ಬಾಲ್ಯ ವಿವಾಹ ನಿಷೇಧ ಸಾಮೂಹಿಕ ವಿವಾಹ ಆಯೋಜಕರಿಗೆ ಸೂಚನೆ.

ಕೊಪ್ಪಳ ಏ. ೨೧  ಬರುವ ಮೇ ತಿಂಗಳ ೦೯ ರಂದು ಅಕ್ಷಯ ತೃತೀಯ ಇರುವುದರಿಂದ ಅಂದು, ಹೆಚ್ಚಿನ ಸಂಖ್ಯೆಯಲ್ಲಿ ವೈಯಕ್ತಿಕ ಮತ್ತು ಸಾಮೂಹಿಕ ವಿವಾಹಗಳು ನಡೆಯುವುದರಿಂದ, ಬಾಲ್ಯ ವಿವಾಹಗಳೂ ಕೂಡ ನಡೆಯುವ ಸಾಧ್ಯತೆ ಇರುತ್ತದೆ. ಬಾಲ್ಯ ವಿವಾಹ ನಡೆಸುವುದು ಹಾಗೂ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುವುದರಿಂದ, ವಿವಾಹ ಆಯೋಜಕರು, ಸಾಮೂಹಿಕ ವಿವಾಹಗಳ ಆಯೋಜಕರು ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಬೇಕು. ಅಲ್ಲದೆ ನಿಯಮಗಳ ಪಾಲನೆ ಮಾಡಬೇಕು ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಸೂಚನೆ ನೀಡಿದ್ದಾರೆ. ಮೇ. ೦೯ ರ ಅಕ್ಷಯ ತೃತೀಯ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ವೈಯಕ್ತಿಕ ವಿವಾಹಗಳು ಮತ್ತು ಸಾಮೂಹಿಕ ವಿವಾಹಗಳು ನಡೆಯುವು30hvr1childದು ಸಾಮಾನ್ಯ. ಈ ದಿನದಂದು ಬಾಲ್ಯ ವಿವಾಹಗಳು ನಡೆಯುವ ಸಾಧ್ಯತೆಗಳು ಹೆಚ್ಚಾಗಿದ್ದು, ಬಾಲ್ಯ ವಿವಾಹಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಹಲವು ಅಧಿಕಾರಿಗಳನ್ನು ಬಾಲ್ಯ ವಿವಾಹ ನಿಷೇಧಾಧಿಕಾರಿಗಳು ಎಂಬುದಾಗಿ ನೇಮಿಸಿದೆ. ಸಾಮೂಹಿಕ ವಿವಾಹದ ಸಂದರ್ಭದಲ್ಲಿ ಬಾಲ್ಯ ವಿವಾಹಗಳು ನಡೆಯದಂತೆ ಹಲವು ನಿಯಮಗಳನ್ನು ರೂಪಿಸಲಾಗಿದೆ. ಸಾಮೂಹಿಕ ವಿವಾಹಗಳು ಇತ್ತೀಚಿನ ದಿನಗಳಲ್ಲಿ ಜನಪ್ರಿಯಗೊಳ್ಳುತ್ತಿದ್ದು, ಇದು ವಿವಾಹದ ಹೆಸರಿನಲ್ಲಿ ದುಂದುವೆಚ್ಚಗಳ ಮೇಲೆ ಕಡಿವಾಣ ಹಾಕುವುದರೊಂದಿಗೆ ಸರಳ ವಿವಾಹಗಳಿಗೆ ಪ್ರೋತ್ಸಾಹ ಮಾಡುತ್ತವೆ. ಈ ನಿಟ್ಟಿನಲ್ಲಿ ಸಾಮೂಹಿಕ ವಿವಾಹಗಳ ಕಾರ್ಯಕ್ರಮಗಳನ್ನು ಖಾಸಗಿ ವ್ಯಕ್ತಿಗಳು, ಸಂಘಟನೆಗಳು, ದೇವಸ್ಥಾನಗಳು, ಟ್ರಸ್ಟ್‌ಗಳು ಇತ್ಯಾದಿ ಸಂಘಸಂಸ್ಥೆಗಳು ಆಯೋಜಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಸಾಮೂಹಿಕ ವಿವಾಹಗಳಲ್ಲಿ ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳನ್ನು ತಡೆಗಟ್ಟುವ ದೃಷ್ಟಿಯಿಂದ ಹಲವು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಸಾಮೂಹಿಕ ವಿವಾಹ ಆಯೋಜಕರಿಗೆ ಸೂಚನೆ : ಸಾಮೂಹಿಕ ವಿವಾಹಗಳ ಆಯೋಜಿಸುವ ಖಾಸಗಿ ಟ್ರಸ್ಟ್‌ಗಳು, ಸಂಘಗಳು, ಸೊಸೈಟಿಗಳು ಮತ್ತು ಖಾಸಗಿ ವ್ಯಕ್ತಿಗಳು ಕಡ್ಡಾಯವಾಗಿ ತಮ್ಮ ಸಂಸ್ಥೆಗಳನ್ನು ಜಿಲ್ಲಾ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕು. ನೋಂದಾಯಿಸಿದವರು, ಪ್ರತಿ ೫ ವರ್ಷಕ್ಕೊಮ್ಮೆ ನವೀಕರಿಸಬೇಕು. ಸಾಮೂಹಿಕ ವಿವಾಹ ಆಯೋಜಿಸಲು ಕಡ್ಡಾಯವಾಗಿ ತಹಸಿಲ್ದಾರರಿಂದ ಅನುಮತಿ ಪಡೆದುಕೊಳ್ಳಬೇಕು. ಅನುಮತಿ ಪಡೆದುಕೊಳ್ಳಲು ವಧು-ವರರ ಭಾವಚಿತ್ರ, ವಯಸ್ಸಿನ ದೃಢೀಕರಣ ಪತ್ರ, ವಾಸಸ್ಥಳ, ಪಡಿತರಚೀಟಿ, ಚುನಾವಣಾ ಗುರುತಿನ ಚೀಟಿ, ತಂದೆ ತಾಯಿ/ಪೋಷಕರಿಂದ ವಧು-ವರರ ವಿವಾಹಯೋಗ್ಯ ವಯಸ್ಸಾಗಿದೆ ಎಂಬ ದೃಢೀಕರಣ ಪತ್ರ ಹಾಗೂ ವಧು-ವರರ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಸಾಮೂಹಿಕ ವಿವಾಹ ಆಯೋಜಕರು ವಿವಾಹ ನಡೆಯುವ ಸ್ಥಳದಲ್ಲಿ ಬಾಲ್ಯ ವಿವಾಹ ನಿಷೇಧಕ್ಕೊಳಪಟ್ಟಿದ್ದು, ಇದು ಶಿಕ್ಷಾರ್ಹ ಅಪರಾಧವಾಗಿದೆ ಎಂಬ ಪ್ರಚಾರ ಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಶಿಶು ಅಭಿವೃದ್ಧಿ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಕಂದಾಯ ನಿರೀಕ್ಷಕರು ಕಡ್ಡಾಯವಾಗಿ ಸಾರ್ವಜನಿಕ ವಿವಾಹ ನಡೆಯುವ ಸ್ಥಳದಲ್ಲಿ ಹಾಜರಿದ್ದು, ಬಾಲ್ಯ ವಿವಾಹ ನಡೆಯದಂತೆ ನೋಡಿಕೊಳ್ಳಬೇಕು. ವಿವಾಹದ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಕಡ್ಡಾಯವಾಗಿರುತ್ತದೆ.
ಬಾಲ್ಯ ವಿವಾಹ ನಿಷೇಧಾಧಿಕಾರಿಗಳು : ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿವಾಹಕ ಅಧಿಕಾರಿಗಳು, ಡಿಡಿಪಿಐ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಕಾರ್ಮಿಕ ಅಧಿಕಾರಿ, ಸಮಾಜ ಕಲ್ಯಾಣಾಧಿಕಾರಿ, ಬಿಸಿಎಂ. ಇಲಾಖೆ ಜಿಲ್ಲಾ ಅಧಿಕಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ. ತಾಲೂಕು ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಕ್ಷಣಾಧಿಕಾರಿ, ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್, ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ, ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಿಡಿಓ, ವ್ಯಾಪ್ತಿಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್. ಗ್ರಾಮ ಮಟ್ಟದಲ್ಲಿ ಶಾಲಾ ಮುಖ್ಯ ಶಿಕ್ಷಕರು, ಕಂದಾಯ ನಿರೀಕ್ಷಕರು. ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಶಾಲಾ ಮುಖ್ಯ ಶಿಕ್ಷಕರು. ಕಂದಾಯ ನಿರೀಕ್ಷಕರು. ಆರೋಗ್ಯ ನಿರೀಕ್ಷಕರು. ಕಾರ್ಮಿಕ ನಿರೀಕ್ಷಕರು. ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಬಾಲ್ಯ ವಿವಾಹ ನಿಷೇಧಾಧಿಕಾರಿಗಳೆಂದು ಸರ್ಕಾರ ನೇಮಿಸಿದೆ. ಬಾಲ್ಯ ವಿವಾಹಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಸಾರ್ವಜನಿಕರು, ಸಾಮೂಹಿಕ ವಿವಾಹ ಆಯೋಜಕರು ಬಾಲ್ಯ ವಿವಾಹ ಅನಿಷ್ಠ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Please follow and like us:
error