ಸರ್ಕಾರಿ ವೈದ್ಯರು ಸೌಲಭ್ಯಗಳನ್ನು ತಲುಪಿಸಿ ಜನರ ವಿಶ್ವಾಸ ಗಳಿಸಿ- ಆರೋಗ್ಯ ಸಚಿವ ಯು.ಟಿ. ಖಾದರ್

ut-khader-koppal-visit-shivaraj-tangadagi-raghavendra-hitnal-review-meeting ut-khader-koppal-visit-shivaraj-tangadagi-raghavendra-hitnal ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ, ಚಿಕಿತ್ಸೆ ಹಾಗೂ ಮೂಲಭೂತ ವ್ಯವಸ್ಥೆಗಳನ್ನು ಒದಗಿಸಲು ಸರ್ಕಾರ ಕೋಟಿ ಗಟ್ಟಲೆ ಅನುದಾನ ಒದಗಿಸುತ್ತಿದೆ. ವೈದ್ಯರು ಸರ್ಕಾರಿ ಸೌಲಭ್ಯವನ್ನು ರೋಗಿಗಳಿಗೆ ಸಮರ್ಪಕವಾಗಿ ತಲುಪಿಸುವ ಮೂಲಕ ಜನರ ವಿಶ್ವಾಸ ಗಳಿಸಲು ಯತ್ನಿಸಬೇಕು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರಿ ವೈದ್ಯರುಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಆರೋಗ್ಯ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರಿ ಆಸ್ಪತ್ರೆಗಳಿಗೆ ಸಾಮಾನ್ಯವಾಗಿ ಬಡ ಮತ್ತು ಮಧ್ಯಮ ವರ್ಗದ ಜನರೇ ಹೆಚ್ಚು ಬರುತ್ತಾರೆ. ಖಾಸಗಿ ಆಸ್ಪತ್ರೆಗಳಿಗಿಂತಲೂ ಸರ್ಕಾರಿ ಆಸ್ಪತ್ರೆಗಳು ಯಾವುದರಲ್ಲೂ ಕಡಿಮೆ ಇಲ್ಲ. ಔಷಧಿ, ಚಿಕಿತ್ಸೆ, ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಅಲ್ಲದೆ, ವೈದ್ಯರು ಸಹ ಪ್ರತಿಭಾವಂತರಿದ್ದಾರೆ. ಆದಾಗ್ಯೂ ರೋಗಿಗಳಿಗೆ ಹೊರಗಡೆ ಔಷಧಿ ತರುವಂತೆ ಚೀಟಿ ಕೊಟ್ಟು ಕಳುಹಿಸುತ್ತಿರುವ ಬಗ್ಗೆ ಎಲ್ಲೆಡೆ ದೂರುಗಳು ಕೇಳಿ ಬರುತ್ತಿವೆ. ಹಾವು ಕಡಿತ ಪ್ರಕರಣಗಳಿಗೂ ಹೊರಗಡೆ ಔಷಧಿ ತರುವಂತೆ ಚೀಟಿ ಕಳುಹಿಸಿಕೊಡುತ್ತಿರುವುದು ಕಂಡುಬಂದಿದೆ. ಪ್ರತಿಯೊಂದು ಆಸ್ಪತ್ರೆಗಳಲ್ಲಿ ಲಭ್ಯವಿರುವ ಔಷಧಿಗಳು, ಲಭ್ಯವಿಲ್ಲದಿರುವ ಔಷಧಿಗಳ ಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಲಭ್ಯವಿಲ್ಲದಿರುವ ಔಷಧಿಗಳನ್ನು ತ್ವರಿತವಾಗಿ ತರಿಸಿಕೊಳ್ಳಬೇಕು. ಸಾರ್ವಜನಿಕರಿಗೆ ಸೇವೆ ನೀಡುವುದು ಪ್ರತಿಯೊಂದು ವೈದ್ಯರ ಪ್ರಥಮ ಕರ್ತವ್ಯವಾಗಬೇಕು. ಪ್ರತಿಯೊಂದು ಸರ್ಕಾರಿ ಆಸ್ಪತ್ರೆಗಳಲ್ಲೂ ಆಯಾ ವೈದ್ಯರು ಬೆಳಿಗ್ಗೆ ೮-೪೫ ಗಂಟೆಗೆ ಕಡ್ಡಾಯವಾಗಿ ಹಾಜರಾಗಬೇಕು. ಆಸ್ಪತ್ರೆಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಸಾರ್ವಜನಿಕರ ಹಿತಕ್ಕಾಗಿಯೇ ಆರೋಗ್ಯ ಇಲಾಖೆಯಲ್ಲಿ ಹತ್ತು ಹಲವು ಯೋಜನೆಗಳಿದ್ದು, ಪ್ರತಿಯೊಂದು ಯೋಜನೆ ಜಾರಿಗೂ ಪ್ರತ್ಯೇಕವಾಗಿ ಕಾರ್ಯಕ್ರಮ ಅಧಿಕಾರಿಗಳನ್ನು ನೇಮಿಸಲಾಗಿದ್ದರೂ, ಯೋಜನೆಗಳು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಜನರಿಗೆ ಯೋಜನೆಗಳನ್ನು ತಲುಪಿಸಿ, ಅವರ ವಿಶ್ವಾಸ ಗಳಿಸದ ಹೊರತು, ಸರ್ಕಾರಿ ವೈದ್ಯರು ಹಾಗೂ ಆಸ್ಪತ್ರೆಗಳ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯ ಬರಲು ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಹೇಳಿದರು.
