ಖಯಿಕೆ ಪಾನ್ ಬನಾರಸ್‌ವಾಲಾ

`ಪಾನ್ ಖಾವೊ ಸಂಯ್ಯಾ ಹಮಾರ್.. ಮಖಮಲ್ ಕೆ ಕುರ್ತೆ ಪರ್ ಛೀಂಟ್ ಲಾಲ್ ಲಾಲ್ ಹಾಡು ಕೇಳುತ್ತಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಜೀವನದ ಅವಿಭಾಜ್ಯ ಅಂಗವಾಗಿ ಹಲವಾರು ಸಂಗತಿಗಳಿರುತ್ತವೆ. ಅವುಗಳಲ್ಲಿ ಎಲೆ ಅಡಿಕೆಯೂ ಸೇರಿದೆ. ಬಾಯಿ ಕೆಂಪಾಗಿಸಿ, ಹಲ್ಲನ್ನು ಬಣ್ಣವಾಗಿಸ್ದಿದರೂ ಎಲೆ ಅಡಿಕೆಯ ಮೋಹವನ್ನು ಬಿಡುವುದಿಲ್ಲ. ಎಲೆ ಅಡಿಕೆ ವಿವಿಧ ರೂಪಗಳಲ್ಲಿ ನಾಡಿನಾದ್ಯಂತ ವ್ಯಾಪಿಸಿದೆ. ಬಾಯಿಯಲ್ಲಿ ಹಾಕಿಕೊಂಡು ಮೆಲ್ಲುವುದರ ಜೊತೆಗೆ ಹುಟ್ಟು-ಸಾವಿನ ನಡುವಿನ ಜೀವನದ ಮಹತ್ವದ ಘಟ್ಟಗಳಲ್ಲಿ ಇದರ ಪ್ರಮುಖ ಪಾತ್ರವಿದೆ. ಪಾನ್ಬೀಡಾ, ಪಾನ್ಪರಾಗ್ ಮತ್ತಿತರ ಥಳಕು-ಬಳುಕಿಗೆ ಈಗಿನ ಜನರು ಮೊರೆ ಹೋದರೂ ವಿಶೇಷ ಸಂದರ್ಭಗಳಲ್ಲಿ ಎಲೆ ಅಡಿಕೆ ಹಾಕದಿರುವವರು ಕಡಿಮೆ. ಮದುವೆ ಮುಂತಾದ ಮಂಗಳ ಕಾರ್ಯಗಳಲ್ಲಿ ಭೋಜನಾ ನಂತರ ಎಲೆ ಅಡಿಕೆ ಪ್ರತ್ಯಕ್ಷವಾಗುತ್ತದೆ. ಮಂಗಳ ಕಾರ್ಯಗಳಲ್ಲಿ ತಾಂಬೂಲ ಕೊಟ್ಟು ತಾಂಬೂಲ ಹಾಕಿಕೊಂಡು ಹೋಗಿ ಎನ್ನುವುದು ರೂಢಿ. ನವಾಬರು ಇದನ್ನು ಬೀಡಾ ಎಂದೇ ಪ್ರಸಿದ್ಧಿಗೆ ತಂದರು. ಮೈಸೂರು ಎಲೆ, ಬನಾರಸ್, ಮದ್ರಾಸ್, ಕಲ್ಕತ್ತ, ನಾಟಿ ಎಲೆಗಳು ಜನಪ್ರಿಯವಾಗಿವೆ. ಅಜ್ಜನ ನಡಗುವ ಬೆರಳಿನಿಂದ ವೀಳ್ಯದೆಲೆಯ ಚಿಗುರಿನ ಕಡ್ಡಿ ಮುರಿದು, ತೊಡೆ ಮೇಲಿಟ್ಟುಕೊಂಡು ಸವರುತ್ತಿದ್ದರು. ಅದಕ್ಕೆ ಬೆಣ್ಣೆ ಲೇಪಿಸಿದಂತೆ ಸುಣ್ಣವನ್ನು ಸವರುತ್ತಿದ್ದರು. ಬಿಳಿ ಸುಣ್ಣದ ಮೇಲೆ ಕೆಂಬಣ್ಣದ ಕಾಚಿನ ಲೇಪನವೂ ಆಗುತ್ತಿತ್ತು. ನಂತರ ಕಂದು ಹಳದಿ ಮಿಶ್ರಿತ ಅಡಕೆಯ ಹಾಳೆಯಂಥದ್ದರ ಒಂದು ಚೂರು ಹಾಕುತ್ತಿದ್ದರು. ನಂತರದ ಸಾಲು, ಸೋಂಪು, ಹವೇಜು ಬೀಜ, ಸಕ್ಕರೆ, ಒಣಕೊಬ್ಬರಿ ಗಸಗಸೆ ಮಿಶ್ರಣದ ಅಡಿಕೆಪುಡಿ ಹಾಕುತ್ತಿದ್ದರು ಅದಕ್ಕೊಂದಷ್ಟು ಚಮನ್‌ನ ಸಿಂಚನವಾಗುತ್ತಿತ್ತು. ಅದರ ಮೇಲೆ ಗುಲಾಬ್‌ನ ಪುಡಿ

