ಮಕ್ಕಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು, ಸತ್ಪ್ರಜೆಗಳಾಗಬೇಕು- ಬಿ. ದಶರಥ

ಕೊಪ್ಪಳ, :  ಮಕ್ಕಳು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು, ಸತ್ಪ್ರಜೆಗಳಾಗಿ, ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದು ಕೊಪ್ಪಳದ ಹಿರಿಯಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ. ದಶರಥ ಅವರು ಮಕ್ಕಳಿಗೆ ಕರೆ ನೀಡಿದರು.
ಕರ್ನಾಟಕ ಬಾಲವಿಕಾಸ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ಬಾಲಮಂದಿರದ ಮಕ್ಕಳಿಗೆ ಕೊಪ್ಪಳದ ಸರ್ಕಾರಿ ಬಾಲಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳು ಸ್ವಾಮಿ ವಿವೇಕಾನಂದರು, ಅಬ್ದುಲ್ ಕಲಾಂ, ಸರ್.ಎಂ. ವಿಶ್ವೇಶ್ವರಯ್ಯ ಅವರಂತಹ ಮಹಾನ್ ವ್ಯಕ್ತಿಗಳು ಬೆಳೆದು ಬಂದ ದಾರಿಯ ಬಗ್ಗೆ ತಿಳಿದುಕೊಳ್ಳಬೇಕು. ಪ್ರಾಮಾಣಿಕತೆ, ಸತತ ಪ್ರಯತ್ನ, ಶಿಸ್ತು, ಅಧ್ಯಯನ ಶೀಲತೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ದೇಶದ ಸತ್ಪ್ರಜೆಗಳಾಗಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಬೇಕು ಎಂದು ಬಿ. ದಶರಥ ಅವರು ಮಕ್ಕಳಿಗೆ ಕರೆ ನೀಡಿದರು.
ವ್ಯಕ್ತಿತ್ವ ವಿಕಸನ ಶಿಬಿರವನ್ನು ಮಾ. ೨೮ ರಿಂದ ಏ. ೦೪ ರವರೆಗೆ ಸರ್ಕಾರಿ ಬಾಲಮಂದಿರದ ಮಕ್ಕಳಿಗೆ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಮಕ್ಕಳಿಗೆ ಯೋಗ, ಸಂಗೀತ, ನಾಟಕ, ನೃತ್ಯ, ಕ್ರಾಫ್ಟ್ (ಪೇಪರ್ ಕಟಿಂಗ್), ಚಿತ್ರಕಲೆ, ಮ್ಯಾಟ್ ಮೇಕಿಂಗ್, ಕನ್ನಡ ಮತ್ತು ಇಂಗ್ಲಿಷ್ ಸಂವಹನ ಹಾಗೂ ಭಾರತದ ಇತಿಹಾಸ ಮತ್ತು ಸಂಸ್ಕೃತಿ, ಮಕ್ಕಳ ಹಕ್ಕುಗಳು ಮತ್ತು ಎದುರಿಸುತ್ತಿರುವ ಸಮಸ್ಯೆಗಳು, ಆಹಾರ ಮತ್ತು ಆರೋಗ್ಯ, ಕ್ರೀಡಾ ಆಸಕ್ತಿ ಮತ್ತು ಶಿಸ್ತು, ಹದಿ ಹರೆಯದ ವಯಸ್ಸಿನ ಮಕ್ಕಳು ತೆಗೆದುಕೊಳ್ಳಬೇಕಾದ ಕಾಳಜಿ, ಸ್ವಚ್ಚತೆ, ಪೌರ ಪ್ರಜ್ಞೆ, ಮತ್ತು ಪವಾಡ ರಹಸ್ಯ ಬಯಲು ಕುರಿತು ಉಪನ್ಯಾಸ ನೀಡಲಾಯಿತು.
ಜಿಲ್ಲಾ ಕೇಂದ್ರ ಕಾರಾಗೃಹ ಅಧೀಕ್ಷಕ ಸಂಜಯ ಜತ್ತಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಹನುಮಂತಪ್ಪ ಬಿಜಕಲ್, ಸಂಗಮೇಶ್ವರಗೌಡ ಪಾಟೀಲ್, ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ್, ಪ್ರಭಾರ ಮಕ್ಕಳ ರಕ್ಷಣಾಧಿಕಾರಿ ಜಗದೀಶ್ ಮುಂತಾದವರು ಉಪಸ್ಥಿತರಿದ್ದರು. ಬಾಲಮಂದಿರದ ಅಧೀಕ್ಷಕಿ ರೋಹಿಣಿ ಕೊಟಗಾರ ಸ್ವಾಗತಿಸಿದರು. ಪರಿವೀಕ್ಷಣಾಧಿಕಾರಿ ಇಮಾಲಪ್ಪ ಕಂದಳ್ಳಿ ನಿರೂಪಿಸಿದರು. ಆಪ್ತ ಸಮಾಲೋಚಕ ರವಿ ವಂದಿಸಿದರು.

Please follow and like us:
error