ಬೆಳೆ ವಿಮೆ ವ್ಯವಸ್ಥೆ ಬಗ್ಗೆ ರೈತರಿಗೆ ಭರವಸೆ ಮೂಡಿಸಬೇಕಿದೆ- ಡಾ. ಪ್ರಕಾಶ್ ಕಮ್ಮರಡಿ

prakash_kammaradi_koppal_dc_office: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿದ್ದು, ಬೆಳೆ ವಿಮೆ ಮಾಡಿಸಿಕೊಂಡ ರೈತರಿಗೆ ಅದರ ವಿಮಾ ಪರಿಹಾರ ಸಮರ್ಪಕವಾಗಿ ದೊರೆತಲ್ಲಿ ಮಾತ್ರ ಬೆಳೆ ವಿಮೆ ಬಗ್ಗೆ ರೈತರಿಗೆ ಭರವಸೆ ಮೂಡಲಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಶ್ರಮಿಸುವ ಅಗತ್ಯವಿದೆ ಎಂದು ರಾಜ್ಯ ಕೃಷಿ ಬೆಳೆ ಆಯೋಗದ ಅಧ್ಯಕ್ಷ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ರೈತರೊಂದಿಗೆ ಶನಿವಾರದಂದು ನಡೆಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಳೆದೆರಡು ವರ್ಷಗಳಿಂದಲೂ ತೀವ್ರ ಬರ ಪರಿಸ್ಥಿತಿ ತಲೆದೋರಿದೆ. ಬೆಳೆ ಹಾನಿಗೆ ಸರ್ಕಾರ ಕೊಡುವ ಪರಿಹಾರ, ರೈತರಿಗೆ ಕೇವಲ ಮುಂದಿನ ಬಿತ್ತನೆ ವ್ಯವಸ್ಥೆಗೆ ಕೊಡುವ ಸಹಾಯಧನ ಮಾತ್ರ ಆಗಲಿದ್ದು, ಬೆಳೆ ಹಾನಿಗೆ ಅವರಿಗೆ ಸಮರ್ಪಕ ಪರಿಹಾರ ದೊರೆಯಬೇಕೆಂದರೆ, ಬೆಳೆ ವಿಮೆ ಪರಿಹಾರ ರೈತರಿಗೆ ಸರಿಯಾಗಿ ದೊರೆಯಬೇಕು. ಈ ಹಿಂದಿನ ಬೆಳೆ ವಿಮೆ ವ್ಯವಸ್ಥೆ ಬಗ್ಗೆ ರೈತರಿಗೆ ಭರವಸೆ ಇರಲಿಲ್ಲ. ಇದೀಗ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಜಾರಿಗೆ ಬಂದಿದ್ದು, ಎಲ್ಲ ರೈತರು ಬೆಳೆ ವಿಮೆ ವ್ಯಾಪ್ತಿಗೆ ಬರುವಂತಾಗಬೇಕು. ಆದಾಗ್ಯೂ ಬೆಳೆ ವಿಮೆ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡುವ ಕುರಿತು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ತೀವ್ರ ಚಿಂತನೆಗಳು ನಡೆದಿವೆ. ಮುಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರ ಕುರಿತು ಈಗಾಗಲೆ ಬೆಳೆ ಕಟಾವು ಸಮೀಕ್ಷೆ ನಡೆದಿದೆ. ರಾಜ್ಯದಲ್ಲಿನ ಅಂಕಿ ಅಂಶಗಳನ್ನು ಗಮನಿಸಿದಾಗ ಬೆಳೆ ವಿಮೆ ವ್ಯಾಪ್ತಿಗೆ ಹೆಚ್ಚಿನ ರೈತರು ಸೇರ್ಪಡೆಯಾಗಿಲ್ಲ. ಹಿಂಗಾರು ಹಂಗಾಮಿಗೆ ಬೆಳೆ ವಿಮೆಗೆ ನೋಂದಾಯಿಸಲು ಡಿ. ೩೧ ರವರೆಗೂ ಅವಕಾಶವಿದೆ. ಎಲ್ಲ ರೈತರನ್ನು ಬೆಳೆ ವಿಮೆ ವ್ಯಾಪ್ತಿಗೆ ತರುವಂತಾಗಲು, ರೈತರಿಗೆ ನೂತನ ಬೆಳೆ ವಿಮೆ ವ್ಯವಸ್ಥೆ ಬಗ್ಗೆ ಮೊದಲು ಭರವಸೆ ಮೂಡಿಸಬೇಕಿದೆ. ಜಿಲ್ಲೆಯಾದ್ಯಂತ ಆಂದೋಲನ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ರೈತ ಜಾಗೃತಿ ಕಾರ್ಯಕ್ರಮಗಳು ಪ್ರತಿಯೊಂದು ಹಳ್ಳಿ ಹಳ್ಳಿಯಲ್ಲೂ ಆಗಬೇಕು. ಇದರ ನೇತೃತ್ವವನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ವಹಿಸಲಿದ್ದು, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ರೈತ ಪ್ರತಿನಿಧಿಗಳು, ವಿಮಾ ಕಂಪನಿಯೊಂದಿಗೆ ಸಭೆ ಕೈಗೊಂಡು, ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಆಗಬೇಕಿದೆ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಪ್ರಕಾಶ್ ಕಮ್ಮರಡಿ ಅವರು ಹೇಳಿದರು.
ನೋಟು ಹಿಂಪಡೆದ ಪರಿಣಾಮದ ವರದಿ ನೀಡಿ : ಕೇಂದ್ರ ಸರ್ಕಾರವು ೫೦೦ ಮತ್ತು ೧೦೦೦ ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆದ ಪರಿಣಾಮ ನೇರವಾಗಿ ರೈತರ ಕೃಷಿ ಉತ್ಪನ್ನ ವಹಿವಾಟಿನ ಮೇಲೆ ಆಗಿದೆ. ರೈತರು ಮಾರಾಟ ಮಾಡಲು ಬಯಸಿದರೂ, ಕೃಷಿ ಉತ್ಪನ್ನಗಳನ್ನು ಖರೀದಿಸುವ ವರ್ತಕರು, ಬೆಳೆ ಖರೀದಿಗೆ ಮುಂದಾಗುತ್ತಿಲ್ಲ. ಇದರ ಪರಿಣಾಮವಾಗಿ ಉತ್ಪನ್ನಗಳ ಬೆಲೆ ಕುಸಿತವಾಗುತ್ತಿದೆ. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆಯದೆ, ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಕೃಷಿ ಉತ್ಪನ್ನಗಳ ಖರೀದಿ ಹಾಗೂ ಬೆಲೆಯ ಮೇಲೆ ಆಗಿರುವ ಪರಿಣಾಮದ ಬಗ್ಗೆ ರೈತರು, ಎಪಿಎಂಸಿ ಅಧಿಕಾರಿಗಳು, ವರ್ತಕರು ಇವರೊಂದಿಗೆ ಸಮಾಲೋಚಿಸಿ, ಒಂದು ವಾರದೊಳಗಾಗಿ ವರದಿಯನ್ನು ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರಿಗೆ ಸೂಚನೆ ನೀಡಿದರು. ಎಲ್ಲ ಜಿಲ್ಲೆಗಳಿಂದ ವರದಿಯನ್ನು ಪಡೆದು, ಇದರ ಆಧಾರದಲ್ಲಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಅಗತ್ಯ ಪರಿಹಾರ ಕುರಿತು ಶಿಫಾರಸು ಸಲ್ಲಿಸಲಾಗುವುದು ಎಂದು ಡಾ. ಪ್ರಕಾಶ್ ಕಮ್ಮರಡಿ ಅವರು ಹೇಳಿದರು.
