ಮೌನೇಶ್ವರ ಅಧ್ಯಯನ ಪೀಠ ಪ್ರಾರಂಭಿಸಲಿ : ಪಿ.ಬಿ.ಬಡಿಗೇರ

mouneshawar
ಕೊಪ್ಪಳ ಡಿ.೧೩: ರಾಜ್ಯ ಸರ್ಕಾರ ಮೌನೇಶ್ವರರ ಅಧ್ಯಯನ ಪೀಠ ಹಾಗೂ ವಿಶ್ವಕರ್ಮ ವಿಶ್ವ ವಿದ್ಯಾಲಯ ಪ್ರಾರಂಭಿಸಲಿ ಎಂದು ಸಿರಸಂಗಿಯ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷ ಪ್ರೋ.ಪಿ.ಬಿ ಬಡಿಗೇರ ಒತ್ತಾಯ ಮಾಡಿದರು.
ಅವರು ನಗರದ ಸಿರಸಪ್ಪಯ್ಯನ ಮಠದ ಆವರಣದಲ್ಲಿ ಮಂಗಳವಾರ ಜರುಗಿದ ೨೪ನೇ ವರ್ಷದ ಮೌನೇಶ್ವರರ ಜಯಂತ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಮೌನೇಶ್ವರರ ಅಧ್ಯಯನ ಪೀಠ ಪ್ರಾರಂಭಿಸುವಂತೆ ತಮ್ಮ ಸಂಸ್ಥೆಯಿಂದ ಈಗಾಗಲೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರ ತಮ್ಮ ಬೇಡಿಕೆಗೆ ಸ್ಪಂದನೆ ಮಾಡಬೇಕು. ಜೊತೆಗೆ ವಿಶ್ವ ವಿದ್ಯಾಲಯ ಪ್ರಾರಂಭಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ನಾವೆಲ್ಲ ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಸಬಲರಾದಾಗ ತಮ್ಮ ಬೇಡಿಕೆಗಳು ಈಡೇರಲು ಸಾಧ್ಯ. ನಾವು ಮೊಟ್ಟ ಮೊದಲಿಗೆ ರಾಜಕೀಯವಾಗಿ ಜಾಗೃತರಾಗಬೇಕಿದೆ. ಇಂತಹ ಕಾರ್ಯಕ್ರಮಗಳಿಗೆ ರಾಜಕೀಯ ಮುಖಂಡರು ಬರುವಂತೆ ಮಾಡಲು ನಮ್ಮಲ್ಲಿನ ಸಂಘಟನೆ, ಒಗ್ಗಟ್ಟಿನ ಶಕ್ತಿ ತೋರಿಸಬೇಕಿದೆ. ಲಿಂಗಾಯತ, ಒಕ್ಕಲಿಗ ಸಮುದಾಯಕ್ಕಿಂತಲೂ ವಿಶ್ವಕರ್ಮ ಸಮುದಾಯ ಜ್ಞಾನದಲ್ಲಿ ಮುಂದಿದೆ. ಅವರಿಂತಲೂ ನಾವು ಪ್ರಬಲರು ಎನ್ನುದನ್ನು ತೋರಿಸುವ ಅವಶ್ಯಕತೆಯಿದ್ದು, ಸಮುದಾಯದ ವಿದ್ಯಾರ್ಥಿಗಳಿಗೆ ಸುಶಿಕ್ಷಿತ ಶಿಕ್ಷಣ ಕೊಡಿಸಬೇಕು ಎಂದು ಸಮಾಜದ ಮುಖಂಡರಲ್ಲಿ ಮನವಿ ಮಾಡಿದರು.
ವಿಶ್ವಕರ್ಮ ಮಹಾ ಮಂಡಳದ ರಾಜ್ಯಾಧ್ಯಕ್ಷ ಎಲ್.ನಾಗರಾಜ ಆಚಾರ್ ಮಾತನಾಡಿ, ಪ್ರಸ್ತುತ ೨೪ನೇ ವರ್ಷದ ಮೌನೇಶ್ವರರ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಮುಂದಿನ ವರ್ಷ ೨೫ನೇ ವರ್ಷದ ಬೆಳ್ಳಿ ಮಹೋತ್ಸವ ಆಚರಿಸಬೇಕಿದೆ. ಅದಕ್ಕೆ ನಾವೆಲ್ಲರೂ ಈಗಿನಿಂದಲೇ ಸನ್ನದ್ಧರಾಗಬೇಕಿದೆ. ಬೆಳ್ಳಿ ಮಹೋತ್ಸವದಲ್ಲಿ ೫೦ ಸಾವಿರ ಜನರು ಸೇರುವ ಮೂಲಕ ಶಕ್ತಿ ಸಂಗಮವನ್ನು ರಾಜ್ಯಕ್ಕೆ ತೋರಿಸಬೇಕಿದೆ ಎಂದರು.
