ಅಂಗವಿಕಲರ ಗುರುತಿನ ಚೀಟಿ ದುರ್ಬಳಕೆ ತಡೆಗೆ ಅಗತ್ಯ ಕ್ರಮ – ಡಾ. ರುದ್ರೇಶ್ ಘಾಳಿ

ಕೊಪ್ಪಳ ಜಿಲ್ಲೆಯಲ್ಲಿ ಅಂಗವಿಕಲರಿಗೆ ನೀಡಲಾಗುತ್ತಿರುವ ಗುರುತಿನ ಚೀಟಿಯನ್ನು, ಕೆಲವರು ಸಂದರ್ಭಕ್ಕೆ ಹಾಗೂ ಬೇಡಿಕೆಗೆ ಅನುಗುಣವಾಗಿ, ಅಂಗವೈಕಲ್ಯತೆಯ ಪ್ರಮಾಣವನ್ನು ಬದಲಾಯಿಸಿಕೊಂಡು, ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ವ್ಯಾಪಕವಾಗಿ ದೂರುಗಳು ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ಇಂತಹ ದುರ್ಬಳಕೆಯನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೊಪ್ಪಳ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ವಿಕಲಚೇತನರ ಕುಂದುಕೊರತೆ ನಿವಾರಣೆ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಜಿಲ್ಲೆಯಲ್ಲಿ ಅಂಗವಿಕಲರಿಗೆ ತಜ್ಞ ವೈದ್ಯರ ಶಿಫಾರಸ್ಸಿಗೆ ಅನುಗುಣವಾಗಿ ಗುರುತಿನ ಚೀಟಿಯನ್ನು ನೀಡಲಾಗುತ್ತಿದೆ. ಅಂಗವೈಕಲ್ಯದ ಪ್ರಮಾಣವನ್ನು ಕೆಲವರು ಸಂದರ್ಭಕ್ಕೆ ಹಾಗೂ ಬೇಡಿಕೆಗೆ ಅನುಗುಣವಾಗಿ ಬದಲಾಯಿಸಿಕೊಳ್ಳಲು, ಗುರುತಿನ ಚೀಟಿಯನ್ನು ಪಡೆದಿದ್ದರೂ, ಕಳೆದು ಹೋಗಿದೆ ಎಂಬುದಾಗಿ ಸುಳ್ಳು ಹೇಳಿ, ಪದೇ ಪದೇ ಗುರುತಿನ ಚೀಟಿ ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ. ಮಾಸಾಶನ, ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಹೆಚ್ಚು ಅಂಗವೈಕಲ್ಯ ಪ್ರಮಾಣವನ್ನು ನಮೂದಿಸಬೇಕು, ಉದ್ಯೋಗ, ತ್ರಿಚಕ್ರ ಮೋಟಾರು ವಾಹನ ಹಾಗೂ ಇನ್ನಿತರೆ ಸೌಲಭ್ಯಕ್ಕಾಗಿ ಕಡಿಮೆ ಪ್ರಮಾಣವನ್ನು ನಮೂದಿಸಬೇಕು ಎಂಬುದಾಗಿ ವೈದ್ಯರ ಮೇಲೆ ಒತ್ತಡ ಹೇರುತ್ತಿದ್ದಾರೆ. ಅಲ್ಲದೆ, ಒಮ್ಮೆ ಗುರುತಿನ ಚೀಟಿ ಪಡೆದಿದ್ದರೂ, ಪದೇ ಪದೇ ಸಂದರ್ಭ ಹಾಗೂ ಸೌಲಭ್ಯಕ್ಕೆ ಅನುಗುಣವಾಗಿ ಗುರುತಿನ ಚೀಟಿ ಪಡೆಯಲು, ವೈದ್ಯರಿಂದ ಪ್ರಮಾಣ ಪತ್ರ ಪಡೆಯಲು ಬರುವ ಅಂಗವಿಕಲರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದಾಗಿ ಆಸ್ಪತ್ರೆಯಲ್ಲಿ ಇತರೆ ಕೆಲಸ ನಿರ್ವಹಿಸಲು ತೀವ್ರ ತೊಂದರೆಯಾಗುತ್ತಿದೆ. ಇಂತಹ ತೊಂದರೆಯನ್ನು ನಿವಾರಿಸಲು, ಅಂಗವಿಕಲರಿಗೆ ಶಾಶ್ವತ ಗುರುತಿನ ಚೀಟಿ ವಿತರಿಸಬೇಕು. ಇದಕ್ಕೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಮೂಲಕ ಗಣಕೀಕೃತ ಮಾಹಿತಿ ಇಲಾಖೆಯಲ್ಲಿ ಲಭ್ಯವಾಗಬೇಕು. ಗುರುತಿನ ಚೀಟಿ ಕಳೆದುಹೋದರೂ, ಹಳೆಯ ದತ್ತಾಂಶದಿಂದ, ಇನ್ನೊಂದು ಗುರುತಿನ ಚೀಟಿ ನೀಡಲು ಸಾಧ್ಯವಿದೆ. ಇದರಿಂದ ದುರ್ಬಳಕೆ ತಡೆಯಬಹುದಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ದಾನರೆಡ್ಡಿ ಅವರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್ ಅವರು, ಜಿಲ್ಲೆಯಲ್ಲಿ ಗುರುತಿನ ಚೀಟಿ ದುರ್ಬಳಕೆ ಆಗುತ್ತಿರುವುದು ತಮ್ಮ ಗಮನಕ್ಕೆ ಬಂದರೂ, ಏನೂ ಮಾಡಲಾಗುತ್ತಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಪರ ಜಿಲ್ಲಾಧಿಕಾರಿಗಳು, ಗುರುತಿನ ಚೀಟಿ ದುರ್ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ಗಣಕೀಕೃತ ಗುರುತಿನ ಚೀಟಿ ವಿತರಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡು, ವರದಿ ಸಲ್ಲಿಸುವಂತೆ ಅಂಗವಿಕಲರ ಕಲ್ಯಾಣಾಧಿಕಾರಿಗೆ ಸೂಚನೆ ನೀಡಿದರು.
ಜಿಲ್ಲೆಗೆ ೯೩ ಲಕ್ಷ ಅನುದಾನ : ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್ ಅವರು ಮಾತನಾಡಿ, ಪ್ರಸಕ್ತ ವರ್ಷ ವಿಕಲಚೇತನರಿಗಾಗಿ ವಿದ್ಯಾರ್ಥಿ ವೇತನ, ಸಾಧನ ಸಲಕರಣೆ, ವೈದ್ಯಕೀಯ ಪರಿಹಾರ, ವಿವಾಹ ಪ್ರೋತ್ಸಾಹಧನ ಸೇರಿದಂತೆ ಒಟು ೨೮ ವಿವಿಧ ಯೋಜನೆಗಳಿಗಾಗಿ ಸರ್ಕಾರದಿಂದ ೯೩. ೪೭ ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಪ್ರಸಕ್ತ ವರ್ಷ ಆಗಸ್ಟ್ ಅಂತ್ಯದವರೆಗೆ ಇಲಾಖೆಯಿಂದ ೫೦. ೯೯ ಲಕ್ಷ ಅನುದಾನ ವೆಚ್ಚ ಮಾಡಲಾಗಿದ್ದು, ೫೫೧ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದರು. ವಿಕಲಚೇತನರಿಗಾಗಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು. ಸೌಲಭ್ಯ ಅರ್ಹ ಅಂಗವಿಕಲರಿಗೆ ತಲುಪುವಂತಾಗಬೇಕು. ಇದುವರೆಗೂ ಯಾವುದೇ ಸೌಲಭ್ಯ ಪಡೆಯದಿರುವ ಅಂಗವಿಕಲರ ಕುರಿತು ಗ್ರಾಮೀಣ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಂದ ಮಾಹಿತಿ ಪಡೆಯಬೇಕು. ವಿಕಲಚೇತನರು ಹಾಗೂ ಹಿರಿಯ ನಾಗರೀಕರಿಗಾಗಿ ಸರ್ಕಾರದಿಂದ ಸೌಲಭ್ಯ ಪಡೆದು ಸಂಸ್ಥೆಗಳನ್ನು ನಡೆಸುತ್ತಿರುವವರು, ಸಮರ್ಪಕವಾಗಿ ನಡೆಸುತ್ತಿದ್ದಾರೆಯೇ ಇಲ್ಲವೆ ಎಂಬುದರ ಬಗ್ಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸಬೇಕು. ತಾವೂ ಸಹ ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಶೇ. ೦೩ ರ ಅನುದಾನದ ಮಾಹಿತಿ ಸಂಗ್ರಹಿಸಿ : ಜಿಲ್ಲೆಯಲ್ಲಿನ ಅರ್ಹ ವಿಕಲಚೇತನರಿಗೆ ತ್ರಿಚಕ್ರ ಮೋಟಾರು