You are here
Home > Koppal News-1 > koppal news > ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ : ಪ್ಲಾಸ್ಟಿಕ್ ಧ್ವಜ ನಿಷೇಧ – ಕನಗವಲ್ಲಿ ಎಂ

ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ : ಪ್ಲಾಸ್ಟಿಕ್ ಧ್ವಜ ನಿಷೇಧ – ಕನಗವಲ್ಲಿ ಎಂ

koppal-august-15 ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕುರಿತು ಮಂಗಳವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬರುವ ಆಗಸ್ಟ್ ೧೫ ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲು ಅಗತ್ಯ ಸಿದ್ಧತೆಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಬೆಳಿಗ್ಗೆ ೦೮ ಗಂಟೆಗೆ ಜಿಲ್ಲಾಡಳಿತ ಭವನ ಆವರಣದಲ್ಲಿ ಜಿಲ್ಲಾಧಿಕಾರಿಗಳಿಂದ ಧ್ವಜಾರೋಹಣ. ಅಂದು ಬೆಳಿಗ್ಗೆ ೯ ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರಡ್ಡಿ ಅವರು ಧ್ವಜಾರೋಹಣ ನೆರವೇರಿಸುವರು. ಶಾಲಾ ಮಕ್ಕಳು, ಎನ್.ಸಿ.ಸಿ., ಪೊಲೀಸ್ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಂದ ಆಕರ್ಷಕ ಪಥಸಂಚಲನ, ಅಲ್ಲದೆ ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಕಾರ್ಯಕ್ರಮಗಳು ನೆರವೇರಲಿವೆ. ಅಂದು ಸಂಜೆ ೬ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಗರದ ಸಾರ್ವಜನಿಕ ಮೈದಾನದಲ್ಲಿ ಏರ್ಪಡಿಸಲಾಗುವುದು. ಎಂದರು.

