ಭವಿಷ್ಯದ ಪರ್ಯಾಯ ಇಂಧನ ಮೂಲವಾಗಿ ಜೈವಿಕ ಇಂಧನ : ಎಸ್.ಆರ್. ಪಾಟೀಲ್

koppal koppal-news ನೈಸರ್ಗಿಕವಾಗಿ ದೊರೆಯುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳು ಭವಿಷ್ಯದಲ್ಲಿ ಮುಗಿದುಹೋಗುವ ಸಂಪನ್ಮೂಲವಾಗಿದ್ದು, ಜೈವಿಕ ಇಂಧನವು ಭವಿಷ್ಯದ ಪರ್ಯಾಯ ಇಂಧನ ಮೂಲವಾಗಿ ಹೊರಹೊಮ್ಮಲಿದೆ. ಈಗಾಗಲೆ ಎಲ್ಲೆಡೆ ಜೈವಿಕ ಇಂಧನಕ್ಕೆ ವ್ಯಾಪಕ ಬೇಡಿಕೆ ಇದೆ ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಕಾರ್ಯಕಾರಿ ಅಧ್ಯಕ್ಷ ಎಸ್.ಆರ್. ಪಾಟೀಲ್ ಅವರು ಹೇಳಿದರು.
ಜಿಲ್ಲಾ ಜೈವಿಕ ಇಂಧನ ಉಸ್ತುವಾರಿ ಸಮಿತಿ, ಜಿಲ್ಲಾ ಪಂಚಾಯತಿ ಹಾಗೂ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಜನಪ್ರತಿನಿಧಿಗಳು, ಪ್ರಗತಿಪರ ರೈತರಿಗಾಗಿ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶನಿವಾರದಂದು ಏರ್ಪಡಿಸಲಾಗಿದ್ದ ಜೈವಿಕ ಇಂಧನ ಕುರಿತ ಒಂದು ದಿನದ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಿತಿ ಮೀರಿದ ಬಳಕೆಯಿಂದ ನಿತ್ಯದ ಕಚ್ಚಾತೈಲ ಸಂಪನ್ಮೂಲ ಕ್ಷೀಣಿಸುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳು ಇನ್ನು ೧೫ ರಿಂದ ೨೦ ವರ್ಷಗಳ ಕಾಲ ಮಾತ್ರ ಲಭ್ಯವಾಗುವ ಸಾಧ್ಯತೆಗಳಿದ್ದು, ಪರ್ಯಾಯ ಇಂಧನ ಮೂಲಗಳನ್ನು ಸಂಶೋಧಿಸುವಲ್ಲಿ ತಜ್ಞರು ನಿರತರಾಗಿದ್ದಾರೆ. ಈ ದಿಸೆಯಲ್ಲಿ ಜೈವಿಕ ಇಂಧನ, ಅತ್ಯುಪಯುಕ್ತ ಪರ್ಯಾಯ ಇಂಧನವಾಗಿ ಹೊರಹೊಮ್ಮಿದ್ದು, ಈಗಾಗಲೆ ದೇಶದಲ್ಲಿ ಇದಕ್ಕೆ ವ್ಯಾಪಕವಾಗಿ ಬೇಡಿಕೆ ಇದೆ. ನಮ್ಮ ಪರಿಸರದಲ್ಲಿ ಹಾಸು ಹೊಕ್ಕಾಗಿರುವ ಸಸ್ಯಗಳಾದ ಹೊಂಗೆ, ಬೇವು, ಹಿಪ್ಪೆ, ಜಟ್ರೋಪ, ಸಿಮರೂಬ, ನಾಗಸಂಪಿಗೆ, ಸುರಹೊನ್ನೆ ಮೊದಲಾದವುಗಳಿಂದ ಬರುವ ಎಣ್ಣೆಯನ್ನು ಬಳಸಿ ಜೈವಿಕ ಡೀಸೆಲನ್ನು ಉತ್ಪಾದನೆ ಮಾಡಬಹುದಾಗಿದೆ. ಕಬ್ಬು, ಜೋಳ, ಸಿಹಿಜೋಳ, ಮುಂತಾದ ಸಕ್ಕರೆ ಅಂಶವುಳ್ಳ ಉತ್ಪನ್ನಗಳು ಮತ್ತು ಕೃಷಿ ತ್ಯಾಜ್ಯಗಳಿಂದ ಜೈವಿಕ ಎಥೆನಾಲ್‌ಅನ್ನು ತಯಾರಿಸಬಹುದಾಗಿದೆ. ವರ್ಷಕ್ಕೆ ೮೦ ಕೋಟಿ ಲೀ. ನಷ್ಟು ಬಯೋ ಡೀಸೆಲ್‌ಗೆ ಬೇಡಿಕೆ ಇದ್ದರೂ, ಇಷ್ಟು ಪ್ರಮಾಣದ ತೈಲವನ್ನು ಪೂರೈಸಲು