ವಿಕಲಚೇತನರಿಗೆ ತ್ರಿ-ಚಕ್ರ ಮೋಟಾರು ವಾಹನ ವಿತರಣೆ ಅರ್ಜಿ ಆಹ್ವಾನ.

ಕೊಪ್ಪಳ, ಏ.19- ವಿಕಲ ಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ವ್ಯಾಪ್ತಿಯ ತೀವ್ರ ತೆರನಾದ ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ತ್ರಿ-ಚಕ್ರ ವಾಹನ ಒದಗಿಸಲು ಅರ್ಹರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು, ಕುಟುಂಬದ ವಾರ್ಷಿಕ ವರಮಾನ ರೂ.೨ ಲಕ್ಷದೊಳಗಿರಬೇಕು. ವಯೋಮಿತಿ ೨೦ ರಿಂದ ೬೦ ವರ್ಷ. ಅಂಗವಿಕಲರ ಗುರುತಿನ ಚೀಟಿ, ಸಕ್ಷಮ ಪ್ರಾಧಿಕಾರದಿಂದ ವಾಸಸ್ಥಳ ಪಡೆದಿರಬೇಕು. ಅಂಗವಿಕಲತೆ ತೋರುವ ೨ ಫೋಟೋ, ಜನ್ಮ ದಿನಾಂಕ ದಾಖಲೆ, ಸ್ಥಳೀಯ ಸಂಸ್ಥೆಗಳಿಂದ ಸಾಧನ ಸಲಕರಣೆ ಪಡೆಯದಿರುವ ಬಗ್ಗೆ ದೃಡೀಕರಣ, ವೈಧ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು. ಕರ್ನಾಟಕದಲ್ಲಿ ಕನಿಷ್ಠ ೧೦ ವರ್ಷ ವಾಸವಾಗಿರಬೇಕು, ದೈಹಿಕ ವಿಕಲಚೇತನರು ಶೇ.೭೫ ಕ್ಕಿಂತ ಹೆಚ್ಚಿನ ವಿಕಲತೆ ಹೊಂದಿದ್ದು, ಸೊಂಟದ ಕೆಳಗೆ ಅಂದರೆ ಎರಡು ಕಾಲುಗಳಲ್ಲಿ ಸ್ವಾಧೀನ ಕಳೆದುಕೊಂಡಿದ್ದು, ಎರಡು ಕೈಗಳು ಸ್ವಾಧೀನದಲ್ಲಿರುವ ಹಾಗೂ ಇತರೆ ಎಲ್ಲಾ ರೀತಿಯಲ್ಲಿ ಸಧೃಢವಾಗಿರುವವರು ಮೇಲಿನ ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ದೂರವಾಣಿ ಸಂ: ೦೮೫೩೯-೨೨೦೫೯೬ ಅಥವಾ ಬೆಂಗಳೂರು-೦೮೦-೨೨೮೬೬೦೪೬, ೨೨೮೬೦೯೦೭ ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಸಾಮಾಜಿಕ ಪರಿಶೋಧನಾ ಸಂಯೋಜಕರ ಹುದ್ದೆಗೆ ಅರ್ಜಿ ಆಹ್ವಾನ.
