ಯಶಸ್ವಿನಿ ಯೋಜನೆ : ಜುಲೈ ೩೧ ರವರೆಗೆ ಅವಧಿ ವಿಸ್ತರಣೆ

yashaswini-scheme-renewelಸಹಕಾರಿಗಳ ಆರೋಗ್ಯ ರಕ್ಷಣೆಗಾಗಿ ಜಾರಿಗೊಂಡಿರುವ ಯಶಸ್ವಿನಿ ಯೋಜನೆಯಡಿ ಹೆಸರು ನೋಂದಾಯಿಸಲು ಹಾಗೂ ೨೦೧೬-೧೭ ನೇ ಸಾಲಿಗೆ ನವೀಕರಿಸಿಕೊಳ್ಳಲು ಕೊನೆ ದಿನಾಂಕವನ್ನು ಜುಲೈ ೩೧ ರವರೆಗೆ ವಿಸ್ತರಿಸಲಾಗಿದೆ.
ಯಶಸ್ವಿನಿ ಯೋಜನೆಯು ಸಹಕಾರಿಗಳ ಆರೋಗ್ಯ ರಕ್ಷಣೆಗಾಗಿ ಸ್ವಯಂ ನಿಧಿ ಶಸ್ತ್ರಚಿಕಿತ್ಸಾ ಯೋಜನೆಯಾಗಿದ್ದು, ಪ್ರಸಕ್ತ ಸಾಲಿಗೆ ಹೆಸರು ನೋಂದಾಯಿಸಲು ಹಾಗೂ ನವೀಕರಿಸಿಕೊಳ್ಳಲು ಮೇ. ೩೧ ಕೊನೆಯ ದಿನವಾಗಿತ್ತು. ಇದೀಗ ಸರ್ಕಾರ ಈ ಅವಧಿಯನ್ನು ಜುಲೈ ೩೧ ರವರೆಗೆ ವಿಸ್ತರಿಸಿದೆ. ಗ್ರಾಮೀಣ ಸಹಕಾರ ಸಂಘಗಳಲ್ಲಿನ ಸದಸ್ಯರುಗಳು ವಾರ್ಷಿಕ ವಂತಿಗೆ ರೂ. ೩೦೦ ಗಳನ್ನು ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸದಸ್ಯರಿದ್ದಲ್ಲಿ ೫೦ ರೂ. ಗಳನ್ನು ಸಂಘಕ್ಕೆ ಪಾವತಿಸಿ ನೋಂದಾಯಿಸಬಹುದು ಹಾಗೂ ನವೀಕರಿಸಿಕೊಳ್ಳಬಹುದು.
ನಗರ ಸಹಕಾರಿಗಳ ಆರೋಗ್ಯ ರಕ್ಷಣೆಗಾಗಿಯೂ ಯಶಸ್ವಿನಿ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿ ನಗರ ಸಹಕಾರಿಗಳು ವಾರ್ಷಿಕ ವಂತಿಗೆ ರೂ. ೭೧೦ ರಂತೆ ಪ್ರಧಾನ ಅರ್ಜಿದಾರರು ಮತ್ತು ಅವರ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಕಡ್ಡಾಯವಾಗಿ ಪಾವತಿ ಮಾಡಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸದಸ್ಯರು ರೂ. ೧೧೦ ರಂತೆ ವಂತಿಗೆ ಪಾವತಿಸಬೇಕು.
ಯಶಸ್ವಿನಿ ಯೋಜನೆಯಡಿ ಸದಸ್ಯರಾಗಲು ಸಹಕಾರ ಸಂಘಗಳಲ್ಲಿ ಸದಸ್ಯರಾಗಿ ಯಶಸ್ವಿನಿ ಯೋಜನೆಗೆ ನೋಂದಾಯಿಸುವ ದಿನಾಂಕಕ್ಕೆ ಕನಿಷ್ಟ ೩ ತಿಂಗಳು ಕಳೆದಿರಬೇಕು. ಇದರಲ್ಲಿ ವಯೋಮಿತಿಯ ನಿರ್ಬಂಧ ಇರುವುದಿಲ್ಲ. ಒಂದೇ ಕುಟುಂಬದಲ್ಲಿ ಐವರು ಅಥವಾ ಅದಕ್ಕಿಂತ ಹೆಚ್ಚಿಗೆ ಕುಟುಂಬ ಸದಸ್ಯರನ್ನು ಯಶಸ್ವಿನಿ ಸದಸ್ಯರನ್ನಾಗಿ ನೋಂದಾಯಿಸಿದಲ್ಲಿ ಅವರು ಪಾವತಿಸಬೇಕಾದ ವಂತಿಗೆ ಹಣದಲ್ಲಿ ಶೇ. ೧೫ ರಷ್ಟು ರಿಯಾಯಿತಿ ಪಡೆಯಲು ಅರ್ಹರಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ, ಕೊಪ್ಪಳ- ೦೮೫೩೯-೨೨೧೧೦೯, ಸಹಾಯಕ ನಿಬಂಧಕರ ಕಚೇರಿ, ಕೊಪ್ಪಳ- ೦೮೫೩೯-೨೨೧೬೦೧ ಕ್ಕೆ ಸಂಪರ್ಕಿಸಬಹುದು ಎಂದು ಸಹಕಾರ ಸಂಘಗಳ ಉಪನಿಬಂಧಕ ಡಾ. ಜಿ. ಉಮೇಶ್  ತಿಳಿಸಿದ್ದಾರೆ.

Please follow and like us:
error