ರೈತರಿಗೆ ಒದಗಿಸಬೇಕಾದ ಸೌಲಭ್ಯವನ್ನು ಬ್ಯಾಂಕ್‌ಗಳು ನಿರಾಕರಿಸುವಂತಿಲ್ಲ : ಆರ್. ರಾಮಚಂದ್ರನ್

koppal-banks ಬೆಳೆ ಸಾಲ ಸೇರಿದಂತೆ ಹಲವು ಯೋಜನೆಗಳಡಿ ರೈತರಿಗೆ ಒದಗಿಸಬೇಕಾದ ಸೌಲಭ್ಯಗಳನ್ನು, ಬ್ಯಾಂಕ್‌ಗಳು ಕ್ಷುಲ್ಲಕ ಕಾರಣಗಳನ್ನು ನೀಡಿ, ನಿರಾಕರಿಸಬಾರದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸಾಲಕ್ಕಾಗಿ ರೈತರು ಮತ್ತು ಅರ್ಹ ಫಲಾನುಭವಿಗಳಿಂದ ಸಲ್ಲಿಕೆಯಾದ ಅರ್ಜಿಗಳ ಸ್ಥಿತಿಗತಿ ಕುರಿತು ಶುಕ್ರವಾರದಂದು ಏರ್ಪಡಿಸಲಾಗಿದ್ದ ಬ್ಯಾಂಕರ್‌ಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬೆಳೆ ಸಾಲಕ್ಕಾಗಿ ರೈತರ ಅರ್ಜಿಗಳು ಮತ್ತು ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳ ಅರ್ಜಿಗಳ ಸ್ಥಿತಿ-ಗತಿ ಕುರಿತಂತೆ ಕೊಪ್ಪಳ ಜಿಲ್ಲೆಗೆ ಲೀಡ್ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಹೈದ್ರಾಬಾದ್‌ನ ವ್ಯವಸ್ಥಾಪಕ ಸೂರ್ಯಪ್ರಕಾಶ್ ಅವರು, ರೈತರಿಂದ ಬಂದಿರುವ ಸಾಲ ಬೇಡಿಕೆ ಅರ್ಜಿಗಳು, ಇತ್ಯರ್ಥವಾಗಿರುವ ಹಾಗೂ ಬಾಕಿ ಉಳಿದಿರುವ ಅರ್ಜಿಗಳ ಸಂಖ್ಯೆ ವಿವರ ನೀಡಿದರು. ಅಲ್ಲದೆ ಬ್ಯಾಂಕ್‌ನ ನಿಯಂತ್ರಕರ (ಕಂಟ್ರೋಲರ್) ನಿಲುವಿನಿಂದಾಗಿ ಕೆಲ ಅರ್ಜಿಗಳು ಇನ್ನೂ ಇತ್ಯರ್ಥವಾಗಿಲ್ಲ ಎಂಬುದಾಗಿ, ಸಭೆಯ ಪ್ರಾರಂಭದಲ್ಲಿ ಮಾಹಿತಿ ನೀಡಿದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಅವರು, ಬೆಳೆ ಸಾಲ ಸೇರಿದಂತೆ ರೈತರಿಗೆ ವಿವಿಧ ಯೋಜನೆಯಡಿ ಒದಗಿಸಬೇಕಾದ ಸಾಲ ಸೌಲಭ್ಯಗಳನ್ನು ಬ್ಯಾಂಕ್‌ಗಳು ನಿರಾಕರಿಸುವಂತಿಲ್ಲ. ಬೆಳೆಸಾಲ ಸೇರಿದಂತೆ ಸರಕಾರದ ಹಲವು ಯೋಜನೆಗಳಡಿ ಬ್ಯಾಂಕ್‌ಗಳಿಗೆ ಸಲ್ಲಿಕೆಯಾಗುವ ಸಾಲ ಬೇಡಿಕೆ ಅರ್ಜಿಗಳನ್ನು ಕ್ಷುಲ್ಲಕ ಕಾರಣ ನೀಡಿ ತಿರಸ್ಕರಿಸಬಾರದು. ಈ ಕುರಿತು ಇಲಾಖೆಗಳ ಅಧಿಕಾರಿಗಳು ಬ್ಯಾಂಕ್‌ನೊಂದಿಗೆ ಸಂಪರ್ಕ ಹೊಂದಿ, ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಎಸ್‌ಬಿಎಚ್ ಬ್ಯಾಂಕ್‌ನ ವ್ಯವಸ್ಥಾಪಕ ಮಾತನಾಡಿ, ವಿವಿಧ ಯೋಜನೆಗಳಿಗೆ ಬ್ಯಾಂಕಿನಿಂದ ಒದಗಿಸಿರುವ ಸಾಲದ ವಿವರ ನೀಡಿ, ಸರಕಾರದ ಯೋಜನೆಗಳ ಜಾರಿಗೆ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳುತ್ತಿರುವುದಾಗಿ ಸ್ಪಷ್ಟಪಡಿಸಿದರು. ಕಾರಣಾಂತರಗಳಿಂದ ವಿಲೇವಾರಿಯಾಗದಿರುವ ಅರ್ಜಿಗಳನ್ನು ಶೀಘ್ರವೇ ಪರಿಹರಿಸಲಾಗುವುದು ಎಂಬುದಾಗಿ ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಮುಂದಿನ ಸಭೆಯೊಳಗೆ ಈ ಎಲ್ಲ ಬಾಕಿ ಅರ್ಜಿಗಳ ಇತ್ಯರ್ಥವಾಗಬೇಕು. ಪ್ರಗತಿ ವಿವರಗಳೊಂದಿಗೆ ಸಭೆಗೆ ಹಾಜರಾಗುವಂತೆ ಸೂಚಿಸಿದರು.
