ಬಹುಗ್ರಾಮ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ನೀರು ನೀಡಿ- ಸಂಸದ ಕರಡಿ ಸಂಗಣ್ಣ.

ಕೊಪ್ಪಳ ಏ. ೧೩ ಕುಡಿಯುವ ನೀರಿನ ತೊಂದರೆ ಎದುರಿಸುತ್ತಿರುವ ಗ್ರಾಮೀಣ ಪ್ರದೇಶಗಳ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ಜಿಲ್ಲೆಯಲ್ಲಿ ಜಾರಿಯಲ್ಲಿರುವ ಬಹುಗ್ರಾಮ ಕುಡಿDSC_0957ಯುವ ನೀರು ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಜನರಿಗೆ ನೀರು ಪೂರೈಕೆ ಮಾಡಿ ಎಂದು ಸಂಸದ ಕರಡಿ ಸಂಗಣ್ಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಒಟ್ಟು ೧೫ ಯೋಜನೆಗಳು ಜಾರಿಯಲ್ಲಿವೆ. ಈ ಪೈಕಿ ಗಂಗಾವತಿ ತಾಲೂಕಿನಲ್ಲಿ ೯ ಯೋಜನೆಗಳ ಪೈಕಿ ೦೪ ಮಾತ್ರ ಪೂರ್ಣಗೊಂಡಿವೆ. ಕೊಪ್ಪಳ ತಾಲೂಕಿನಲ್ಲಿ ೦೪ ಯೋಜನೆಗಳು ಇನ್ನೂ ಜಾರಿಯ ಹಂತದಲ್ಲಿವೆ. ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನಲ್ಲಿ ತಲಾ ಒಂದು ಯೋಜನೆಗಳಿದ್ದು, ಯಲಬುರ್ಗಾ ತಾಲೂಕಿನಲ್ಲಿ ೦೧ ಯೋಜನೆ ಪೂರ್ಣಗೊಂಡಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಜನ ನೀರಿನ ಬವಣೆ ಎದುರಿಸುವುದು ತಪ್ಪಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಜನರಿಗೆ ಮೊದಲು ನೀರು ಪೂರೈಕೆ ಮಾಡಿ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಮಲ್ಲಪ್ಪ ಅವರಿಗೆ ಸೂಚನೆ ನೀಡಿದರು. ಗಂಗಾವತಿ ತಾಲೂಕು ಸಿದ್ದಾಪುರ ಮತ್ತು ಇತರೆ ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಯೋಜನೆಯಡಿ ಕಾಮಗಾರಿ ಪೂರ್ಣಗೊಳಿಸದೆ ಗುತ್ತಿಗೆದಾರರಿಗೆ ಹೆಚ್ಚು ಹಣ ಪಾವತಿ ಪಾವತಿ ಮಾಡಿರುವ ಬಗ್ಗೆ ಈಗಾಗಲೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿದ್ದ ಕೃಷ್ಣ ಉದಪುಡಿ ಅವರು ಪರಿಶೀಲಿಸಿ, ವರದಿಯನ್ನು ನೀಡಿದ್ದರು. ಅಲ್ಲದೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಿದರೂ, ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಕೂಡಲೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ, ಇದಕ್ಕೆ ತಾವೇ ಹೊಣೆಗಾರರಾಗುತ್ತೀರಿ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಮಲ್ಲಪ್ಪ ಅವರಿಗೆ ಎಚ್ಚರಿಕೆ ನೀಡಿದರು. ಈ ಕುರಿತು ತಾವೇ ಖುದ್ದಾಗಿ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಸಂಸದರಿಗೆ ಹೇಳಿದರು.
