ಎಐಡಿವೈಓ ಎರಡನೇ ಜಿಲ್ಲಾ ಸಮ್ಮೇಳನ

 ಕೊಪ್ಪಳ- ಲಯನ್ಸ್ ಕಣ್ಣಿನ ಆಸ್ಪತ್ರೆಯ ಸಭಾಂಗಣದಲ್ಲಿ ಎಐಡಿವೈಓ ದ ಎರಡನೇ ಜಿಲ್ಲಾ ಸಮ್ಮೇಳನವು ನಡೆಯಿತು. ಸಮ್ಮೇಳನದ ಉದ್ಘಾಟನೆಯನ್ನು ಕೊಪ್ಪಳದ ಹಿರಿಯ ಸಾಹಿತಿಗಳೂ ಹಾಗೂ ಪತ್ರಕರ್ತರೂ ಆದ ಶ್ರೀ ವಿಠ್ಠಪ್ಪ ಗೋರಂಟ್ಲಿಯವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ – ಯುವತನ ಉತ್ಸಾಹದಿಂದ ಕೂಡಿದ ಕಾಲ. ಈ ಉತ್ಸಾಹವನ್ನು ಅಡ್ಡ ದಾರಿ ಹಿಡಿಯುವ ಕೆಲಸಕ್ಕೆ ಬದಲು ಸಮಾಜದ ಕಾಯಕಕ್ಕೆ ತಮ್ಮನ್ನು ಅರ್ಪಿಸಿಕೊಳ್ಳಲು ಸರಿಯಾದ ಸಮಯ. ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಹೋರಾಟದ ಮುಂಚೂಣಿಯಲ್ಲಿದ್ದುದು ಯುವಜನತೆ. ಭಗತ್ ಸಿಂಗ್, ನೇತಾಜಿಯಂತಹವರ ಅಧ್ಯಯನಶೀಲತೆ, ಹೋರಾಟದ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು. ಮುಂದುವರೆದು ಮಾತನಾಡುತ್ತಾ – ಈ ಸಂದರ್ಭದಲ್ಲಿ ಕೊಪ್ಪಳಜಿಲ್ಲೆಯ ಯಲ್ಲಾಲಿಂಗನ ಪ್ರಕರಣ, ಕನಕಪುರ ಘಟನೆಗಳನ್ನು ವಿವರಿಸುತ್ತಾ ಸಮಾಜದ ಸಮಸ್ಯೆಗಳ ವಿರುದ್ಧ ಹೋರಾಟವನ್ನು ಬೆಳೆಸುತ್ತಲೇ ಸಂಘಟಿತರಾಗಬೇಕು. ಸಂಘಟಿತ ಹೋರಾಟದಿಂದ ಮಾತ್ರ ಯಶಸ್ಸು ಸಾಧ್ಯ ಎಂದರು. ಸಂಘಟನೆಯನ್ನು ಬಳಸಿಕೊಳ್ಳಬೇಕು ಜೊತಗೆ ಸಂಘಟನೆಯನ್ನು ಬೆಳೆಸಬೇಕು ಎಂದು ಕರೆಯಿತ್ತರು.ಈ ಸಮ್ಮೇಳನಕ್ಕೆ ಅತಿಥಿಗಳಾಗಿ ಆಗಮಿಸಿದ ಎಐಡಿವೈಓ ರಾಜ್ಯ ಉಪಾಧ್ಯಕ್ಷರಾದ ಶ್ರೀ ರಾಧಾಕೃಷ್ಣ ಉಪಾಧ್ಯ ರವರು ಮಾತನಾಡುತ್ತಾ- ಇಂದು ವ್ಯಕ್ತಿವಾದ ಪರಾಕಾಷ್ಟತೆಗೆ ತಲುಪಿದೆ. ಯುವಜನರು ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳ ಆದರ್ಶಗಳ ತಿಳುವಳಿಕೆ ಇಲ್ಲದೆ ಬೇರಿಲ್ಲದ ಮರದಂತಾಗಿದ್ದಾರೆ. ಇಂದು ಜನರನ್ನು ಹಾಗೂ ಯುವಜನರನ್ನು ಕಾಡುತ್ತಿರುವ ಸಮಸ್ಯೆಗಳ ಮೂಲ ಇರುವುದು ಸಮಾಜದಲ್ಲಿ. ಸಮಾಜ ಈ ಸಮಸ್ಯೆಗೆ ತುತ್ತಾಗಿರುವುದು ಈ ಸಮಾಜವನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವ ಶೋಷಕ ವ್ಯವಸ್ಥೆಯಿಂದ. ಈ ವ್ಯವಸ್ಥೆಯನ್ನು ಬದಲಾಯಿಸಿ ಉತ್ತಮವಾದ ಹಾಗೂ ಉನ್ನತವಾದ ಸಮಾಜವನ್ನು ನಿರ್ಮಿಸುವುದು