ಸತ್ತ ಜಾನುವಾರುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಸೂಚನೆ

ಯಾವುದೇ ರೋಗದಿಂದ ಸತ್ತ ಜಾನುವಾರುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಜಯರಾಂ ಸೂಚನೆ ನೀಡಿದ್ದಾರೆ.
ತಾಲೂಕಿನ ತುಂಗಭದ್ರಾ ನದಿ ತೀರದಲ್ಲಿ ಅಲೆಮಾರಿ ಜನಾಂಗದ ಜಾನುವಾರುಗಳಲ್ಲಿ ಅಂಥ್ರಾಕ್ಸ್ ರೋಗ ಕಂಡುಬಂದಿದ್ದು, ರೋಗ ನಿಯಂತ್ರಣಕ್ಕೆ ಈಗಾಗಲೆ ಪಶುಪಾಲನಾ ಇಲಾಖೆಯು ಕರ್ಕಿಹಳ್ಳಿ, ಹಿರೇಬಗನಾಳ, ಚಿಕ್ಕಬಗನಾಳ, ಹಿರೇಕಾಸನಕಂಡಿ, ಲಾಚನಕೇರಿ ಮತ್ತು ಕುಣಿಕೇರಿ ಗ್ರಾಮದ ಸುತ್ತಮುತ್ತಲ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ಕೈಗೊಂಡಿದೆ. ಈ ಪ್ರದೇಶದಲ್ಲಿ ಸತ್ತ ಜಾನುವಾರುಗಳನ್ನು ಬೇರೆ ಕಡೆಗೆ ಸಾಗಿಸದೆ ಮತ್ತು ಎಲ್ಲೆಂದರಲ್ಲಿ ಬಿಸಾಡದೆ, ಸೂಕ್ತ ಸ್ಥಳದಲ್ಲಿ, ಸೂಕ್ತ ರೀತಿಯಿಂದ ಅಂದರೆ ಕನಿಷ್ಟ ೬ ಅಡಿ ಆಳದಲ್ಲಿ ಗುಂಡಿಯನ್ನು ತೆಗೆದು ಸುಣ್ಣವನ್ನು ಹಾಕಿ ವಿಲೇವಾರಿ ಮಾಡಬೇಕು. ಅಲ್ಲದೆ ಈ ರೀತಿ ಸತ್ತ ಜಾನುವಾರಿನ ಬಗ್ಗೆ ಮಾಹಿತಿಯನ್ನು ಪಶುಪಾಲನಾ ಇಲಾಖೆ ಮತ್ತು ಆಯಾ ಗ್ರಾಮ ಪಂಚಾಯತಿಗೆ ತಿಳಿಸಬೇಕು. ಜಾನುವಾರುಗಳನ್ನು ಈ ಗ್ರಾಮಗಳಿಂದ ಬೇರೆಡೆಗೆ ಸ್ಥಳಾಂತರ ಮಾಡದಂತೆ ಮತ್ತು ಬೇರೆ ಜಾನುವಾರುಗಳಿ ಈ ಪ್ರದೇಶಕ್ಕೆ ಬರದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆಯು ಚಿಕ್ಕಬಗನಾಳ ಗ್ರಾಮದಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಿದೆ. ಸಾರ್ವಜನಿಕರು ಸಹಕರಿಸುವಂತೆ ಪಶುಪಾಲನಾ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

Please follow and like us:
error