ಮುಂದಿನ ವರ್ಷದಿಂದ ನೇರ ನೇಮಕಾತಿ : ಮಾರ್ಚ್ ಒಳಗೆ 35 ಸಾವಿರ ಗುತ್ತಿಗೆ ಪೌರಕಾರ್ಮಿಕರು ಖಾಯಂ

ಬೆಂಗಳೂರು, ನ.14: ಮುಂದಿನ ಮಾರ್ಚ್ ತಿಂಗಳೊಳಗೆ ಎಲ್ಲ ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂಗೊಳಿಸಲಾಗುವುದು ಎಂದು ಸಫಾಯಿ ಕರ್ಮಚಾರಿ koppal_cmc_laboursಆಯೋಗದ ಸದಸ್ಯ ಗೋಕುಲ್ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಸೋಮವಾರ ನಗರದ ಸಫಾಯಿ ಕರ್ಮಚಾರಿ ಆಯೋಗದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿ ಗೋಷ್ಠಿಯಲ್ಲಿ ಆಯೋಗದ ನೂತನ ಅಧ್ಯಕ್ಷ ಎಂ.ಆರ್. ವೆಂಕಟೇಶ್ ಅವರ ಅನುಪಸ್ಥಿತಿಯಲ್ಲಿ ಮಾತನಾಡಿದ ಅವರು,ರಾಜ್ಯದಲ್ಲಿ 2017ರ ಮಾರ್ಚ್ ತಿಂಗಳಿಗೆ ಗುತ್ತಿಗೆ ಪದ್ದತಿ ರದ್ದಾಗಲಿದೆ. ಗುತ್ತಿಗೆ ಪದ್ದತಿಯಡಿ ರಾಜ್ಯಾದ್ಯಾಂತ ಕಾರ್ಯ ನಿರ್ವಹಿಸುತ್ತಿರುವ 35 ಸಾವಿರ ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂಗೊಳಿಸಲಾಗುವುದು ಎಂದು ಹೇಳಿದರು.
ಗುತ್ತಿಗೆ ಪದ್ಧತಿ ರದ್ದಾದ ನಂತರ ಮುಂದಿನ ವರ್ಷದಿಂದ ಸರಕಾರವೇ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಕೊಳ್ಳಲಿದೆ. ಮುಂದಿನ ವರ್ಷದಿಂದ ಸಫಾಯಿ ಕರ್ಮಚಾರಿಗಳ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಕಾರ್ಯಾರಂಭವಾಗಿಲಿದೆ. ನಿಗಮಕ್ಕೆ ಕಚೇರಿ ಒದಗಿಸಲು ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮ್ಯಾನ್‌ಹೋಲ್ ಪ್ರಕರಣಗಳಲ್ಲಿ ಮೃತಪಟ್ಟ ಪೌರ ಕಾರ್ಮಿಕರ ಕುಟುಂಬಗಳಿಗೆ ಸಾಮಾನ್ಯ ವರ್ಗದವರಿಗೆ 10 ಲಕ್ಷ, ಪರಿಶಿಷ್ಟ ವರ್ಗ ಮತ್ತು ಪಂಗಡದವರಿಗೆ 18.25 ಲಕ್ಷ ಪರಿಹಾರ ಒದಗಿಸಲಾಗುತ್ತದೆ. ಅಲ್ಲದೆ ಮೃತ ಸಂತ್ರಸ್ತ ಕುಟುಂಬದ ಸದಸ್ಯನೋರ್ವನಿಗೆ ಅನುಕಂಪದ ಮೇರೆಗೆ ಕೆಲಸಕ್ಕೆ ನೇಮಕ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಸಫಾಯಿ ಕರ್ಮಚಾರಿಗಳಿಗೆ ಸರಕಾರದಿಂದ ಸಿಗುತ್ತಿರುವ ಸವಲತ್ತು, ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ ಕಚೇರಿಗಳ ಆವರಣದಲ್ಲಿ ಬೃಹತ್ ನಾಮಫಲಕಗಳನ್ನು ಅಳವಡಿಸಲಾಗುವುದು. ಇದೇ ರೀತಿ ಜನಪ್ರತಿನಿಧಿಗಳ ನೇತೃತ್ವದಲ್ಲಿ ಸಾರ್ವಜನಿಕ ಸಂವಾದ ಕಾರ್ಯಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಬಿಸಿಯೂಟ ಯೋಜನೆ ವಿಸ್ತರಣೆ: ದೇಶದಲ್ಲಿ ಪ್ರಪ್ರಥಮ ಭಾರಿಗೆ ಆರಂಭಿಸಿರುವ ಪೌರ ಕಾರ್ಮಿಕರ ಬಿಸಿಯೂಟ ಯೋಜನೆಯನ್ನು ರಾಜ್ಯದ ಇತರೆ ಮಹಾ ನಗರ ಪಾಲಿಕೆಗಳಿಗೆ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.
ಆಯೋಗದ ಕಾರ್ಯದರ್ಶಿ ಡಾ.ಎಚ್.ನಾಗರಾಜ್ ಮಾತನಾಡಿದ ಅವರು, ಪೌರ ಕಾರ್ಮಿಕರ ಕಲ್ಯಾಣಕ್ಕಾಗಿ ಎಸ್‌ಸಿಪಿ ಟಿಎಸ್‌ಪಿ ಅನುದಾನದಲ್ಲಿ ಶೇ.20ರಷ್ಟು ಅನುದಾನ ಮೀಸಲಿಡಲು ಸರಕಾರದ ಮೇಲೆ ಒತ್ತಡ ತರಲಾಗುವುದು. ಆರ್‌ಟಿಇ ವಿಶೇಷ ವರ್ಗದ ಕೋಟದಡಿ ಪೌರ ಕಾರ್ಮಿಕರ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಶೇ.2ರಷ್ಟು ಸೀಟುಗಳನ್ನು ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇನ್ನು ಮುಂದೆ ವೇತನವನ್ನು ಪೌರ ಕಾರ್ಮಿಕರ ಖಾತೆಗೆ ಜಮೆ ಮಾಡುವುಂತೆ ಹಾಗೂ ಆರೋಗ್ಯ ಚಿಕಿತ್ಸೆಗಾಗಿ ಇಎಸ್‌ಐ ಸ್ಮಾಟ್ ಕಾರ್ಡ್ ವಿತರಿಸಲು ಎಲ್ಲ ಸ್ಥಳೀಯ ಸಂಸ್ಥೆ ಮತ್ತು ಮಹಾನಗರ ಪಾಲಿಕೆಗಳಿಗೆ ಸೂಚಿಸಲಾಗಿದೆ ಎಂದರು.

 ‘ಸ್ವಚ್ಛತಾ ಯೋಗಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಸರಕಾರ ಯಾವುದಾದರೂ ಒಂದು ತರಗತಿಯಲ್ಲಿ ಪೌರ ಕಾರ್ಮಿಕರ ಸಂಬಂಧಿಸಿದ ಪಠ್ಯವನ್ನು ಅಳವಡಿಸಬೇಕು’
 -ಜೆ.ಕೆ.ಮೀನಾಕ್ಷಮ್ಮ, ಸಫಾಯಿ ಕರ್ಮಚಾರಿ ಆಯೋಗದ ಸದಸ್ಯೆ

Please follow and like us:
error