ಹೋರಾಟಗಾರರ ವಿರುದ್ಧ ದೂರು ದಾಖಲಿಸಿದ್ದಕ್ಕೆ ಖಂಡನೆ

cv-chandrashekar

ರೈಲ್ವೆ ಗೇಟ್ ೬೨ಕ್ಕೆ ಮೇಲ್ಸೇತುವೆ ಕಾಮಗಾರಿ ತ್ವರಿತಗೊಳಿಸಲು ಆಗ್ರಹಿಸಿದ ಹೋರಾಟಗಾರರ ವಿರುದ್ಧ ದೂರು ದಾಖಲಿಸಿದ್ದಕ್ಕೆ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು

ಕೊಪ್ಪಳ-ಭಾಗ್ಯನಗರದ ಮಧ್ಯ ಹಾಯ್ದುಹೋಗಿರುವ ರೈಲ್ವೆ ಹಳಿಯಿಂದಾಗಿ ದಶಕಗಳ ಕಾಲ ಸಂಚಾರದ ತೊಂದರೆ ಅನುಭವಿಸಿದ ಜನರ ಭಾವನೆಗೆ ಪೆಟ್ಟು ನೀಡಿದ ಕೆಲಸವನ್ನು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಾಡಿದ್ದಾರೆ. ರೈಲ್ವೆ ಮೇಲ್ಸೇತುವೆ ಕಾಮಗಾರಿ ತ್ವರಿತವಾಗಿ ನಡೆಯಲೆಂಬ ಸದುದ್ದೇಶದಿಂದ, ಕೊಪ್ಪಳ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸುವಂತೆ ಮನವಿ ನೀಡಲು ಬಂದ ಭಾಗ್ಯನಗರ ರೈಲ್ವೆ ಗೇಟ್ ಹೋರಾಟಗಾರರ ವಿರುದ್ಧ ದೂರು ದಾಖಲಿಸಿದ್ದಾರೆ. ಇದು ಖಂಡನೀಯ.

ಸಾಕಷ್ಟು ಹೋರಾಟ ಹಾಗೂ ಪ್ರಯತ್ನದ ನಂತರ, ರೈಲ್ವೆ ಗೇಟ್ ೬೨ಕ್ಕೆ ಮೇಲ್ಸೇತುವೆ ನಿರ್ಮಿಸುವ ಯೋಜನೆಗೆ ಕೇಂದ್ರ ಸರಕಾರ ಅಂಗೀಕಾರ ನೀಡಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಸದಸ್ಯರಾದ  ಸಂಗಣ್ಣ ಕರಡಿ ಅವರು ಇದಕ್ಕಾಗಿ ಅಹರ್ನಿಶಿ ದುಡಿದಿದ್ದಾರೆ.

ಹೀಗೆ ಮಂಜೂರಾಗಿರುವ ಕಾಮಗಾರಿ ಭಾಗ್ಯನಗರ ಭಾಗದಲ್ಲಿ ಮಾತ್ರ ಚುರುಕಾಗಿದ್ದು, ಕೊಪ್ಪಳ ಭಾಗದಲ್ಲಿ ಕಾಮಗಾರಿ ಇದುವರೆಗೆ ಪ್ರಾರಂಭವಾಗಿಲ್ಲ. ಇದಕ್ಕೆ ಕಾರಣ, ಕೊಪ್ಪಳ ಭಾಗದಲ್ಲಿ ಮೇಲ್ಸೇತುವೆ ಮಾರ್ಗವನ್ನು ಬದಲಿಸಬೇಕೆಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ರೈಲ್ವೆ ಇಲಾಖೆಗೆ ಮನವಿ ಮಾಡಿದ್ದು.

ಇಂತಹ ಅನಗತ್ಯ ಕ್ರಮದಿಂದಾಗಿ, ಕಾಮಗಾರಿ ವಿಳಂಬಗೊಳಿಸುವುದು ಹಾಗೂ ಮಾರ್ಗ ಬದಲಾವಣೆ ಮೂಲಕ, ತಮ್ಮ ಆತ್ಮೀಯರೊಬ್ಬರಿಗೆ ನೆರವಾಗುವುದು ಅವರ ತಕರಾರಿನ ಉದ್ದೇಶವೇ ಹೊರತು ಇದರಲ್ಲಿ ಸಾರ್ವಜನಿಕ ಸದುದ್ದೇಶ ಯಾವುದೂ ಕಾಣುವುದಿಲ್ಲ.

ಈಗಾಗಲೇ ಭಾಗ್ಯನಗರದ ನಾಗರಿಕರು ಹಲವಾರು ದಶಕಗಳಿಂದ ಸಂಚಾರ ತೊಂದರೆ ಎದುರಿಸುತ್ತಿದ್ದಾರೆ. ಜನರ ಬವಣೆಯನ್ನು ಶೀಘ್ರ ಪರಿಹರಿಸುವುದನ್ನು ಬಿಟ್ಟು, ಯೋಜನೆಯನ್ನೇ ಬದಲಿಸಲು ಯತ್ನಿಸುವ, ಆ ಮೂಲಕ ಮತ್ತಷ್ಟು ತಡ ಮಾಡುವ ಶಾಸಕರ ಕ್ರಮವನ್ನು ನಾನು ಖಂಡಿಸುತ್ತೇನೆ.

ಕಳೆದ ವಾರ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ಆರ್.ವಿ. ದೇಶಪಾಂಡೆ ಅವರನ್ನು ಭೇಟಿಯಾಗಿ, ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕೆಂದು ಮನವಿ ನೀಡಲು ಬಂದಿದ್ದ ರೈಲ್ವೆ ಮೇಲ್ಸೇತುವೆ ಹೋರಾಟ ಸಮಿತಿಯ ೨೫ ಜನರ ವಿರುದ್ಧ ಅನಗತ್ಯವಾಗಿ ಪೊಲೀಸ್ ದೂರು ನೀಡಿರುವ ಕ್ರಮ ಖಂಡನೀಯ. ಈ ಹೋರಾಟಗಾರರು ಶಾಂತಿಯುತವಾಗಿ ಮನವಿ ಸಲ್ಲಿಸಲು ಬಂದಿದ್ದರೂ, ಶಾಂತಿ ಕದಡುವ ರೀತಿ ವರ್ತಿಸಿದರೆಂದು ಅವರ ವಿರುದ್ಧ ತಪ್ಪಾಗಿ ದೂರು ದಾಖಲಿಸಿದ್ದರ ಹಿಂದಿನ ರಾಜಕೀಯವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.

ಪ್ರಗತಿಗೆ ಸಂಬಂಧಿಸಿದ ವಿಷಯದಲ್ಲಿ ಇಂತಹ ಕೀಳು ರಾಜಕೀಯ ಸಲ್ಲದು. ಶಾಂತಿಯುತವಾಗಿ ಮನವಿ ಸಲ್ಲಿಸಲು ಬಂದಿದ್ದ ನಾಗರಿಕರ ವಿರುದ್ಧ ದೂರು ದಾಖಲಿಸುವುದು ಉತ್ತಮ ನಡವಳಿಕೆ ಅಲ್ಲ. ಈ ಎಲ್ಲಾ ಹೋರಾಟಗಾರರ ವಿರುದ್ಧ ದಾಖಲಿಸಿರುವ ದೂರನ್ನು ತಕ್ಷಣ ವಾಪಾಸ್ ಪಡೆಯಬೇಕು ಎಂದು ಈ ಮೂಲಕ ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.

Please follow and like us:
error

Related posts

Leave a Comment