ಸ್ವಾಭಿಮಾನದ ಸಂಕೇತ ಟಿಪ್ಪು ಸುಲ್ತಾನ್- ರಾಘವೇಂದ್ರ ಹಿಟ್ನಾಳ್

tippu_jayanti_koppal (2) tippu_jayanti_koppal (5) tippu_jayanti_koppal (6) tippu_jayanti_koppal (8): ಅಪ್ರತಿಮ ದೇಶಭಕ್ತನಾಗಿದ್ದ ಟಿಪ್ಪು ಸುಲ್ತಾನ್ ಸರ್ವಧರ್ಮ ರಕ್ಷಕನಾಗಿದ್ದರು, ಅಲ್ಲದೆ ನಿಷ್ಠೆ ಹಾಗೂ ಪ್ರಾಮಾಣಿಕತೆಯ ಸಂಕೇತ ಟಿಪ್ಪು ಸುಲ್ತಾನ್ ಎಂಬುದಾಗಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಬಣ್ಣಿಸಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಜರತ್ ಟಿಪ್ಪು ಸುಲ್ತಾನ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ಹಾಗೂ ಸರ್ವಧರ್ಮ ರಕ್ಷಕರಾಗಿದ್ದರು. ಇಂತಹ ಮಹಾನ್ ಪುರುಷ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ನಿರ್ಧಾರ ಕೈಗೊಂಡ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅಭಿನಂದನಾರ್ಹರು. ಕೃಷಿ, ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಆಗಿನ ಕಾಲದಲ್ಲೇ ಟಿಪ್ಪು ಸುಲ್ತಾನ್ ಅಳವಡಿಸಿದ್ದರು. ಮಕ್ಕಳನ್ನು ಒತ್ತೆ ಇಡಲು ಬಯಸುತ್ತೇನೆಯೇ ಹೊರತು, ದೇಶವನ್ನು ಅಡವಿಡಲಾರೆ ಎಂಬ ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದವರು ಟಿಪ್ಪು ಸುಲ್ತಾನ್. ಮಹನೀಯರ ಜೀವನ ಚರಿತ್ರೆ, ಅವರ ತತ್ವಾದರ್ಶಗಳ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸುವ ಕಾರ್ಯವನ್ನು ಸರ್ಕಾರ ಮಾಡಲಿದೆ. ಕೊಪ್ಪಳ ನಗರಕ್ಕೆ ಅಲ್ಪಸಂಖ್ಯಾತರ ಕೇಂದ್ರೀಯ ವಿದ್ಯಾಲಯಕ್ಕೆ ೩೦ ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ. ಭೂ ಒಡೆತನ ಯೋಜನೆಯಡಿ ಅಲ್ಪಸಂಖ್ಯಾತರ ಸಮುದಾಯ ೨೫೦ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡಲು ಸರ್ಕಾರ ಕ್ರಮ ವಹಿಸಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
ಟಿಪ್ಪು ಸುಲ್ತಾನ್ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ಕಾರಟಗಿಯ ಬಿ. ಪೀರ್ ಬಾಷಾ ಅವರು, ಅಂಬೇಡ್ಕರ್, ಬಸವಣ್ಣನವರು ಹೇಗೆ ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲವೋ, ಅದೇ ರೀತಿ ಟಿಪ್ಪು ಸುಲ್ತಾನ್ ಕೂಡ ಕೇವಲ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತರಲ್ಲ. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಹಾಗೂ ದೇಶಭಕ್ತ ಅಲ್ಲ ಎಂದು ಅನಗತ್ಯವಾಗಿ ಗೊಂದಲವನ್ನು ಸೃಷ್ಟಿಸಲಾಗುತ್ತಿದೆ. ಪರ್ಷಿಯನ್ನರು, ಬ್ರಿಟೀಷರು ಇಲ್ಲಿಗೆ ಬಂದ ನಂತರವೇ ದೇಶದ ಪರಿಕಲ್ಪನೆ ಬಂದಿದ್ದು. ವಿವಿಧ ದೇಶಗಳ ರಾಜರುಗಳಿಂದ ಒಪ್ಪಂದ ಮಾಡಿಕೊಂಡು, ಬ್ರಿಟೀಷರನ್ನು ದೇಶದಿಂದ ಹೊರದೂಡಲು ಯತ್ನಿಸಿದ ರಾಜರುಗಳ ಪೈಕಿ ಟಿಪ್ಪು ಸುಲ್ತಾನ್ ಮೊದಲನೆಯವರು. ಟಿಪ್ಪು ಸುಲ್ತಾನ್ ಅವರು, ಭೂಸುಧಾರಣೆ ಕಾಯ್ದೆಯನ್ನು ೧೭೯೮ ರಲ್ಲಿಯೇ ಜಾರಿಗೊಳಿಸಿದ್ದರು. ಹೆಚ್ಚು, ಹೆಚ್ಚು ಜಮೀನನ್ನು ತಮ್ಮ ವಶದಲ್ಲಿಟ್ಟುಕೊಂಡು ಮೆರೆಯುತ್ತಿದ್ದವರಿಂದ, ಜಮೀನು ವಶಕ್ಕೆ ಪಡೆದು, ರೈತರು, ದಲಿತರಿಗೆ ಹಂಚಿದ್ದರು. ೩೯ ಸಾವಿರ ಕೆರೆಗಳನ್ನು ಕಟ್ಟಿಸಿದ ಅವರ ಕಾಲದಲ್ಲಿ ಬಹುಪಾಲ ಪ್ರದೇಶ ನೀರಾವರಿಗೆ ಒಳಪಟ್ಟಿತ್ತು. ಚೀನಾ ದೇಶದಿಂದ ಕೃಷಿ ತಜ್ಞರನ್ನು ತನ್ನ ರಾಜ್ಯಕ್ಕೆ ಕರೆಯಿಸಿ, ರೇಷ್ಮೆ ಬೆಳೆಯನ್ನು ಇಲ್ಲಿನ ಜನರಿಗೆ ಪರಿಚಯಿಸಿದರು. ಇಂತಹ ಮಹಾನ್ ಪುರುಷರ ಜಯಂತಿಯನ್ನು ಸರ್ಕಾರದಿಂದ ಆಚರಿಸುವ ಬಗ್ಗೆ ಟೀಕೆ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.
ನಗರಸಭೆ ಸದಸ್ಯ ಅಮ್ಜದ್ ಪಟೇಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜಕೀಯ ಕಾರಣಗಳಿಂದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ವಿರೋಧಿಸುವುದು ಸಮಂಜಸವಲ್ಲ. ಮುಸ್ಲೀಮರಿಗೆ ಮೀಸಲಾತಿ ಹೆಚ್ಚಳ, ಟಿಪ್ಪು ಭವನ, ಉರ್ದು ಅಂಗನವಾಡಿಗಳ ಸ್ಥಾಪನೆ, ಬಾಲಕಿಯರಿಗೆ ಪ್ರತ್ಯೇಕ ಪ್ರೌಢಶಾಲೆ ಹಾಗೂ ಪ.ಪೂ. ಕಾಲೇಜು ಪ್ರಾರಂಭಿಸುವಂತೆ ಮನವಿ ಸಲ್ಲಿಸಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಸಮಾರಂಭದ ಉದ್ಘಾಟನೆ ನೆರವೇರಿಸಿದರು. ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಐ.ಎಸ್. ಶಿರಹಟ್ಟಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಖಾಜಾವಲಿ ಬನ್ನಿಕೊಪ್ಪ ಮುಂತಾದವರು ಪಾಲ್ಗೊಂಡಿದ್ದರು.
ಟಿಪ್ಪು ಸುಲ್ತಾನ್ ಅವರ ಕುರಿತು ಏರ್ಪಡಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ನಗರ ಪೊಲೀಸ್ ಠಾಣೆ ಬಳಿಯ ಟಿಪ್ಪು ಸರ್ಕಲ್‌ನಲ್ಲಿ ಟಿಪ್ಪು ಸುಲ್ತಾನ್ ಅವರ ಭಾವಚಿತ್ರಕ್ಕೆ ಗಣ್ಯರಿಂದ ಮಾಲಾರ್ಪಣೆ ಕಾರ್ಯ ನೆರವೇರಿತು.

Please follow and like us:
error