ಕೊಪ್ಪಳ ಏ. 19-  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಯ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯದ ವ್ಯಾಪ್ತಿಯ ಜಿಲ್ಲಾ ಮಟ್ಟದಲ್ಲಿ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಜಿಲ್ಲಾ ಸಾಮಾಜಿಕ ಪರಿಶೋಧನಾ ಸಂಯೋಜಕರನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ಸೇವೆ ಪಡೆಯಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೊಪ್ಪಳ ಜಿಲ್ಲೆಗೆ ಜಿಲ್ಲಾ ಸಾಮಾಜಿಕ ಪರಿಶೋಧನಾ ಸಂಯೋಜಕರ ಒಂದು ಹುದ್ದೆ ಇದ್ದು, ವಯೋಮಿತಿ ೧೮ ರಿಂದ ೩೫ ವರ್ಷದೊಳಗಿರಬೇಕು. ವಿದ್ಯಾರ್ಹತೆ- ಪದವಿಪೂರ್ವ ಶಿಕ್ಷಣ ಮತ್ತು ಕಂಪ್ಯೂಟರ್ ಬಳಕೆ ಬಗ್ಗೆ ಜ್ಞಾನವಿರಬೇಕು. ಸಾಮಾಜಿಕ ಪರಿಶಿಶೋಧನೆ ನಿರ್ವಹಿಸಿದ, ಸ್ವಯಂ ಸೇವಾ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ, ನರೇಗಾ ಕಾರ್ಯಕ್ರಮದ ಬಗ್ಗೆ ಅನುಭವವಿರುವವರಿಗೆ ಆದ್ಯತೆ ಇರುತ್ತದೆ. ಪ.ಜಾತಿ, ಪ.ಪಂಗಡ, ಅಲ್ಪಸಂಖ್ಯಾತರು, ಅಂಗವಿಕಲರು, ಮಹಿಳೆಯರಿಗೆ ಆಯ್ಕೆಯಲ್ಲಿ ಆದ್ಯತೆ ಇರುತ್ತದೆ. ಅಭ್ಯರ್ಥಿಗಳನ್ನು ಸಂದರ್ಶನದಲ್ಲಿ ಪಡೆಯುವ ಅಂಕಗಳು, ವಿದ್ಯಾರ್ಹತೆ, ಅನುಭವದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಗ್ರಾಮ ಪಂಚಾಯತಿ ಚುನಾವಣೆ : ಶೇ. ೭೯. ೯೬ ರಷ್ಟು ಮತದಾನ
ಕೊಪ್ಪಳ ಏ. 19- ಕೊಪ್ಪಳ ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾದ, ಅವಧಿ ಮುಕ್ತಾಯವಾದ ಹಾಗೂ ವಿವಿಧ ಕಾರಣಗಳಿಂದ ತೆರವಾಗಿದ್ದ ಗ್ರಾಮ ಪಂಚಾಯತಿಗಳಿಗೆ ಏ. ೧೭ ರಂದು ಜರುಗಿದ ಚುನಾವಣೆಯಲ್ಲಿ ಒಟ್ಟಾರೆ ಶೇ. ೭೯. ೯೬ ರಷ್ಟು ಮತದಾನವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ತಿಳಿಸಿದ್ದಾರೆ. ನೂತನವಾಗಿ ರಚನೆಯಾಗಿರುವ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮ ಪಂಚಾಯತಿಯ ೧೧ ಸದಸ್ಯ ಸ್ಥಾನಕ್ಕಾಗಿ ಜರುಗಿದ ಚುನಾವಣೆಯಲ್ಲಿ ಸಂಕನೂರು-೧, ಸಂಕನೂರು-೨, ಕಾತ್ರಾಳ ಹಾಗೂ ಶಿರಗುಂಪಿ ಗ್ರಾಮ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಒಟ್ಟಾರೆ ಶೇ. ೮೧. ೩೮ ರಷ್ಟು ಮತದಾನವಾಗಿದೆ. ಇಲ್ಲಿ ೧೫೬೪-ಪುರುಷ, ೧೬೧೫-ಮಹಿಳೆ, ೩೧೭೯-ಒಟ್ಟು ಮತದಾರರ ಪೈಕಿ ೧೨೯೭-ಪುರುಷ, ೧೨೯೦-ಮಹಿಳೆ, ಒಟ್ಟು-೨೫೮೭ ಮತದಾರರು ಮತ ಚಲಾಯಿಸಿದ್ದು, ಶೇ. ೮೧. ೩೮ ರಷ್ಟು ಮತದಾನವಾಗಿದೆ.