ಆಗುತ್ತಿಲ್ಲ. ರಾಜ್ಯದಲ್ಲಿ ಬೇವು ಮತ್ತು ಹೊಂಗೆಯನ್ನಷ್ಟೇ ಹೆಚ್ಚು ಬೆಳೆಯಲಾಗುತ್ತಿದ್ದು, ಬೇವು ಮತ್ತು ಹೊಂಗೆ ಬೀಜಕ್ಕೆ ಬೆಂಬಲ ಬೆಲೆಯನ್ನು ಸಹ ಸರ್ಕಾರ ನಿಗದಿಪಡಿಸಿದೆ. ಜೈವಿಕ ಇಂಧನಕ್ಕೆ ಬೇಕಿರುವ ಗಿಡಗಳನ್ನು ಬೆಳೆಯಲು ಫಲವತ್ತಾದ ಭೂಮಿಯೇ ಆಗಬೇಕಿಲ್ಲ. ಆಹಾರೋತ್ಪನ್ನಗಳನ್ನು ಬೆಳೆಸಲು ಸಾಧ್ಯವಾಗದ ಭೂಮಿಯೂ ಸೇರಿದಂತೆ ಬರಡು ಭೂಮಿಯಲ್ಲೂ ಜೈವಿಕ ಇಂಧನ ಸಸ್ಯಗಳನ್ನು ಬೆಳೆಸಬಹುದಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಪಾಳು ಬಿದ್ದ ಭೂಮಿ, ಇತರೆ ಲಭ್ಯವಿರುವ ಪ್ರದೇಶಗಳಲ್ಲಿ ಜೈವಿಕ ಇಂಧನ ಗಿಡಗಳನ್ನು ಬೆಳೆಸಿ, ಆದಾಯ ಗಳಿಸಲು ಸಾಧ್ಯವಿದೆ. ಜೈವಿಕ ಎಣ್ಣೆ ತೆಗೆಯುವ ಕಿರು ಯಂತ್ರಗಳನ್ನು ಕಡಿಮೆ ದರದಲ್ಲಿ ವಿತರಿಸುವ ಕಾರ್ಯವನ್ನು ಈಗಾಗಲೆ ರಾಜ್ಯ ಜೀವಿಕ ಇಂಧನ ಅಭಿವೃದ್ಧಿ ಮಂಡಳಿ ಕೈಗೊಂಡಿದ್ದು, ಸ್ವ-ಸಹಾಯ ಸಂಘಗಳಿಗೆ ಆದ್ಯತೆ ನೀಡುತ್ತಿದೆ. ಮಂಡಳಿಯು ರಾಜ್ಯದ ೩೩ ಕಡೆಗಳಲ್ಲಿ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಿದ್ದು, ರೈತರಲ್ಲಿ, ಸಾರ್ವಜನಿಕರಲ್ಲಿ ಜೈವಿಕ ಇಂಧನದ ಬೆಳೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದ ೦೫ ಜಿಲ್ಲೆಗಳನ್ನು ಒಳಗೊಂಡ ಜನಪ್ರತಿನಿಧಿಗಳು, ಪ್ರಗತಿಪರ ರೈತರನ್ನು ಒಂದೆಡೆ ಸೇರಿಸಿ, ಕಾರ್ಯಗಾರವನ್ನು ಏರ್ಪಡಿಸಿ, ಅರಿವು ಮೂಡಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಕಾರ್ಯಗಾರದಲ್ಲಿ ಮಾಹಿತಿ ಪಡೆದ ಜನಪ್ರತಿನಿಧಿಗಳು, ರೈತರು, ರೈತ ಮಹಿಳೆಯರು ಹೆಚ್ಚು, ಹೆಚ್ಚು ಜನರಿಗೆ ಮಾಹಿತಿಯನ್ನು ತಲುಪಿಸಲು ಎನ್ನುವ ಉದ್ದೇಶ ಮಂಡಳಿಯದಾಗಿದೆ. ಜೈವಿಕ ಇಂಧನ ಸಸ್ಯಗಳನ್ನು ಬೆಳೆಸಿ, ಇಂಧನ ಕ್ಷೇತ್ರದಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿಸಿ ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಕಾರ್ಯಕಾರಿ ಅಧ್ಯಕ್ಷ ಎಸ್.ಆರ್. ಪಾಟೀಲ್ ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಜಿ.ಪಂ. ಅಧ್ಯಕ್ಷ ಎಸ್.