ಶುದ್ಧ ಕುಡಿಯುವ ನೀರು ಘಟಕಗಳನ್ನು ತ್ವರಿತವಾಗಿ ಪ್ರಾರಂಭಿಸಲು ಜಿ.ಪಂ. ಅಧ್ಯಕ್ಷರ ಸೂಚನೆ

cotton+pasha_koppal_mlaಜಿಲ್ಲೆಯಲ್ಲಿ ಗ್ರಾಮೀಶ ಪ್ರದೇಶದಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಸಲುವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆದಷ್ಟು ತ್ವರಿತವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾರಂಭಿಸುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರದಂದು ಏರ್ಪಡಿಸಲಾಗಿದ್ದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮೀಣ ಪ್ರದೇಶಗಳಲ್ಲಿ ಈ ವರ್ಷ ೧೫೨ ಕುಡಿಯುವ ನೀರು ಘಟಕಗಳನ್ನು ಪ್ರಾರಂಭಿಸಬೇಕಿದ್ದು, ಇದುವರೆಗೂ ಕೇವಲ ೩೩ ಘಟಕಗಳನ್ನು ಪ್ರಾರಂಭಗೊಂಡಿವೆ. ಉಳಿದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತ್ವರಿತವಾಗಿ ಪ್ರಾರಂಭಿಸಲು ಅಗತ್ಯ ಕ್ರಮ ವಹಿಸಬೇಕು. ಅಲ್ಲದೆ ಈಗಾಗಲೆ ಚಾಲ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ವಾರ್ಷಿಕ ನಿರ್ವಹಣೆ ಒಪ್ಪಂದ ಆಧಾರದಲ್ಲಿ ನಡೆಸಲು ಕ್ರಮ ಕೈಗೊಳ್ಳುವಂತೆ ಈ ಹಿಂದೆಯೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೂ ಈ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿಯನ್ನು ಒದಗಿಸಿಲ್ಲ. ಕೂಡಲೆ ಈ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬ್ಯಾಂಕ್ ಖಾತೆಗೆ ಆಧಾರ್ ಜೋಡಿಸಿ : ಸಭೆಯಲ್ಲಿ ಉಪಸ್ಥಿತರಿದ್ದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಮಾತನಾಡಿ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಾಯಿತ ಕುಟುಂಬದ ಸದಸ್ಯರು, ಉದ್ಯೋಗ ಚೀಟಿಯಲ್ಲಿರುವ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಣೆಗೊಳಿಸಬೇಕು. ಈ ನಿಟ್ಟಿನಲ್ಲಿ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಉದ್ಯೋಗ ಚೀಟಿಗಳ ಪರಿಶೀಲನೆ ನಡೆಸುವ ಕಾರ್ಯವೂ ಸಹ ನಿರೀಕ್ಷಿತ ವೇಗದಲ್ಲಿ ಆಗುತ್ತಿಲ್ಲ. ಬರುವ ದಿನಗಳಲ್ಲಿ ಉದ್ಯೋಗಖಾತ್ರಿಯಡಿ ಕೆಲಸ ಮಾಡಿದವರ ಕೂಲಿಕಾರರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುವುದು. ಇದರಿಂದ ಯೋಜನೆಯಡಿ ಅಕ್ರಮಗಳಿಗೆ ಅವಕಾಶವಿರುವುದಿಲ್ಲ. ಯೋಜನೆಯ ಹಣ ಮದ್ಯವರ್ತಿಗಳಿಗೆ ಹೋಗುತ್ತಿದೆ ಎಂಬ ದೂರಿಗೆ ಅವಕಾಶವಿಲ್ಲದಂತೆ ಆಗಲಿದೆ. ಅಧಿಕಾರಿಗಳು ಡಿ. ೩೧ ರ ಒಳಗಾಗಿ ಈ ಕಾರ್ಯಗಳನ್ನು ಕೈಗೊಳ್ಳಬೇಕು. ವಿಳಂಬವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿಸಲಾಗುವುದು ಎಂದು ಹೇಳಿದರು.
