ಶ್ರೀ ಗವಿಸಿದ್ದೇಶ್ವರ ಸಂಗೀತ ವಿದ್ಯಾಪೀಠದಿಂದ ಸಂಗೀತ ಶಿಬಿರ

gavimath-koppal-gavisiddeshwar-music-school
ಕೊಪ್ಪಳ: ನಗರದ ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದಿಂದ ಓಜನಹಳ್ಳಿ ರಸ್ತೆಯ ಜ್ಞಾನಭಾರತಿ ವಸತಿ ಶಾಲೆಯಲ್ಲಿ ಒಂದು ವಾರದ ಸಂಗೀತ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಹೇಗೆ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನ ಕಲಿಸಿಕೊಡಲಾಗುತ್ತದೆ. ವಿಶೇಷವಾಗಿ ಸಂಗೀತಕ್ಕೆ ಸಂಬಂಧಪಟ್ಟಂತೆ ರಾಗ, ಲಯ, ತಾಳ, ಶೃತಿಗಳ ಕ್ರಮಬದ್ಧತೆಯಿಂದ ಹಾಡುವುದನ್ನು ಕಲಿಸಲಾಗುತ್ತದೆ. ಶಿಬಿರದಲ್ಲಿ ಗುರುಕುಲ ಮಾದರಿ ಪದ್ದತಿಯಲ್ಲಿ ಸಂಗೀತ ತರಬೇತಿಯನ್ನ ನೀಡಲಾಗುತ್ತದೆ. ಅಲ್ಲದೆ ಸಂಗೀತ ವಿದ್ವಾಂಸರ ಧ್ವನಿ ಮುದ್ರಿಕೆಗಳನ್ನ ಕೇಳಿಸುವ ಮೂಲಕ ವಿದ್ಯಾರ್ಥಿಗಳಿಗೆ ಗಾಯನದ ಕಲೆಯನ್ನ ಕಲಿಸಲಾಗುತ್ತದೆ. ಸದರಿ ಶಿಬಿರದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ದೊಡ್ಡ ದೊಡ್ಡ ವಿದ್ವಾಂಸರನ್ನ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಕರೆಯಿಸಲಾಗುತ್ತದೆ. ಸದರಿ ಶಿಬಿರಕ್ಕೆ ವಿದ್ವಾಂಸರಾದ ಕಲಬುರ್ಗಿಯ ವಿಜಯವಿಠಲ ಅವಧಾನಿ, ಗದಗದ ಹನಮಂತಕುಮಾರ ಕೊಡಗನೂರ, ವೈ.ಆರ್.ಮೂಲಿಮನಿ ಮತ್ತು ಸ್ಥಳೀಯ ಕಲಾವಿದರಾದ ಶ್ರೀನಿವಾಸ ಜೋಷಿ, ಎ.ಪಿ.ಹಿರೇಮಠ ಮುಂತಾದ ನುರಿತ ಕಲಾವಿದರಿಂದ ತರಬೇತಿ ನೀಡಲಾಗುತ್ತದೆ. ಬೆಳಿಗ್ಗೆ ೬ ಗಂಟೆಯಿಂದ ರಾತ್ರಿ ೧೦ರ ವರೆಗೆ ಸಂಗೀತದ ವಿವಿಧ ಪ್ರಕಾರಗಳನ್ನು ಕಲಿಸಲಾಗುತ್ತದೆ. ಶಿಬಿರಾರ್ಥಿಗಳಲ್ಲಿ ಹಿರಿಯ ಮತ್ತು ಕಿರಿಯ ಎಂಬ ಎರಡು ಗುಂಪುಗಳನ್ನಾಗಿ ಮಾಡಿ ಸಂಗೀತ ಅಭ್ಯಾಸ ಮಾಡಿಸಲಾಗುತ್ತದೆ. ಈ ಶಿಬಿರದಲ್ಲಿ ಸುಮಾರು ೨೦ ವಿದ್ಯಾರ್ಥಿಗಳು ಭಾಗವಹಿಸಿದ್ದು ಶಿಬಿರದ ನೇತೃತ್ವವನ್ನ ಶ್ರೀ ಗವಿಸಿದ್ದೇಶ್ವರ ಸಂಗೀತ ವಿದ್ಯಾಪೀಠದ ಪ್ರಾಚಾರ್ಯರಾದ  ವಿರೇಶ ಹಿಟ್ನಾಳ ಅವರು ವಹಿಸಿಕೊಂಡಿದ್ದಾರೆ.

Leave a Reply