ಹೆಸರು ಬೆಳೆ ಕುರಿತು ರೈತರಿಗೆ ಸಲಹೆ.

ಕೊಪ್ಪಳ ಜೂ. ೨೭ ಕೊಪ್ಪಳ ಜಿಲ್ಲೆಯಲ್ಲಿನ ಕೃಷಿ ಇಲಾಖೆ ಮತ್ತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಕೊಪ್ಪಳ ಜಿಲ್ಲೆಯಾದ್ಯಂತ ಮುಂಗಾರು ಬೆಳೆಗಳ ಸ್ಥಿತಿಗತಿ ಅರಿಯಲು ಜಂಟಿಸಮೀಕ್ಷೆ ಕೈಗೊಂಡಿದ್ದು ಹೆಸರು ಬೆಳೆಗೆ ಸಂಬಂಧಿಸಿದಂತೆ ರೈತರು ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳ ಕುರಿತು ಸಲಹೆಗಳನ್ನು ನೀಡಲಾಗಿದೆ. ಹೆಸರುDSC07349 ಬೆಳೆ ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಭಾಗದಲ್ಲಿ ಬಿತ್ತನೆಯಾಗಿದ್ದು, ೨೦ ರಿಂದ ೨೫ ದಿವಸದ ಬೆಳೆಯ ಹಂತದಲ್ಲಿದೆ. ಈ ಹಂತದಲ್ಲಿ ಕಳೆಗಳ ನಿರ್ವಹಣೆ ಅಗತ್ಯವಿದ್ದು, ಮುಂದಿನ ೧೦ ದಿನಗಳಲ್ಲಿ ಅಂತರಬೇಸಾಯ ಮಾಡಿ ಕಳೆ ಕತೋಟಿ ಮಾಡಬೇಕು.
ಕೀಟ ಮತ್ತು ರೋಗ ನಿರ್ವಹಣೆ : ಮುಂಜಾಗ್ರತಾ ಕ್ರಮವಾಗಿ ರೈತರು ಪ್ರತಿ ಎಕರೆಗೆ ೫ ರಂತೆ ಮೋಹಕ ಮತ್ತು ಅಂಟುಬಲೆಗಳನ್ನು ಹೊಲದಲ್ಲಿ ಹಾಕಬೇಕು. ಇದರಿಂದ ಹೇನು, ಥ್ರ್ರಿಪ್ಸ್ ಮತ್ತು ಬಿಳಿ ನೊಣಗಳ ಬಾಧೆ ಕಡಿಮೆಯಾಗುತ್ತದೆ. ಹೇನು ಮತ್ತು ತ್ರಿಪ್ಸ್ ಬಾಧೆ ಕಂಡುಬಂದರೆ, ಪ್ರತಿ ಲೀಟರ್ ನೀರಿಗೆ ೧ ಮಿ.ಲಿ. ಪ್ಯಾರಾಥಿಯಾನ್ ೫೦ ಇಸಿ ಅಥವಾ ೧ ಮಿ.ಲೀ. ಮೊನೊಕ್ರೋಟೊಫಾಸ್ ೩೬ ಎಸ್.ಎಲ್. ಅಥವಾ ೧.೭ ಮಿ.ಲೀ. ಡೈಮಿಥೋಯೇಟ್ ೩೦ ಇಸಿ ಬೆರೆಸಿ ಸಿಂಪಡಿಸಬೇಕು ಅಥವಾ ಪ್ರತೀ ಲೀ. ನೀರಿಗೆ ೦.೨೫ ಮಿ.ಲೀ ಇಮಿಡಾಕ್ಲೋಪ್ರಿಡ್ ೧೭.೮ ಎಸ್.ಎಲ್ ಅಥವಾ ೦.೩ ಮಿ.ಲೀ ಥಯಾಮಿಥಾಕ್ಸಾಮ್ ೨೫ ಡಬ್ಲ್ಯೂಜಿ ಅಥವಾ ೧.೭ ಮಿ.ಲೀ ಡೈಮೆಥೋಯೇಟ್ ೩೦ ಇಸಿ ಬೆರೆಸಿ ಸಿಂಪಡಿಸಬೇಕು. ಬಿಳಿ ನೊಣದ ನಿಯಂತ್ರಣಕ್ಕಾಗಿ ಟ್ರಯೊಜೊಫಾಸ್ ೧.೨೫ ಮಿ.ಲೀ ಪ್ರತೀ ಲೀ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಎಲೆ ತಿನ್ನುವ ಹಾಗು ಕಾಯಿ ಕೊರಕದ ನಿರ್ವಹಣೆಗಾಗಿ ಪ್ರತಿ ಲೀಟರ್ ನೀರಿಗೆ ೦.