ಶೌಚತಂತ್ರಜ್ಞಾನ ಅಭಿವೃದ್ಧಿಯಾಗಲಿ

 

ಮಾಹಾರಾಷ್ಟ್ರದಲ್ಲಿmanual-scavenging ಈಚೆಗೆ ಅಲ್ಲಿಯ ಹೈಕೋರ್ಟ್ ತನ್ನ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮಲಹೊರುವ ಪದ್ಧತಿ ಬಗ್ಗೆ ಅಲ್ಲಿಯ ಆಡಳಿತರೂಢ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇಂತಹ ತರಾಟೆಯ ಹಿನ್ನೆಲೆಯಲ್ಲಿ ಪ್ರಶ್ನೆಯೆನೆಂದರೆ ತಲೆ ಮೇಲೆ ಮಲ ಅಥವಾ ಕಕ್ಕಸ್ಸು ಹೊರುವುದು ಕೊನೆಯಾಗುವುದು ಯಾವಾಗ? ಎನ್ನುವುದು. ಯಾಕೆಂದರೆ ಸುಮ್ಮನೆ ಹೈಕೋರ್ಟಿನ ಈ ತರಾಟೆಯ ಬಗ್ಗೆ ಲೊಚಗುಟ್ಟಿ, ಮಲಹೊರುವವರ ಬಗ್ಗೆ ಅನುಕಂಪ ತೋರಿಸಿ, ಕಣ್ಣೀರು (ಮೊಸಳೆ) ಸುರಿಸಿ, ಪುನಃ ನಾಳೆ ನಮ್ಮ ಮನೆಯ ಶೌಚಾಲಯ ಶುಚಿಗೊಳಿಸಲು, ಮ್ಯಾನ್‍ಹೋಲ್ ಕ್ಲೀನ್ ಮಾಡಲು ಮತ್ತದೇ ಮಲಹೊರುವ ಭಂಗಿ ಜನಾಂಗದವರನ್ನು ಕರೆದರೆ ನಾವು ತಲೆ ತಗ್ಗಿಸಿದ್ದಕ್ಕೆ, ಕಣ್ಣೀರು ಸುರಿಸಿದ್ದಕ್ಕೆ ಅರ್ಥವಾದರು ಏನು? ಈ ನಿಟ್ಟಿನಲ್ಲಿ ಈ ಸಮಸ್ಯೆಯ ಮೂಲಕ್ಕೆ ಕೈ ಹಾಕಬೇಕಿದೆ. ಮತ್ತು ಈ ಸಮಸ್ಯೆಗೆ ರಚನಾತ್ಮಕ, ಕ್ರಿಯಾತ್ಮಕ ಮತ್ತು ಮಾನವಿಯತೆಯ ಹಿನ್ನಲೆಯಲ್ಲಿ ಅಧ್ಯತೆಯ ಮೇಲೆ ಪರಿಹಾರ ಕಂಡುಕೊಳ್ಳಬೇಕಿದೆ.

ಈ ಸಮಸ್ಯೆ ಪ್ರಾರಂಭವಾಗುವುದು ನಮ್ಮ ಮನೆಗಳಿಂದಲೇ. ತುಂಬಿಕೊಳ್ಳುವ ಕಕ್ಕಸು ಗುಂಡಿಗಳು, ಹೂಳು ತುಂಬಿಕೊಳ್ಳುವ ಚರಂಡಿಗಳು, ಕಸದ ರಾಶಿಯಿಂದ ಭರ್ತಿಯಾಗುವ ರಸ್ತೆಗಳು, ಬೀದಿಗಳು. ಒಟ್ಟಿನಲ್ಲಿ ವ್ಯವಸ್ಥೆ ಗಬ್ಬೆದ್ದು ಹೋಗುತ್ತದೆ. ಪ್ರಶ್ನೆಯೇನೆಂದರೆ ಇವನ್ನು ಶುಚಿಗೊಳಿಸಲು, ಕಕ್ಕಸು ಗುಂಡಿಗಳನ್ನು ಮ್ಯಾನ್‍ಹೋಲ್‍ಗಳನ್ನು ಕ್ಲೀನ್ ಮಾಡಲು ಮನುಷ್ಯರೇ ಯಾಕೆ ಬೇಕು? ಎಂಬುದು. ಯಾಕೆ ಇಲ್ಲಿ ಯಂತ್ರಗಳನ್ನು ಬಳಸಲು ಸಾಧ್ಯವಿಲ್ಲವೇ? ರಸ್ತೆ ನಿರ್ಮಾಣ ಮಾಡಲು ಯಂತ್ರಗಳು ಬೇಕು, ಹೊಲ ಉಳಲು ಯಂತ್ರಗಳು ಬೇಕು, ಚರಂಡಿ ಶುಚಿಗೊಳಿಸಲು, ಮ್ಯಾನ್‍ಹೋಲ್ ಕ್ಲೀನ್ ಮಾಡಲು ಯಂತ್ರಗಳು ಬೇಡವೇ? ಯಾಕೆ ವಿಜ್ಞಾನ ಇದನ್ನು ಅಲಕ್ಷಿಸಿದೆ? ಅಂದಹಾಗೆ ನಮ್ಮ ವಿಜ್ಞಾನಿಗಳಿಗೆ ಭಂಗಿಗಳನ್ನು ಮತ್ತು ಅವರು ಮಾಡುವ ಕೆಲಸವನ್ನು ಕಂಡರೆ ಅಸಡ್ಡೆಯೇ? ಅಥವಾ ಇಲ್ಲೂ ಕೂಡ ಅಪರೋಕ್ಷ ಅಸ್ಪøಶ್ಯತಾಚರಣೆಯೇ? ನಿಜ ಹೇಳಬೇಕೆಂದರೆ ಇಂದಿನ ತುರ್ತಿನ ಅಗತ್ಯ ಚಂದ್ರಲೋಕದಲ್ಲಿ ಮನೆ ಕಟ್ಟುವುದಲ್ಲ. ಮಂಗಳನಿಗೆ ಭೇಟಿ ಕೊಡುವುದಲ್ಲ. ದಿನಕ್ಕೊಂದರಂತೆ ಉಪಗ್ರಹಗಳನ್ನು ಆಕಾಶಕ್ಕೆ ಎಸೆಯುವುದೂ ಅಲ್ಲ. ನಮ್ಮ ನಡುವೆಯೆ ಇರುವ ಪ್ರತಿಯೊಬ್ಬ ಮನುಷ್ಯನraghuttamma-hooba-kannadanet ಬದುಕನ್ನು ಹಸನುಗೊಳಿಸುವುದು ಹೇಗೆ ಎನ್ನುವುದು. ಈ ಕಡೆಗೆ ವಿಜ್ಞಾನ ಕಣ್ತೆರೆಯಬೇಕಿದೆ. ವಿಶೇಷವಾಗಿ ಭಾರತೀಯ ವಿಜ್ಞಾನ ಕ್ಷೇತ್ರ ಮತ್ತು ವಿಜ್ಞಾನಿಗಳು. ಯಾಕೆಂದರೆ ದುಡಿಯುವ ಮತ್ತು ಉತ್ಪಾದಕ ವರ್ಗಗಳನ್ನು ಜಾತಿಗಳಾಗಿ ಒಡೆದು ಸಾಮಾಜಿಕವಾಗಿ ಕನಿಷ್ಟ ಮಟ್ಟಕ್ಕೆ ಇಳಿಸಿದ ಕ್ರೂರ ವ್ಯವಸ್ಥೆ ಸೃಷ್ಟಿಸಿದ ಕೀರ್ತಿ ನಮ್ಮದಲ್ಲದೆ ಇನ್ಯಾರದ್ದು?

ಈ ದಿಸೆಯಲ್ಲಿ ಭಂಗಿಗಳ ಬದುಕು ಬದಲಾಗಬೇಕು. ಅದಕ್ಕೆ ವಿಜ್ಞಾನಿಗಳು ಮತ್ತು ವೈಜ್ಞಾನಿಕ ಕ್ಷೇತ್ರ ಹೆಗಲಿಗೆ ಹೆಗಲು ಕೊಡಬೇಕು. ಭಂಗಿಗಳು ಮಾಡುವ ಕೆಲಸವನ್ನು ದೇಶದ ಎಲ್ಲಾ ಭಾಗದಲ್ಲೂ ಯಂತ್ರಗಳು ಮಾಡುವಂತಾಗಬೇಕು ಮತ್ತು ಈ ಹಿನ್ನೆಲೆಯಲ್ಲಿ ಅಭಿವೃದ್ಧಿಯಾಗಬೇಕಾದ ತಂತ್ರಜ್ಞಾನವೇ “ಶೌಚತಂತ್ರಜ್ಞಾನ”. ಅಂತಹ ತಂತ್ರಜ್ಞಾನ ನೈರ್ಮಲ್ಯೀಕರಣದ ಪ್ರತಿಯೊಂದು ಹಂತದಲ್ಲೂ ಬಳಬಸಹುದಾದ ವೈಜ್ಞಾನಿಕ ಉಪಕರಣಗಳ ಅಭಿವೃದ್ಧಿ ಮತ್ತು ಸಂಶೋಧನೆಯನ್ನು ಒಳಗೊಳ್ಳಬೇಕು. ಮಾತೆತ್ತಿದರೆ ಮಾಹಿತಿ ತಂತ್ರಜ್ಞಾನ (ಐ ಟಿ), ಜೈವಿಕ ತಂತ್ರಜ್ಞಾನ (ಬಿ ಟಿ) ಎನ್ನುವ ನಮ್ಮ ಸರ್ಕಾರಗಳು ಇನ್ನು ಮುಂದೆ ಶೌಚತಂತ್ರಜ್ಞಾನ (ಎಸ್. ಟಿ)ದ ಪರ ದನಿಎತ್ತಿಬೇಕು. ಬರಿ ದನಿಎತ್ತಿದರೆ ಸಾಲದು ಅದು ಕಾರ್ಯರೂಪಕ್ಕೆ ಬರಬೇಕು. ಈ ಸಂಧರ್ಭದಲ್ಲಿ ಲೇಖಕ ನಾಗಸಿದ್ದಾರ್ಥ ಹೊಲೆಯಾರರ “ಬಾಬಾಸಾಹೇಬ್ ಡಾ|| ಅಂಬೇಡ್ಕರ್ ದೃಷ್ಟಿಯಲ್ಲಿ ಕಲಿಯುಗ” ಕೃತಿಯಲ್ಲಿನ ಕೆಲವು ಸಾಲುಗಳು ಇಲ್ಲಿ ಉಲ್ಲೇಖನ,ನೀಯ. ಶ್ರೀ ಸಿದ್ದಾರ್ಥ ಹೊಲೆಯಾರರು ಶೌಚತಂತ್ರಜ್ಞಾನದ ಬಗ್ಗೆ ಬರೆಯುತ್ತಾ, “ದೇಶದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ Certificate of Scavenging technology ಮತ್ತ Bachelor of Scavenging technology ಎಂಬ ಪದವಿಯನ್ನು ಪ್ರಾರಂಭಿಸಬೇಕು. ಇದನ್ನು ಮಾಡಿದವರಿಗೆ ಮಾತ್ರ
Scavenging Engineer ಎಂದು ಹುದ್ದೆಯನ್ನು ಸೃಷ್ಟಿಸಿ ನೀಡಬೇಕು. ಇಲ್ಲದ್ದಿದ್ದರೆ ಈಗಾಗಲೇ ಇರುವ Enviornmental Engineer ಗಳಿಗೆ ಈ ಕೆಲಸ ನೀಡಬೇಕು. ಆ ಮೂಲಕ ಜಲಗಾರರ ಸೇವೆಗೆ ಗೌರವಯುತವಾದ ಸ್ಥಾನ ಕಲ್ಪಿಸಬೇಕು. ಅದಕ್ಕೆ ಕನಿಷ್ಟ ತಹಶೀಲ್ದಾರ್ ಹುದ್ದೆಯ ಸ್ಥಾನಮಾನವಿರಬೇಕು. ಹಾಗಾದಾಗ ಮಾತ್ರ ಈ ದೇಶದ ಘನತೆಗೆ, ಮಾನವ ಸಮಾಜಕ್ಕೆ ಅಂಟಿರುವ ಕಳಂಕ ಹೋಗಲು ಸಾಧ್ಯ. ಇದು ಶತಮಾನಗಳಿಂದ ಈ ಸಮುದಾಯಕ್ಕೆ ಮಾಡಿದ ವಂಚನೆಗೆ, ದ್ರೋಹಕ್ಕೆ ಪ್ರಶ್ಚಾತಾಪವೂ ಹೌದು, ಪ್ರಾಯಶ್ಚಿತವೂ ಹೌದು”.

ಹೌದು, ಪ್ರಶ್ಚಾತಾಪ ಪಡಲೇಬೇಕು. ಏಕೆಂದರೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ನೀಡಿರುವ ವರಧಿಯಂತೆ 1997 ರಿಂದ 2007 ರವರೆಗೆ ಮ್ಯಾನ್‍ಹೋಲ್‍ಗಳಲ್ಲಿ ಸಿಕ್ಕಿ ಸತ್ತಿರುವ ಪೌರಕಾರ್ಮಿಕರ ಸಂಖ್ಯೆ 24,412. ಅಂದಹಾಗೆ ಇದು ಬರಿ ಹತ್ತು ವರ್ಷಗಳ ಮಾಹಿತಿ. ಈ ನಿಟ್ಟಿನಲ್ಲಿ ಉಳಿದ ಎಲ್ಲಾ ವರ್ಷಗಳ ಮಾಹಿತಿಯನ್ನು ಕಲೆಹಾಕಿದರೆ ಹಾಗೇ ಬಲಿಯಾದವರ ಸಂಖ್ಯೆ ಎಷ್ಟಿರಬೇಡ? ಬಹುಶಃ ಅದು ಭೂಪಾಲ್ ದುರಂತವನ್ನು ಸಹ ಮೀರಿಸುತ್ತದೆ! ಹಾಗಿದ್ದರೆ ಭಂಗಿಗಳ ಈ ದುರಂತ ಸಾವಿಗೆ ಕಾರಣ ಯಾರು? ನಾವಲ್ಲವೆ? ಹಾಗಿದ್ದರೆ ಪ್ರಾಯಶ್ಚಿತ ಪಡಬೇಕಾದ್ದು ನಾವೇ ಅಲ್ಲವೇ.

ಈ ಕಾರಣಕ್ಕಾಗಿ ಶೌಚತಂತ್ರಜ್ಞಾನ ಭರದಿಂದ ಅಭಿವೃದ್ಧಿಯಾಗಬೇಕು. ಅಗತ್ಯ ಸೇವೆ ಎಂದು ಪರಿಗಣಿಸಿ ಬಜೆಟ್‍ನಲ್ಲಿ ಸೂಕ್ತ ಹಣ ಒದಗಿಸಿ ಮಾನವಿಯತೆ ದೃಷ್ಟಿಯ ಹಿನ್ನಲೆಯಲ್ಲಿ ಸರ್ಕಾರ ಈ ತಂತ್ರಜ್ಞಾನದ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಇಲ್ಲದ್ದಿದ್ದರೆ ಹೈಕೋರ್ಟ್‍ಗಳು ಇಂತಹ ಛೀಮಾರಿಗಳು ನಿರಂತರ ಬರುತ್ತಲೇ ಇರುತ್ತವೇ. ಹಾಗೆಯೇ ಕೆಲ ದಿನಗಳ ಹಿಂದೆ ನಮ್ಮ ಕರ್ನಾಟಕದ ಸವಣೂರಿನಲ್ಲಿ ಭಂಗಿ ಜಾಡಮಾಲಿ ಸಮುಧಾಯದವರು ಮಲ ಸುರಿದುಕೊಂಡು ಪ್ರತಿಭಟಿಸಿ ದೇಶವನ್ನೇ ಬೆಚ್ಚಿಬೀಳಿಸಿದ ಹಾಗೆ ದೇಶದ್ಯಾಂತ ಭಂಗಿಗಳು, ಜಲಗಾರರು, ಮಲಸುರಿದುಕೊಳ್ಳುವ ಪರಿಸ್ಥಿತಿ ಬರಬಹುದು. ಆಗ ಇಡೀ ಪ್ರಂಪಚವೇ ಭಾರತದ ಈ ಸ್ಥಿತಿಯನ್ನು ಕಂಡು ತಲೆ ತಗ್ಗಿಸುತ್ತದೆ. ಖಂಡಿತ, ಹಾಗೆ ಆಗುವುದು ಬೇಡ ಈ ನಿಟ್ಟಿನಲ್ಲಿ ಶೌಚತಂತ್ರಜ್ಞಾನ ಅಭಿವೃದ್ಧಿಯಾಗಲಿ. ಭಂಗಿಗಳ ಬಾಳು ಬೆಳಗಲಿ.
-ರಘೋತ್ತಮ ಹೊ ಬ

Leave a Reply