ನಾವೆಲ್ಲರು ಜಾತ್ರೆ ಸಂದರ್ಭದಲ್ಲಿ ಮಾತ್ರ ಸೇರುತ್ತಿದ್ದೇವೆ. ಮುಂದಿನ ದಿನದಲ್ಲಿ ಒಂದು ವಿಷಯದ ಬೇಡಿಕೆಯಿಟ್ಟು ಸಮಾವೇಶ ನಡೆಸಬೇಕು. ಸರ್ಕಾರದ ಗಮನ ನಮ್ಮತ್ತ ಸೆಳೆಯುವಲ್ಲಿ ಎಲ್ಲರೂ ಪ್ರಯತ್ನಿಸಬೇಕು. ಸಮಾಜದ ಪ್ರತಿಯೊಬ್ಬ ಮುಖಂಡರು ವೈಮನಸ್ಸು ಬಿಟ್ಟು ಒಗ್ಗಟ್ಟು ತೋರಬೇಕು ಎಂದು ಮನವಿ ಮಾಡಿದರು.
ಸಾಹಿತಿ ಮಳಿಯಪ್ಪ ಪತ್ತಾರ, ಜಿಪಂ ಮಾಜಿ ಅಧ್ಯಕ್ಷ ಎಚ್.ಎಲ್.ಹಿರೇಗೌಡ್ರ ಮಾತನಾಡಿದರು.
ಸಮಾರಂಭದಲ್ಲಿ ಕೊಪ್ಪಳದ ಸಿರಸಪ್ಪಯ್ಯ ಸ್ವಾಮಿಗಳು, ಗಿಣಗೇರಿ ದೇವಂದ್ರ ಸ್ವಾಮಿಗಳು, ಲೆಕ್ಕಿಹಾಳ ಶಾಖಾ ಮಠದ ಸಿರಸಪ್ಪಯ್ಯ ಸ್ವಾಮಿಗಳು, ಹರ್ಲಾಪುರದ ಮುತ್ತಪ್ಪಜ್ಜನವರು, ಗಿಣಗೇರಿಯ ಸುಬ್ಬಣ್ಣಾಚಾರ್ಯ, ಮುದ್ದಾಬಳ್ಳಿಯ ಗುರುನಾಥ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಮುಖಂಡರಾದ ವೆಂಕನಗೌಡ ಹಿರೇಗೌಡ್ರ, ಪಿ.ವಿಶ್ವನಾಥ, ಲಕ್ಷ್ಮೇಶ ಬಡಿಗೇರ, ಅಯ್ಯಪ್ಪ ಪತ್ತಾರ, ಶಶಿಕಲಾ ಕಮ್ಮಾರ, ಶೇಖರಪ್ಪ ಬಡಿಗೇರ, ಬೊಮ್ಮಣ್ಣ ಅರ್ಕಸಾಲಿ, ಮಂಜುನಾಥ ಬನ್ನಿಕೊಪ್ಪ, ರುದ್ರಪ್ಪ ಬಡಿಗೇರ, ಪ್ರಕಾಶ ಬಡಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮೌನೇಶ್ವರರ ಬೆಳ್ಳಿ ಮೂರ್ತಿ ಮೆರವಣಿಗೆ
ಕೊಪ್ಪಳ: ಮೌನೇಶ್ವರರ ೨೪ನೇ ವರ್ಷದ ಜಯಂತ್ಯೋತ್ಸವದ ಆಚರಣೆ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಗೋವಿಂದರಾಯ ದೇವಸ್ಥಾನದಿಂದ ಸಿರಸಪ್ಪಯ್ಯ ಸ್ವಾಮಿಗಳ ಮಠದ ವರೆಗೂ ಮೌನೇಶ್ವರರ ಬೆಳ್ಳಿ ಮೂರ್ತಿಯನ್ನು ಅಂಬಾರಿ ಮೇಲೆ ಅದ್ಧೂರಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯ ಉದ್ದಕ್ಕೂ ಮಹಿಳೆಯರು ಕುಂಬ ಹೊತ್ತು ಸಾಗಿದರು. ವಿವಿಧ ವಾಧ್ಯ-ಮೇಳದೊಂದಿಗೆ ಮೆರವಣಿಗೆ ಸಾಂಘವಾಗಿ ಸಾಗಿತು.

Please follow and like us:
error