ಮಕ್ಕಳ ರಕ್ಷಣೆಗೆ ಗ್ರಾಮಲೆಕ್ಕಿಗರು ಬದ್ಧರಾಗಿ- ಡಿಸಿ ಎಂ.ಕನಗವಲ್ಲಿ

koppal_dc_sp_news: ಜಿಲ್ಲೆಯ ಪ್ರತಿ ಗ್ರಾಮ ಲೆಕ್ಕಿಗರು ಕಾನೂನು ಅರಿವು ಪಡೆದು, ಸ್ಥಳೀಯ ಮಟ್ಟದಲ್ಲಿ ಮಕ್ಕಳ ರಕ್ಷಣೆಗೆ ಹೆಚ್ಚು ಕಾರ್ಯಪ್ರವೃತ್ತರಾಗಬೇಕು ಎಂದು ಗ್ರಾಮ ಲೆಕ್ಕಿಗರುಗಳಿಗೆ ಜಿಲ್ಲಾಧಿಕಾರಿ ಎಂ ಕನಗವಲ್ಲಿ ಅವರು ಸೂಚನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆಯ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ವ್ಯವಸ್ಥೆಗಳ ಕುರಿತು ಗ್ರಾಮ ಲೆಕ್ಕಾಧಿಕಾರಿಗಳಿಗೆ ಹಮ್ಮಿಕೊಳ್ಳಲಾದ ಒಂದು ದಿನದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮ ಲೆಕ್ಕಿಗರು ಆಯಾ ಗ್ರಾಮದ ಮುಖ್ಯ ಅಧಿಕಾರಿಗಳಿದ್ದಂತೆ, ಆಯಾ ಗ್ರಾಮದ ಸಂಪೂರ್ಣ ವಿವರವನ್ನು ಹೊಂದಿರಬೇಕು. ಎಲ್ಲ ಕಾನೂನುಗಳ ಅರಿವನ್ನು ಸಹ ಗ್ರಾಮ ಲೆಕ್ಕಿಗರು ಹೊಂದಿರುವುದು ಅಗತ್ಯವಾಗಿದೆ. ಜನಿಸಿದ ಪ್ರತಿ ಮಗುವಿನ ಜನನ ಪ್ರಮಾಣ ಪತ್ರ ಪಡೆಯುವುದು ಆ ಮಗುವಿನ ಪ್ರಥಮ ಹಕ್ಕು, ಗ್ರಾಮದ ಪ್ರತಿಯೊಬ್ಬ ಮಗುವು ಅದನ್ನು ಪಡೆಯುವಂತೆ ಹಾಗೂ ಅದರ ಪ್ರಯೋಜನದ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿ, ಗ್ರಾಮದ ಅಭಿವೃದ್ಧಿಯೊಂದಿಗೆ ಮಕ್ಕಳ ಸಂರಕ್ಷಣೆಗೆ ಗ್ರಾಮ ಲೆಕ್ಕಿಗರು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು, ಜನನ ಹಾಗೂ ಮರಣ ನೋಂದಣಿ ಮತ್ತು ಪ್ರಮಾಣ ಪತ್ರಗಳ ಮಹತ್ವ ಹಾಗೂ ಅವುಗಳ ಸರಿಯಾದ ಅಂಕಿ ಅಂಶಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಯುನಿಸೆಫ್ ಪ್ರಾದೇಶಿಕ ಸಂಯೋಜಕ ರಾಘವೇಂದ್ರ ಭಟ್ ಅವರು, ಗ್ರಾಮ ಲೆಕ್ಕಾಧಿಕಾರಿಗಳಿಗೆ ಮಕ್ಕಳ ಹಕ್ಕುಗಳು, ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ ಕುರಿತು, ಯುನಿಸೆಫ್ ಸಂಯೋಜಕ ಹರೀಶ್ ಜೋಗಿ ಅವರು, ಬಾಲ್ಯವಿವಾಹ ಹಾಗೂ ಮಕ್ಕಳ ನ್ಯಾಯ (ಘೋಷಣೆ ಮತ್ತು ರಕ್ಷಣೆ) ಕಾಯ್ದೆ ಕುರಿತು ತರಬೇತಿ ನೀಡಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್ ರಾಮಚಂದ್ರನ್ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಬಸವರಾಜ ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Please follow and like us:
error