ಫಲಾನುಭವಿಗಳ ಆಯ್ಕೆಗೆ ಡಿ. ೩೧ ಕೊನೆಯ ದಿನ : ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ ಪ್ರಸಕ್ತ ಸಾಲಿಗೆ ಹಲವಾರು ಯೋಜನೆಗಳಡಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಗುರಿ ನೀಡಲಾಗಿದೆ. ಈಗಾಗಲೆ ಪ್ರಸಕ್ತ ಸಾಲಿನ ವರ್ಷಾಂತ್ಯದಲ್ಲಿ ನಾವಿದ್ದೇವೆ. ಫಲಾನುಭವಿಗಳ ಆಯ್ಕೆ ಪಟ್ಟಿಗೆ ಆಯಾ ವಿಧಾನಸಭಾ ಕ್ಷೇತ್ರಗಳ ಶಾಸಕರಿಂದ ಅನುಮೋದನೆ ಪಡೆದು, ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಆದರೆ ಇದುವರೆಗೂ ನಿಗಮಗಳಿಂದ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಎಲ್ಲ ಶಾಸಕರುಗಳಿಂದ ದಿನಾಂಕವನ್ನು ನಿಗದಿಪಡಿಸಿಕೊಂಡು, ಆಯ್ಕೆ ಪಟ್ಟಿಯನ್ನು ಪಡೆದುಕೊಳ್ಳಬೇಕು. ಡಿಸೆಂಬರ್ ೩೧ ರ ಒಳಗಾಗಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅವರು ವಿವಿಧ ನಿಗಮದಗಳ ಜಿಲ್ಲಾ ವ್ಯವಸ್ಥಾಪಕರುಗಳಿಗೆ ಸೂಚನೆ ನೀಡಿದರು.
ನೇತ್ರ ಶತ್ರಚಿಕಿತ್ಸೆ ಶಿಬಿರ ಏರ್ಪಡಿಸಿ : ಜಿಲ್ಲೆಯಲ್ಲಿ ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದಡಿ ೯೨೦೯ ಜನರಿಗೆ ಉಚಿತವಾಗಿ ನೇತ್ರ ಶಸ್ತ್ರ ಚಿಕಿತ್ಸೆ ಕೈಗೊಳ್ಳುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ. ಆದರೆ ಜಿಲ್ಲೆಯಲ್ಲಿ ಕೇವಲ ಶೇ. ೪೦ ರಷ್ಟು ಮಾತ್ರ ಸಾಧನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಸಾವಿರಾರು ಬಡ ಜನರಿಗೆ ಉಚಿತ ನೇತ್ರ ಶಸ್ತ್ರ ಚಿಕಿತ್ಸೆಯ ಸೌಲಭ್ಯದ ಅಗತ್ಯವಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಅವರು, ಜಿಲ್ಲೆಯಲ್ಲಿ ನೇತ್ರ ತಜ್ಞ ಸರ್ಕಾರಿ ವೈದ್ಯರು ಕೇವಲ ಒಬ್ಬರು ಮಾತ್ರವಿದ್ದು, ಇತರೆ ಕ್ಲಬ್‌ಗಳ ಜೊತೆಗೂಡಿ ಗುರಿ ಸಾಧಿಸಲಾಗುತ್ತಿದೆ ಎಂದರು. ನೆರೆ ಹೊರೆಯ ಜಿಲ್ಲೆಗಳಿಂದ ನೇತ್ರ ತಜ್ಞ ವೈದ್ಯರನ್ನು ಜಿಲ್ಲೆಗೆ ಕರೆಯಿಸಿ, ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಕ್ಷಯ ರೋಗಿಗಳ ಪತ್ತೆ ಕಾರ್ಯವನ್ನು ಸಮರ್ಪಕವಾಗಿ ಕೈಗೊಳ್ಳಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಎಂ. ನಿಂಗಪ್ಪ, ಜಿ.ಪಂ. ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಶಾಂತಾ ನಾಯಕ್, ಭೀಮಣ್ಣ ಅಗಸಿ ಮುಂದಿನ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

Please follow and like us:
error