ಸಮಾಜದಲ್ಲಿನ ಮೌಢ್ಯದಿಂದ ಜನಸಂಖ್ಯೆ ತೀವ್ರ ಹೆಚ್ಚಳ- ಎಂ.ಪಿ. ಮಂಟೂರ

world-population-day world-population-day-koppal ಜನ ಸಮುದಾಯದಲ್ಲಿ ಮನೆ ಮಾಡಿರುವ ಮೌಢ್ಯದಿಂದ ದೇಶದಲ್ಲಿ ಜನಸಂಖ್ಯೆ ತೀವ್ರ ಹೆಚ್ಚಳವಾಗುತ್ತಿದ್ದು, ಆರೋಗ್ಯ ಶಿಕ್ಷಣದ ಮೂಲಕ ಇದನ್ನು ಹೋಗಲಾಡಿಸುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ ಎಂದು ಕೊಪ್ಪಳದ ಬಸಮ್ಮ ಕಾತರಕಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಂ.ಪಿ. ಮಂಟೂರ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನ್ಯೂ ಆಕ್ಸ್‌ಫರ್ಡ್ ಪ್ರೌಢಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ನೆಹರು ಯುವ ಕೇಂದ್ರ ಇವರ ಸಹಯೋಗದಲ್ಲಿ ನಗರದ ಬಸಮ್ಮ ಕಾತರಕಿ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು ಆವರಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜನಸಂಖ್ಯಾ ಹಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಜುಲೈ ೧೧ ರಂದು ಪ್ರತಿ ವರ್ಷವೂ ವಿಶ್ವ ಜನಸಂಖ್ಯಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಬಡತನ, ಅಜ್ಞಾನ, ಮಾಹಿತಿಯ ಕೊರತೆ, ಮೂಢನಂಬಿಕೆಗಳು, ಬಾಲ್ಯ ವಿವಾಹ, ಕಡಿಮೆ ಸಾಕ್ಷರತಾ ಪ್ರಮಾಣದಂತಹ ಕಾರಣಗಳಿಂದಾಗಿ ಜನಸಂಖ್ಯೆ ಹೆಚ್ಚುತ್ತಿದೆ. ಜನಸಂಖ್ಯೆ ಹೆಚ್ಚಳದಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲೂ ಹಲವಾರು ದುಷ್ಪರಿಣಾಮಗಳು ಉಂಟಾಗುತ್ತಿದ್ದು, ಪ್ರಮುಖವಾಗಿ ಜನಸಂಖ್ಯೆ ಹೆಚ್ಚಳದಿಂದ ಜನವಸತಿ ಪ್ರದೇಶ ವಿಸ್ತರಿಸುತ್ತಿದ್ದು, ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಕೃಷಿ ಭೂಮಿ ಕಡಿಮೆಯಾಗುವುದರಿಂದ ಆಹಾರ ಉತ್ಪಾದನೆ ಪ್ರಮಾಣವೂ ಕಡಿಮೆಯಾಗಲಿದ್ದು, ಇದು ಜನಸಂಖ್ಯೆ ಹಾಗೂ ಆಹಾರ ಉತ್ಪಾದನೆಯ ಅಸಮತೋಲನಕ್ಕೆ ಕಾರಣವಾಗಲಿದೆ. ಜನಸಾಮಾನ್ಯರು ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳನ್ನು ಮನಗಂಡು, ಸ್ವಯಂ ಪ್ರೇರಿತರಾಗಿ, ಜನಸಂಖ್ಯೆಯ ನಿಯಂತ್ರಣಕ್ಕೆ ಮುಂದಾದಾಗ ಮಾತ್ರ ನಮ್ಮ ದೇಶದ ಪರಿಸ್ಥಿತಿ ಬದಲಾಗುವುದರಲ್ಲಿ ಸಂಶಯವಿಲ್ಲ ಎಂದು ಪ್ರಾಂಶುಪಾಲ ಎಂ.ಪಿ. ಮಂಟೂರ ಅವರು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ ಬಾಸೂರ ಅವರು ಮಾತನಾಡಿ, ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ, ಇಲಾಖೆಯು ಜುಲೈ ೧೧ ರಿಂದ ೨೪ ರವರೆಗೆ ಜಿಲ್ಲೆಯಲ್ಲಿ ಜನಸಂಖ್ಯಾ ಹೆಚ್ಚಳದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಪಾಕ್ಷಿಕ ಕಾರ್ಯಕ್ರಮವನ್ನು ’ಜವಾಬ್ದಾರಿ ನಿಭಾಯಿಸಿ- ಯೋಜನೆ ರೂಪಿಸಿ’ ಎನ್ನುವ ಘೋಷವಾಕ್ಯದಡಿ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮಾಧಿಕಾರಿ ಡಾ. ಎಸ್.ಬಿ. ದಾನರೆಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವ ಜನಸಂಖ್ಯೆಯು ೧೧-೦೭-೧೯೮೭ ರ ಜುಲೈ ೧೧ ಕ್ಕೆ ೫೦೦ ಕೋಟಿ ತಲುಪಿತು. ಜನಸಂಖ್ಯೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಸಂಸ್ಥೆಯ ಅಂಗ ಸಂಸ್ಥೆಗಳು ಅಂದಿನ ದಿನವನ್ನು ವಿಶ್ವ ಜನಸಂಖ್ಯಾ ದಿನಾಚರಣೆಯನ್ನಾಗಿ ಆಚರಿಸಲು ತೀರ್ಮಾನಿಸಿದವು. ೨೦೧೬ ರ ಅಂತ್ಯಕ್ಕೆ ವಿಶ್ವದ ಜನಸಂಖ್ಯೆ ಅಂದಾಜು ೭೩೩ ಕೋಟಿಗೆ ತಲುಪಲಿದ್ದು, ಭಾರತದ ಜನಸಂಖ್ಯೆ ಸುಮಾರು ೧೨೫ ಕೋಟಿ, ಕರ್ನಾಟಕದ ಜನಸಂಖ್ಯೆ ೬.೫ ಕೋಟಿ ಆಗಲಿದೆ. ಎಂದರು.
ತಾಲೂಕು ವೈದ್ಯಾಧಿಕಾರಿ ಡಾ. ರಾಮಾಂಜನೇಯ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ. ಎಂ.ಎಂ. ಕಟ್ಟಿಮನಿ, ಡಾ. ವಿರುಪಾಕ್ಷರೆಡ್ಡಿ ಮಾದಿನೂರ, ಡಾ. ಎಸ್.ಕೆ. ದೇಸಾಯಿ, ಡಾ. ರಮೇಶ್ ಮೂಲಿಮನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಉಪಸ್ಥಿತರಿದ್ದರು.

Please follow and like us:
error