ಬಿ. ನಾಗರಳ್ಳಿ ಅವರು ಮಾತನಾಡಿ, ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಜೈವಿಕ ಇಂಧನ ಗಿಡಗಳನ್ನು ಬೆಳೆಸಲು ಸಾಕಷ್ಟು ಅವಕಾಶಗಳಿವೆ. ಬೇವಿನ ಗಿಡ ರೈತರಿಗೆ ಬಹುಉಪಯೋಗಿ ಗಿಡವಾಗಿದ್ದು, ಅದರ ಎಲೆ, ಬೀಜ ಹೀಗೆ ಎಲ್ಲದರಿಂದಲೂ ಸಹ ಆದಾಯ ಗಳಿಸಬಹುದಾಗಿದೆ. ಪದೇ ಪದೇ ಬರಕ್ಕೆ ತುತ್ತಾಗುವ ಕೊಪ್ಪಳ ಜಿಲ್ಲೆಯ ರೈತರಿಗೆ ಇದು ಉಪಯುಕ್ತವಾಗಲಿದ್ದು, ಉಪಕಸುಬನ್ನಾಗಿಸಿಕೊಂಡಲ್ಲಿ, ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬಹುದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಜೈವಿಕ ಇಂಧನ ಗಿಡಗಳಿಂದ ರೈತರಿಗಾಗುವ ಅನುಕೂಲಗಳ ಬಗ್ಗೆ, ಅರಿವು ಮೂಡಿಸುವ ಸಲುವಾಗಿ ಕಾರ್ಯಗಾರ ಹಮ್ಮಿಕೊಂಡಿರುವುದು ಸ್ವಾಗತಾರ್ಹವಾಗಿದೆ. ಜೈವಿಕ ಇಂಧನದ ಮೂಲಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ರಮವು ಭವಿಷ್ಯದ ೧೫-೨೦ ವರ್ಷಗಳ ನಂತರದ ದಿನಗಳಲ್ಲಿ ತೈಲೋತ್ಪನ್ನಗಳ ಕೊರತೆಯನ್ನು ಸಮರ್ಥವಾಗಿ ನಿಭಾಯಿಸುವಂತಹ ದೂರದೃಷ್ಟಿ ಯೋಜನೆಯಾಗಿದೆ. ಜೈವಿಕ ಇಂಧನದ ಗಿಡಗಳ ಬಗ್ಗೆ ಬಹಳಷ್ಟು ರೈತರಿಗೆ ಮಾಹಿತಿಯ ಕೊರತೆ ಇದೆ. ಈಗಾಗಲೆ ಜಿಲ್ಲೆಯಲ್ಲಿ ಅರಣ್ಯೀಕರಣಗೊಳಿಸುವ ನಿಟ್ಟಿನಲ್ಲಿ ೫-೬ ಲಕ್ಷ ಗಿಡಗಳನ್ನು ಬೆಳೆಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಈ ನಿಟ್ಟಿನಲ್ಲಿ ಜೈವಿಕ ಇಂಧನದ ಗಿಡಗಳನ್ನು ಸಹ ಬೆಳೆಸಲು ಆದ್ಯತೆ ನೀಡಬಹುದಾಗಿದೆ. ಜೈವಿಕ ಇಂಧನದ ಬಳಕೆಯಿಂದ ಪರಿಸರ ಮಾಲಿನ್ಯವನ್ನೂ ಸಹ ತಡೆಗಟ್ಟಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಕೊಪ್ಪಳ ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ, ಸೇರಿದಂತೆ ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಜಿ.ಪಂ., ತಾ.ಪಂ., ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು, ಗ್ರಾ.ಪಂ. ಪಿಡಿಓಗಳು, ಪ್ರಗತಿಪರ ರೈತರು ಪಾಲ್ಗೊಂಡಿದ್ದರು. ಜೈವಿಕ ಇಂಧನ ಗಿಡಗಳ ಕುರಿತು ಸಭಾಂಗಣ ಬಳಿ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕೇಂದ್ರವನ್ನು ತೆರೆಯಲಾಗಿತ್ತು.

Please follow and like us:
error