ಯುವಜನರ ಆದ್ಯತೆಯಾಗಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಅವರು ಕಾರ್ಮಿಕ ನಾಯಕರಾದ ಶಿವದಾಸ್ ಘೋಷ್ ರವರ ಯಾರಲ್ಲಿ ಆತ್ಮಗೌರವ, ಹೋರಾಟದ ಕೆಚ್ಚು, ಅನ್ಯಾಯದ ವಿರುದ್ಧ ಸಿಡಿದೇಳುವ ಗುಣವಿದೆಯೋ ಅವನೇ ನಿಜವಾದ ಯುವಕ ಅನ್ನುವ ಸೂಕ್ತಿಯನ್ನು ಉಲ್ಲೇಖಿಸಿ ಯುವಜನರು ಸಮಾಜದ ತಾರತಮ್ಯದ ವಿರುದ್ಧ ಸಿಡಿದೆದ್ದು, ಸಂಘಟಿತರಾಗಿ ಪ್ರಜಾಸತ್ತಾತ್ಮವಾದ ಹೋರಾಟಗಳನ್ನು ಬೆಳೆಸುತ್ತಾ ಸಮಾಜ ಬದಲಾವಣೆಯ ಕಾರ್ಯವನ್ನು ಮುನ್ನಡೆಸ ಬೇಕೆಂದು ಕರೆಯಿತ್ತರು. ಹಾಗೂ ಈ ಸಂದರ್ಭದಲ್ಲಿ ಸಮಾಜವನ್ನು ಒಡೆಯುವ ಶಕ್ರಿಯ ಬಗ್ಗೆ ಸದಾ ಜಾಗರೂಕರಾಗಿದ್ದು ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕೆಂದು ಕರೆಯಿತ್ತರು.aidyaಆರಂಭದಲ್ಲಿ ಪ್ರಾಸ್ತಾವಿಕವಾಗಿ ಶರಣು ಗಡ್ಡಿಯವರು ಮಾತನಾಡಿದರು. ಹಾಗೂ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ಧ ರಮೇಶ ವಂಕಲಕುಂಟಿಯವರು ಮಾತನಾಡಿ ಕಳೆದ ಸಮ್ಮೇಳನದಿಂದೀಚಿಗೆ ಎಐಡಿವೈಓ ವತಿಯಿಂದ ನಡೆದ ವಿವಿಧ ಕಾರ್ಯಕ್ರಮಗಳು, ಪ್ರತಿಭಟನೆಗಳು ಬಗ್ಗೆ ವಿವರಿಸುತ್ತಾ ಜಿಲ್ಲೆಯಲ್ಲಿ ಎಐಡಿವೈಓ ಬೆಳೆಯುವಲ್ಲಿ ಸಹಕರಿಸಿದ ಜಿಲ್ಲೆಯ ಹಿರಿಯರ ಸಹಕಾರವನ್ನು ಸ್ಮರಿಸಿದರು. ನಂತರ ಪ್ರತಿನಿಧಿ ಅಧಿವೇಶನ ನಡೆಯಿತು. ಅಲ್ಲಿ ಮುಖ್ಯ ಗೊತ್ತುವಳಿ, ಹಾಗೂ ಸಮಾವೇಶದ ಹಕ್ಕೊತ್ತಾಯಗಳು ಹಾಗೂ ವಿವಿಧ ಬೇಡಿಕೆಗಳ ಬಗ್ಗೆ ಚರ್ಚಿಸಿ ಮುಂದಿನ ಕಾರ್ಯಕ್ರಮ ರೂಪಿಸಲಾಯಿತು. ಪ್ರತಿನಿಧಿ ಅಧಿವೇಶನದ ಚರ್ಚೆಯಲ್ಲಿ ರಾಯಣ್ಣ, ಬಸವರಾಜ್, ಖಾಜಾಸಾಬ್, ವಿಶ್ವನಾಥ್, ಶೈಲಾ, ಸಿಂಧು ಮತ್ತಿತರರು ಮಾತನಾಡಿದರು. ಕೊನೆಯಲ್ಲಿ ಮುಂದಿನ ಕಾರ್ಯಚಟುವಟಿಕೆಗಳಿಗೆ ನೇತೃತ್ವ ನೀಡಲು ಹೊಸ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಶರಾಗಿ ರಮೇಶ್ ವಂಕಲಕುಂಟಿ, ಕಾರ್ಯದರ್ಶಿಯಾಗಿ ಶರಣು ಗಡ್ಡಿ ಹಾಗೂ ೭ ಜನರನ್ನೊಳಗೊಂಡ ಕಾರ್ಯಕಾರಿ ಸಮಿತಿ ಹಾಗೂ ೧೧ ಜನರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

 

Please follow and like us:
error