಗಲಿದೆ ಎಂದರು.
ಕರ್ನಾಟಕ ರಾಜ್ಯದಿಂದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗಾಗಿ ಬೇಕಾಗಿರುವ ಡಿಪಿಆರ್ ಅನ್ನು ಸಿದ್ಧಪಡಿಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದಲ್ಲಿ, ಆದ್ಯತೆ ಮೇರೆಗೆ ಸರ್ಕಾರ ಅನುಮೋದನೆ ನೀಡಿ, ಅನುದಾನ ಒದಗಿಸಲಿದೆ.  ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರ್ಕಾರದಲ್ಲಿ ಹಣಕಾಸಿನ ಯಾವುದೇ ಕೊರತೆ ಇಲ್ಲ.  ಆದರೆ ಗುಣಮಟ್ಟದ ಕಾಮಗಾರಿಯಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಕೊಪ್ಪಳ ಸಾಂಸದ ಕರಡಿ ಸಂಗಣ್ಣ, ಸಂಸದ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ. ಶ್ರೀರಾಮುಲು ಕಾರ್ಯಕ್ರಮ ಕುರಿತು ಮಾತನಾಡಿದರು.  ಸಮಾರಂಭದಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ರಾಜ್ಯ ಸಚಿವ ರಮೇಶ್ ಜಿಗಜಿಣಗಿ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ಸೇರಿದಂತೆ ಹಲವು ಸಂಸದರು, ಶಾಸಕರುಗಳು, ರಾಜ್ಯದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.  ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸದಸ್ಯ ತವಾಡೆ ಅವರು ಸ್ವಾಗತಿಸಿದರು.

 

  

Leave a Reply