ಮೊಬೈಲ್ ಕಳೆದುಕೊಂಡ ವ್ಯಕ್ತಿ ಇನ್ಸುರೆನ್ಸ್ ದುಡ್ಡನ್ನು ವಾಪಸ್ ಪಡೆದಿದ್ದು ಹೇಗೆ ?

mobile-insurance-claimಮೊಬೈಲ್‌ನ ಮೊತ್ತ ಪಾವತಿಸಲು ಗ್ರಾಹಕರ ವೇದಿಕೆ ಆದೇಶ
ಮೊಬೈಲ್ ಕಳುವಾದ ನಂತರ, ವಿಮಾ ಕಂಪನೆಯೊಂದಿಗೆ ಸಕಾಲದಲ್ಲಿ ವ್ಯವಹರಿಸದೆ ಸೇವಾ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಮೊಬೈಲ್‌ನ ಮೊತ್ತ, ಸೇವಾ ನ್ಯೂನತೆ ಹಾಗೂ ಅನುಚಿತ ವ್ಯಾಪಾರಕ್ಕಾಗಿ ಪರಿಹಾರ ಅಲ್ಲದೆ ಮಾನಸಿಕ ತೊಂದರೆಗೆ ಪರಿಹಾರ ಪಾವತಿಸುವಂತೆ ಕೊಪ್ಪಳದ ಸಂಗೀತಾ ಮೊಬೈಲ್ ಪ್ರೈ.ಲಿ. ನವರಿಗೆ ಕೊಪ್ಪಳದ ಗ್ರಾಹಕರ ವೇದಿಕೆ ಆದೇಶ ನೀಡಿದೆ.
ಕೊಪ್ಪಳದ ಚನ್ನಬಸವರಾಜ ಕುದರಿಮೋತಿ ಅವರು, ೨೦೧೪ ರ ಜನವರಿ ೧೭ ರಂದು ನಗರದ ಬಸ್‌ಸ್ಟ್ಯಾಂಡ್ ಬಳಿಯ ಸಂಗೀತಾ ಮೊಬೈಲ್ ಪ್ರೈ.ಲಿ. ಅಂಗಡಿಯಲ್ಲಿ ಸೋನಿ ಎಕ್ಸ್ಪೀರಿಯಾ ಮೊಬೈಲ್ ಅನ್ನು ಖರೀದಿಸಿ, ಮೊಬೈಲ್ ಹ್ಯಾಂಡ್‌ಸೆಟ್‌ಗೆ ಹೊಸಪೇಟೆಯ ಓರಿಯಂಟಲ್ ಇನ್ಸೂರೆನ್ಸ್ ಅವರಲ್ಲಿ ವಿಮೆ ಮಾಡಿಸಿದರು. ಮೊಬೈಲ್ ಖರೀದಿಸಿದ ನಾಲ್ಕು ತಿಂಗಳ ನಂತರ, ಕೊಪ್ಪಳದಿಂದ ಹುಬ್ಬಳ್ಳಿಗೆ ತೆರಳುವಾಗ ಮೊಬೈಲ್ ಕಳುವಾಗಿದೆ. ಮೊಬೈಲ್‌ಗೆ ವಿಮೆ ಮಾಡಿಸಿದ್ದರಿಂದ, ಮೊಬೈಲ್ ಸೆಟ್ ಅಥವಾ ಮೊಬೈಲ್‌ನ ಪಾವತಿಸುವಂತೆ ಚನ್ನಬಸವರಾಜ ಅವರು ಸಂಗೀತ ಮೊಬೈಲ್ ಅಂಗಡಿಯವರಿಗೆ ಕೇಳಿದ್ದಾರೆ. ವಿಮಾ ಕಂಪನಿಗೆ ತಿಳಿಸಿ, ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದ ನಂತರ, ಕೆಲ ದಿನಗಳು ಕಾಯುವಂತೆ ವಿಮಾ ಕಂಪನಿಯವರು ತಿಳಿಸಿದರು. ಆದರೆ ದಿನಗಳು ಮುಂದೂಡುತ್ತಾ ಬಂದರೆ ಹೊರತು, ಮೊಬೈಲ್ ಸೆಟ್ ಅಥವಾ ಮೊತ್ತ ಪಾವತಿಯಾಗಿಲ್ಲ. ತನಗೆ ಅನ್ಯಾಯವಾಗಿದ್ದು, ಮೊಬೈಲ್‌ನ ಮೊತ್ತ, ಮಾನಸಿಕ ನೋವಿಗೆ ಪರಿಹಾರ ಹಾಗೂ ದೂರಿನ ಖರ್ಚು ದೊರಕಿಸಬೇಕೆಂದು ಚನ್ನಬಸವರಾಜ ಅವರು ಸಂಗೀತಾ ಮೊಬೈಲ್ಸ್ ಹಾಗೂ ವಿಮಾ ಕಂಪನಿಯ ವಿರುದ್ಧ ಕೊಪ್ಪಳದ ಗ್ರಾಹಕರ ವೇದಿಕೆಗೆ ಮೊರೆ ಹೋದರು.
ಪ್ರಕರಣದ ವಿಚಾರಣೆಗಾಗಿ ಸಂಗೀತ ಮೊಬೈಲ್ಸ್ ಅವರಿಗೆ ಸಮನ್ಸ್ ಜಾರಿಯಾದರೂ ವಿಚಾರಣೆಗೆ ಅವರು ಹಾಜರಾಗಿರುವುದಿಲ್ಲ. ವಿಮಾ ಕಂಪನಿಯವರು ಗ್ರಾಹಕರ ವೇದಿಕೆಯ ವಿಚಾರಣೆಗೆ ಹಾಜರಾಗಿ, ಮೊಬೈಲ್ ಕಳುವಾದಲ್ಲಿ ಕಂಪನಿಯು ಬಾಧ್ಯಸ್ಥವಾಗುವುದಿಲ್ಲ. ಮೊಬೈಲ್ ಕಳುವಾದ ನಂತರ ೪೮ ಗಂಟೆಯೊಳಗೆ ತಿಳಿಸಬೇಕಾಗುತ್ತದೆ. ಆದರೆ ಈ ಪ್ರಕರಣದಲ್ಲಿ ೦೫ ದಿನಗಳ ನಂತರ ತಮಗೆ ತಿಳಿಸಲಾಗಿದ್ದು, ಮೊಬೈಲ್ ಮೊತ್ತವನ್ನು ವಿಮಾ ಕಂಪನಿಯಿಂದ ಕೊಡಲು ಬರುವುದಿಲ್ಲ ಎಂದು ನಿರಾಕರಿಸಿದರು. ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆ ಅಧ್ಯಕ್ಷೆ ಏಕತಾ ಹೆಚ್.ಡಿ. ಹಾಗೂ ಸದಸ್ಯರುಗಳಾದ ಸುಜಾತಾ ಅಕ್ಕಸಾಲಿ ಹಾಗೂ ರವಿರಾಜ್ ಕುಲಕರ್ಣಿ ಅವರು, ವೇದಿಕೆಗೆ ಸಂಗೀತಾ ಮೊಬೈಲ್ ಅವರು ಹಾಜರಾಗದ ಕಾರಣ ಅವರ ವಿರುದ್ಧ ಏಕಪಕ್ಷೀಯ ಎಂದು ಪರಿಗಣಿಸಲಾಗಿದೆ. ಮೊಬೈಲ್ ಖರೀದಿಯ ರಸೀದಿಯ ಹಿಂಭಾಗದಲ್ಲಿ ’ಗ್ರಾಹಕರು ಆಕಸ್ಮಿಕವಾಗಿ ಮೊಬೈಲ್ ಕಳೆದರೆ ವಿಮಾ ಸೌಲಭ್ಯ ದೊರಕುತ್ತದೆ’ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಮೊಬೈಲ್ ಕಳುವಾದ ಬಗ್ಗೆ ಪೊಲೀಸ್ ದೂರು ಸಹ ದಾಖಲಿಸಲಾಗಿದೆ. ಗ್ರಾಹಕರು ಹಾಗೂ ವಿಮಾ ಕಂಪನಿಯೊಂದಿಗೆ ಸಕಾಲದಲ್ಲಿ ವ್ಯವಹರಿಸುವುದು ಮೊಬೈಲ್ ಮಾರಾಟಗಾರರ ಕರ್ತವ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮೊಬೈಲ್ ಅಂಗಡಿಯವರು ಸೇವಾ ನಿರ್ಲಕ್ಷ್ಯ ವಹಿಸಿರುವುದರಿಂದ, ಸಂಗೀತ ಮೊಬೈಲ್ ಪ್ರೈ.ಲಿ. ಅವರು, ಮೊಬೈಲ್ ಸೆಟ್ ಬೆಲೆ ರೂ. ೨೦,೨೭೯, ಸೇವಾ ನ್ಯೂನತೆಗಾಗಿ ಹಾಗೂ ಅನುಚಿತ ವ್ಯಾಪಾರಕ್ಕಾಗಿ ರೂ. ೧೦ ಸಾವಿರ ಪರಿಹಾರ, ಮಾನಸಿಕ ತೊಂದರೆಗೆ ರೂ. ೫ ಸಾವಿರ ಅಲ್ಲದೆ ಪ್ರಕರಣದ ಖರ್ಚು ರೂ. ೨ ಸಾವಿರ ಗಳನ್ನು ಒಂದು ತಿಂಗಳ ಒಳಗಾಗಿ ಗ್ರಾಹಕರಿಗೆ ಪಾವತಿಸುವಂತೆ ಆದೇಶಿಸಿದೆ. ತಪ್ಪಿದಲ್ಲಿ ಪರಿಹಾರ ಮೊತ್ತದ ಮೇಲೆ ದೂರು ದಾಖಲಿಸಿದ ದಿನಾಂಕದಿಂದ ವಾರ್ಷಿಕ ಶೇ. ೧೨ ರ ಬಡ್ಡಿಯೊಂದಿಗೆ ಹಣ ಸಂದಾಯವಾಗುವವರೆಗೂ ಮೊತ್ತ ಪಾವತಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.

Please follow and like us:
error