500 ಹಾಗೂ 1000 ರೂ. ನೋಟು ಚಲಾವಣೆ ಸ್ಥಗಿತ: ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ಭಾರೀ ಪರಿಣಾಮ

real-estate-colapseಹೊಸದಿಲ್ಲಿ, ನ.9: ಐನೂರು ಹಾಗೂ ಒಂದು ಸಾವಿರ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದುಕೊಳ್ಳಲು ಕೇಂದ್ರ ಸರಕಾರ ತೆಗೆದುಕೊಂಡ ನಿರ್ಣಯ ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರಲಿದೆಯೆಂದು ಹೇಳಲಾಗಿದೆ. ಈ ಕ್ಷೇತ್ರದಲ್ಲಿ ಶೇ.40ರಷ್ಟು ಕಪ್ಪು ಹಣ ಕೈ ವರ್ಗಾವಣೆಯಾಗುತ್ತಿರುವುದೇ ಇದಕ್ಕೆ ಕಾರಣವೆನ್ನಲಾಗುತ್ತಿದೆ. ನೇರವಾಗಿ ಡೆವಲಪರ್ ಒಬ್ಬರಿಂದ ಮನೆಯೊಂದನ್ನು ಖರೀದಿಸುವ ವಿಚಾರದಲ್ಲಿ ಈ ಬೆಳವಣಿಗೆ ಯಾವುದೇ ಪರಿಣಾಮ ಬೀರದೇ ಇದ್ದರೂ ಸೆಕೆಂಡರಿ ಮಾರುಕಟ್ಟೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.

ಸರಕಾರದ ಈ ಹೊಸ ನಿರ್ಧಾರ ತಕ್ಷಣಕ್ಕೆ ಹಾಗೂ ಭವಿಷ್ಯದಲ್ಲೂ ಭಾರೀ ಪರಿಣಾಮ ಬೀರಲಿದೆಯೆಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಕ್ರೆಡಾಯ್ ಅಧ್ಯಕ್ಷ ಗೆತಂಬರ್ ಆನಂದ್ ಹೇಳುವಂತೆ ಮೂಲತಃ ಸಾಮಾನ್ಯ ಜನರು ಮನೆಗಳನ್ನು ಬ್ಯಾಂಕ್ ಹಣಕಾಸು ಸೌಲಭ್ಯದಿಂದ ಕೊಂಡುಕೊಳ್ಳುವುದರಿಂದ ಅವರ ಮೇಲೆ ಈ ಕ್ರಮ ಹೆಚ್ಚಿನ ಪರಿಣಾಮ ಬೀರದು ಎಂದು ಹೇಳುತ್ತಾರೆ.
ಆದರೆ ಬಿಲ್ಡರುಗಳು ತಮ್ಮ ಕಾರ್ಯಸಾಧನೆಗೆ ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ನೀಡುವ ಮೊತ್ತ ಹೆಚ್ಚಾಗಿ ನಗದು ರೂಪದಲ್ಲಿರುವುದರಿಂದ ಈ ಕಾರ್ಯ ಖಂಡಿತವಾಗಿಯೂ ಬಾಧಿತವಾಗುವುದು ಎಂದು ಹೇಳಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಕಪ್ಪು ಹಣ ಚಲಾವಣೆಯಿಂದಾಗಿ ಮೆಟ್ರೋ ನಗರಗಳ ರಿಯಲ್ ಎಸ್ಟೇಟ್ ಮಾರುಕಟ್ಟೆಗಳಲ್ಲಿ ಬೆಲೆಯೇರಿಕೆ ಅತ್ಯಧಿಕವಾಗಿದೆ ಎಂದು ತಜ್ಞರು ಹೇಳುತಾರೆ.
ಸರಕಾರದ ಈಗಿನ ನಿರ್ಧಾರದಿಂದಾಗಿ ಮುಂದಿನ ಕೆಲ ತಿಂಗಳುಗಳ ಕಾಲ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ನಗದು ಹಣ ಚಲಾವಣೆ ಸಂಪೂರ್ಣವಾಗಿ ನಿಲ್ಲಬಹುದು ಎಂದು ಹೇಳಲಾಗುತ್ತಿದೆಯಲ್ಲದೆ, ಸೆಕೆಂಡರಿ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಬೆಲೆಗಳು ಕುಸಿತವಾಗಲಿದೆಯೆಂದು ವಿವರಿಸಲಾಗಿದೆ.

Please follow and like us:
error