೫ ಮಿ. ಲೀ ಫೆನವಲರೇಟ್ ೨೦ ಇಸಿ ಅಥವಾ ೨ ಮಿ. ಲೀ ಕ್ವಿನಾಲ್‌ಫಾಸ್ ೨೫ ಇಸಿ ಬೆರೆಸಿ ಸಿಂಪರಿಸಬೇಕು. ಹಳದಿ ನಂಜು ರೋಗ ನಿವಾರಣೆ : ಈ ರೋಗದ ಲಕ್ಷಣವೆಂದರೆ ಎಲೆಗಳ ಮೇಲೆ ತಿಳಿ ಹಳದಿ ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ನಂತರ ಹಳದಿ ಬಣ್ಣದ ಭಾಗ ಬೆಳೆಯುತ್ತಾ ಹೋಗುವುದು. ಇಂತಹ ರೋಗ ಪೀಡಿತ ಸಸಿಗಳು ತಡವಾಗಿ ಮಾಗುವುದಲ್ಲದೆ, ಹೂ ಕಾಯಿಗಳ ಸಂಖ್ಯೆ ಕಡಿಮೆ ಇರುವುದು. ಕಾಯಿಗಳ ಗಾತ್ರ ಚಿಕ್ಕದಾಗಿ ಕಾಳುಗಳು ಸಣ್ಣದಾಗುವವು. ಈ ರೋಗವು ಬೀಜಗಳ ಮುಖಾಂತರ ಪ್ರಸಾರ ಆಗುವುದಿಲ್ಲ. ಆದರೆ ಇದರ ಪ್ರಸಾರ ಬಿಳಿನೊಣಗಳ ಮುಖಾಂತರ ಆಗುವುದು. ಬಾಡುತ್ತಿರುವ ಮತ್ತು ರೋಗಕ್ಕೆ ತುತ್ತಾದ ಸಸಿಗಳನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಕಿತ್ತು ನೆಲದಲ್ಲಿ ಹೂಳಬೇಕು. ಈ ರೋಗವು ಕೀಟಗಳಿಂದ ಪ್ರಸಾರವಾಗುವುದರಿಂದ ಕೀಟನಾಶಕ ಸಿಂಪರಣೆ ಮಾಡುವುದರಿಂದ ಹತೋಟಿ ಮಾಡಬಹುದು. ರೋಗ ಲಕ್ಷಣಗಳು ಕಂಡುಬಂದ ಮೇಲೆ ೧.೫ ಮೀ.ಲೀ. ಟ್ರೈಜೋಫಾಸ್ ಅಥವಾ ೧ ಮೀ.ಲೀ ಆಕ್ಸಿಡೆಮೆಟಾನ್ ಮೀಥೈಲ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಬೂದಿ ರೋಗ : ಈ ರೋಗವು ಒಂದು ಶಿಲಿಂದ್ರದಿಂದ ಬರುತ್ತಿದ್ದು, ಇದರ ಲಕ್ಷಣಗಳೆಂದರೆ ರೋಗ ತಗುಲಿದ ಎಲೆಗಳ ಮೇಲೆ ಶಿಲೀಂದ್ರ ಬಿಳಿಯ ಆಕಾರದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ನಂತರ ಎಲೆ ಹಾಗೂ ಕಾಯಿಗಳ ಮೇಲೆ ಬೂದು ಬಣ್ಣದ ಶಿಲೀಂದ್ರದ ಬೆಳವಣಿಗೆಯನ್ನು ಕಾಣಬಹುದು. ರೋಗದ ತೀವ್ರತೆ ಹೆಚ್ಚಾದಾಗ ಎಲೆಗಳು ಉದುರುವವು. ಕಾಯಿಗಳ ಬೆಳವಣಿಗೆ ಕುಂಠಿತವಾಗುವುದರಿಂದ ಇಳುವರಿಯಲ್ಲಿ ನಷ್ಟ ಆಗುವುದು. ಇದರ ನಿರ್ವಹಣೆಗಾಗಿ ೦.೫ ಮಿ.ಲೀ ಪ್ರೊಪಿಕೋನಾಜೋಲ್ ಅಥವಾ ೩.೦ ಗ್ರಾಂ ನೀರಿನಲ್ಲಿ ಕರಗುವ ಶೇ. ೮೦ ರ ಗಂಧಕ ಅಥವಾ ೧ ಗ್ರಾಂ ಕಾರ್ಬನ್‌ಡೈಜಿಮ್ ೫೦ ಡಬ್ಯೂಪಿನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಸರಕೊಸ್ಪೊರಾ ಎಲೆ ಚುಕ್ಕೆ ರೋಗ : ಇದರ ರೋಗ ಲಕ್ಷಣಗಳೆಂದರೆ ಎಲೆಗಳ ಮೇಲೆ ಬೂದು ಬಣ್ಣದಿಂದ ಕೂಡಿದ ವೃತ್ತಾಕಾರದ ಚುಕ್ಕೆಗಳು ಕಾಣಿಸಿಕೊಂಡು ನಂಥರ ಅದರ ಸುತ್ತಲೂ ನೇರಳ ಮಿಶ್ರಿತ ಕಂದು ಬಣ್ಣದ ಬಳೆ ಆವರಿಸುತ್ತದೆ. ಈ ರೀತಿಯ ಚುಕ್ಕೆಗಳು ಕಾಯಿಗಳ ಮೇಲೆ ಕೂಡಾ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಬಿತ್ತಿದ ನಾಲ್ಕರಿಂದ ಆರು ವಾರಗಳ ನಂತರ ಕಾಣಿಸಿಕೊಳ್ಳುವ ಈ ರೋಗ, ವಾತಾವರಣದಲ್ಲಿ ಆರ್ದ್ರತೆ ಹೆಚ್ಚಾದಂತೆ ಈ ರೋಗ ಉಲ್ಬಣವಾಗುವುದು. ಇದರ ನಿರ್ವಹಣೆಗಾಗಿ ಪ್ರತಿ ಲೀಟರ್ ನೀರಿಗೆ ೨ ಗ್ರಾಂ ಜೈನೆಬ್ ೭೫ ಡಬ್ಯೂಪಿ ಅಥವಾ ಮೆಂಕೋಜೆಬ್ ೭೫ ಡಬ್ಯೂಪಿ ಅಥವಾ ೩ ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ೫೦ ಡಬ್ಯೂಪಿ ಬೆರೆಸಿ ಸಿಂಪಡಿಸಬೇಕು.
ದಂಡಾಣುವಿನ ಎಲೆ ಚುಕ್ಕೆ ರೋಗ : ಇದು ಒಂದು ದಂಡಾಣುವಿಂದ ಬರುತ್ತದೆ. ಈ ರೋಗದ ಮುಖ್ಯ ಲಕ್ಷಣವೆಂದರೆ ಕಂದು ಬಣ್ಣದ ಚುಕ್ಕೆಗಳು ವೃತ್ತಾಕಾರವಾಗಿ ಇಲ್ಲವೆ ಇನ್ನಾವುದೇ ಆಕಾರದಲ್ಲಿ ಎಲೆಗಳ ಮೇಲೆ ಕಾಣಿಸಿಕೊಳ್ಳುವುದು. ನಂತರ ಇದು ಎಲೆಗಳ ದೇಟು ಹಾಗೂ ಕಾಂಡದ ಮೇಲೂ ಕಾಣಿಸಿಕೊಳ್ಳುವುದು. ಆದರೆ ಇಲ್ಲಿ ವೃತ್ತಾಕಾರವಾಗಿ ಇರದೆ ಉದ್ದವಾಗಿ ಇರುವುದು. ನಂತರ ಇದು ಕಾಯಿಗಳ ಮೇಲೂ ಕಂಡು ಬರುವುದು. ಹುಳಗಳ ಗಾಳಿಯ ಮುಖಾಂತರ ಹೆಚ್ಚಿನ ಪ್ರಸಾರವಾಗುತ್ತವೆ. ಬೀಜಗಳ ಮುಖಾಂತರ ಪ್ರಸಾರವಾಗುವುದೆಂದು ಕಂಡು ಬಂದಿದೆ. ಇದರ ನಿರ್ವಹಣೆಗಾಗಿ ೩ ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ೫೦ ಡಬ್ಯೂಪಿ ಬೆರೆಸಿ ಸಿಂಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಡಾ. ಎಂ.ಬಿ. ಪಾಟೀಲ, ವಿಸ್ತರಣಾ ಮುಂದಾಳು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ತಾಲೂಕಾ ಪಂಚಾಯತಿ ಆವರಣ, ಕೊಪ್ಪಳ, ದೂರವಾಣಿ ಸಂ: ೦೮೫೩೯-೨೨೦೩೦೫, ಮೊ: ೯೪೪೮೬೯೦೬೮೪ ಕ್ಕೆ ಸಂಪರ್ಕಿಸಬಹುದು.

Please follow and like us:
error