You are here
Home > Koppal News-1 > ಭಾಗ್ಯನಗರ ರೈಲ್ವೆ ಗೇಟ್‍ಗೆ ಮೇಲ್ಸೇತುವೆ : ವಾಹನಗಳ ಸಂಚಾರ ನಿಷೇಧ

ಭಾಗ್ಯನಗರ ರೈಲ್ವೆ ಗೇಟ್‍ಗೆ ಮೇಲ್ಸೇತುವೆ : ವಾಹನಗಳ ಸಂಚಾರ ನಿಷೇಧ

gateಕೊಪ್ಪಳ-ಭಾಗ್ಯನಗರ ರೈಲ್ವೆ ಗೇಟ್ ಸಂಖ್ಯೆ 62 ಕ್ಕೆ ಮೇಲ್ಸೇತುವೆ ನಿರ್ಮಾಣ ಕಾರ್ಯಕ್ಕಾಗಿ ಈ ಮಾರ್ಗದಲ್ಲಿ ಎಲ್ಲ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
ಕೊಪ್ಪಳ-ಭಾಗ್ಯನಗರ ರೈಲ್ವೆ ಗೇಟ್ ಸಂಖ್ಯೆ 62 ಕ್ಕೆ ಮೇಲು ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭಿಸುವ ಸಲುವಾಗಿ ಅಗತ್ಯ ವಸ್ತುಗಳು ಹಾಗೂ ಸಾಧನಗಳನ್ನು ಸಂಗ್ರಹಿಸಲು ಸ್ಥಳಾವಕಾಶದ ಅಗತ್ಯವಿದೆ. ಅಲ್ಲದೆ ಕಾಮಗಾರಿ ಸಂದರ್ಭದಲ್ಲಿ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳುವ ಸಲುವಾಗಿ ಈ ಮಾರ್ಗದಲ್ಲಿ ವಾಹನಗಳ ಸಂಚಾರ ನಿಷೇಧಿಸುವಂತೆ ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಿಭಾಗದ ಉಪ ಮುಖ್ಯ ಅಭಿಯಂತರರು(ನಿರ್ಮಾಣ) ಅವರು ಕೋರಿದ ಹಿನ್ನೆಲೆಯಲ್ಲಿ, ಈ ಮಾರ್ಗದಲ್ಲಿ ಎಲ್ಲ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದ್ದು, ಭಾಗ್ಯನಗರದಿಂದ ಕೊಪ್ಪಳಕ್ಕೆ ಸಂಚರಿಸುವ ವಾಹನಗಳು, ಭಾಗ್ಯನಗರದ ಅಂಬೇಡ್ಕರ್ ಸರ್ಕಲ್ ಮೂಲಕ ಪದ್ಮಾವತಿ ಕಾಲೋನಿ, ಅಡವಿ ಆಂಜನೇಯ ದೇವಸ್ಥಾನ ಮುಂದಿರುವ ರಸ್ತೆಯಿಂದ ಭಾರತ ಆಹಾರ ನಿಗಮ (ಎಫ್‍ಸಿಐ) ಗೋದಾಮು ಕಟ್ಟಡದ ಹಿಂದಿನ ರಸ್ತೆ ಮುಖಾಂತರ ಕಿನ್ನಾಳ ರಸ್ತೆ ತಲುಪಿ, ಅಲ್ಲಿಂದ ರೈಲ್ವೆ ಗೇಟ್ ಸಂ: 64 ರಲ್ಲಿ ನಿರ್ಮಾಣವಾಗಿರುವ ರೈಲ್ವೆ ಕೆಳಸೇತುವೆ ಮಾರ್ಗ ಮೂಲಕ ಕೊಪ್ಪಳಕ್ಕೆ ತಲುಪಬೇಕು. ಇನ್ನೊಂದು ಮಾರ್ಗವೆಂದರೆ, ಭಾಗ್ಯನಗರದ ಮುಖ್ಯ ರಸ್ತೆಯಿಂದ ಓಜನಹಳ್ಳಿ ರಸ್ತೆ, ವಿಜಯನಗರ ಕಾಲೋನಿ ಮೂಲಕ ಕಿನ್ನಾಳ ರಸ್ತೆ ತಲುಪಿ, ಅಲ್ಲಿಂದ ರೈಲ್ವೆ ಗೇಟ್ ಸಂ: 64 ರಲ್ಲಿ ನಿರ್ಮಾಣವಾಗಿರುವ ರೈಲ್ವೆ ಕೆಳಸೇತುವೆ ಮಾರ್ಗ ಮೂಲಕ ಕೊಪ್ಪಳಕ್ಕೆ ತಲುಪಬಹುದು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಸಹಕಾರದೊಂದಿಗೆ ಅವಶ್ಯವಿರುವ ಕಡೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಿದ್ದಾರೆ.

Leave a Reply

Top