ಮಾದಿಗ ಸಮಾಜದ ಅಭಿವೃದ್ಧಿಗೆ ಬೇಕು ಒಳ ಮೀಸಲಾತಿ : ನಿಂಗಪ್ಪ ದೊಡ್ಡಮನಿ

nm_doddamani_koppal
ಕೊಪ್ಪಳ ೧೦: ರಾಜ್ಯದಲ್ಲಿ ಇರುವ ಮೀಸಲಾತಿ ಪದ್ಧತಿಯನ್ನು ಪುನರ್ ಪರಿಶೀಲನೆ ಮಾಡಿ ನ್ಯಾಯಮೂರ್ತಿ ಸದಾಶಿವ ಆಯೋಗವು ಸರ್ಕಾರಕ್ಕೆ ಮಾಡಿರುವ ಶಿಫಾರಸ್ಸುಗಳನ್ನು ಸರ್ಕಾರ ಜಾರಿಗೆ ತರುವುದರ ಮೂಲಕ ಒಳ ಮೀಸಲಾತಿಯನ್ನು ಜಾರಿಗೆ ತಂದು ಮಾದಿಗ ಸಮಾಜದ, ಜನಾಂಗದ ಅಭಿವೃದ್ಧಿಗೆ ಸದ್ಯದ ಕಾಂಗ್ರೆಸ್ ಪಕ್ಷದ ನೇತೃತ್ವದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಮಾದಿಗ ಜನಾಂಗದ ಅಭಿವೃದ್ಧಿಗೆ ಆದ್ಯತೆ ಕೊಡಬೇಕು ಎಂದು ಕೋಟೆ ಕದಂಬ ಪಾಕ್ಷಿಕ ಪತ್ರಿಕೆಯ ಸಂಪಾದಕ ನಿಂಗಪ್ಪ ದೊಡ್ಡಮನಿಯವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇದೇ ದಿನಾಂಕ ೧೧ ರಂದು ಹುಬ್ಬಳ್ಳಿ ನಗರದ ನೆಹರು ಮೈದಾನದಲ್ಲಿ ಜರುಗಲಿರುವ ಅಖಿಲ ಕರ್ನಾಟಕ ಮಾದಿಗ ಮಾಹಾ ಸಮಾವೇಶದ ಕುರಿತು ಇಂದು ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಹಿಂದೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾದಿಗ ಜನಾಂಗಕ್ಕೆ ಮೀಸಲಾತಿಯಲ್ಲಿ ಆಗುತ್ತಿರುವ ಅನ್ಯಾಯವನ್ನು ಮನಗಂಡು ಅಂದು ನಿವೃತ್ತ ನ್ಯಾಯಮೂರ್ತಿ ಸದಾಶಿವ ಅವರ ನೇತೃತ್ವದ ಒಂದು ಆಯೋಗವನ್ನು ರಚನೆ ಮಾಡಿ ರಾಜ್ಯದ ಪರಿಶಿಷ್ಟ ಜಾತಿಯಲ್ಲಿರುವ ವಿವಿಧ ಜನಾಂಗಗಳ ರಾಜಕೀಯ, ಆರ್ಥಿಕ, ಶೈಕ್ಷಣಿಕ ಸೇರಿದಂತೆ ಅನೇಕ ಅಂಶಗಳನ್ನು ಕುರಿತು ಮತ್ತು ಆಯಾ ಜಾತಿಯ ಜನಸಂಖ್ಯೆಯ ಕುರಿತು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಒಪ್ಪಿಸಲು ಆಯೋಗವನ್ನು ರಚನೆ ಮಾಡಿತ್ತು. ನಂತರ ಸದಾಶಿವ ನೇತೃತ್ವ ಇಡೀ ರಾಜ್ಯವನ್ನು ಸುತ್ತಿ ತಳ ಮಟ್ಟದಲ್ಲಿ ಅಧ್ಯಯನ ಮಾಡಿ ಸರ್ಕಾರಕ್ಕೆ ಒಂದು ನಿಖರವಾದ ವರದಿಯನ್ನು ಸಲ್ಲಿಸಿದೆ. ಆದರೆ ಸದಾಶಿವ ಅವರ ಶಿಫಾರಸ್ಸಿನ ವರದಿಯು ಸುಮಾರ ವರ್ಷಗಳಿಂದ ಸರ್ಕಾರದ ಬಳಿಯಲ್ಲಿಯೇ ಇದ್ದು ಇನ್ನೂ ಅದನ್ನು ಜಾರಿಗೆ ಮಾಡಲಾಗುತ್ತಿಲ್ಲ. ಸಮಾಜಿಕ ನ್ಯಾಯದ ಕುರಿತು ಮಾತನಾಡುವ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಅಹಿಂದು ವರ್ಗದ ಪ್ರಶ್ನಾತೀತ ನಾಯಕರಾದ ಮುಖ್ಯಮಂತ್ರಿ ಅವರಿಗೆ ತುಂಬಾ ಒಳ್ಳೆಯ ಅವಕಾಶ ಇದ್ದು ಒಳ ಮೀಸಲಾತಿಯನ್ನು ಜಾರಿಗೆ ತಂದು ಅತ್ಯಂತ ಕನಿಷ್ಟ ಜೀವನವನ್ನು ಸಾಗಿಸುತ್ತಿರುವ ಮತ್ತು ಜನ ಸಂಖ್ಯೆಯಲ್ಲಿ ರಾಜ್ಯದಲ್ಲಿ ಹೆಚ್ಚು ಇದ್ದು ಮೀಸಲಾತಿ ಸೌಲಭ್ಯದಿಂದ ವಂಚಿತರಾಗುತ್ತಿರುವ ಮಾದಿಗ ಜನಾಂಗದ ಅಭಿವೃದ್ಧಿಗೆ ತುಸು ಕಾಳಜಿ ವಹಿಸಬೇಕೆಂದು ಒತ್ತಾಯಿಸಿದ್ದಾರೆ.
ಭಾರತ ದೇಶದ ಇತಿಹಾಸದಲ್ಲಿ ಕಳೆದ ೫೦೦೦ ವರ್ಷಗಳಿಂದ ಶೋಷಣೆಗೆ ಒಳಗಾಗಿ ಅತೀ ಕನಿಷ್ಟ ಜೀವನದಲ್ಲಿ ಸಾಗಿಕೊಂಡು ಬರುತ್ತಿರುವ ದೇಶದ ಕೆಲವೇ ಕೆಲವು ಶೋಷಿತ ಸಮುದಾಯಗಳಲ್ಲಿ ಮಾದಿಗ ಸಮಾಜದ ಜನಾಂಗವು ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಈ ದೇಶದ ಸ್ವಾತಂತ್ರ್ಯದ ತರುವಾಯ ಸಂವಿಧಾನದಲ್ಲಿ ಮೀಸಲಾತಿಯನ್ನು ಡಾ.ಬಿ.ಆರ್.ಅಂಬೇಡ್ಕರ ಅವರು ಪ್ರತಿಪಾದಿಸಿ ಜಾರಿಗೆ ತಂದರು. ಅದರಿಂದ ದೇಶದ ಎಲ್ಲಾ ಶೋಷಿತ ಸಮುದಾಯಗಳು ದೇಶದಲ್ಲಿ ರಾಜಕೀಯವಾಗಿ, ಶೈಕ್ಷಣಿಕವಾಗಿ, ಉದ್ಯೋಗ ಕ್ಷೇತ್ರದಲ್ಲಿ, ಧಾರ್ಮಿಕವಾಗಿ ಸೇರಿದಂತೆ ಒಟ್ಟಾರೆ ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಆಯಿತು. ಆದರೆ ಕೆಲ ರಾಜಕೀಯ ಹಿತಸಕ್ತಿಯ ದೃಷ್ಟಿಯಿಂದ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಅನೇಕ ಸ್ಪರ್ಶ ಸಮುದಾಯಗಳನ್ನು ಸೇರಿಸಿ ಮೂಲಭೂತವಾಗಿ ಶತ ಶತಮಾನಗಳಿಂದ ಶೋಷಣೆಗೆ ಒಳಗಾಗಿ ನಿಜವಾಗಿಯು ಮೀಸಲಾತಿ ದಕ್ಕಬೇಕಾಗ ಸಮುದಾಯಗಳಿಗೆ ಸಿಗದಿರುವುದು ರಾಜಕೀಯ, ಸಮಾಜಿಕ, ಪರಿಸ್ಥಿಯ ವ್ಯಂಗ್ಯವಾಗಿದೆ ಎಂದ ಅವರು ದೇಶದ ಯಾವುದೇ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಇರದ ಭೋವಿ ಮತ್ತು ಲಂಬಾಣಿ ಸಮುದಾಯಗಳನ್ನು ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿಯ ಸೇರಿಸಲಾಗಿದೆ. ಈ ಎರಡು ಸಮುದಾಯಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಯಾರು ಸೇರಿಸಿದರು? ಯಾವ ಪಕ್ಷ ರಾಜ್ಯದಲ್ಲಿ ಆಡಳಿತದಲ್ಲಿ ಇತ್ತು? ಯಾವ ಕಾರಣಕ್ಕೆ ಸೇರಿಸಿದರು? ಸೇರಿದಂತೆ ಅನೇಕ ಪ್ರಶ್ನೆಗಳು ಹುಟ್ಟುವುದು ಸಹಜ. ರಾಜ್ಯದಲ್ಲಿರುವ ಮೀಸಲಾತಿಯ ಬಹುತೇಕ ಲಾಭವನ್ನು ಸ್ಪರ್ಶ ಸಮುದಾಯಗಳಾದ ಭೋವಿ ಮತ್ತು ಲಂಬಾಣಿಯ ಜನಾಂಗವೇ ತಗೆದುಕೊಳ್ಳುತ್ತಿದೆ. ಆದರೆ ನಿಜವಾಗಿಯೂ ಶೋಷಣೆಗೆ ಒಳಗಾಗಿರುವ ಮಾದಿಗ ಸಮುದಾಯಕ್ಕೆ ಮೀಸಲಾತಿಯ ಸೌಲಭ್ಯ ದೊರೆಯುತ್ತಿಲ್ಲ ಎಂದು ಅವರು ಪ್ರತಿಪಾದಿಸಿದರು.
ಒಳ ಮೀಸಲಾತಿಯು ಪಕ್ಕದ ತಮಿಳುನಾಡು ಮತ್ತು ಹರ‍್ಯಾಣ ರಾಜ್ಯಗಳಲ್ಲಿ ಜಾರಿಯಾಗುವುದಾದರೆ ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಏಕೆ ಜಾರಿಯಾಗುತ್ತಿಲ್ಲಿ ಎಂದು ಪ್ರಶ್ನಿಸಿದ ಅವರು ಇದಕ್ಕೆ ರಾಜಕೀಯ ಇಚ್ಛಾ ಶಕ್ತಿಯ ಕೊರತೆ ಎದ್ದು ಕಾಣುತ್ತದೆ. ಸದ್ಯದ ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರ ಮತ್ತು ಕೇಂದ್ರದಲ್ಲಿರು ಬಿಜೆಪಿ ನೇತೃತ್ವದ ಪ್ರಧಾನಿ ನರೇಂದ್ರ ಮೋದಿಯವರ ಎನ್‌ಡಿಎ ಸರ್ಕಾರ ಶೋಷಿತ ಸಮುದಾಯವಾದ ಮಾದಿಗ ಜನಾಂಗವನ್ನು ಪರಿಗಣಿಸಿ ಒಳ ಮೀಸಲಾತಿಯನ್ನು ಜಾರಿಗೆ ತಂದು ಮಾದಿಗ ಜನಾಂಗದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕೋಟೆ ಕದಂಬ ಪಾಕ್ಷಿಕ ಪತ್ರಿಕೆಯ ಸಂಪಾದಕ ನಿಂಗಪ್ಪ ದೊಡ್ಡಮನಿಯವರು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Please follow and like us:
error