ಸ್ಮಶಾನ ಭೂಮಿ ಇಲ್ಲದ ಗ್ರಾಮಗಳ ಪಟ್ಟಿ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲು ಡಿಸಿ ಸೂಚನೆ

 ಕುಷ್ಟಗಿ ತಾಲೂಕಿನಲ್ಲಿ ಸ್ಮಶಾನ ಭೂಮಿ ಇಲ್ಲದ ಗ್ರಾಮಗಳ ಪಟ್ಟಿಯನ್ನು ಸಿದ್ಧಪಡಿಸಿ, ಸ್ಮಶಾನಕ್ಕಾಗಿ ಭೂಮಿ ನಿಗದಿಪಡಿಸಲು ಪ್ರಸ್ತಾವನೆಯನ್ನು ಸಹಾಯಕ ಆಯುಕ್ತರ ಮೂಲಕ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕುಷ್ಟಗಿ ತಹಸಿಲ್ದಾರರಿಗೆ ಸೂಚನೆ ನೀಡಿದರು.koppal_dc

ಕುಷ್ಟಗಿ ತಹಸಿಲ್ದಾರರ ಕಚೇರಿಯ ಭೂಮಾಪನ ಶಾಖೆ ಹಾಗೂ ತಹಸಿಲ್ದಾರರ ಕಚೇರಿಗೆ ಸಂಬಂಧಿಸಿದಂತೆ ಕುಷ್ಟಗಿಯಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುಷ್ಟಗಿ ತಾಲೂಕಿನಲ್ಲಿ ಸ್ಮಶಾನ ಭೂಮಿಗೆ ಸಂಬಂಧಿಸಿದಂತೆ ಯಾವ ಗ್ರಾಮಗಳಲ್ಲಿ ಸ್ಮಶಾನ ಭೂಮಿ ಲಭ್ಯ ಲಭ್ಯವಿಲ್ಲ ಎಂಬುದರ ಬಗ್ಗೆ ಅಂತಹ ಗ್ರಾಮಗಳ ಪಟ್ಟಿಯನ್ನು ತಯಾರಿಸಿ, ಸೂಕ್ತ ಪ್ರಸ್ತಾವನೆಯನ್ನು ಸಹಾಯಕ ಆಯುಕ್ತರ ಮೂಲಕ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು.  ಮುಂಗಾರು ಮತ್ತು ಹಿಂಗಾರು ಬೆಳೆಗಳ ನಷ್ಟ ಪರಿಹಾರಕ್ಕೆ ಸಂಬಂಧಿಸಿದಂತೆ ಇದುವರೆಗೂ ಬಾಕಿ ಉಳಿದಿರುವ ರೈತರ ಬ್ಯಾಂಕ್ ಖಾತೆಗಳನ್ನು ಸಂಗ್ರಹಿಸಿ, ಪರಿಹಾರ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಿ, ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸಬೇಕು.  ಅಟಲ್‍ಜಿ ಜನಸ್ನೇಹಿ ಕೇಂದ್ರದಲ್ಲಿ ಸ್ವೀಕೃತವಾಗುವ ಅರ್ಜಿಗಳನ್ನು ಸಮರ್ಪಕವಾಗಿ ಪರಿಶೀಲಿಸಿದ ನಂತರವೇ ವಿಲೇವಾರಿ ಮಾಡಬೇಕು.  ಸರ್ಕಾರಿ ಭೂಮಿಯಲ್ಲಿ ಅನಧಿಕೃತವಾಗಿ ಮನೆ ಕಟ್ಟಿಕೊಂಡಿರುವವರ ಪ್ರಕರಣಗಳಿಗೆ ಹಾಗೂ ಅನಧಿಕೃತವಾಗಿ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ-ಸಕ್ರಮ ಯೋಜನೆಯಡಿ ಒಟ್ಟು 481 ಅರ್ಜಿಗಳು ಸ್ವೀಕೃತಗೊಂಡಿದ್ದು, ಈ ಅರ್ಜಿಗಳ ಕುರಿತು ಕಂದಾಯ ನಿರೀಕ್ಷಕರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗು ಸರ್ವೆಯರ್‍ಗಳಿಂದ ವರದಿ ಪಡೆದು ತಹಸಿಲ್ದಾರರು ಕೂಡಲೆ ಕ್ರಮ ಕೈಗೊಳ್ಳಬೇಕು.   