ಬಾಲ ಸ್ವಾಸ್ಥ್ಯ ಕಾರ್ಯಕ್ರಮ : ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಕಾರ್ಯ ನಿರ್ವಹಿಸುತ್ತಿರುವವರು, ಪ್ರತಿಯೊಂದು ಶಾಲೆಗೆ ನಿಯಮಿತವಾಗಿ ಭೇಟಿ ನೀಡಿ, ಅಲ್ಲಿನ ಮಕ್ಕಳ ಆರೋಗ್ಯ ಪರೀಕ್ಷಿಸಿ, ತೀವ್ರ ಸಮಸ್ಯೆ ಇರುವ ಮಕ್ಕಳನ್ನು ಜಿಲ್ಲಾ ಆಸ್ಪತ್ರೆಯ ತಜ್ಞ ವೈದ್ಯರಲ್ಲಿ ಪರೀಕ್ಷಿಸುವುದು ಕಡ್ಡಾಯವಾಗಿದ್ದು, ಈ ಕಾರ್ಯಕ್ರಮ ಅನುಷ್ಠಾನವಾಗುತ್ತಿರುವ ಬಗ್ಗೆ ಸಮರ್ಪಕ ವರದಿ ಬರುತ್ತಿಲ್ಲ. ಅಧಿಕಾರಿಗಳಿಗೆ ಈ ಕಾರ್ಯಕ್ರಮದ ಬಗ್ಗೆ ಅರಿವಿನ ಕೊರತೆ ಕಾಣುತ್ತಿದೆ. ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಕಾರ್ಯ ನಿರ್ವಹಿಸುತ್ತಿರುವವರು, ಶಾಲೆಗಳಿಗೆ ಭೇಟಿ ನೀಡುವ ವೇಳಾಪಟ್ಟಿಯನ್ನು ಆಯಾ ಕ್ಷೇತ್ರದ ಶಾಸಕರು, ಜಿ.ಪಂ., ತಾ.ಪಂ. ಸದಸ್ಯರುಗಳಿಗೆ ಮಾಹಿತಿ ನೀಡಬೇಕು ಎಂದು ಸಚಿವರು ಸೂಚನೆ ನೀಡಿದರು.
ತಾಯಿ-ಶಿಶು ಮರಣ ಇಳಿಮುಖ : ಕೊಪ್ಪಳ ಜಿಲ್ಲೆಯಲ್ಲಿ ಈ ಹಿಂದೆ ಶಿಶು ಮರಣ ಮತ್ತು ತಾಯಿ ಮರಣ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿತ್ತು. ಇದೀಗ ಜಿಲ್ಲೆಯಲ್ಲಿ ಆಸ್ಪತ್ರೆಗಳಲ್ಲಿ ಹೆರಿಗೆ ಪ್ರಮಾಣ ಹೆಚ್ಚಾಗಿರುವುದಲ್ಲದೆ, ಸಾರ್ವಜನಿಕರಲ್ಲೂ ಅರಿವು ಮೂಡುತ್ತಿದೆ. ಶಿಶು ಮರಣ ೨೦೧೩-೧೪ ರಲ್ಲಿ ೬೭೦, ೨೦೧೪-೧೫ ರಲ್ಲಿ ೬೨೫ ಹಾಗೂ ೨೦೧೫-೧೬ ರಲ್ಲಿ ೫೨೧ ಪ್ರಕರಣ ವರದಿಯಾಗಿದೆ. ಅದೇ ರೀತಿ ತಾಯಿ ಮರಣ ಪ್ರಕರಣಗಳಲ್ಲೂ ಸಹ ಗಣನೀಯ ಇಳಿಕೆ ಕಂಡುಬಂದಿದೆ ಎಂದು ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ರಮೇಶ್ ಮೂಲಿಮನಿ ವಿವರಿಸಿದರು. ತಾಯಿ-ಶಿಶು ಮರಣ ಪ್ರಮಾಣವನ್ನು ಇನ್ನಷ್ಟು ಇಳಿಕೆ ಮಾಡಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ಸೂಚಿಸಿದರು.
