ಜನರ ಸಮಸ್ಯೆಗಳಿಗೆ ಸ್ಪಂದಿಸಲು ಅನುಕೂಲವಾಗುವಂತೆ ಬರುವ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿಯೂ ಜನಸಂಪರ್ಕ ಸಭೆ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.
ಜಿಲ್ಲೆಯ ಗಂಗಾವತಿ ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಜನಸಂಪರ್ಕ ಸಭೆಯಲ್ಲಿ ಜನರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಜನರ ಅಹವಾಲುಗಳಿಗೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿಯೇ ಸಚಿವರು ಸ್ಪಂದಿಸುವಂತಾಗಬೇಕು ಎನ್ನುವ ಮುಖ್ಯಮಂತ್ರಿಗಳ ಆಶಯದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಿ, ಜನರ ಅಹವಾಲುಗಳನ್ನು ಆಲಿಸಿ, ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ. ಇದೀಗ ಬರುವ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿಯೂ ಜನಸಂಪರ್ಕ ಸಭೆಯನ್ನು ಕೈಗೊಂಡು, ಗ್ರಾಮೀಣ ಮಟ್ಟದಲ್ಲಿಯೇ ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸದ್ಯ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿದೆ. ಜನರು, ರೈತರು ಸಂಕಷ್ಟದಲ್ಲಿದ್ದಾರೆ. ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಜನರ ಬಳಿಗೆ ಜನಪ್ರತಿನಿಧಿಗಳು ಹೋಗಿ, ಅವರ ಕಷ್ಟಗಳನ್ನು ವಿಚಾರಿಸಿ ಸ್ಪಂದಿಸಬೇಕಾಗುತ್ತದೆ. ಜನರ ಕಷ್ಟಗಳಿಗೆ ಸ್ಪಂದಿಸಲು ಜಿಲ್ಲೆಯಲ್ಲಿ ಸಂಚರಿಸುತ್ತಿದ್ದೇನೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿಗಳು ೨೪* ೭ ಕಾರ್ಯ ಮಾಡುವ ಮಂತ್ರಿಗಳಾಗಿದ್ದು, ಜನರಿಗಾಗಿ, ಜನರಿಗೋಸ್ಕರ ಇಂತಹ ಜನಸಂಪರ್ಕ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಬರದ ಕಾರಣದಿಂದಾಗಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂವಿನಹಾರ, ತುರಾಯಿ, ಹಾಗೂ ಸನ್ಮಾನವನ್ನು ನಿರ್ಬಂಧಿಸಲಾಗುವುದು. ಜನಪ್ರತಿನಿಧಿಗಳು ಕೂಡ ಶಿಸ್ತು, ಸಂಯಮ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಜನಪ್ರತಿನಿಧಿಗಳನ್ನು ಜನ ನೋಡಿ ನಗುವಂತಾಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.
ಕನಕಗಿರಿ ಶಾಸಕ ಶಿವರಾಜ ತಂಗಡಗಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಸದ್ಯ ಬರ ಪರಿಸ್ಥಿತಿ ಇರುವುದರಿಂದ, ವಿದ್ಯುತ್ ಸಮಸ್ಯೆ, ವಿದ್ಯುತ್ ಪರಿವರ್ತಕಗಳ ಸಮಸ್ಯೆ, ನೀರಿನ ಸಮಸ್ಯೆಯೂ ತೀವ್ರವಾಗುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಸಮಸ್ಯೆಗಳಿಗೆ ಅಧಿಕಾರಿಗಳು ಶೀಘ್ರ ಸ್ಪಂದಿಸುವಂತಾಗಬೇಕು. ತುಂಗಭದ್ರಾ ಕಾಲುವೆಗೆ ನ. ೨೦ ರವರೆಗೂ ನೀರು ಹರಿಸಲಾಗುವುದು. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಭರವಸೆ ನೀಡಿದರು.
ಜನಸಂಪರ್ಕ ಸಭೆಯಲ್ಲಿ, ಪಹಣಿ ತಿದ್ದುಪಡಿ, ಭೂಮಿ ಮಂಜೂರಾತಿ, ಅಕ್ರಮ ಮರುಳುಗಾರಿಕೆ, ಮಾಸಾಶನ ಮಂಜೂರಾತಿ ಸೇರಿದಂತೆ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಚಿವರ ಸಮಕ್ಷಮ ಸಲ್ಲಿಸಿದರು. ಜನರ ಅಹವಾಲುಗಳಿಗೆ ಸಂಬಂಧಿಸಿದಂತೆ, ಸಂಬಂಧಪಟ್ಟ ಅಧಿಕಾರಿಗಳು ಅಹವಾಲುಗಳಿಗೆ ಕೂಡಲೆ ಸ್ಪಂದಿಸುವಂತೆ ಸಚಿವರು ಸ್ಥಳದಲ್ಲಿಯೇ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಜಿ.ಪಂ. ಸದಸ್ಯರುಗಳಾದ ವಿಜಯಲಕ್ಷ್ಮಿ, ಅನಿತಾ ಮಾರುತಿ, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಾರ್ವಜನಿಕರಿಂದಲೇ ಜನಸಂಪರ್ಕ ಸಭೆಯ ಉದ್ಘಾಟನೆ ನೆರವೇರಿಸಲಾಯಿತು. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರು ವೇದಿಕೆಯಿಂದ ಕೆಳಗಿಳಿದು, ಜನರ ಬಳಿ ತಾವೇ ತೆರಳಿ, ಜನರ ಅಹವಾಲು, ಅರ್ಜಿಗಳನ್ನು ಸ್ವೀಕರಿಸಿದ್ದು ಇಂದಿನ ವಿಶೇಷವಾಗಿತ್ತು.
ಹೋಬಳಿ ಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಲು ನಿರ್ಧಾರ- ಬಸವರಾಜ ರಾಯರಡ್ಡಿ
Please follow and like us: