ರೈತರು ಭೀಮಾ ಯೋಜನೆಯ ಸದುಪಯೋಗ ಪಡೆದುಕೊಳ್ಳಿ: ಎಂ.ಕನಗವಲ್ಲಿ

koppal-dc-ceo ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಿರುವುದರಿಂದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆ ರೈತರಿಗೆ ಅನುಕೂಲಕರವಾಗಲಿದೆ ಎಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಹೇಳಿದರು.
ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿದ್ದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆ ಹಾಗೂ ಕೃಷಿ ಅಭಿಯಾನ ಕುರಿತ ಸಭೆಯ ಅದ್ಯಕ್ಷತೆ ವಹಿಸಿ ಅವರು ಬುಧವಾರ ಮಾತನಾಡಿದರು.
ಕೇಂದ್ರ ಸರಕಾರ ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಮಂಜೂರಾತಿ ನೀಡಿದ್ದು, ರಾಜ್ಯದ ಆಯವ್ಯಯ ಭಾಷಣದಲ್ಲಿ ಮುಖ್ಯ ಮಂತ್ರಿಗಳು ಯೋಜನೆಯನ್ನು ’ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆ’ ಎಂದು ಅನುಷ್ಠಾನಗೊಳಿಸಲು ಘೋಷಿಸಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಅನುಷ್ಟಾನಗೊಳ್ಳಲಿದೆ.
ವಿಮಾ ಕಂತಿನ ದರದಲ್ಲಿ ಸರಕಾರ ನೀಡುವ ಸಹಾಯಧನದಲ್ಲಿ ಮೇಲ್ಮಟ್ಟದ ಮಿತಿ ಇರುವುದಿಲ್ಲ ಮತ್ತು ಬಾಕಿ ಉಳಿದ ವಿಮಾ ಕಂತಿನ ಮೊತ್ತವನ್ನು ಸರಕಾರವೇ ಭರಿಸುವುದು. ರೈತರು ಪೂರ್ಣ ವಿಮಾ ಮೊತ್ತವನ್ನು ಯಾವುದೇ ಕಡಿತವಿಲ್ಲದೆ ಪಡೆಯಬಹುದಾಗಿದೆ. ಮೊಬೈಲ್ ಆಧಾರಿತ ತಂತ್ರಜ್ಞಾನದಿಂದ ಜಿಪಿಎಸ್ ಮೂಲಕ ವಾಸ್ತವಿಕ ಇಳುವರಿಯನ್ನು ಕಂಡುಹಿಡಿಯಲಾಗುವುದು.
ಯೋಜನೆಯಡಿ ಅತೀವೃಷ್ಟಿ, ಅನಾವೃಷ್ಟಿ ಹಾನಿಗಳಿಗೆ ಅಲ್ಲದೇ ಬೆಂಕಿ, ಸಿಡಿಲು, ಬಿರುಗಾಳಿ, ಸುಂಟರಗಾಳಿ, ಆಲಿಕಲ್ಲು ಮಳೆ, ಪ್ರವಾಹ ಹವಾಮಾನ ವೈಪರೀತ್ಯ ಸೇರಿದಂತೆ ಬೆಳೆಗಳಿಗೆ ರೋಗ ಮತ್ತು ಕೀಟಗಳ ಹಾವಳಿ ಇತ್ಯಾದಿ ತೊಂದರೆಗಳಿಗೆ ವಿಮಾ ಯೋಜನೆಯಲ್ಲಿ ಪರಿಹಾರಕ್ಕೆ ಅವಕಾಶವಿರುತ್ತದೆ. ವಿಮೆ ಮಾಡಿಸಿಕೊಂಡ ರೈತ ಹವಾಮಾನದ ವೈಪರೀತ್ಯದಿಂದ ಬಿತ್ತಲು ಅಥವಾ ನಾಟಿ ಮಾಡಲು ಸಾದ್ಯವಾಗದಿದ್ದಲ್ಲಿ ಅಥವಾ ಬಿತ್ತಿ ನಾಟಿ ಮಾಡಿ ವಿಫಲವಾದಲ್ಲಿ ಭರವಸೆ ಮೊತ್ತದ ಶೇ.೨೫ ರಷ್ಟು ಕೋರಿಕೆ ರೂಪದಲ್ಲಿ ಪಡೆಯಬಹುದಾಗಿದೆ. ಕೋಯ್ಲು ನಂತರ ತಂದು ಇರಿಸಿದ ಫಸಲು ನಾಶವಾದಲ್ಲಿ ೧೪ ದಿನದೊಳಗಾಗಿ ವಿಮೆ ವ್ಯಾಪ್ತಿ ಒದಗಿಸಲಾಗುತ್ತದೆ.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆ ಕುರಿತು ಜಿಲ್ಲೆಯ ರೈತರಿಗೆ ಸೂಕ್ತ ಮಾಹಿತಿಯನ್ನು ನೀಡಿ ವಿಮೆ ಮಾಡಿಸುವಂತೆ ತಿಳಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಅಭಿಯಾನದ ಮೂಲಕ ಸಂಬಂಧಿಸಿದ ಅಧಿಕಾರಿಗಳು ಕೃಷಿಯನ್ನು ಹೆಚ್ಚು ಲಾಭದಾಯಕವಾಗಿ ಮಾಡಲು ಮತ್ತು ತೋಟಗಾರಿಕೆ ಯೊಂದಿಗೆ ಪೂರಕವಾಗಿ ಪಶು ಸಂಗೋಪನೆ, ರೇಷ್ಮೆ ಕೃಷಿ, ಮೀನುಗಾರಿಕೆ ಮುಂತಾದ ಕಸುಬುಗಳನ್ನು ಮಾಡಲು ರೈತರಿಗೆ ತಿಳಿಸಬೇಕು ಎಂದು ಹೇಳಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಭಟ್, ಕೃಷಿ ವಿಸ್ತರಣಾ ಕೆಂದ್ರದ ಎಂ.ಬಿ.ಪಾಟೀಲ್, ತೋಟಗಾರಿಕೆ ಉಪನಿರ್ದೇಶಕ ನಜೀರ್ ಅಹ್ಮದ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸೂರ್ಯಪ್ರಕಾಶ, ತಹಶೀಲ್ದಾರರು, ಅಂಕಿ ಸಂಖ್ಯೆ ಅಧಿಕಾರಿ, ಸಹಾಯಕ ಕೃಷಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Leave a Reply