ವಾಹನವನ್ನು ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದು, ಈಗಾಗಲೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಸುಮಾರು ೪೦೦ ಅರ್ಜಿಗಳು ಈಗಾಗಲೆ ಸ್ವೀಕೃತಗೊಂಡಿವೆ. ಅದರಂತೆ ಜಿಲ್ಲೆಯ ಎಲ್ಲ ತಾಲೂಕಾ ಪಂಚಾಯಿತಿ, ನಗರ, ಸ್ಥಳೀಯ ಸಂಸ್ಥೆಗಳು ತಮ್ಮ ಕ್ರಿಯಾ ಯೋಜನೆಯಲ್ಲಿ ಶೇ. ೦೩ ರ ಅನುದಾನದಲ್ಲಿ ಲಭ್ಯವಿರುವ ಅನುದಾನದ ಒಟ್ಟು ಮೊತ್ತದ ವಿವರವನ್ನು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಿಗೆ ಒಂದು ವಾರದ ಒಳಗಾಗಿ ಸಲ್ಲಿಸುವಂತೆ  ಸೂಚನೆ ನೀಡಿದರು.ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲ ವಿಕಲಚೇತನರು, ಶ್ರವಣದೋಷವುಳ್ಳ ಅಂಗವಿಕಲರಿಗೆ ಪರೀಕ್ಷೆ ನಡೆಸಿ ಪ್ರಮಾಣ ಪತ್ರ ನೀಡಲು ಜಿಲ್ಲೆಯಲ್ಲಿ ತಜ್ಞ ವೈದ್ಯರು ಹಾಗೂ ಅಗತ್ಯ ಉಪಕರಣಗಳು ಜಿಲ್ಲೆಯಲ್ಲಿ ಲಭ್ಯವಿಲ್ಲದಿರುವುದರಿಂದ, ಬೆಂಗಳೂರಿಗೆ ತೆರಳಿ ಪರೀಕ್ಷೆಗೆ ಒಳಪಟ್ಟು, ಪ್ರಮಾಣ ಪತ್ರ ಪಡೆದುಕೊಳ್ಳುವ ಸ್ಥಿತಿ ಇದೆ. ವಿಕಲಚೇತನರಿಗೆ ವೈದ್ಯಕೀಯ ತಪಾಸಣೆ ಶಿಬಿರವನ್ನು ಜಿಲ್ಲಾ ಮಟ್ಟದಲ್ಲಿ ಮಾತ್ರ ಆಯೋಜಿಸುತ್ತಿರುವುದರಿಂದ, ದೂರದ ಊರುಗಳಿಂದ ಬಂದು ಹೋಗಲು ತೊಂದರೆಯಾಗುತ್ತಿದೆ. ತ್ರಿಚಕ್ರ ಮೋಟಾರು ವಾಹನದ ವಾಹನ ಚಾಲನಾ ಕಲಿಕೆ ಅನುಜ್ಞಾ ಪತ್ರವನ್ನು ಆರ್‌ಟಿಓ ಕಚೇರಿಯಿಂದ ಪಡೆಯಲು ಕೆಲವು ಮಾರ್ಗಸೂಚಿಗಳಿಂದ ಅನಾನುಕೂಲವಾಗುತ್ತಿದೆ. ದಯಮಾಡಿ ಈ ತೊಂದರೆಯನ್ನು ನಿವಾರಿಸುವಂತೆ ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿಗಳು, ಶ್ರವಣದೋಷ ಪರೀಕ್ಷೆಗೆ ತಜ್ಞ ವೈದ್ಯರ ನೇಮಕ, ಉಪಕರಣ ಖರೀದಿಗೆ ಕ್ರಮ ವಹಿಸಲು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚನೆ ನೀಡಿದರು. ಅಲ್ಲದೆ ತ್ರಿಚಕ್ರ ವಾಹನ ಕಲಿಕಾ ಅನುಜ್ಞಾ ಪತ್ರ ನೀಡುವ ಸಂದರ್ಭದಲ್ಲಿ ಅಂಗವಿಕಲರಿಗೆ ವಿನಾಕಾರಣ ತೊಂದರೆ ಕೊಡದೆ, ಕೆಲಸ ಮಾಡಿಕೊಡುವಂತೆ ಆರ್‌ಟಿಓ ಕಚೇರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಐ.ಎಸ್. ಶಿರಹಟ್ಟಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ದಾನರಡ್ಡಿ ಸೇರಿದಂತೆ ಎಲ್ಲ ತಾಲೂಕಾ ಪಂಚಾಯಿತಿಗಳ ಕಾರ್ಯನಿವಾಹಕ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಅಂಗವಿಕಲರು ಪಾಲ್ಗೊಂಡಿದ್ದರು.

Please follow and like us:
error