ಕಳೆದ ೨೦೧೫-೧೬ನೇ ಆರ್ಥಿಕ ವರ್ಷದಲ್ಲಿ ಕೃಷಿ ಕ್ಷೇತ್ರಕ್ಕೆ ಜಿಲ್ಲೆಗೆ ೯೫೧ ಕೋಟಿ ರೂ. ಸಾಲದ ಗುರಿ ಹೊಂದಲಾಗಿತ್ತು. ಇದರಲ್ಲಿ ೮೭೬.೫೯ ಕೋಟಿ ರೂ. ಸಾಲ ಒದಗಿಸುವ ಮೂಲಕ ಶೇ.೯೨ ಪ್ರಗತಿ ಸಾಧಿಸಲಾಗಿದೆ. ಕೃಷಿಯೇತರ ಕ್ಷೇತ್ರಕ್ಕೆ ೧೮೩ ಕೋಟಿ ರೂ. ಸಾಲ ನೀಡುವ ಗುರಿಯ ಬದಲಿಗೆ, ೧೪೮.೮೦ ಕೋಟಿ ರೂ. ಸಾಲ ಒದಗಿಸಿ ಶೇ.೮೧ ಪ್ರಗತಿ ಸಾಧಿಸಲಾಗಿದೆ. ಇತರ ಆದ್ಯತಾ ವಲಯಗಳಿಗೆ (ಒಪಿಎಸ್) ೩೩೪ ಕೋಟಿ ರೂ. ಗುರಿ ನಿಗದಿ ಪಡಿಸಲಾಗಿತ್ತು. ಇದರಲ್ಲಿ ೨೮೭.೭೭ ಕೋಟಿ ರೂ. ಸಾಲ ಒದಗಿಸಿ ಶೇ.೮೬ ಪ್ರಗತಿ ಸಾಧಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಶೇ.೮೯ ಸಾಲ ನೀಡಿಕೆ ಗುರಿಯನ್ನು ಎಸ್‌ಬಿಎಚ್ ಸಾಧಿಸಿದೆ ಎಂದು ಎಸ್‌ಬಿಹೆಚ್ ಬ್ಯಾಂಕ್ ವ್ಯವಸ್ಥಾಪಕರು ವಿವರಿಸಿದರು.
ಜಿಲ್ಲೆಯ ಹಲವು ಪ್ರಮುಖ ಬ್ಯಾಂಕ್‌ಗಳಿಂದ ಕೃಷಿ ಕ್ಷೇತ್ರಕ್ಕೆ ಶೇ.೬೩ರಷ್ಟು ಸಾಲ ಒದಗಿಸಲಾಗಿದೆ. ಈ ಪೈಕಿ ಸಿಂಡಿಕೇಟ್ ಬ್ಯಾಂಕ್ ಶೇ.೮೯, ಎಸ್‌ಬಿಎಚ್ ಶೇ.೭೦, ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಶೇ.೬೮, ಎಸ್‌ಬಿಐ ಶೇ.೫೬, ಕೆನರಾ ಬ್ಯಾಂಕ್ ಹಾಗೂ ಎಸ್‌ಬಿಎಂ ಶೇ.೫೪, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಶೇ.೩೭ ಹಾಗೂ ಕೊಟಕ್ ಮಹೀಂದ್ರಾ ಬ್ಯಾಂಕ್ ಶೇ.೯ರಷ್ಟು ಸಾಲ ಒದಗಿಸಿದೆ ಎಂದು ಲೀಡ್ ಬ್ಯಾಂಕ್ ಪ್ರತಿನಿಧಿಗಳು ಸಭೆಗೆ ವಿವರ ನೀಡಿದರು.

Please follow and like us:
error