ಪಹಣಿ ತಿದ್ದುಪಡಿಗಾಗಿ ತಹಸಿಲ್ದಾರರ ಕಚೇರಿಯಲ್ಲಿ 151 ಪ್ರಕರಣಗಳು ಬಾಕಿ ಇದ್ದು, ಈ ಪ್ರಕರಣಗಳನ್ನು ಸಂಬಂಧಿಸಿದ ಶಿರಸ್ತೆದಾರರು, ಯಾವುದೇ ಕಾರಣಕ್ಕೂ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರಿಗೆ ವಿತರಿಸದೆ, ಆಯಾ ವಿಷಯ ನಿರ್ವಾಹಕರೇ ಈ ಕುರಿತು ದಾಖಲೆ ಸಂಗ್ರಹಿಸಿ ಸಲ್ಲಿಸಬೇಕು.  ತಹಸಿಲ್ದಾರರು ಈ ಪ್ರಕರಣಗಳನ್ನು ವೈಯಕ್ತಿಕ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು.  ಭೂಮಿ ಶಾಖೆಯಲ್ಲಿ ಇಂಡೀಕರಣಕ್ಕೆ ಬಾಕಿ ಇರುವ 15 ಪ್ರಕರಣಗಳನ್ನು ಭೂಮಿ ಆಪರೇಟರ್‍ಗಳು ಪರಿಶೀಲಿಸಿ ಕೂಡಲೆ ಇಂಡೀಕರಿಸಬೇಕು.  ಸರ್ಕಾರಿ ಭೂಮಾಪಕರು ಬಾಕಿ ಇರುವ 68 ಹದ್ದುಬಸ್ತು ಪ್ರಕರಣಗಳನ್ನು ಪ್ರಥಮ ಆದ್ಯತೆಯ ಮೇಲೆ ನಿರ್ವಹಿಸಬೇಕು.  ಭೂದಾಖಲೆಗಳ ಸಹಾಯಕ ನಿರ್ದೇಶಕರ ಲಾಗಿನ್‍ನಲ್ಲಿ ‘ತಕರಾರು’ ಎಂಬುದಾಗಿ ಬಾಕಿ ಇರುವ 448 ಪ್ರಕರಣಗಳನ್ನು ಕೂಡಲೆ ಪರಿಶೀಲಿಸಿ, ಸೂಕ್ತ ಕ್ರಮ ವಹಿಸಬೇಕು.  ಭೂಮಾಪಕರು ಕನಿಷ್ಟ 23 ಪ್ರಕರಣಗಳನ್ನು ನಿರ್ವಹಣೆ ಮಾಡಲೇಬೇಕಿದ್ದು, ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕು.  ಕುಷ್ಟಗಿ ಭೂಮಾಪನ ಶಾಖೆಯ ಮೋಜಿಣಿ ಪ್ರಗತಿ ಉತ್ತಮವಾಗಿದ್ದು, ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕು.  ತಹಸಿಲ್ದಾರರ ಕಚೇರಿ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಐ.ಆರ್. ಶಿರಹಟ್ಟಿ, ಭೂದಾಖಲೆಗಳ ಉಪನಿರ್ದೇಶಕ ಎಂ. ರವಿಕುಮಾರ, ತಹಸಿಲ್ದಾರ್ ಗಂಗಪ್ಪ, ಭೂದಾಖಲೆಗಳ ಸಹಾಯಕ ನಿರ್ದೇಶಕ ಡಿ.ಎಸ್. ಕಲ್ಪತ್ರಿ ಸೇರಿದಂತೆ ಭೂಮಾಪನ ಇಲಾಖೆಯ ಅಧಿಕಾರಿಗಳು, ಭೂಮಾಪಕರು, ಕಂದಾಯ ಇಲಾಖೆ ಶಿರಸ್ತೆದಾರರು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Please follow and like us:
error