ಜನಜಾಗೃತಿ ಮೂಡಿಸಿ : ಮುಂಗಾರು ಮಳೆ ಆರಂಭಗೊಳ್ಳುತ್ತಿದ್ದಂತೆಯೇ ಕಲುಷಿತ ನೀರು, ಸೊಳ್ಳೆಗಳ ಹಾವಳಿ ಹೀಗೆ ಹಲವು ಕಾರಣಗಳಿಂದ ಸಾಂಕ್ರಾಮಿಕ ರೋಗಗಳು ಸಹ ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಈ ದಿಸೆಯಲ್ಲಿ ಸಾರ್ವಜನಿಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ನೀರು ಸಂಗ್ರಹ ಮೇಲ್ತೊಟ್ಟಿ (ಓವರ್ ಹೆಡ್ ಟ್ಯಾಂಕ್ಸ್) ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವ ಕುರಿತು ಆಯಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಿಯವರಿಗೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡಬೇಕು. ಹಾಗೂ ಇದರ ಮೇಲುಸ್ತುವಾರಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ನಕಲಿ ವೈದ್ಯರ ವಿರುದ್ಧ ಕ್ರಮ ಜರುಗಿಸಿ : ಜಿಲ್ಲೆಯಲ್ಲಿ ನಕಲಿ ವೈದ್ಯರುಗಳ ಸಂಖ್ಯೆ ಹೆಚ್ಚಾಗಿದೆ. ಈ ಕುರಿತು ಆಯುಷ್ ಇಲಾಖೆ ಅಧಿಕಾರಿಗಳು ಸಮರ್ಪಕ ಕ್ರಮ ಕೈಗೊಂಡಿಲ್ಲ ಎನ್ನುವ ದೂರು ವ್ಯಾಪಕವಾಗಿದೆ ಎಂದು ಸಚಿವರು ಜಿಲ್ಲಾ ಆಯುಷ್ ಅಧಿಕಾರಿಗಳಿಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆಯುಷ್ ಅಧಿಕಾರಿ ಬಿ. ವಾಲಿಕರ್ ಅವರು, ಜಿಲ್ಲೆಯಲ್ಲಿ ನಕಲಿ ವೈದ್ಯರುಗಳ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ೩೦೦ ನಕಲಿ ವೈದ್ಯರಿರುವ ಬಗ್ಗೆ ಮಾಹಿತಿ ಇದೆ. ಈವರೆಗೆ ೬೦ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು. ನಕಲಿ ವೈದ್ಯರುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವರು ಸೂಚನೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ಡಯಾಲಿಸಿಸ್ ಕೇಂದ್ರ ಇದ್ದು, ಇದರಿಂದ ರೋಗಿಗಳಿಗೆ ತುಂಬಾ ತೊಂದರೆ ಉಂಟಾಗಿದೆ. ಡಯಾಲಿಸಿಸ್‌ಗಾಗಿ ರೋಗಿಗಳು ಪಾಳಿಯಲ್ಲಿ ನಿಲ್ಲುವಂತಹ ಸ್ಥಿತಿ ಬಂದಿದೆ. ಜಿಲ್ಲೆಗೆ ಇನ್ನಷ್ಟು ಡಯಾಲಿಸಿಸ್ ಕೇಂದ್ರ ಪ್ರಾರಂಭಿಸುವಂತೆ ಆರೋಗ್ಯ ಸಚಿವರಿಗೆ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ, ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಸ್.ಬಿ. ನಾಗರಾಳ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ ಬಾಸೂರ, ಕಿಮ್ಸ್ ನಿರ್ದೇಶಕ ಎಸ್.ಎಂ. ಮಲಾಪುರೆ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಲೋಕೇಶ್ ಸೇರಿದಂತೆ ಆರೋಗ್ಯ ಇಲಾಖೆಯ ಹಲವು ಕಾರ್ಯಕ್ರಮ ಅಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು

Please follow and like us:
error