ಮಾನಸಿಕ ಅಸ್ವಸ್ಥ್ಯರಿಗೆ ಸಮಾಜದ ರಕ್ಷಣೆಯ ಅಗತ್ಯವಿದೆ- ವಿಜಯಲಕ್ಷ್ಮಿ ಉಪನಾಳ

district-bar-association-koppal ಮಾನಸಿಕ ಅಸ್ವಸ್ಥ್ಯರಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಾಮರ್ಥ್ಯ ಇರುವುದಿಲ್ಲವಾದ್ದರಿಂದ, ಅಂತಹವರಿಗೆ ಸಮಾಜವು ರಕ್ಷಣೆ ನೀಡಬೇಕಾದ ಅಗತ್ಯವಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಲಕ್ಷ್ಮಿ ಎಸ್. ಉಪನಾಳ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಮಾನಸಿಕ ಅಸ್ವಸ್ತ ರೋಗಿಗಳ ಕುರಿತು ಕೊಪ್ಪಳ ಜಿಲ್ಲಾ ಕೋರ್ಟ್ ಆವರಣದ ಸಾಕ್ಷಿದಾರರ ಮೊಗಸಾಲೆಯಲ್ಲಿ ಗುರುವಾರದಂದು ಆಯೋಜಿಸಲಾಗಿದ್ದ ಒಂದು ದಿನದ ಕಾನೂನು ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಪ್ರತಿ ವ್ಯಕ್ತಿಯೂ ರೋಗಗಳಿಂದ ಬಳಲುವುದು ಸಹಜ. ಆದರೆ ಕೆಲವು ರೋಗಗಳಿಗೆ ಅಲ್ಪಾವಧಿಯ ಚಿಕಿತ್ಸೆಯನ್ನು ನೀಡಿ ಗುಣಪಡಿಸಲು ಸಾಧ್ಯ. ಆದರೆ ಮಾನಸಿಕ ಅಸ್ವಸ್ಥ್ಯತೆಗೆ ದೀರ್ಘಾವಧಿಯ ಚಿಕಿತ್ಸೆ ಬೇಕಾಗುತ್ತದೆ. ಮಾನಸಿಕ ಅಸ್ವಸ್ಥ್ಯರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಅಂತಹವರಿಗೆ ಕುಟುಂಬದವರು ಹಾಗೂ ಸಮಾಜದ ರಕ್ಷಣೆಯ ಅಗತ್ಯತೆ ಇದೆ. ಸರ್ವೋಚ್ಛ ನ್ಯಾಯಾಲಯದ ಆದೇಶದನ್ವಯ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಸಮರ್ಥರಾಗಿರುವ ಮಾನಸಿಕ ಅಸ್ವಸ್ಥ್ಯರಿಗೆ ಉಚಿತವಾಗಿ ಕಾನೂನು ನೆರವು ಲಭ್ಯವಿದೆ. ಸಂವಿಧಾನದ ಮುಂದೆ ಎಲ್ಲರೂ ಸಮಾನರು. ಸಂವಿಧಾನದಲ್ಲಿ ನಾಗರಿಕರಿಗೆ ಇರುವ ಎಲ್ಲ ಹಕ್ಕುಗಳನ್ನು ಮಾನಸಿಕ ಅಸ್ವಸ್ಥ್ಯರೂ ಪಡೆಯಲು ಅರ್ಹರು. ಆದರೆ ಕೆಲವೊಮ್ಮೆ ಅದನ್ನು ಚಲಾಯಿಸುವ ಸಾಮರ್ಥ್ಯವನ್ನು ಮಾನಸಿಕ ಅಸ್ವಸ್ಥ್ಯರಿಗೆ ಇಲ್ಲದ ಕಾರಣದಿಂದ, ಅವರ ಹಕ್ಕುಗಳನ್ನೂ ಸಹ ರಕ್ಷಿಸಲು ಉಚಿತ ಕಾನೂನು ನೆರವು ಅವರಿಗೆ ಕೊಡಲೇಬೇಕಾಗುತ್ತದೆ. ಪ್ರಮುಖವಾಗಿ ಇದಕ್ಕೆಲ್ಲ ಮಾನಸಿಕ ಅಸ್ವಸ್ಥ್ಯರ ಕುಟುಂಬ ಹಾಗೂ ಸಮಾಜದ ಪಾತ್ರ ಬಹು ಮುಖ್ಯವಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಲಕ್ಷ್ಮಿ ಉಪನಾಳ ಅವರು ಹೇಳಿದರು.
