ಶೌಚಾಲಯಕ್ಕಾಗಿ ಉಪವಾಸ ಕುಳಿತ ವಿದ್ಯಾರ್ಥಿನಿ ಮಲ್ಲಮ್ಮ

mallamma

ಮನೆಯಲ್ಲಿ ಶೌಚಾಲಯ ಕಟ್ಟಿಸಲು ನಿರಾಕರಿಸಿದ್ದಕ್ಕೆ ಬೇಸತ್ತ ಮಲ್ಲಮ್ಮ ಸಣ್ಣನಿಂಗಮ್ಮ ಬಾಗಲಾಪುರ ಎಂಬ 10 ನೇ ತರಗತಿಯ ವಿದ್ಯಾರ್ಥಿನಿ, ಮನೆಯವರ ವಿರುದ್ಧವೇ ಉಪವಾಸ ಸತ್ಯಾಗ್ರಹ ಮಾರ್ಗ ಅನುಸರಿಸಿ, ಎಲ್ಲರ ಗಮನ ಸೆಳೆದ ಘಟನೆ ಗಂಗಾವತಿ ತಾಲೂಕು ಡಣಾಪುರ ಗ್ರಾಮದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯನ್ನು ಈ ವರ್ಷಾಂತ್ಯದೊಳಗೆ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು, ಎಂದಿನಂತೆ ಜನಪ್ರತಿನಿಧಿಗಳು ಹಾಗೂ ಇತರೆ ಅಧಿಕಾರಿಗಳೊಂದಿಗೆ ಗ್ರಾಮಗಳಲ್ಲಿ ಕೈಗೊಳ್ಳುವ ಜಾಗೃತಿ ಕಾರ್ಯಕ್ರಮಗಳಡಿ ಜು. 14 ರಂದೂ ಸಹ ಗಂಗಾವತಿ ತಾಲೂಕು ಡಣಾಪುರ ಗ್ರಾಮದಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಸಾರ್ವಜನಿಕರ ಮನವೊಲಿಸಲು ಮನೆ ಮನೆ ಭೇಟಿ ನೀಡಲು ತೆರಳಿದ್ದರು. ಈ ಸಂದರ್ಭದಲ್ಲಿ ಆ ಗ್ರಾಮದ ಸಣ್ಣನಿಂಗಮ್ಮ ಅವರ ಮನೆಗೆ ಭೇಟಿ ನೀಡಿದಾಗ, ಸಣ್ಣ ನಿಂಗಮ್ಮ ಅವರ ಮಗಳು ಮಲ್ಲಮ್ಮ ಶೌಚಾಲಯ ಕಟ್ಟಿಸುವಂತೆ ಒತ್ತಾಯಿಸಿ, ಉಪವಾಸ ಸತ್ಯಾಗ್ರಹ ಕೈಗೊಂಡ ವಿಷಯ ಬೆಳಕಿಗೆ ಬಂದಿದೆ.
ಡಣಾಪುರ ಗ್ರಾಮ ಪಂಚಾಯತಿಯು ಹೆಬ್ಬಾಳ, ಹೆಬ್ಬಾಳಕ್ಯಾಂಪ್, ಮಡ್ಡಿಕ್ಯಾಂಪ್ ಮತ್ತು ಮಾರುತಿ ನಗರವನ್ನು ಒಳಗೊಂಡಿದ್ದು, ಇಲ್ಲಿ ಒಟ್ಟು 1497 ಕುಟುಂಬಗಳಿವೆ. ಈವರೆಗೂ 759 ಕುಟುಂಬಗಳು ಮಾತ್ರ ಶೌಚಾಲಯ ಹೊಂದಿದ್ದು, ಅದನ್ನು ಬಳಕೆ ಮಾಡುತ್ತಿದ್ದಾರೆ. ಉಳಿದಂತೆ 738 ಕುಟುಂಬಗಳು ಶೀಘ್ರ ನಿರ್ಮಿಸಿಕೊಳ್ಳುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ.
ಡಣಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಮಲ್ಲಮ್ಮ ಅವರದು ಬಡ ಕುಟುಂಬ, ಆದರೂ, ಸ್ವಚ್ಛತೆಯ ಅರಿವು ಹಾಗೂ ಶೌಚಾಲಯದ ಮಹತ್ವವನ್ನು ಅರಿತಿದ್ದ ಮಲ್ಲಮ್ಮ ಸ್ವಾಭಿಮಾನಕ್ಕಾಗಿ ಮನೆಯಲ್ಲಿ ಶೌಚಾಲಯ ಇರಲೇಬೇಕೆಂದು ಬಯಸಿದಳು. ಈ ಕುರಿತು ತನ್ನ ತಾಯಿಗೆ ಬೇಡಿಕೆ ಇಟ್ಟ ಮಲ್ಲಮ್ಮನಿಗೆ ದೊರೆತಿದ್ದು, ಬಡತನ ಹಾಗೂ ಸ್ಥಳದ ಅಭಾವದ ಕಾರಣ ಶೌಚಾಲಯ ಕಟ್ಟಿಸಲು ಸಾಧ್ಯವಿಲ್ಲ ಎಂಬ ಉತ್ತರ. ಇದರಿಂದ ತೀವ್ರ ನೊಂದ ಮಲ್ಲಮ್ಮ, ಶೌಚಾಲಯ ಕಟ್ಟಿಸಲು ಒಪ್ಪುವವರೆಗೂ ಉಪವಾಸ ಮಾಡುವುದಾಗಿ ತಾಯಿಗೆ ಹೇಳಿದ್ದಾಳೆ. ಅಷ್ಟೇ ಅಲ್ಲದೆ ಅದನ್ನು ಕಾರ್ಯರೂಪಕ್ಕೂ ತಂದಿದ್ದಾಳೆ. ಈ ವಿಷಯ ತಿಳಿದ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಹರ್ಷ ವ್ಯಕ್ತಪಡಿಸಿ, ಖುದ್ದು, ಮಲ್ಲಮ್ಮಳನ್ನು ಭೇಟಿಯಾಗಿ ಮಾತನಾಡಿದ್ದಾರೆ. ಅಲ್ಲದೆ ಸ್ವಚ್ಛತೆ ಹಾಗೂ ಶೌಚಾಲಯದ ಅಗತ್ಯತೆ ಕುರಿತು ಕುಟುಂಬದವರಿಗೆ ಅರಿವು ಮೂಡಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಸ್ಥಳದ ಅಭಾವಕ್ಕೂ ಕೂಡ ಅಲ್ಲಿಯೇ ಪರಿಹಾರವನ್ನು ಸೂಚಿಸಿ, ಒಂದು ವಾರದೊಳಗಾಗಿ ವೈಯಕ್ತಿಕ ಶೌಚಾಲಯ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಶೌಚಾಲಯ ಕಟ್ಟಿಸಿಕೊಳ್ಳಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸರ್ಕಾರ 15 ಸಾವಿರ ರೂ.ಗಳ ಪ್ರೋತ್ಸಾಹಧನ ದೊರೆಯಲಿದ್ದು, ಶೌಚಾಲಯ ಇಲ್ಲದಿರುವವರು ಕೂಡಲೆ ಶೌಚಾಲಯ ಕಟ್ಟಿಸಿಕೊಳ್ಳುವಂತೆ ಮುಖ್ಯ ಕಾರ್ಯನಿವಾಹಕ ಅಧಿಕಾರಿಗಳು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತಿ ಸದಸ್ಯೆ ವಿಜಯಲಕ್ಷ್ಮಿ ಪ್ರಭಾಕರ್ ಕೂಡ, ಮಲ್ಲಮ್ಮಳ ಸ್ವಾಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಶಫಿ ಶೇಕ್ಷಾವಲಿ, ಉಪಾಧ್ಯಕ್ಷೆ ಅಮರಮ್ಮ ತಾಯಮ್ಮ, ತಾ.ಪಂ. ಸದಸ್ಯ ಪಕೀರಯ್ಯ ಹನುಮಂತಪ್ಪ, ತಾಲೂಕಾ ಪಂಚಾಯತಿ ಅಧಿಕಾರಿಗಳು ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply