ಶೋಷಿತ ಸಮುದಾಯಗಳ ನಂದಾದೀಪ ಡಾ. ಅಂಬೇಡ್ಕರ್- ಶಿವರಾಜ ಎಸ್ ತಂಗಡಗಿ.

ಕೊಪ್ಪಳ ಏ. ೧೪ ಶೋಷಿತ ಸಮುದಾಯಗಳ, ದೀನ ದಲಿತರ ನಂದಾದೀಪ ಡಾ. ಬಿ.ಆರ್. ಅಂಬೇಡ್ಕರ್ ಅವರು. ಅವರ ಆಶಯಗಳನ್ನು ಈಡೇರಿಸುವತ್ತ ನಮ್ಮ ಸರ್ಕಾರ ಮುನ್ನಡೆದಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಹೇಳಿದರು.
ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಗುರುವಾರದಂದು ಆಯೋಜಿಸಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೨೫ ನೇ ಜಯಂತಿ ಆಚರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಶೋಷಿತ ಸಮಾಜ, ನಿDSC_0054ರ್ಲಕ್ಷ್ಯಕ್ಕೆ ಒಳಗಾದ ಸಮುದಾಯಗಳ ನಂದಾದೀಪ, ಧೀಮಂತ ನಾಯಕ, ದೀನ ದಲಿತರ ಮಹಾ ಚೇತನ, ಮಹಾ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಎಂದು ಬಣ್ಣಿಸುವುದರೊಂದಿಗೆ ಉದ್ಘಾಟನೆ ಭಾಷಣ ಪ್ರಾರಂಭಿಸಿದ ಸಚಿವರು, ಅಂಬೇಡ್ಕರ್ ಅವರು ಜನಿಸದೇ ಇದ್ದಿದ್ದರೆ, ದಲಿತರು ಸಮಾಜದಲ್ಲಿ ಸ್ಥಾನಮಾನ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಭಾರತೀಯ ಸಮಾಜದ ಅವಕಾಶ ವಂಚಿತ ಸಮುದಾಯದ ಹಿನ್ನೆಲೆಯಿಂದ ಹುಟ್ಟಿಬಂದ ಅಂಬೇಡ್ಕರ್ ಅವರು, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಮಾಡಿದ ಸಾಧನೆ ಅನನ್ಯ. ಸಮಾನತೆ ಮತ್ತು ಮಾನವೀಯತೆಯನ್ನು ಗೌರವಿಸುವ ಅವರ ಚಿಂತನೆ ಎಲ್ಲರಿಗೂ ಆದರ್ಶವಾದುದು. ಜೀವನದಲ್ಲಿ ತಾವು ಅನುಭವಿಸಿದ ನೋವು, ಅವಮಾನವನ್ನು ಯಾರೂ ಸಹಿಸಿಕೊಂಡು ಬಾಳುವ ಪರಿಸ್ಥಿತಿ ಬಾರದಿರಲಿ ಎನ್ನುವ ದೃಷ್ಟಿಯಿಂದ ಸಾಮಾಜಿಕ ನ್ಯಾಯವನ್ನು ಪ್ರಮುಖ ಉದ್ದೇಶವಾಗಿಸಿಕೊಂಡು, ಸಂವಿಧಾನ ರಚಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದರು. ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ. ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಪ್ರೋತ್ಸಾಹ ನೀಡಲು ಸರ್ಕಾರ ೧೧೦ ಕೋಟಿ ರೂ.ಗಳ ಅನುದಾನ ಒದಗಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ೧೮ ಸಾವಿರ ಕೋಟಿ ರೂ. ಅನುದಾನವನ್ನು ಮೀಸಲಿರಿಸಿದೆ. ಅಂಬೇಡ್ಕರ್ ಅವರ ೧೨೫ ನೇ ಜಯಂತಿ ಆಚರಣೆಯನ್ನು ವರ್ಷ ಪೂರ್ತಿ ಆಚರಿಸುವ ಸಲುವಾಗಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಏಪ್ರಿಲ್ ೧೪ ರಿಂದ ೨೪ ರವರೆಗೆ ರಾಜ್ಯಾದ್ಯಂತ ಸಾಮರಸ್ಯ ದಿನವನ್ನಾಗಿ ಆಚರಿಸುವ ಮೂಲಕ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಕಾರ್ಯ ನಡೆದಿದೆ. ಅಂಬೇಡ್ಕರ್ ಅವರು ನಡೆದುಬಂದ ದಾರಿ ಹಾಗೂ ಜೀವನ ಚರಿತ್ರೆಯನ್ನು