ಯುವ ಸಂಸತ್ ಸ್ಪರ್ಧೆ : ಕಲಾಪದಲ್ಲಿ ಸದ್ದು ಮಾಡಿದ ಮಹಿಳಾ ಮತ್ತು ಮಕ್ಕಳ ಕಳ್ಳ ಸಾಗಣೆ

ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರ ತಡೆಗೆ ಸರ್ಕಾರ ಯಾವುದೇ ಸಮರ್ಪಕ ಕಾರ್ಯ ಕೈಗೊಳ್ಳದಿರುವುದಕ್ಕೆ ವಿಧಾನಮಂಡಲ ಕಲಾಪದಲ್ಲಿ ವಿರೋಧ ಪಕ್ಷದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದು, ನಿಜವಾಗಿಯೂ ವಿಧಾನಮಂಡಲ ಕಲಾಪದಲ್ಲಿ ಜರುಗಿದ ಘಟನೆಯಲ್ಲ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕೊಪ್ಪಳ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಮಂಗಳವಾರದಂದು ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಕಂಡುಬಂದ ದೃಶ್ಯ.
ಜಿಲ್ಲೆಯ ವಿವಿಧ ತಾಲೂಕುಗಳ ಪ್ರೌಢಶಾಲಾ ವಿದ್ಯಾರ್ಥಿಗಳು, ಅತ್ಯಂತ ಆಸಕ್ತಿಯಿಂದ ಯುವ ಸಂಸತ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯ ತೀರ್ಪುಗಾರರ ಸಮಿತಿ ಸದಸ್ಯರಾಗಿ ಭಾಗವಹಿಸಿದ್ದ ಅಧಿಕಾರಿಗಳು ವಿಧಾನಮಂಡಲ ಕಲಾಪವನ್ನು ಆಯೋಜಿಸಿ, ಶಿಸ್ತು ಬದ್ಧವಾಗಿ ಕಲಾಪ ನಡೆಸುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದರು. ಕಲಾಪದಲ್ಲಿ ಸಭಾಧ್ಯಕ್ಷರು, ಮುಖ್ಯಮಂತ್ರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ, ಸಾರಿಗೆ, ಆರೋಗ್ಯ ಹೀಗೆ ಹಲವು ಸಚಿವ ಸ್ಥಾನದ ಖಾತೆಗಳನ್ನು ವಿದ್ಯಾರ್ಥಿಗಳು ಸಮರ್ಥವಾಗಿ ನಿರ್ವಹಿಸಿದರು. ಯುವ ಸಂಸತ್ ಸ್ಪರ್ಧೆಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಹಾಗೂ ರಾಜ್ಯ ಸಹಕಾರ ಸಚಿವ ಹೆಚ್.ಎಸ್. ಮಹದೇವಪ್ರಸಾದ್ ಅವರ ನಿಧನಕ್ಕೆ ಸಂತಾಪ ಸೂಚಿಸುವ ಕಾರ್ಯಸೂಚಿಯಂತೆ ಕಲಾಪ ಆರಂಭಗೊಂಡು, ಎಲ್ಲರೂ ಎರಡು ನಿಮಿಷ ಮೌನ ಆಚರಿಸುವ ಮೂಲಕ ದಿವಂಗತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ನಂತರ ಆರಂಭಗೊಂಡ ಪ್ರಶ್ನೋತ್ತರ ಕಲಾಪ, ರಾಜಕೀಯ ಮುತ್ಸದ್ದಿಗಳನ್ನೂ ನಾಚಿಸುವಂತಿತ್ತು. ಮಹಿಳೆಯರು ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಅವ್ಯಾಹತವಾಗಿ ಜರುಗುತಿದ್ದು, ಇದರ ನಿಯಂತ್ರಣಕ್ಕೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಪ್ರಸ್ತಾಪಿಸಿ, ಸರ್ಕಾರಕ್ಕೆ ಪೇಚಿಗೆ ಸಿಲುಕಿಸಿದರು. ಇದಕ್ಕೆ ಉತ್ತರಿಸಿದ ಆಡಳಿತ ಪಕ್ಷದ ಗೃಹ ಸಚಿವರು, ಯಾವ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆಯೊ ಅಂತಹ ಜಿಲ್ಲೆಗಳಲ್ಲಿ ಕಳ್ಳ ಸಾಗಾಣಿಕೆ ತಡೆಗೆ, ೯ ಜಿಲ್ಲೆಗಳಲ್ಲಿ ನಿಷೇಧ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ಸದಸ್ಯರು, ಹಾಗಾದರೆ ಉಳಿದ ಜಿಲ್ಲೆಗಳಲ್ಲಿ ಕಳ್ಳ ಸಾಗಾಣಿಕೆ ನಿರಾತಂಕವಾಗಿ ನಡೆಯಬೇಕೆ ಎಂಬುದಾಗಿ ತೀಕ್ಷ್ಣವಾಗಿ ಪ್ರಶ್ನಿಸಿದರು.
ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಪಡಿತರ ಚೀಟಿಗೆ ಆಧಾರ್ ಜೋಡಣೆ, ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌಜ್ಯನ್ಯ ಪ್ರಕರಣಗಳು, ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ, ಬಾಲಕಾರ್ಮಿಕ ಪದ್ಧತಿ, ಮದ್ಯಪಾನ ಮಾಡಿ ಶಾಲಾ ಬಸ್ ಓಡಿಸುವ ವಾಹನ ಚಾಲಕರ ನಿಯಂತ್ರಣ, ಬಾಲಕಿಯರ ವಸತಿ ನಿಲಯಗಳಲ್ಲಿ ಸಿಸಿ ಟಿ.ವಿ. ಕ್ಯಾಮೆರಾ, ಕಾವಲುಗಾರರ ನೇಮಕ ಮುಂತಾದ ವಿಷಯಗಳ ಬಗ್ಗೆ ವಿರೋಧ ಪಕ್ಷ ವಹಿಸಿದ್ದ ವಿದ್ಯಾರ್ಥಿ ಸಮೂಹ ಆಡಳಿತ ಪಕ್ಷದ ವಿದ್ಯಾರ್ಥಿ ಸಮೂಹವನ್ನು ಪೇಚಿಗೆ ಸಿಲುಕಿಸಿ, ನಂತರ ಸಭಾಧ್ಯಕ್ಷರ ಮಧ್ಯಸ್ಥಿಕೆಯಲ್ಲಿ ಆಡಳಿತ ಪಕ್ಷದ ಉತ್ತರಕ್ಕೆ ತೃಪ್ತಿ ಪಡುವಂತಹ ಪ್ರಸಂಗಗಳು ಯುವ ಸಂಸತ್ ಸ್ಪರ್ಧೆಯಲ್ಲಿ ಪ್ರಶಂಸೆಗೆ ಪಾತ್ರವಾಯಿತು. ಸರ್ಕಾರ ಜನರ ನಂಬಿಕೆ ಮತ್ತು ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸಬೇಕು ಎನ್ನುವ ನೀತಿ ಯುವ ಸಂಸತ್ ಸ್ಪರ್ಧೆಯಲ್ಲಿ ಬಿಂಬಿತವಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ಯಾಮಸುಂದರ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್, ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ ಗೌಡರ ಉಪಸ್ಥಿತರಿದ್ದರು, ಅಕ್ಷರ ದಾಸೋಹ ವಿಭಾಗದ ಅಧಿಕಾರಿ ಪರಸಪ್ಪ ಭಜಂತ್ರಿ, ಹೊಸಬಂಡಿಹರ್ಲಾಪುರ ಪ.ಪೂ. ಕಾಲೇಜಿನ ಉಪನ್ಯಾಸಕ ಗುರುಬಸವರಾಜ್ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದರು.

Leave a Reply