೨೯ ರಂದು ರೈತ ಫಲಾನುಭವಿಗಳ ಸಮಾವೇಶ : ಸಂಚಾರ ಮಾರ್ಗ ಬದಲಾವಣೆ

raita-samavesha-koppal

ಕೃಷಿ ಭಾಗ್ಯ ಯೋಜನೆ ಸಮರ್ಪಣೆ, ಹಾಗೂ ಸ್ವಾವಲಂಬಿ, ಸ್ವಾಭಿಮಾನ ರೈತ ಸಮಾವೇಶ ಕೊಪ್ಪಳ ನಗರದಲ್ಲಿ ಆ.೨೯ ರಂದು ನಡೆಯಲಿರುವ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಪೊಲೀಸ್ ಇಲಾಖೆಯು ಕೆಲವೊಂದು ಸಂಚಾರ ಮಾರ್ಗಗಳ ಬದಲಾವಣೆ ಮಾಡಿದೆ.
ರೈತ ಫಲಾನುಭವಿಗಳ ಸಮಾವೇಶ ಕಾರ್ಯಕ್ರಮಕ್ಕೆ ಆ. ೨೯ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಪ್ಪಳಕ್ಕೆ ಆಗಮಿಸಲಿದ್ದಾರೆ. ಅಲ್ಲದೆ ಕೊಪ್ಪಳ ನಗರದ ಹೊರವಲಯದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಂದು ೧೨ ಜಿಲ್ಲೆಗಳ ರೈತ ಫಲಾನುಭವಿಗಳು ವಾಹನಗಳ ಮೂಲಕ ಆಗಮಿಸುತ್ತಿರುವುದರಿಂದ ಕೊಪ್ಪಳದಲ್ಲಿ ಸಂಚಾರ ನಿಯಂತ್ರಣಕ್ಕಾಗಿ ಜಿಲ್ಲಾ ಪೊಲೀಸ್ ಇಲಾಖೆಯು ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿದೆ.
ಸಮಾರಂಭಕ್ಕೆ ಆಗಮಿಸುವ ವಾಹನಗಳು ನಿಗದಿಪಡಿಸುವ ಸ್ಥಳದಲ್ಲಿ ಪಾರ್ಕಿಂಗ್ ಮಾಡಲು ಸೂಚನೆ ನೀಡಲಾಗಿದೆ.
ಮಾರ್ಗ ಬದಲಾವಣೆ ವಿವರ ಇಂತಿದೆ: ಆ.೨೯ ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ಸಮಾರಂಭಕ್ಕೆ ಆಗಮಿಸುವ ವಾಹನಗಳನ್ನು ಹೊರತುಪಡಿಸಿ ಹೊಸಪೇಟೆ ಕಡೆಯಿಂದ ಗದಗ ಮತ್ತು ಯಲಬುರ್ಗಾ ಕಡೆಗೆ ಸಂಚರಿಸುವ ಭಾರಿ ವಾಹನಗಳು, ಗಿಣಿಗೇರಾ ಬೈ-ಪಾಸ್ ರಸ್ತೆ ಮೂಲಕ ಬಗಾನಾಳ, ಸಿಂದೋಗಿ ಮಾರ್ಗವಾಗಿ ಹಲಗೇರಿ ಕಡೆಯಿಂದ ಪ್ರಯಾಣಿಸಬೇಕು. ಗದಗ ಮತ್ತು ಯಲಬುರ್ಗಾ ಕಡೆಯಿಂದ ಹೊಸಪೇಟೆ ಮತ್ತು ಗಂಗಾವತಿ ಕಡೆಗೆ ಸಂಚರಿಸುವ ಭಾರಿ ವಾಹನಗಳು, ಹಲಗೇರಿ ಕ್ರಾಸ್‌ನಿಂದ ಸಿಂದೋಗಿ, ಬಗನಾಳ ಮತ್ತು ಗಿಣಿಗೇರಾ ಮಾರ್ಗವಾಗಿ ಪ್ರಯಾಣಿಸಬೇಕು. ಬೀದರ್ ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯಪುರ, ಬಾಗಲಕೋಟ ಕಡೆಯಿಂದ ಸಮಾರಂಭ ಸ್ಥಳಕ್ಕೆ ಆಗಮಿಸುವ ಕೆಎಸ್‌ಆರ್‌ಟಿಸಿ ಬಸ್ಸುಗಳು ಹಾಗೂ ಇತರೆ ವಾಹನಗಳು ಗಿಣಿಗೇರಾ ಕ್ರಾಸ್ ಹೈವೇ ಮುಖಾಂತರ ಆಗಮಿಸಿ ವಾಹನ ನಿಲುಗಡೆ ಪ್ರದೇಶದಲ್ಲಿ ವಾಹನ ನಿಲ್ಲಿಸಬೇಕು. ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಿಂದ ಸಮಾರಂಭಕ್ಕೆ ಆಗಮಿಸುವ ಕೆಎಸ್‌ಆರ್‌ಟಿಸಿ ಬಸ್ಸುಗಳು ಹಾಗೂ ಇತರೆ ವಾಹನಗಳು ಹಲಗೇರಿ ಕ್ರಾಸ್‌ನಿಂದ ಸಿಂದೋಗಿ, ಬಗನಾಳ ಮತ್ತು ಗಿಣಿಗೇರಾ ಮಾರ್ಗವಾಗಿ ಪ್ರಯಾಣಿಸಿ, ಸಮಾರಂಭದ ವಾಹನ ನಿಲುಗಡೆ ಪ್ರದೇಶದಲ್ಲಿ ವಾಹನ ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಿಂದ ಸಮಾರಂಭಕ್ಕೆ ಬರುವ ಲಘು ವಾಹನಗಳು (ನಾಲ್ಕು ಚಕ್ರ ವಾಹನಗಳು) ಕೊಪ್ಪಳ ನಗರ ದಾಟಿ ಅಭಯ ಸಾಲ್ವೆಂಟ್ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಗದಗ ಕಡೆಯಿಂದ ಹೊಸಪೇಟೆ, ಗಂಗಾವತಿ ಕಡೆಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಸಾರಿಗೆ ವಾಹನಗಳು ಹಾಗೂ ಲಘು ವಾಹನಗಳು ಕಿಡದಾಳ, ಬಸಾಪೂರ, ಗಿಣಿಗೇರ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.
ವಾಹನಗಳ ಪಾರ್ಕಿಂಗ್ ಸ್ಥಳದ ಮಾಹಿತಿ: ಸಮಾವೇಶಕ್ಕೆ ಆಗಮಿಸುವ ವಾಹನಗಳಿಗೆ ಸಂಬಂಧಿಸಿದಂತೆ, ಹೊಸಪೇಟೆ ಕಡೆಯಿಂದ ಸಮಾವೇಶಕ್ಕೆ ಆಗಮಿಸುವ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಲಘು ವಾಹನಗಳು ಕೊಪ್ಪಳ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ-೬೩ ರಲ್ಲಿ ಸಮಾವೇಶ ಸ್ಥಳದ ಎದುರುಗಡೆ ಜಾಗೆಯಲ್ಲಿ ಬೇವಿನಾಳ ಕ್ರಾಸ್ ಹತ್ತಿರ ಪಾರ್ಕಿಂಗ್ ಮಾಡಬೇಕು. ಗದಗ ಕಡೆಯಿಂದ ಆಗಮಿಸುವ ಲಘು ವಾಹನಗಳಿಗೆ ಕೊಪ್ಪಳ ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ-೬೩ ರಲ್ಲಿ ಬರುವ ಫಿಶ್ ಲ್ಯಾಂಡ್ ಡಾಬಾ ಪಕ್ಕದ ಬಯಲು ಜಾಗೆಯಲ್ಲಿ ಹಾಗೂ ಅಭಯ್ ಸಾಲ್ವೆಂಟ್ ಎದುರುಗಡೆಯ ಚರ್ಚ್ ಪಕ್ಕದ ಲೇಔಟ್ ಜಾಗೆ ಮತ್ತು ಆರ್‌ಟಿಓ ಕಛೇರಿ ಪಕ್ಕದ ಬಯಲು ಜಾಗೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಚುನಾಯಿತ ಪ್ರತಿನಿಧಿಗಳ ವಾಹನಗಳ ಪಾರ್ಕಿಂಗ್ ಸ್ಥಳದ ವಿವರ: ಚುನಾಯಿತ ಪ್ರತಿನಿಧಿಗಳ ವಾಹನಗಳಿಗೆ ಸಮಾವೇಶ ಸ್ಥಳದ ಹತ್ತಿರ ಬಲಬಾಗದ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಮುಖ್ಯಮಂತ್ರಿಗಳು ಹಮ್ಮಿಕೊಳ್ಳಲಿರುವ ಜನ ಸ್ಪಂದನ ಕಾರ್ಯಕ್ರಮದ ಸ್ಥಳ: ಜಿಲ್ಲಾಧಿಕಾರಿಗಳ ಕಛೇರಿ ಮುಖ್ಯದ್ವಾರದ ಪಕ್ಕದ ಜಾಗೆಯಲ್ಲಿ ಸ್ಥಳ ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಆ.೨೯ ರಂದು ಮದ್ಯಾಹ್ನ ೨ ಗಂಟೆಗೆ ಅಹವಾಲು ಸಲ್ಲಿಸಬಹುದು ಎಂದು ಕೊಪ್ಪಳ ಪೊಲೀಸ್ ಇಲಾಖೆ ತಿಳಿಸಿದೆ.

Please follow and like us:
error

Related posts

Leave a Comment