 

ಸಿಂಪಡಿಸುತ್ತಿದ್ದರು. ಇಷ್ಟರಲ್ಲಾಗಲೇ ಅಜ್ಜನ ಮುಂದೆ ಎಲೆಗಾಗಿ ಕಾಯುತ್ತ ಕುಳಿತ ನಮ್ಮ ಸಹನೆಯ ಕಟ್ಟೆ ಒಡೆಯುತ್ತಿತ್ತು. ಆಗ ಗಾಜಿನ ಭರಣಿಯಿಂದ ಗುಲ್ಕಂದ್ ತೆಗೆದು ಹಾಕುತ್ತಿದ್ದರು.ಸಾಕಜ್ಜ, ಅಷ್ಟೇ… ಅನ್ನೂದು ಕೇಳಲೇ ಇಲ್ಲವೇನೋ ಎಂಬಂತೆ ಪುದಿನಾದ ಪುಡಿ ಅರಕು ಎಂದು ಕರೆಯಲಾಗುತ್ತದೆ. ಅದನ್ನು ಒಂದಿಷ್ಟೇ ಇಷ್ಟು ಹಾಕುವರು. ಅಲ್ಲಿಗೆ ಅವರ ವೀಳ್ಯ ಕಟ್ಟುವ ಸಂಭ್ರಮ ಮುಗಿಯುತ್ತಿತ್ತು. ಆ ಎಲೆ ಮಡಿಸಿ, ಮಡಿಕೆ ಮುರಿಯದಂತೆ, ಬಿಚ್ಚದಂತೆ ಲವಂಗ ಚುಚ್ಚಿ ನೀಡುವರು. `ಲವಂಗ ಬಿಡದೇ ತಿನ್ನಬೇಕು~ ಎನ್ನುವ ತಾಕೀತು ಬೇರೆ. ಕೋಲ್ಕತ್ತದ ಕೃಷ್ಣ ಸುಂದರಿ ಕಲ್ಕತ್ತಾ ಪಾನ್ ಆಗಬೇಕು. ಇಲ್ಲವೇ ವಾರಣಾಸಿಯ ನಾಜೂಕಿನ ಸುಕೋಮಲೆ ಮಘಾಯ್ ಪಾನ್ ಆಗಬೇಕು. ಇವೆರಡರ ರುಚಿ, ಸ್ವಾದ ಎರಡರಲ್ಲೂ ಅಜಗಜಾಂತರ. ಉಗುಳಿದರೆ ಅನಾರೋಗ್ಯನುಂಗಿದರೆ ಆರೋಗ್ಯ ಭಾಗ್ಯ ಎಲೆ ತಿನ್ನುವ ಅಭ್ಯಾಸ ಉಳ್ಳವರನ್ನು ಎರಡು ವಿಭಾಗಗಳಲ್ಲಿ ವಿಂಗಡಿಸಬಹುದು. ಒಂದು ಎಲೆಯಡಿಕೆ ತಾಂಬೂಲದ ರಸಾಸ್ವಾದ ಮಾಡುತ್ತ, ಕಣ್ಮುಚ್ಚಿ ಅದನ್ನು ನುಂಗುವವರು. ಇನ್ನೊಂದು ಎಲೆಯೊಂದಿಗೆ ತಂಬಾಕು, ಖಿಮಾಮ್ ಮುಂತಾದ ತಂಬಾಕಿನ ಉತ್ಪನ್ನಗಳನ್ನು ಬೆರೆಸಿ, ಬಾಯ್ತುಂಬ ತಿಂದು, ರಸ್ತೆ ತುಂಬ ಉಗುಳುತ್ತ ಹೋಗುವವರದ್ದು. ಎಲೆಯಡಿಕೆ ತಿನ್ನುವವರಿಗೆ ಆರೋಗ್ಯ ಭಾಗ್ಯ ಲಭ್ಯವಾಗುತ್ತದೆ. ಎಲೆಯಲ್ಲಿ ಕಬ್ಬಿಣದಂಶ ಯಥೇಚ್ಛವಾಗಿರುತ್ತದೆ. ಸುಣ್ಣ, ಕಾಚು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಆದರೆ ತಂಬಾಕಿನ ಉತ್ಪನ್ನಗಳನ್ನು ಬಳಸಿ, ತಿಂದುಗುಳುವ ಎಲೆಯಿಂದಾಗಿ ಬಾಯಿ, ಗಂಟಲಿನ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಇದ್ದೇಇದೆ. ಪಾನ್ ತಿನ್ನುವುದು ಆರೋಗ್ಯಕರ ಅಭ್ಯಾಸವಾಗಲಿ. ಚಟವಲ್ಲ.
-ಬಸವರಾಜ್ ಮರದೂರ.

 

Please follow and like us:
error