ಸಮಾಜದಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದು: ಗವಿಶ್ರೀ

tungasiri_kannada_daily_koppal tungasiri_kannada_daily_koppal_devu_naganur
ಕೊಪ್ಪಳ: ಪತ್ರಿಕೆಗಳ ಆಯುಷ್ಯ ಚಿಕ್ಕದಾದರೂ ಸಹ ಸಮಾಜದ ಮೇಲೆ ಬೀರುವ ಪರಿಣಾಮ ಮಾತ್ರ ಬಹುದೊಡ್ಡದು ಎಂದು ಗವಿಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ನೌಕರರ ಭವನದಲ್ಲಿ ತುಂಗಾಸಿರಿ ದಿನಪತ್ರಿಕೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಹೂವಿನ ಆಯುಷ್ಯ ಬಹು ಚಿಕ್ಕದು. ಬೆಳಗ್ಗೆ ಅರಳಿ ಸಂಜೆ ಮುದುಡಿದರೂ ಸಹ ಅಲ್ಪಾವಧಿಯಲ್ಲೇ ಅತ್ಯಂತ ಹೆಚ್ಚು ಮಹತ್ವದ ಸ್ಥಾನ ಅಲಂಕರಿಸುತ್ತದೆ. ಸೃಷ್ಟಿಕರ್ತನ ತಲೆ ಮೇಲೆ ಹೂ ಪೂಜಿಸಲ್ಪಡುತ್ತದೆ. ಅದೇ ರೀತಿ ಪತ್ರಿಕೆಗಳೂ ಸಹ ಕಡಿಮೆ ಅವಧಿ ಹೊಂದಿವೆ. ಬೆಳಗಿನ ಸುದ್ದಿ ಸಂಜೆಯ ರದ್ದಿ ಎಂಬ ಮಾತಿನಂತೆ ಪತ್ರಿಕೆಗಳು ಬೆಳಗ್ಗೆ ಪ್ರಕಟಗೊಂಡರೂ ಸಹ ಸಂಜೆ ವೇಳೆಗೆ ಮೂಲೆ ಸೇರುತ್ತವೆ. ಆದರೆ, ಸಮಾಜದಲ್ಲಿ ಪತ್ರಿಕೆಗಳ ಪ್ರಭಾವ ಅತ್ಯಂತ ಮಹತ್ವದ್ದಾಗಿದೆ ಎಂದರು.
ಸಮಾಜದ ಅಂಕು, ಡೊಂಕುಗಳನ್ನು ತಿದ್ದುವ ಮಹತ್ವದ ಹೊಣೆ ಪತ್ರಿಕೆಗಳ ಮೇಲಿದೆ. ಮನಸುಗಳನ್ನು ಬೆಸೆಯುವ ಕಾರ್ಯ ಪತ್ರಿಕೆಗಳಿಂದ ನಡೆಯಲಿ. ನಾಡಿನ, ದೇಶದ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಾರ್ಯ ಸಾಗಲಿ ಎಂದು ಗವಿಸಿದ್ದೇಶ್ವರ ಸ್ವಾಮೀಜಿ ನುಡಿದರು.
ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಸಮಾಜದಲ್ಲಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಪತ್ರಿಕಾ ರಂಗದಿಂದ ಮಾತ್ರ ಸಾಧ್ಯ. ಆಡಳಿತದ ಕಣ್ಣು ತೆರೆಸುವಂತಹ ಕಾರ್ಯ ಮಾಧ್ಯಮದಿಂದ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನಷ್ಟು ತಿಳಿಯಾಗಬೇಕಾದರೆ ಪತ್ರಿಕಾ ಕ್ಷೇತ್ರ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
ರಾಮಕೃಷ್ಣಾಶ್ರಮದ ಚೈತನ್ಯಾನಂದ ಸ್ವಾಮೀಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಟಿವಿಗಳ ಪ್ರಭಾವ ಹೆಚ್ಚಿದ್ದರೂ ಸಹ ಪತ್ರಿಕೆಗಳ ಸಂಖ್ಯೆ ಬೆಳೆಯುತ್ತಲೇ ಸಾಗಿದೆ. ದೃಶ್ಯ ಮಾಧ್ಯಮ ಎಷ್ಟೇ ಪ್ರಭಾವಶಾಲಿ ಎನಿಸಿದ್ದರೂ ಸಹ ಪತ್ರಿಕೆಗಳ ಪ್ರಭಾವ ಕುಗ್ಗಿಲ್ಲ. ಸಮಾಜದ ಅಭಿವೃದ್ಧಿಗೆ ಪತ್ರಿಕೆಗಳು ಮಹತ್ವದ ಕೊಡುಗೆ ನೀಡುತ್ತಿವೆ ಎಂದರು.
ಜಿ.ಪಂ.ಸದಸ್ಯ ಗವಿಸಿದ್ದಪ್ಪ ಕರಡಿ ಮಾತನಾಡಿದರು. ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದ್ರಿ, ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ, ರಾಮಣ್ಣ ಹದ್ದಿನ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ಜುಮ್ಮಣ್ಣವರ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಆರ್.ಬಿ.ಪಾನಘಂಟಿ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಮರಾವ್, ತುಂಗಾಸಿರಿ ಪತ್ರಿಕೆ ಸಂಪಾದಕ ದೇವು ನಾಗನೂರ ಸೇರಿ ಹಲವರು ಇದ್ದರು. ಸಿ.ವಿ.ಜಡಿಯವರ್ ಕಾರ್ಯಕ್ರಮ ನಿರೂಪಿಸಿದರು.
ಫೋಟೋ : ಕೊಪ್ಪಳದ ನೌಕರರ ಭವನದಲ್ಲಿ ನಡೆದ ತುಂಗಾಸಿರಿ ದಿನಪತ್ರಿಕೆಯನ್ನು ಗವಿಸಿದ್ದೇಶ್ವರ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.

Leave a Reply