ಒಳಗೊಂಡಂತೆ ವಿಶೇಷ ಕಾರ್ಯಕ್ರಮವನ್ನು ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯಲ್ಲಿ ಆಯೋಜಿಸಲು ಯೋಜಿಸಲಾಗಿದೆ. ಅಂಬೇಡ್ಕರ್ ಅವರು ಈ ದೇಶದ ಪ್ರತಿಯೊಂದು ಸಮುದಾಯಕ್ಕೂ ಸಲ್ಲಬೇಕಾದವರು. ಮಹಿಳೆಯರಿಗೆ ಸಮಾನ ಹಕ್ಕು ನೀಡುವ ನಿಟ್ಟಿನಲ್ಲಿ ಶ್ರಮಿಸಿದರು. ಅಂಬೇಡ್ಕರ್ ಅವರು ನಡೆದು ಬಂದ ದಾರಿ, ಅವರ ಆದರ್ಶಗಳನ್ನು ಅರಿತುಕೊಂಡು ನಾವು ಸಮಾಜದಲ್ಲಿ ಬದಲಾವಣೆ ತರಲು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಸಚಿವ ಶಿವರಾಜ ಎಸ್ ತಂಗಡಗಿ ಅವರು ಕರೆ ನೀಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ಗಂಗಾವತಿಯ ಸಿ.ಹೆಚ್. ನಾರಿನಾಳ ಅವರು, ರಾಜ್ಯದಲ್ಲಿ ಅಸ್ಪೃಷ್ಯತೆ ರಹಿತ ಗ್ರಾಮಗಳ ನಿರ್ಮಾಣವಾಗಬೇಕು ಎಂದು ಒತ್ತಾಯಿಸಿದರು. ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ. ಅಂಬೇಡ್ಕರ್ ಅವರ ೧೨೫ ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರಕಟಿಸಲಾಗಿರುವ ‘ಮಹಾ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್’ ಕಿರುಹೊತ್ತಿಗೆ ಹಾಗೂ ಜನಪದ ಮಾಸ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಸಾರ್ವಜನಿಕರಿಗೆ ಕಿರುಹೊತ್ತಿಗೆ ಮತ್ತು ವಿಶೇಷ ಸಂಚಿಕೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ಉಪಾಧ್ಯಕ್ಷೆ ಮೀನಾಕ್ಷಮ್ಮ, ಜಿ.ಪಂ. ಸದಸ್ಯರುಗಳಾದ ಗೂಳಪ್ಪ ಹಲಗೇರಿ, ರಾಮಣ್ಣ ಚೌಡ್ಕಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೈಯ್ಯದ್ ಜುಲ್ಲು ಖಾದ್ರಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್, ಗಣ್ಯರಾದ ಮುತ್ತುರಾಜ್ ಕುಷ್ಟಗಿ, ಶಿವಣ್ಣ ಚರಾರಿ, ಖಾಜಾವಲಿ, ಅಮ್ಜದ್ ಪಟೇಲ್ ಸೇರಿದಂತೆ ವಿವಿಧ ಸಮಾಜಗಳ ಗಣ್ಯಾತಿ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರೇಮಸಾಗರ ದಾಂಡೆಕರ್ ಸ್ವಾಗತಿಸಿದರು, ಸಿ.ವಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಸಮತಾ ಸಾಮರಸ್ಯ ಆಚರಣೆ ಕುರಿತಂತೆ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಗರದ ತಹಸಿಲ್ದಾರರ ಕಚೇರಿ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಚಾಲನೆ ನೀಡಿದರು. ಅಂಬೇಡ್ಕರ್ ಅವರ ಭಾವಚಿತ್ರದ ಭವ್ಯ ಮೆರವಣಿಗೆ ಅಂಬೇಡ್ಕರ್ ವೃತ್ತ, ಗಡಿಯಾರ ಕಂಭ, ಜವಾಹರ ರಸ್ತೆ ಮರ್ಗವಾಗಿ ಸಾಹಿತ್ಯ ಭವನದವರೆಗೆ ನೆರವೇರಿತು. ಹಲವಾರು ಜಾನಪದ ಕಲಾ ತಂಡಗಳು ಮೆರವಣಿಗೆಗೆ ಆಕರ್ಷಕಗೊಳಿಸಿದವು.

Please follow and like us:
error