ಕಾರ್ಯಕ್ರಮ ಕುರಿತು ವಿಶೇಷ ಉಪನ್ಯಾಸ ನೀಡಿದ ಜಿಲ್ಲಾ ಆಸ್ಪತ್ರೆಯ ಮಾನಸಿಕ ತಜ್ಞ ಡಾ. ಕೃಷ್ಣ ಓಂಕಾರ ಅವರು ಮಾತನಾಡಿ, ಸುಮಾರು ೨೦೦ ಬಗೆಯ ಮಾನಸಿಕ ಅಸ್ವಸ್ಥ್ಯತೆ ಮನುಷ್ಯರಲ್ಲಿ ಕಂಡುಬರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಕರಣಗಳು ಮಾನಸಿಕ ಖಿನ್ನತೆಗೆ ಸಂಬಂಧಿಸಂತೆ ವರದಿಯಾಗುತ್ತಿವೆ. ನಿರಾಸಕ್ತಿ, ಹೆಚ್ಚಿನ ಉದ್ವಿಗ್ನತೆ ಹೀಗೆ ಮಾನಸಿಕ ಖಿನ್ನತೆಯು ಆತ್ಮಹತ್ಯೆಗೆ ಪ್ರಚೋದಿಸಲು ಕಾರಣವಾಗುತ್ತಿದೆ. ಮಾನಸಿಕ ಖಿನ್ನತೆಯನ್ನು ಗುಣಪಡಿಸಲು ಇದೀಗ ಸೂಕ್ತ ಔಷಧಿ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಲಭ್ಯವಿದೆ. ಅಷ್ಟೇ ಅಲ್ಲದೆ ಎಲ್ಲ ರೀತಿಯ ಮಾನಸಿಕ ರೋಗಗಳನ್ನು ಗುಣಪಡಿಸಲು ಚಿಕಿತ್ಸೆ ಹಾಗೂ ಔಷಧಿ ಲಭ್ಯವಿದೆ. ಮಾನಸಿಕ ರೋಗಿಗಳನ್ನು ಕುಟುಂಬಗಳು ಕಡೆಗಣಿಸಿ, ಅವರಿಗೆ ಹಿಂಸೆ ನೀಡುವಂತಹ ಬಹಳಷ್ಟು ಪ್ರಕರಣಗಳು ವರದಿಯಾಗುತ್ತಿವೆ. ಕೆಲವೊಂದು ಪ್ರಕರಣಗಳು ಬೆಳಕಿಗೇ ಬರದೆ, ರೋಗಿಗಳು ಹಿಂಸೆ ಅನುಭವಿಸುವುದು ಮುಂದುವರೆದಿದೆ. ಮಾನಸಿಕ ಅಸ್ವಸ್ಥ್ಯತೆಯನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚುವ ಕುರಿತಂತೆ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರಿಗೆ ಸೂಕ್ತ ತರಬೇತಿಯನ್ನು ನೀಡಲಾಗುತ್ತಿದೆ. ಮುಖ್ಯವಾಗಿ ರೋಗಿಗಳಿಗೆ ಆತ್ಮ ಸ್ಥ್ಯೆರ್ಯ ತುಂಬುವ ಕಾರ್ಯವನ್ನು ಕುಟುಂಬದ ಸದಸ್ಯರುಗಳು ಮಾಡಬೇಕಿದೆ ಎಂದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಎಸ್.ಕೆ. ದೇಸಾಯಿ ಅವರು ಮಾತನಾಡಿ, ಸಮಾಜದಲ್ಲಿ ಮನೆ ಮಾಡಿರುವ ಮೌಢ್ಯತೆ ಹಾಗೂ ಮೂಢ ನಂಬಿಕೆಗಳಿಂದ ಮಾನಸಿಕ ಅಸ್ವಸ್ಥ್ಯರನ್ನು ಸೂಕ್ತ ರೀತಿಯ ಚಿಕಿತ್ಸೆಗೆ ಕರೆದುಕೊಂಡು ಹೋಗದೆ, ಮನೆಯಲ್ಲಿಯೇ ಹಿಂಸೆ ನೀಡುವ ಪ್ರಕರಣಗಳು ಹೆಚ್ಚು. ಜನರು ಮೂಢನಂಬಿಕೆಗೆ ಒಳಗಾಗದೆ, ಅಸ್ವಸ್ಥ್ಯರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಕೊಡಿಸಲು ಮುಂದಾಗಬೇಕು ಎಂದರು.
ಜಿಲ್ಲಾ ಸರ್ಕಾರಿ ವಕೀಲ ಆಸೀಫ್ ಅಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಪಾಲಕರು ಹೆಚ್ಚಿನ ಒತ್ತಡ ಹಾಕುತ್ತಿದ್ದು, ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ. ಇದು ಮಾನಸಿಕ ಅಸ್ವಸ್ಥ್ಯತೆಗೂ ಕಾರಣವಾಗಬಹುದಾಗಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಬಿ. ಪಾನಘಂಟಿ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ ಬಾಸೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ಬಿ. ದಶರಥ, ಸಿವಿಲ್ ನ್ಯಾಯಾಧೀಶ ವಿಜಯಕುಮಾರ ಕನ್ನೂರ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಯು.ಎ. ಮಾಳೆಕೊಪ್ಪ, ಡಾ. ರಾಮಾಂಜನೇಯ, ಡಾ. ವಿ. ಮಾದಿನೂರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ವಕೀಲರಾದ ಗಾಯತ್ರಿ ಆರ್. ಕಠಾರೆ ಮಾನಸಿಕ ಅಸ್ವಸ್ಥತೆ ಮತ್ತು ವಿಕಲತೆ ಮನೋ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಗೂ ಬಂದಿಖಾನೆಯಲ್ಲಿ ಕಾನೂನು ನೆರವು ದೊರೆಯುವ ಕುರಿತು ಹಾಗೂ ಎಂ.ಹನುಮಂತರಾವ್ ಅವರು ನಿರ್ಗತಿಯುಳ್ಳ ಅಲೆಮಾರಿ ಮಾನಸಿಕ ಅಸ್ವಸ್ಥ ವ್ಯಕ್ತಿಗಳಿಗೆ ಕಾನೂನು ಸೌಲಭ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

Please follow and like us:
error