೪೮೭೮೭ ಹೆ. ಕೃಷಿಯಿಂದ ಕೈತಪ್ಪಿದೆ : ರಾಜ್ಯದಲ್ಲಿ ಕಳೆದ ೧೦ ವರ್ಷಗಳಿಂದ ಈಚೆಗೆ ಕೃಷಿ ಹಾಗೂ ತೋಟಗಾರಿಕೆ ಪ್ರದೇಶ, ಬೆಳೆ ಉತ್ಪಾದನೆ ಕುರಿತಂತೆ ಕೃಷಿ ಬೆಲೆ ಆಯೋಗವು ಪ್ರತಿ ಜಿಲ್ಲಾವಾರು ಹಾಗೂ ಬೆಳೆವಾರು, ರಾಜ್ಯ ಸರ್ಕಾರಕ್ಕೆ ಸಂಶೋಧನಾ ವರದಿಯನ್ನು ಕಳೆದ ತಿಂಗಳು ಸಲ್ಲಿಸಿದೆ. ಇದರನ್ವಯ ಕಳೆದ ೧೦ ವರ್ಷಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ೪೮೭೮೭ ಹೆ. ಭೂಮಿ ಕೃಷಿಯಿಂದ ಕೈತಪ್ಪಿ ಹೋಗಿದೆ. ೫. ೧೪ ಲಕ್ಷ ಹೆ. ಇದ್ದ ಕೃಷಿ ಭೂಮಿ ಇದೀಗ ೪. ೬೪ ಲಕ್ಷ ಹೆ. ಗೆ ಕುಸಿದಿದೆ. ಕೆಲವು ಬೆಳೆಗಳು ವಿಸ್ತೀರ್ಣವನ್ನು ಹೆಚ್ಚಿಸಿಕೊಂಡಿದ್ದು, ಕೆಲವು ಇಳಿಕೆ ಕಂಡಿವೆ. ಜಿಲ್ಲೆಯಲ್ಲಿ ಸೂರ್ಯಕಾಂತಿ ಬೆಳೆ ವಿಸ್ತೀರ್ಣ ತೀವ್ರ ಕಡಿಮೆಯಾಗಿದ್ದು ೬೪೨೭೫ ಹೆ. ಇಳಿಕೆಯಾಗಿದೆ. ಸಜ್ಜೆ- ೪೩೩೪೯ ಹೆ. ಕಡಿಮೆಯಾಗಿದೆ. ಆದರೆ ಮೆಕ್ಕೆಜೋಳ ೪೭೬೦೬ ಹೆ. ಪ್ರದೇಶದಷ್ಟು ಏರಿಕೆಯಾಗಿದೆ. ೯೨೫೯ ಹೆ. ಕೃಷಿ ಭೂಮಿ ತೋಟಗಾರಿಕೆಗೆ ಬದಲಾಗಿದೆ. ಜಿಲ್ಲೆಯಲ್ಲಿ ಈರುಳ್ಳಿ ಹಾಗೂ ಟೊಮ್ಯಾಟೊ ಬೆಳೆಗಳು ಹೆಚ್ಚು ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ನಗರೀಕರಣ, ರಿಯಲ್ ಎಸ್ಟೇಟ್ ವ್ಯವಹಾರ, ಕೈಗಾರಿಕೆ ವಿಸ್ತೀರ್ಣ ಮುಂತಾದ ಕಾರಣಗಳಿಂದಾಗಿ ಒಟ್ಟಾರೆ ೩೯೫೨೭ ಹೆ. ಭೂಮಿ ರೈತರಿಂದ ಕೈತಪ್ಪಿ ಹೋಗಿದೆ. ಇದರ ಪರಿಣಾಮದ ಬಗ್ಗೆಯೂ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಜಿಲ್ಲೆಯಲ್ಲಿನ ಹವಾಗುಣ, ಮಣ್ಣಿನ ಗುಣ, ನೀರಿನ ಪ್ರಮಾಣ ಇವುಗಳನ್ನು ಆಧರಿಸಿ ಪ್ರತಿ ಜಿಲ್ಲೆಗೂ ಬೆಳೆ ನೀತಿ ಜಾರಿಗೆ ಬರಬೇಕಿದೆ. ಈ ನಿಟ್ಟಿನಲ್ಲಿ ತಜ್ಞರು, ಇಲಾಖಾ ಅಧಿಕಾರಿಗಳು, ರೈತರು ಇವರೊಂದಿಗೆ ಚರ್ಚೆ ನಡೆಸಿ, ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಡಾ. ಪ್ರಕಾಶ್ ಕಮ್ಮರಡಿ ಅವರು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ಕೃಷಿಕ ಸಮಾಜದ ಶಿವಣ್ಣ ಮೂಲಿಮನಿ ಅವರು ಮಾತನಾಡಿ, ರೈತರು ಬೆಳೆ ವಿಮೆ ವ್ಯವಸ್ಥೆ ಹಾಗೂ ಪರಿಹಾರದ ಬಗ್ಗೆ ಭರವಸೆ ಕಳೆದುಕೊಂಡಿದ್ದಾರೆ. ಬೆಳೆ ವಿಮೆ ಪರಿಹಾರವನ್ನು ಸಮರ್ಪಕವಾಗಿ ದೊರಕುವಂತೆ ಮಾಡಿ ಅವರಲ್ಲಿ ಆತ್ಮಸ್ಥೈರ್ಯ ಹಾಗೂ ಭರವಸೆಯನ್ನು ತುಂಬುವ ಕೆಲಸ ಸರ್ಕಾರ ಮಾಡಬೇಕಿದೆ ಎಂದರು.
ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ಪ್ರಭಾಕರ ಅಂಗಡಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ಪ್ರತಿ ಕ್ವಿಂ. ಗೆ ೬೨೪ ರಂತೆ ಈರುಳ್ಳಿ ಖರೀದಿ ಪ್ರಕ್ರಿಯೆ ನಡೆದಿದ್ದು, ಈವರೆಗೆ ಖರೀದಿ ಕೇಂದ್ರದಲ್ಲಿ ೩೨೫ ರೈತರಿಂದ ೧೫೯೦೯ ಕ್ವಿಂ. ಈರುಳ್ಳಿ ಖರೀದಿಸಲಾಗಿದೆ. ಖರೀದಿಸಿದ ದಿನದಂದೆ ಬೆಂಗಳೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೋಂದಾಯಿತ ವರ್ತಕರಿಗೆ ರವಾನೆ ಮಾಡಿ ಮಾರಾಟ ಮಾಡಲಾಗುತ್ತಿದ್ದು, ಶೇ. ೬೦ ರಿಂದ ೮೦ ರಷ್ಟು ಉತ್ಪನ್ನದ ಮೌಲ್ಯವನ್ನು ರಾಜ್ಯ ಸಹಕಾರ ಮಾರಾಟ ಮಹಾಮಂಡಳಕ್ಕೆ ಪಾವತಿಸಲಾಗಿದೆ ಎಂದರು.
ಸಭೆಯಲ್ಲಿ ಕೃಷಿ ಬೆಲೆ ಆಯೋಗದ ಸದಸ್ಯ ಹನುಮಗೌಡ ಬೆಳಗುರ್ಕಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಐ.ಎಸ್. ಶಿರಹಟ್ಟಿ, ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ಎಂ.ಬಿ. ಪಾಟೀಲ್, ಉಪಕೃಷಿ ನಿರ್ದೇಶಕ ವೀರೇಶ್ ಹುನಗುಂದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ರೈತ ಮುಖಂಡರು ಪಾಲ್ಗೊಂಡಿದ್ದರು.

Please follow and like us:
error