ಮಾಹಿತಿ ಹಕ್ಕು ಕಾಯ್ದೆಯಡಿ ಕ್ರೋಢೀಕರಿಸಿ ಮಾಹಿತಿ ಕೊಡುವ ಅಗತ್ಯವಿಲ್ಲ- ಡಾ. ಸುಚೇತನ ಸ್ವರೂಪ

rti_commisioner ಅರ್ಜಿದಾರರು ಮಾಹಿತಿ ಹಕ್ಕು ಕಾಯ್ದೆಯಡಿ ಕೋರಿದ ವಿವಿಧ ಮಾಹಿತಿಗಳನ್ನು ಹಲವು ಪ್ರಾಧಿಕಾರಗಳಿಂದ ಪಡೆದು, ಕ್ರೋಢೀಕರಿಸಿ ಕೊಡುವ ಅಗತ್ಯವಿಲ್ಲ ಎಂದು ರಾಜ್ಯ ಕರ್ನಾಟಕ ಮಾಹಿತಿ ಆಯೋಗದ ಮಾಹಿತಿ ಆಯುಕ್ತ ಡಾ. ಸುಚೇತನ ಸ್ವರೂಪ ಅವರು ಸ್ಪಷ್ಟಪಡಿಸಿದರು.
ಕರ್ನಾಟಕ ಮಾಹಿತಿ ಆಯೋಗದ ವತಿಯಿಂದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರಗಳ ಜೊತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಹಮ್ಮಿಕೊಳ್ಳಲಾದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ಕಾರಿ ಕಚೇರಿಗಳ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಉದ್ದೇಶಕ್ಕಾಗಿಯೇ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಿದೆ. ಅರ್ಜಿದಾರರು ಹಾಗೂ ಮಾಹಿತಿ ಅಧಿಕಾರಿಗಳಲ್ಲಿ ಕಾಯ್ದೆಯ ಬಗ್ಗೆ ಇನ್ನೂ ಕೆಲವು ಗೊಂದಲಗಳಿದ್ದು, ಇದರಿಂದಾಗಿ ಆಯೋಗದಲ್ಲಿ ಬಹಳಷ್ಟು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಚಿಕ್ಕಬಳ್ಳಾಪುರ, ಬಳ್ಳಾರಿ, ಬೀದರ್, ಕಲಬುರಗಿ ಮುಂತಾದ ಜಿಲ್ಲೆಗಳಿಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚು ಇವೆ. ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅಂಗೀಕರಿಸಿ ಜಾರಿಗೆ ತಂದ ಕಾಯ್ದೆ ಇದಾಗಿರುವುದರಿಂದ, ಕಾಯ್ದೆಯಲ್ಲಿ ಯಾವುದೇ ತಿದ್ದುಪಡಿ ತರುವುದು ಆಯೋಗದ ವ್ಯಾಪ್ತಿಗೆ ಬರುವುದಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಒಂದೆಡೆ ಕೆಲಸದ ಒತ್ತಡ ಹೆಚ್ಚುತ್ತಿದೆ, ಇನ್ನೊಂದೆಡೆ ಸಿಬ್ಬಂದಿ ಕೊರತೆಯೂ ಇದೆ. ಇದರ ನಡುವೆಯೂ ಕೆಲಸ ಸಮರ್ಪಕವಾಗಿ ಆಗಬೇಕಿದೆ. ಇಲಾಖೆಗಳ ಮೇಲ್ಮಟ್ಟದ ಕಚೇರಿಗಳಲ್ಲಿ ಅರ್ಜಿಗಳಿಗೆ ಮಾಹಿತಿ ವರ್ಗಾವಣೆ ಮಾಡುತ್ತಿಲ್ಲ, ಬದಲಿಗೆ ಜವಾಬ್ದಾರಿಯನ್ನು ಕೆಳ ಹಂತದ ಕಚೇರಿಗಳಿಗೆ ವರ್ಗಾಯಿಸುತ್ತಿರುವುದು ಸಮಂಜಸ ಕ್ರಮವಲ್ಲ. ಅರ್ಜಿದಾರರು ಇಡೀ ರಾಜ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೋರಿದಾಗ, ನಿಯಮ ೬(೩) ರಡಿ ವರ್ಗಾಯಿಸುವುದು ಕಂಡುಬರುತ್ತಿದ್ದು, ಆದರೆ ಇದು ಸರಿಯಾದ ಕ್ರಮವಲ್ಲ. ನಿಯಮದಡಿ, ಅರ್ಜಿಯನ್ನು ಒಂದಕ್ಕಿಂತ ಹೆಚ್ಚಿನ ಪ್ರಾಧಿಕಾರಗಳಿಗೆ ನಿಯಮ ೬(೩) ರಡಿ ವರ್ಗಾಯಿಸುವಂತಿಲ್ಲ. ಅರ್ಜಿದಾರರು ಸಂಬಂಧಿಸಿದ ಪ್ರಾಧಿಕಾರಗಳಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕೆ ಹೊರತು, ಒಂದೇ ಪ್ರಾಧಿಕಾರದವರು, ಮಾಹಿತಿಯನ್ನು ಕ್ರೋಢೀಕರಿಸಿ ಕೊಡುವಂತಿಲ್ಲ. ಕಚೇರಿಯಲ್ಲಿನ ಮಾಹಿತಿಯನ್ನು ಯಥಾವತ್ತಾಗಿ ಕೊಡಬೇಕೆ ಹೊರತು, ಹೊಸದಾಗಿ ಸೃಷ್ಟಿಮಾಡಿ, ಅಥವಾ ಸಂಗ್ರಹಿಸಿ ಕೊಡುವ ಅಗತ್ಯವಿಲ್ಲ. ಬೇರೆ ಯಾವುದೋ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಕೋರಿ ಇನ್ಯಾವುದೋ ಇಲಾಖೆಯ ಕಚೇರಿಗೆ ಅರ್ಜಿ ಕೊಡುವುದು ಸಹ ಕಂಡುಬರುತ್ತಿದ್ದು, ಇದೂ ಸಹ ಸರಿಯಾದ ಕ್ರಮವಲ್ಲ. ಸರ್ಕಾರಿ ನೌಕರರ ಸೇವಾ ಪುಸ್ತಕದಲ್ಲಿನ ಮಾಹಿತಿ, ನೌಕರರ ಚರ ಮತ್ತು ಸ್ಥಿರಾಸ್ತಿ ವಿವರ ಅಥವಾ ಜಾತಿ ಪ್ರಮಾಣಪತ್ರ, ವ್ಯಾಸಂಗ ಪ್ರಮಾಣ ಪತ್ರಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕೊಡುವಂತಿಲ್ಲ ಎಂದು ಸುಪ್ರಿಂಕೋರ್ಟ್ ಈಗಾಗಲೆ ಸ್ಪಷ್ಟಪಡಿಸಿದೆ. ಆದರೂ ಇಂತಹ ಅರ್ಜಿಗಳು ಸಲ್ಲಿಕೆಯಾಗುತ್ತಿರುವುದು ಕಂಡುಬರುತ್ತಿದೆ. ಮಾಹಿತಿ ಹಕ್ಕು ಕಾಯ್ದೆಯು ಸಾರ್ವಜನಿಕ ಹಿತಾಸಕ್ತಿಗಾಗಿ ಜಾರಿಗೊಂಡ ಉತ್ತಮ ಕಾಯ್ದೆಯಾಗಿದ್ದು, ಕೆಲವರಿಗೆ ಇದೇ ಜೀವನಕ್ಕೆ ಮಾರ್ಗೋಪಾಯವಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಇರುವ ವ್ಯವಸ್ಥೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಸುಧಾರಿಸಬೇಕಿದೆ. ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಕಾಯ್ದೆಯನ್ನು ಸರಿಯಾಗಿ ತಿಳಿದುಕೊಂಡು, ಅರ್ಜಿದಾರರನ್ನು ಅನಗತ್ಯವಾಗಿ ಅಲೆದಾಡಿಸದೆ, ಲಭ್ಯವಿರುವ ಮಾಹಿತಿಯನ್ನು ನಿಗದಿತ ಕಾಲಮಿತಿಯೊಳಗೆ ಒದಗಿಸಿದರೆ, ಅಧಿಕಾರಿ/ಸಿಬ್ಬಂದಿಗಳು ತೊಂದರೆಗೆ ಒಳಗಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮಾಹಿತಿ ಆಯುಕ್ತ ಡಾ. ಸುಚೇತನ ಸ್ವರೂಪ ಅವರು ಹೇಳಿದರು.
ಸಂವಾದ ಕಾರ್ಯಕ್ರಮಕ್ಕೂ ಪೂರ್ವದಲ್ಲಿ, ಆಯೋಗದ ವತಿಯಿಂದ ನೋಟೀಸ್ ಜಾರಿಯಾದ, ಕೊಪ್ಪಳ ಜಿಲ್ಲೆಗೆ ಸಂಬಂಧಿತ ಇಲಾಖಾ ಪ್ರಕರಣಗಳ ವಿಚಾರಣೆಯನ್ನು, ಆಯಾ ಅಧಿಕಾರಿಗಳು-ಅರ್ಜಿದಾರರ ಸಮಕ್ಷಮ ಮಾಹಿತಿ ಆಯುಕ್ತ ಡಾ. ಸುಚೇತನ ಸ್ವರೂಪ ಅವರು ನಡೆಸಿದರು. ಒಟ್ಟು ೫೨ ಪ್ರಕರಣಗಳ ವಿಚಾರಣೆ ನಡೆದು, ೨೬ ಅರ್ಜಿಗಳು ಇದೇ ಸಂದರ್ಭದಲ್ಲಿ ವಿಲೇವಾರಿಗೊಂಡವು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳು ಪಾಲ್ಗೊಂಡಿದ್ದರು.

Please follow and like us:
error