ಸೆ. ೮ ರಿಂದ ಶೌಚಾಲಯ ಜಾಗೃತಿ ಕಾರ್ಯಕ್ರಮಗಳು- ರಾಮಚಂದ್ರನ್

: ಕೊಪ್ಪಳ ಜಿಲ್ಲೆಯಲ್ಲಿ ಸೆ.೮ ರಿಂದ ೧೪ ರವರೆಗೆ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಮತ್ತು ಸಪ್ತಾಹ ಕಾರ್ಯಕ್ರಮ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಸ್ವಚ್ಛ ಭಾರತ ಹಾಗೂ ಶೌಚಾಲಯ ಬಳಕೆ ಕುರಿತು ಜಾಗೃತಿ ಮೂಡಿಸುವುದರ ಮೂಲಕ ಸಾಕ್ಷರತಾ ಸಪ್ತಾಹ ಆಚರಿಸುವಂತೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್ ಅವರು ಸೂಚನೆ ನೀಡಿದ್ದಾರೆ.
ಕೊಪ್ಪಳ ಜಿಲ್ಲೆ ಹಾಗೂ ಎಲ್ಲಾ ತಾಲೂಕು ಮತ್ತು ಗ್ರಾಮ ಪಂಚಾಯತಿ ಲೋಕ ಶಿಕ್ಷಣ ಸಮಿತಿಗಳಲ್ಲಿ ಸೆ.೮ ರಿಂದ ೧೪ ರವೆರೆಗೆ ಅಂತಾರಾಷ್ಷ್ರೀಯ ಸಾಕ್ಷರತಾ ದಿನಾಚರಣೆ ಆಚರಿಸುವುದರ ಮೂಲಕ ಕಲಿಕಾ ವಾತಾವರಣ ನಿರ್ಮಿಸಿ ಹಾಗೂ ವಿಶೇಷವಾಗಿ ಸಪ್ತಾಹದ ಅವಧಿಯಲ್ಲಿ ಜಿಲ್ಲೆಯಲ್ಲಿ ಸ್ವಚ್ಛಭಾರತ ಹಾಗೂ ಶೌಚಾಲಯ ಬಳಕೆ ಮತ್ತು ಜಾಗೃತಿ ಕಾರ್ಯಕ್ರಮ ಏರ್ಪಡಿಸಬೇಕು.
ಸೆ.೮ ರಂದು ಬೆಳಗ್ಗೆ ೯ ಗಂಟೆಗೆ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತಿಗಳಲ್ಲಿ ಸಾಕ್ಷರತಾ ಧ್ವಜಾರೋಹಣ ನೆರವೇರಿಸಬೇಕು ಹಾಗೂ ಧ್ವಜಾರೋಹಣ ನಂತರ ಪ್ರಮಾಣ ವಚನ ಬೋಧಿಸಬೇಕು. ಧ್ವಜಾರೋಹಣ ಕಾರ್ಯಕ್ರಮಕ್ಕೆ ಜಿನಪ್ರತಿನಿಧಿಗಳನ್ನು ಹಾಗೂ ಗ್ರಾಮದ ಮುಖಂಡರು, ಯುವಕ/ಯುವತಿ ಮಂಡಳಿಗಳು ಸ್ವ-ಸಹಾಯ ಗುಂಪುಗಳಿಗೆ ಆಹ್ವಾನಿಸಿ, ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಆಚರಿಸಬೇಕು. ಹಾಗೂ ಜಾಥಾ, ಸಾಕ್ಷರತಾ ಹಾಡು, ಸಾಕ್ಷರತಾ ಘೋಷಣೆ, ಧೃಶ್ಯ ಶ್ರವಣ ಇತ್ಯಾದಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಸೆ.೮ ರಿಂದ ೧೪ ರವರೆಗೆ ನಡೆಯಲಿರುವ ಕಾರ್ಯಕ್ರಮಗಳ ವಿವರ ಇಂತಿದೆ: ಸೆ.೮ ರಂದು ಗ್ರಾ.ಪಂ ನಲ್ಲಿ ಸಾಕ್ಷರ ಮೇರವಣಿಗೆ ಮಾಡಿ ಲೋಕ ಶಿಕ್ಷಣ ಕೇಂದ್ರದಲ್ಲಿ ಬೆಳಗ್ಗೆ ೯ ಗಂಟೆಗೆ ಸಾಕ್ಷರತಾ ಧ್ವಜಾರೋಹಣ ಮತ್ತು ಸಮಾರಂಭ ಕಾರ್ಯಕ್ರಮ. ಸೆ. ೯ ರಂದು ಸಾಕ್ಷರ ಸಂಕಿರಣ/ಕಲಿಕಾರ್ಥಿಗಳ ಓದು-ಬರಹ ಸ್ಪರ್ಧೆ. ಸೆ.೧೦ ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾನಪದ ಗೀತೆಗಳು, ಭಕ್ತಿ ಗೀತೆಗಳು, ಗಾದೆಗಳು, ಒಗಟುಗಳು ಇತ್ಯಾದಿ ಸ್ಪರ್ಧೆಗಳು ನಡೆಯಲಿವೆ. ಸೆ.೧೧ ರಂದು ನವಸಾಕ್ಷರರಿಂದ ರಂಗೋಲಿ ಸ್ಪರ್ಧೆ. ಸೆ. ೧೨ ರಂದು ಕಲಿಕಾ ಕೇಂದ್ರಗಳ ಹಂತದಲ್ಲಿ ಕಲಿಕಾರ್ಥಿಗಳಿಗಾಗಿ ಸಾಕ್ಷರ ಭಾಷಣ-ಸಂಪನ್ಮೂಲ ವ್ಯಕ್ತಿಗಳಿಂದ. ಸೆ. ೧೩ ರಂದು ನವಸಾಕ್ಷರರಿಗೆ ಸಾಕ್ಷರ ಪ್ರಬಂಧ ಸ್ಫರ್ಧೆ. ಸೆ.೧೪ ರಂದು ಸಮಾರೋಪ ಸಮಾರಂಭ. ಸೆ.೮ ರಿಂದ ೧೪ ವರೆಗೆ ಪ್ರತಿದಿನ ಬೆಳಗ್ಗೆ ೯ ಗಂಟೆಗೆ ಸ್ವಚ್ಛ ಭಾರತ ಹಾಗೂ ಶೌಚಾಲಯದ ಬಗ್ಗೆ ಆಯಾ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲು ಪ್ರಭಾತ ಫೇರಿ ಏರ್ಪಡಿಸಬೇಕು ಎಂದು ಸೂಚನೆ ನೀಡಲಾಗಿದೆ. ಈ ಕುರಿತ ಫೋಟೋ ವರದಿಯನ್ನು ಸಂಬಂಧಿಸಿದ ಅಧಿಕಾರಿಗಳು ಕಾರ್ಯಾಲಯಕ್ಕೆ ಸಲ್ಲಿಸಬೇಕು.
ಸಮಾರಂಭ ಏರ್ಪಡಿಸಿದ ಕುರಿತ ದಾಖಲೆಗಳನ್ನು ಸೆ.೧೮ ರೊಳಗಾಗಿ ಜಿಲ್ಲಾ ಕಛೇರಿಗೆ ಸಲ್ಲಿಸಬೇಕು ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply