ಸಾಮಾಜಿಕ ವ್ಯವಸ್ಥೆಗೆ ಕ್ರಾಂತಿಕಾರಿ ಬದಲಾವಣೆ ತಂದವರು ಬಸವಣ್ಣನವರು- ಡಾ. ಎಸ್.ಎಂ. ಜಾಮದಾರ್

basava_jayanti_koppal_jamadar_gavimath_gavisiddeshwar-swamy (1) basava_jayanti_koppal_jamadar_gavimath_gavisiddeshwar-swamy (2) basava_jayanti_koppal_jamadar_gavimath_gavisiddeshwar-swamy (3) basava_jayanti_koppal_jamadar_gavimath_gavisiddeshwar-swamy (4) basava_jayanti_koppal_jamadar_gavimath_gavisiddeshwar-swamy (5) basava_jayanti_koppal_jamadar_gavimath_gavisiddeshwar-swamy (6) basava_jayanti_koppal_jamadar_gavimath_gavisiddeshwar-swamy (7)ಜಾತಿ ಪದ್ಧತಿಯನ್ನು ವಿರೋಧಿಸಿ, ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಶ್ರಮಿಸಿದವರು ಜಗಜ್ಯೋತಿ ಬಸವಣ್ಣನವರು ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ. ಎಸ್.ಎಂ. ಜಾಮದಾರ್ ಅವರು ಹೇಳಿದರು.
ಜಿಲ್ಲಾಡಳಿತ ಹಾಗೂ ಬಸವೇಶ್ವರ ಜಯಂತ್ಯೋತ್ಸವ ಸಮಿತಿ ಸಹಯೋಗದಲ್ಲಿ ನಗರದ ಗವಿಮಠ ಆವರಣದಲ್ಲಿ ಆಯೋಜಿಸಲಾಗಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಸವೇಶ್ವರರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ೨೦೦೧ ರಲ್ಲಿ ಮಹಾರಾಷ್ಟ್ರ ಸರ್ಕಾರ ಆದೇಶ ಜಾರಿಗೊಳಿಸಿತು. ಕರ್ನಾಟಕದಲ್ಲಿ ಬಸವ ಜಯಂತಿಯನ್ನು ೨೦೦೨ ರಿಂದ ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದೆ. ೯ ಶತಮಾನಗಳ ಹಿಂದೆ ಬಸವಣ್ಣನವರು ಹುಟ್ಟಿದಾಗ ನಮ್ಮ ನಾಡಿನ ಸಮಾಜದ ಚಿತ್ರಣ ಬೇರೆಯೇ ಆಗಿತ್ತು. ಹಲವು ಮೂಢನಂಬಿಕೆಗಳು, ಜಾತಿ ಪದ್ಧತಿಗಳು ತೀವ್ರವಾಗಿತ್ತು. ಬಸವಣ್ಣನವರ ಸಾಮಾಜಿಕ ಕ್ರಾಂತಿಯ ನಂತರದ ದಿನಗಳಲ್ಲಿ, ಅಂದರೆ ಐತಿಹಾಸಿಕ ಭಾರತದ ಸಮಾಜಕ್ಕೂ ಈಗಿನ ಸಮಾಜಕ್ಕೂ ಹೋಲಿಸಿದಾಗ ಊಹಿಸಲೂ ಸಾಧ್ಯವಾಗದಷ್ಟು ಬದಲಾವಣೆ ಆಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಬಸವಣ್ಣನವರು ಎಂದರೆ ಅತಿಶಯೋಕ್ತಿ ಆಗಲಾರದು. ಕ್ರಿ.