koppal-august-15-celeberation
ಈಗಾಗಲೆ ಪ್ಲಾಸ್ಟಿಕ್ ಧ್ವಜಗಳನ್ನು ನಿಷೇಧಿಸಲಾಗಿದ್ದು, ಕೊಪ್ಪಳ ನಗರವೂ ಸೇರಿದಂತೆ ಜಿಲ್ಲೆಯ ಯಾವುದೇ ಪ್ರದೇಶದಲ್ಲಿ ಪ್ಲಾಸ್ಟಿಕ್ ಧ್ವಜವನ್ನು ಮಾರಾಟ ಮಾಡುವುದಾಗಲಿ, ಬಳಸುವುದಾಗಲಿ ಮಾಡುವಂತಿಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ನಿಗಾ ವಹಿಸಬೇಕು. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಈ ಬಾರಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಬಿಂಬಿಸುವ ವಿಶೇಷ ಸ್ತಬ್ಧಚಿತ್ರ ಸಿದ್ಧಪಡಿಸಬೇಕು. ಈ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಸಾರ್ವಜನಿಕರೂ ಸೇರಿದಂತೆ ಎಲ್ಲ ಅಧಿಕಾರಿ, ನೌಕರರು ತಪ್ಪದೆ ಭಾಗವಹಿಸಬೇಕು. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಪ್ರಮುಖ ಬೀದಿ, ಸರ್ಕಾರದ ಕಚೇರಿ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಕೈಗೊಂಡು ಹಬ್ಬದ ವಾತಾವರಣ ನಿರ್ಮಿಸುವಂತಾಗಬೇಕು. ದಿನಾಚರಣೆ ಅಂಗವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಶಾಲಾ ಮಕ್ಕಳಿಗೆ ಈ ಬಾರಿ ಬೆಳಿಗ್ಗೆಯೇ ಆಯಾ ಶಾಲಾ ಮುಖ್ಯಸ್ಥರು ತಪ್ಪದೆ ಸಿಹಿ ತಿಂಡಿಯ ಜೊತೆಗೆ ಹಾಲು ವಿತರಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಕ್ರೀಡಾಂಗಣದಲ್ಲಿ ಮಕ್ಕಳಿಗೆ ನಗರಸಭೆ ವತಿಯಿಂದ ಬಾಳೆಹಣ್ಣು ವಿತರಿಸಬೇಕು. ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ತೋರಿದವರಿಗೆ ಹಾಗೂ ಮುಖ್ಯಮಂತ್ರಿಗಳಿಂದ ಚಿನ್ನ ಮತ್ತು ಬೆಳ್ಳಿ ಪದಕ ಪಡೆದ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಸನ್ಮಾನಿಸಲು ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು. ಆಯಾ ಇಲಾಖೆಗಳಿಗೆ ವಹಿಸಿಕೊಟ್ಟ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಉಪವಿಭಾಗಾಧಿಕಾರಿ ಐ.ಎಸ್. ಶಿರಹಟ್ಟಿ ಅವರು ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕವಾಯತು ಪೂರ್ವ ಸಿದ್ಧತೆ ಕೈಗೊಳ್ಳುವ ಮಕ್ಕಳಿಗೆ ಕುಡಿಯುವ ನೀರು ಹಾಗೂ ಅಲ್ಪೋಪಹಾರದ ವ್ಯವಸ್ಥೆ ಕೈಗೊಳ್ಳಬೇಕು. ಕಾರ್ಯಕ್ರಮದ ಅಚ್ಚುಕಟ್ಟು ನಿರ್ವಹಣೆಗಾಗಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವೇದಿಕೆ ಸಮಿತಿ, ಜಿ.ಪಂ. ಉಪಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಸಮಿತಿ, ಜಿಲ್ಲಾ ಕಾರ್ಮಿಕ ಅಧಿಕಾರಿ ನೇತೃತ್ವದಲ್ಲಿ ಸ್ತಬ್ಧಚಿತ್ರ ಸಮಿತಿಯನ್ನು ರಚಿಸಿದ್ದು, ಆಯಾ ಸಮಿತಿಗೆ ವಹಿಸಿದ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ತಿಳಿಸಿದರು.
ಸ್ತಬ್ಧಚಿತ್ರಗಳ ಮೆರವಣಿಗೆ ಸಂದರ್ಭದಲ್ಲಿ ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು. ನಗರದ ಎಲ್ಲ ಖಾಸಗಿ ಶಾಲೆಯ ಮಕ್ಕಳು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಾಗಬೇಕು. ಇದಕ್ಕಾಗಿ ನಗರ ಸಾರಿಗೆ ಬಸ್ ವ್ಯವಸ್ಥೆ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಗಣ್ಯರಾದ ಶಿವಾನಂದ ಹೊದ್ಲೂರ್ ಮತ್ತು ನಾಗರಾಜ ಬಳ್ಳಾರಿ ಅವರು ಮನವಿ ಮಾಡಿಕೊಂಡರು. ಬಸವರಾಜ ಶೀಲವಂತರ್ ಹಾಗೂ ಡಾ. ಜ್ಞಾನಸುಂದರ್ ಅವರು ಮಾತನಾಡಿ, ಮಕ್ಕಳಿಗೆ ಸ್ವಾತಂತ್ರ್ಯ ದಿನದಂದು ಹಾಲಿನ ಜೊತೆಗೆ ಪೇಡೆಯನ್ನು ವಿತರಿಸಲು ಕೋರಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಲಷ್ಕರಿ ನಾಯಕ್, ಆಹಾರ ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಾರದಾ ನಿಂಬರಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರಾದ ಸುಮಂತರಾವ್ ಪಟವಾರಿ, ಕೊಟ್ರಪ್ಪ ಮುತ್ತಾಳ ಮುಂತಾದವರು ಭಾಗವಹಿಸಿದ್ದರು.

Leave a Reply

Top