ಮರ-ಗಿಡಗಳನ್ನು ಮಕ್ಕಳಂತೆ ಸಂರಕ್ಷಿಸಿ- ಸಚಿವ ಬಸವರಾಜ ರಾಯರಡ್ಡಿ ಕರೆ

koti-vruksha-andholana koti-vruksha-andholana-koppalಮನುಷ್ಯನಿಗೆ ಪ್ರಾಣವಾಯು ಅಂದರೆ ಆಮ್ಲಜನಕವನ್ನು ನೀಡುವ ಮರ-ಗಿಡಗಳನ್ನು ಮಕ್ಕಳನ್ನು ಜೋಪಾನ ಮಾಡಿದಂತೆ ಸಂರಕ್ಷಿಸಿದಾಗ ಮಾತ್ರ, ಪರಿಸರ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.
ಅರಣ್ಯ ಇಲಾಖೆಯ ವತಿಯಿಂದ ಕೊಪ್ಪಳದ ಕಿಮ್ಸ್ ಮೆಡಿಕಲ್ ಕಾಲೇಜು ಆವರಣದಲ್ಲಿ ಶನಿವಾರದಂದು ಹಮ್ಮಿಕೊಳ್ಳಲಾಗಿದ್ದ ಕೊಟಿ ವೃಕ್ಷ ಆಂದೋಲನವನ್ನು ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳ ಆಶಯದಂತೆ ರಾಜ್ಯದಲ್ಲಿ ೦೧ ಕೋಟಿ ಗಿಡಗಳನ್ನು ನೆಡಲು ಕೋಟಿ ವೃಕ್ಷ ಆಂದೊಲನವನ್ನು ಈ ಬಾರಿ ಹಮ್ಮಿಕೊಳ್ಳಲಾಗಿದ್ದು, ರಾಜ್ಯದಲ್ಲಿ ಗಿಡಗಳನ್ನು ಬೆಳೆಸಬೇಕು, ಅರಣ್ಯ ಪ್ರದೇಶ ಹೆಚ್ಚಾಗಬೇಕು, ಪರಿಸರ ಉತ್ತಮವಾಗಬೇಕು ಎನ್ನುವುದು ಸರ್ಕಾರದ ಬಯಕೆಯಾಗಿದೆ. ದೇಶದಲ್ಲಿ ಅರಣ್ಯ ಪ್ರದೇಶದ ಸರಾಸರಿ ಪ್ರಮಾಣ ಶೇ. ೨೨ ರಷ್ಟು ಇದ್ದರೆ, ಕರ್ನಾಟಕ ರಾಜ್ಯದಲ್ಲಿ ಶೇ. ೨೧ ರಷ್ಟು ಅಂದರೆ ಶೇ. ೦೧ ರಷ್ಟು ಕಡಿಮೆ ಇದೆ. ಮೀಜೋರಂ ರಾಜ್ಯದಲ್ಲಿ ಅರಣ್ಯ ಶೇ. ೮೯ ರಷ್ಟಿದೆ. ರಾಜ್ಯದಲ್ಲಿ ದಟ್ಟ ಅರಣ್ಯ ಇರುವುದು ಪಶ್ಚಿಮ ಘಟ್ಟಗಳಲ್ಲಿ. ಆದರೆ ಮರಗಳ್ಳರ ಹಾವಳಿ, ನೈಸರ್ಗಿಕ ವಿಕೋಪ ಮುಂತಾದ ಕಾರಣಗಳಿಂದ ಇಲ್ಲಿಯೂ ಅರಣ್ಯ ಪ್ರದೇಶ ಕುಂಠಿತಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ರಾಜ್ಯದಲ್ಲಿ ಅರಣ್ಯ ಪ್ರದೇಶವನ್ನು ಹೆಚ್ಚಿಸಲು ಕೋಟಿಗಟ್ಟಲೆ ಅನುದಾನವನ್ನು ಸರ್ಕಾರ ಅರಣ್ಯ ಇಲಾಖೆಗೆ ಕೊಡುತ್ತಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಅರಣ್ಯ ಪ್ರದೇಶ ವಿಸ್ತರಣೆ ಆಗುತ್ತಿಲ್ಲ. ಅರಣ್ಯ ನಾಶದಿಂದ ಇಂದು ಭಾರತ ದೇಶವಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿಯೂ ಪರಿಸರ ಅಸಮತೋಲನ, ತಾಪಮಾನ ಏರಿಕೆ, ಮಳೆಯ ಕೊರತೆ, ಬರ ಪರಿಸ್ಥಿತಿ ಕಂಡುಬರುತ್ತಿದೆ. ಬರ ಪರಿಸ್ಥಿತಿ ಬಾರದಂತೆ ತಡೆಯಲು, ಹೆಚ್ಚು, ಹೆಚ್ಚು ಗಿಡ-ಮರಗಳನ್ನು ಬೆಳೆಸುವುದೊಂದೇ ಮಾರ್ಗವಾಗಿದೆ. ಒಬ್ಬ ವ್ಯಕ್ತಿಗೆ ಒಂದು ಮರದಂತೆ ಇದನ್ನು ವಂಶವೃದ್ಧಿ ಕಾರ್ಯಕ್ರಮದಂತೆ ಪರಿಗಣಿಸಬೇಕಿದೆ. ಕೊಪ್ಪಳ ಜಿಲ್ಲೆಯಲ್ಲಿ ಈ ವರ್ಷ ೧೧ ಲಕ್ಷ ಗಿಡಗಳನ್ನು ನೆಡುವ ಗುರಿಯನ್ನು ಅರಣ್ಯ ಇಲಾಖೆ ಹೊಂದಿರುವುದು ಶ್ಲಾಘನೀಯ. ಆದರೆ ಗಿಡಗಳನ್ನು ನೆಟ್ಟರೆ ಮಾತ್ರ ಅರಣ್ಯ ಇಲಾಖೆ ಜವಾಬ್ದಾರಿ ಮುಗಿದಂತೆ ಅಲ್ಲ. ನೆಡಲಾದ ಗಿಡಗಳಿಗೆ ಕನಿಷ್ಟ ೦೬ ತಿಂಗಳು ನೀರು ಹಾಕಿ ಸಂರಕ್ಷಿಸಬೇಕು. ಮುಂದಿನ ವರ್ಷಕ್ಕೆ ಕನಿಷ್ಟ ಶೇ. ೮೫ ರಷ್ಟು ಗಿಡಗಳಾದರೂ ಉಳಿದು, ಬೆಳವಣಿಗೆಯಾಗಿರುವುದು ಕಾಣಬೇಕು. ಈ ಕುರಿತ ವರದಿಯನ್ನು ಅರಣ್ಯ ಇಲಾಖೆಯವರು ಸಲ್ಲಿಸಬೇಕು. ಪರಿಸರ ಸಂರಕ್ಷಣೆ, ಗಿಡ ನೆಡುವಂತಹ ಕಾರ್ಯಕ್ರಮಗಳು ಕೇವಲ ಸರ್ಕಾರದಿಂದ ಮಾತ್ರ ಯಶಸ್ಸು ಕಾಣಲು ಸಾಧ್ಯವಿಲ್ಲ. ಇದಕ್ಕೆ ಎಲ್ಲ ಸಾರ್ವಜನಿಕರು, ಪರಿಸರ ಪ್ರೇಮಿಗಳು, ಸಂಘ-ಸಂಸ್ಥೆಗಳ ಪಾತ್ರವೂ ಬಹುಮುಖ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಅರಣ್ಯದ ಪ್ರಮಾಣ ಬಹಳ ಕಡಿಮೆ ಇದೆ. ಕೊಪ್ಪಳ ಜಿಲ್ಲೆಯು ಇದೀಗ ಕೃಷಿ, ತೋಟಗಾರಿಕೆ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ಧಿಯನ್ನು ಕಾಣುತ್ತಿದೆ.
ಕೊಪ್ಪಳದ ಮೆಡಿಕಲ್ ಕಾಲೇಜು ಆವರಣದಲ್ಲಿ ಚಾಲನೆ ನೀಡಲಾಗಿರುವ ಕೋಟಿ ವೃಕ್ಷ ಆಂದೋಲನವು ಇಡೀ ಜಿಲ್ಲೆಗೆ ವ್ಯಾಪಿಸಿ, ಕಾರ್ಯಕ್ರಮದ ಅನುಷ್ಠಾನಕ್ಕೆ ಜಿಲ್ಲೆಯು ಮಾದರಿಯಾಗಲಿ. ಸಾರ್ವಜನಿಕರು ಸಕ್ರಿಯವಾಗಿ ಕೈಜೋಡಿಸಿ, ಕೋಟಿ ವೃಕ್ಷ ಆಂದೋಲನವನ್ನು ಯಶಸ್ವಿಗೊಳಿಸಲು ಸಹಕರಿಸಲಿ ಎಂದು ಮನವಿ ಮಾಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ಡಿ. ಬೋರಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಬರ ಪರಿಸ್ಥಿತಿಯನ್ನು ತಡೆಗಟ್ಟಲು ಅರಣ್ಯೀಕರಣ ಅಗತ್ಯವಾಗಿದೆ. ಜು. ೦೨ ರಿಂದ ೧೦ ರವರೆಗೆ ಕೋಟಿ ವೃಕ್ಷ ಆಂದೊಲನದಡಿ, ಎಲ್ಲ ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಸರ್ಕಾರಿ ಜಾಗಗಳಲ್ಲಿ, ಸಾರ್ವಜನಿಕ ಸ್ಥಳಗಳು, ಗೋಮಾಳ, ಸ್ಮಶಾನ, ಸಂಘ ಸಂಸ್ಥೆ ಆವರಣಗಳು, ರೈತರ ಹೊಲಗಳ ಬದುಗಳ ಮೇಲೆ ವಿವಿಧ ಬಗೆಯ ಗಿಡಗಳು, ಬೇವು, ಹೊಂಗೆ, ಅರಳಿ, ಹೆಬ್ಬೇವು, ಶ್ರೀಗಂಧ, ಪೇರಲು, ಹುಣಸೆ, ನೆಲ್ಲಿ ಜಾತಿಯ ಗಿಡಗಳನ್ನು ನೆಡಲಾಗುವುದು. ಸಾಮಾಜಿಕ ಅರಣ್ಯ ಹಾಗೂ ಪ್ರಾದೇಶಿಕ ಅರಣ್ಯ ವಿಭಾಗದಿಂದ ಮುಂದಿನ ಮೂರು ತಿಂಗಳ ಅವಧಿಯಲ್ಲಿ ೧೨ ಲಕ್ಷ ಗಿಡಗಳನ್ನು ನೆಡುವ ಗುರಿಯನ್ನು ಹೊಂದಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ್, ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದ್ರಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್, ಕಿಮ್ಸ್ ನಿರ್ದೇಶಕ ಶಂಕರ್ ಮಲಾಪುರೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಕಿಮ್ಸ್ ಆವರಣದಲ್ಲಿ ಗಣ್ಯಾತಿಗಣ್ಯರು ವಿವಿಧ ಬಗೆಯ ಗಿಡಗಳನ್ನು ನೆಡುವ ಮೂಲಕ ಕೋಟಿ ವೃಕ್ಷ ಆಂದೋಲನದಲ್ಲಿ ಪಾಲ್ಗೊಂಡರು.

Please follow and like us:
error