ಶ. ೧೧೬೫ ರಲ್ಲಿ ಬಸವಣ್ಣನವರ ಅಂತ್ಯವಾದ ನಂತರ, ಸಾಮಾಜಿಕ ಕ್ರಾಂತಿಯ ಅಂತ್ಯವೂ ಆಯಿತು ಎನ್ನಬಹುದಾಗಿದೆ. ಜಾತಿ, ಧರ್ಮಗಳು, ಮೂಢನಂಬಿಕೆಗಳ ವಿರೋಧಗಳಂತಹ ವಿಷಯಗಳಲ್ಲಿ ಬಸವಣ್ಣನವರು ಮಾಡಿದಂತಹ ಕ್ರಾಂತಿಯನ್ನು ಇದುವರೆಗೂ ಯಾರೂ ಮಾಡಲು ಸಾಧ್ಯವಾಗಿಲ್ಲ. ಕಾಯಕವೇ ಕೈಲಾಸ ಎನ್ನುವ ಬಸವಣ್ಣನವರ ತತ್ವವನ್ನೇ ಜಗತ್ತಿನಲ್ಲಿ ಕಮ್ಯುನಿಷ್ಟರು ಅನುಸರಿಸಿದರು. ಸಮಾಜದಲ್ಲಿನ ಸಮಾನತೆಯನ್ನು ಭಕ್ತಿಯಿಂದ ತರಬೇಕೆ ಹೊರತು ರಕ್ತಕ್ರಾಂತಿಯಿಂದಲ್ಲ ಎನ್ನುವುದು ಬಸವಣ್ಣನವರ ತತ್ವ ಮತ್ತು ಉದ್ದೇಶವಾಗಿತ್ತು. ಜಾತೀಯತೆಯನ್ನು ತೊಡೆದುಹಾಕಬೇಕೆ ಹೊರತು, ಅದನ್ನು ಇನ್ನಷ್ಟು ಬೆಳೆಸುವುದು ಸರಿಯಲ್ಲ. ಮನುಷ್ಯ ಮನುಷ್ಯನ್ನಾಗಿ ನೋಡಬೇಕೆ ಹೊರತು, ಜಾತಿಯಿಂದಲ್ಲ. ಜಾತೀಯತೆ ಸಮಾಜವನ್ನು ಒಡೆಯುತ್ತದೆಯೇ ಹೊರತು ಒಂದುಗೂಡಿಸುವುದಿಲ್ಲ. ಆದರೆ ಇಂದಿನ ದಿನಮಾನಗಳಲ್ಲಿ ಜಾತೀಯತೆಯನ್ನು ಹೆಚ್ಚಿಸುವಂತಹ ಕಾರ್ಯಗಳೇ ನಡೆಯುತ್ತಿದ್ದು, ನಿಜಕ್ಕೂ ಇದು ಕಳವಳಕಾರಿ ಸಂಗತಿಯಾಗಿದೆ ಎಂದು ಡಾ. ಎಸ್.ಎಂ. ಜಾಮದಾರ್ ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಬಸವಣ್ಣನವರ ತತ್ವ ಸಂದೇಶಗಳು ಸರ್ವಕಾಲಕ್ಕೂ ಸಲ್ಲುತ್ತವೆ. ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಸವಣ್ಣನವರನ್ನು ಗೌರವಿಸಿದಂತೆ, ಗಾಳಿ, ಬೆಳಕಿನಂತಹ ಪ್ರಕೃತಿಯಲ್ಲಿ ಜಾತಿ, ಧರ್ಮಗಳಿಗೆ ಅವಕಾಶವಿಲ್ಲ. ಆದರೆ ಮನುಷ್ಯ ಜಾತಿ ಪದ್ಧತಿಯನ್ನು ಹೆಚ್ಚಿಸುವ ಮೂಲಕ ಪ್ರಕೃತಿಗೆ ಅಗೌರವ ತೋರುವುದು ಸರಿಯಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಬಸವಾನಂದ ಸ್ವಾಮಿಗಳು ಹಾಗೂ ಶಾರದಾ ಬಸವರಾಜ ಅದರಸಿ ಅವರು ಕಾರ್ಯಕ್ರಮದ ಅಂಗವಾಗಿ ಮಾತನಾಡಿದರು. ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್., ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೆಬ್ ಶಿರಹಟ್ಟಿ ಉಪಸ್ಥಿತರಿದ್ದರು. ಬಸವೇಶ್ವರ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ ಸ್ವಾಗತಿಸಿದರು. ಅನುಶ್ರೀ ಶೆಟ್ಟರ್ ಹಾಗೂ ವರ್ಷಿಣಿ ಸಂಕ್ಲಾಪುರ ಸಂಗಡಿಗರು ವಚನಗಾಯನ ಪ್ರಸ್ತುತಪಡಿಸಿದರು. ಕೊಪ್ಪಳದ ಮೂವರು ಸಾಧಕರಿಗೆ ಬಸವೇಶ್ವರ ಜಯಂತ್ಯುತ್ಸವ ಸಮಿತಿಯಿಂದ ಬಸವ ಕಾರುಣ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ವಿವಿಧ ಸಾಂಸ್ಕೃತಿಕ ಕಲಾತಂಡದೊಂದಿಗೆ ವಿಜೃಂಭಣೆಯಿಂದ ನೆರವೇರಿತು.

Related posts

Leave a Comment