ಅವಧಿ ಮುಕ್ತಾಯಗೊಂಡಿದ್ದ ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮ ಪಂಚಾಯತಿಯ ೧೩ ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೨೦೧೯-ಪುರುಷ, ೧೮೫೮-ಮಹಿಳೆ, ೩೮೭೭- ಒಟ್ಟು ಮತದಾರರ ಪೈಕಿ ೧೬೧೫-ಪುರುಷ, ೧೪೬೯-ಮಹಿಳೆ, ೩೦೮೪-ಒಟ್ಟು ಮತದಾರರು ಮತ ಚಲಾಯಿಸಿದ್ದು ಶೇ. ೭೯. ೫೫ ರಷ್ಟು ಮತದಾನವಾಗಿದೆ. ಗಂಗಾವತಿ ತಾಲೂಕು ಸಿದ್ದಾಪುರ ಗ್ರಾಮ ಪಂಚಾಯತಿಯ ೨೬ ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೩೪೩೯-ಪುರುಷ, ೩೫೩೬-ಮಹಿಳೆ, ೬೯೭೫-ಒಟ್ಟು ಮತದಾರರ ಪೈಕಿ ೨೬೩೫-ಪುರುಷ, ೨೫೯೫-ಮಹಿಳೆ, ೫೨೩೦-ಒಟ್ಟು ಮತದಾರರು ಮತ ಚಲಾಯಿಸಿದ್ದು, ಶೇ. ೭೪. ೯೮ ಮತದಾನವಾಗಿದೆ. ಮುಸ್ಟೂರು ಗ್ರಾಮ ಪಂಚಾಯತಿಯ ೧೩ ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೧೪೮೧-ಪುರುಷ, ೧೪೯೪-ಮಹಿಳೆ, ೨೯೭೫-ಒಟ್ಟು ಮತದಾರರ ಪೈಕಿ ೧೨೪೪-ಪುರುಷ, ೧೨೩೯-ಮಹಿಳೆ, ೨೪೮೩-ಒಟ್ಟು ಮತದಾರರು ಮತ ಚಲಾಯಿಸಿದ್ದು, ಶೇ. ೮೩. ೪೬ ರಷ್ಟು ಮತದಾನವಾಗಿದೆ.
ವಿವಿಧ ಕಾರಣಗಳಿಂದ ತೆರವಾಗಿರುವ ಕೊಪ್ಪಳ ತಾಲೂಕಿನ ಮತ್ತೂರು ಗ್ರಾಮ ಪಂಚಾಯತಿಯ ನೀರಲಗಿ ೦೧ ಸದಸ್ಯ ಸ್ಥಾನಕ್ಕೆ ನಡದ ಚುನಾವಣೆಯಲ್ಲಿ ಶೇ. ೭೯, ಮಾಟಲದಿನ್ನಿ ಗ್ರಾ.ಪಂ.ನ ಯಡ್ಡೋಣಿ- ೨ ಸದಸ್ಯ ಸ್ಥಾನಗಳಿಗೆ ಜರುಗಿದ ಚುನಾವಣೆಯಲ್ಲಿ ಶೇ. ೯೦. ೨೮, ಬೋದೂರು ಗ್ರಾ.ಪಂ.ನ ಚಿಕ್ಕಮನ್ನಾಪುರ ಮತ್ತು ಚೌಡಾಪುರದ ತಲಾ ಒಂದು ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶೇ. ೮೬. ೯೬ ರಷ್ಟು ಮತದಾನವಾಗಿದೆ. ಮತಗಳ ಎಣಿಕೆ ಏ. ೨೦ ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ತಿಳಿಸಿದ್ದಾರೆ.
ಜೀವಂತ ಪ್ರಮಾಣಪತ್ರ ಸಲ್ಲಿಸಲು ಪಿಂಚಣಿದಾರರಿಗೆ ಸೂಚನೆ.
ಕೊಪ್ಪಳ ಏ. 19- ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪಿಂಚಣಿದಾರರು ಹಾಗೂ ಅವರ ಕುಟುಂಬ ಪಿಂಚಣಿದಾರರು, ಕಲಾವಿದ ಪಿಂಚಣಿದಾರರು ಹಾಗೂ ಕಲಾವಿದ ಕುಟುಂಬ ಪಿಂಚಣಿದಾರರು ತಮ್ಮ ಜೀವಂತ ಪ್ರಮಾಣಪತ್ರಗಳನ್ನು ಖಜಾನೆ ಅಧಿಕಾರಿಗಳಿಗೆ ಸಲ್ಲಿಸುವಂತೆ ಖಜಾನೆ ಇಲಾಖೆ ಉಪನಿರ್ದೇಶಕ ಸುರೇಶ್ ಹಳ್ಯಾಳ ಅವರು ಸೂಚನೆ ನೀಡಿದ್ದಾರೆ.
ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪಿಂಚಣಿದಾರರು ಹಾಗೂ ಅವರ ಕುಟುಂಬ ಪಿಂಚಣಿದಾರರು, ಕಲಾವಿದ ಪಿಂಚಣಿದಾರರು ಹಾಗೂ ಕಲಾವಿದ ಕುಟುಂಬ ಪಿಂಚಣಿದಾರರು, ಜೀವಂತ ಪ್ರಮಾಣಪತ್ರವನ್ನು ಪ್ರತಿ ವರ್ಷ ಏಪ್ರಿಲ್ ತಿಂಗಳ ಪಿಂಚಣಿ ಪಡೆಯುವ ಪೂರ್ವದಲ್ಲಿ ಖಜಾನೆ ಅಧಿಕಾರಿಗಳಿಗೆ ಸಲ್ಲಿಸಬೇಕು. ಜೀವಂತ ಪ್ರಮಾಣಪತ್ರವನ್ನು ಜಿಲ್ಲಾ ಖಜಾನೆ ಕಾರ್ಯಾಲಯ ಕೊಪ್ಪಳ ಹಾಗೂ ತಾವು ಪಿಂಚಣಿ ಪಡೆಯುವ ಸಂಬಂಧಪಟ್ಟ ಉಪ ಖಜಾನೆ ಅಧಿಕಾರಿಗಳಿಗೆ ಏ. ೨೬ ರ ಒಳಗಾಗಿ ಖುದ್ದಾಗಿ ಪಿಂಚಣಿದಾರರೆ ಸಲ್ಲಿಸಬೇಕು. ತಪ್ಪಿದಲ್ಲಿ ಏಪ್ರಿಲ್ ಹಾಗೂ ನಂತರದ ಪಿಂಚಣಿ ಪಾವತಿಯನ್ನು ತಡೆಹಿಡಿಯಲಾಗುವುದು ಎಂದು ಖಜಾನೆ ಇಲಾಖೆ ಉಪನಿರ್ದೇಶಕ ಸುರೇಶ್ ಹಳ್ಯಾಳ ಅವರು ತಿಳಿಸಿದ್ದಾರೆ.
ಯಲಬುರ್ಗಾ ಏ.೨೦ ರಂದು ಬಾಲಿಕಾ ಸಂಘಗಳ ಸಮಾವೇಶ.
ಕೊಪ್ಪಳ, ಏ.19- ಯುನಿಸೆಫ್, ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏ.೨೦ ರಂದು ಯಲಬುರ್ಗಾದ ಶಾದಿಮಹಲ್‌ನಲ್ಲಿ ತಾಲೂಕು ಮಟ್ಟದ ಬಾಲಿಕಾ ಸಂಘಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯಾದ್ಯಂತ ಪ್ರತಿ ಅಂಗನವಾಡಿ ವ್ಯಾಪ್ತಿಯಲ್ಲಿ ಬಾಲಿಕಾ (ಕಿಶೋರಿ ಸಂಘ) ರಚಿಸಿ ಅವರಿಗೆ ಜೀವನ ಕೌಶಲ್ಯ ನೀಡಲು ಪ್ರಯತ್ನಿಸಲಾಗುತ್ತಿದ್ದು, ಈಗಾಗಲೇ ೩೫,೦೦೦ ಹದಿಹರೆಯದ ಹೆಣ್ಣು ಮಕ್ಕಳು ಸದಸ್ಯರಾಗಿದ್ದಾರೆ. ಬಾಲಿಕಾ ಸಂಘಗಳ ಬಲವರ್ಧನೆಗೆ ತಾಲೂಕು ಮಟ್ಟದಲ್ಲಿ ಬಾಲಿಕಾ ಸಂಘಗಳ ಸಮಾವೇಶ ಆಯೋಜಿಸಲಾಗಿದೆ ಎಂದು ಯುನಿಸೆಫ್, ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಸಂಯೋಜಕರು ತಿಳಿಸಿದ್ದಾರೆ.

ನವೋದಯ ವಿದ್ಯಾಲಯ ಪ್ರವೇಶಪತ್ರ ಪಡೆಯಲು ಸೂಚನೆ.
ಕೊಪ್ಪಳ, ಏ.19- ಕುಕನೂರಿನ ಜವಾಹರ ನವೋದಯ ವಿದ್ಯಾಲಯದಿಂದ ೯ ನೇ ತರಗತಿ ಪ್ರವೇಶಕ್ಕಾಗಿ ಏ.೨೪ ರಂದು ಬೆಳಗ್ಗೆ ೧೦ ಗಂಟೆಗೆ ನಡೆಯಲಿರುವ ಪರೀಕ್ಷೆಗಾಗಿ ಪ್ರವೇಶ ಪತ್ರ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ/ಪಾಲಕರಿಗೆ ಸೂಚನೆ ನೀಡಲಾಗಿದೆ.
ಯಲಬುರ್ಗಾ ತಾಲೂಕಿನ ಕುಕನೂರಿನಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ ಏ.೨೪ ರಂದು ಬೆಳಗ್ಗೆ ೧೦ ಗಂಟೆಗೆ ನಡೆಯಲಿರುವ ಪರೀಕ್ಷೆಗೆ ಈಗಾಗಲೇ ಪ್ರವೇಶ ಪತ್ರಗಳನ್ನು ಸಂಬಂಧ ಪಟ್ಟ ವಿದ್ಯಾರ್ಥಿಗಳಿಗೆ/ಪಾಲಕರ ವಿಳಾಸಗಳಿಗೆ ಕಳುಹಿಸಲಾಗಿದ್ದು ಪ್ರವೇಶ ಪತ್ರ ತಲುಪದಿದ್ದಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿ/ ಪಾಲಕರು ವಿದ್ಯಾಲಯಕ್ಕೆ ಖುದ್ದಾಗಿ ಬಂದು ಪಡೆದುಕೊಳ್ಳಬಹುದು ಎಂದು ಜವಾಹರ ನವೋದಯ ವಿದ್ಯಾಲಯ ಪ್ರಾಚಾರ್ಯ ಬಿ.ಎನ್.ಟಿ. ರೆಡ್ಡಿ ತಿಳಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆಗಳಿಗೆ ಸ್ಪಂದಿಸಲು ಸಹಾಯವಾಣಿ ಪ್ರಾರಂಭ.
ಕೊಪ್ಪಳ ಏ. 19-  ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಲು ಅನುಕೂಲವಾಗುವಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದ್ದು, ಸಹಾಯವಾಣಿಯು ದಿನದ ೨೪ ಗಂಟೆಯೂ ಕಾರ್ಯ ನಿರ್ವಹಿಸಲಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತಲೆದೋರಿರುವುದರಿಂದ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆಗಳಿರುತ್ತದೆ. ಕುಡಿಯುವ ನೀರಿನ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ, ಸಮಸ್ಯೆ ಪರಿಹರಿಸಲು ಅನುಕೂಲವಾಗುವಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ. ಸಹಾಯವಾಣಿಯ ದೂರವಾಣಿ ಸಂಖ್ಯೆ ಇಂತಿದೆ. ೦೮೫೩೯-೨೨೧೬೯೦ ಮತ್ತು ೦೮೫೩೯-೨೨೫೦೦೨. ಸಹಾಯವಾಣಿ ಕೇಂದ್ರದಲ್ಲಿ ಸರದಿ ಆಧಾರದಲ್ಲಿ ಕಾರ್ಯ ನಿರ್ವಹಿಸಲು ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಜಿಲ್ಲೆಯ ಯಾವುದೇ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಕಂಡುಬಂದಲ್ಲಿ, ಮೇಲಿನ ಸಹಾಯವಾಣಿಗೆ ಕರೆ ಮಾಡಿ, ದೂರು ದಾಖಲಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ತಿಳಿಸಿದ್ದಾರೆ.

Please follow and like us:
error