ಅಂಗನವಾಡಿಗಳಿಗೆ ನೀರು ಪೂರೈಸಿ : ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಈಗಾಗಲೆ ಪೈಪ್‌ಲೈನ್ ಮತ್ತು ಟ್ಯಾಂಕ್‌ಗಳನ್ನು ಅಳವಡಿಸಲಾಗಿದೆ. ಆದರೆ ಈ ಪೈಕಿ ಶೇ. ೮೦ ರಷ್ಟು ಅಂಗನವಾಡಿಗಳಿಗೆ ನೀರು ಪೂರೈಕೆ ಆಗುತ್ತಿಲ್ಲ ಎಂದು ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಸತ್ಯನಾರಾಯಣರಾವ್ ದೇಶಪಾಂಡೆ ಅವರು ಸಭೆಯ ಗಮನಕ್ಕೆ ತಂದರು. ಇದು ವಾಸ್ತವ ಸತ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮಂಜುನಾಥ್ ಅವರು ಸಹ ಸಭೆಗೆ ತಿಳಿಸಿದರು. ಈ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಕರಡಿ ಸಂಗಣ್ಣ ಅವರು, ಈ ಕುರಿತು ಸಮಗ್ರ ಪರಿಶೀಲನೆ ನಡೆಸಿ, ವರದಿ ಸಲ್ಲಿಸಬೇಕು. ಅಲ್ಲದೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉದ್ಯೋಗಖಾತ್ರಿ ತೀವ್ರಗೊಳಿಸಿ : ಜಿಲ್ಲೆಯಲ್ಲಿ ಈ ವರ್ಷ ಉದ್ಯೋಗಖಾತ್ರಿ ಯೋಜನೆಯಡಿ ಹೆಚ್ಚಿನ ಮಾನವ ದಿನಗಳನ್ನು ಸೃಜಿಸಿ, ಕೂಲಿಕಾರ್ಮಿಕರಿಗೆ ಉದ್ಯೋಗ ನೀಡಬೇಕು. ತೋಟಗಾರಿಕೆ, ಅರಣ್ಯ, ಕೃಷಿ, ರೇಷ್ಮೆ ಸೇರಿದಂತೆ ವಿವಿಧ ಇಲಾಖೆಗಳಿಗೂ ಸಹ ವಾರ್ಷಿಕ ಗುರಿಯನ್ನು ನಿಗದಿಪಡಿಸಿ, ಹೆಚ್ಚಿನ ಉದ್ಯೋಗ ಸೃಜನೆ ಆಗುವಂತೆ ನೋಡಿಕೊಳ್ಳಬೇಕು. ಅರಣ್ಯ ಇಲಾಖೆಯವರು ಈ ವರ್ಷ ೨. ೫ ಲಕ್ಷ ಸಸಿಗಳನ್ನು ಸರ್ಕಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನೆಡಲು ಗುರಿ ನಿಗದಿಪಡಿಸಿಕೊಂಡಿದ್ದು, ಮಳೆಗಾಲ ಪ್ರಾರಂಭವಾದ ಕೂಡಲೆ ಸಸಿಗಳನ್ನು ನೆಡುವ ಕಾರ್ಯ ಪ್ರಾರಂಭವಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೈಗಾರಿಕೆ ಸ್ಥಾಪನೆಗೆ ಪರವಾನಿಗೆ ಅಗತ್ಯವಿಲ್ಲ : ಕೈಗಾರಿಕೆ ಸ್ಥಾಪನೆಗೆ ಈ ಹಿಂದೆ ಕೈಗಾರಿಕೆ ಇಲಾಖೆಯಿಂದ ಕೇಂದ್ರ ಕಾಯ್ದೆ ವ್ಯಾಪ್ತಿಯಲ್ಲಿ ಪರವಾನಿಗೆ ನೀಡುವ ವ್ಯವಸ್ಥೆ ಇತ್ತು. ಆದರೆ ಇದೀಗ ಈ ನಿಯಮಕ್ಕೆ ತಿದ್ದುಪಡಿಯಾಗಿದ್ದು, ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಕೈಗಾರಿಕೆ ಸ್ಥಾಪಿಸಲು ಕೈಗಾರಿಕಾ ಇಲಾಖೆಯಿಂದ ಪರವಾನಿಗೆ ಪಡೆಯುವ ಅಗತ್ಯವಿಲ್ಲ. ಆದರೆ ಕೈಗಾರಿಕಾ ಕಟ್ಟಡಗಳನ್ನು ನಿರ್ಮಿಸಲು ಸಂಬಂಧಪಟ್ಟ ಗ್ರಾಮ ಪಂಚಾಯತಿಗಳಿಂದ ಅನುಮತಿ ಪಡೆಯುವುದು ಮಾತ್ರ ಕಡ್ಡಾಯವಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ನಾಗೇಶ್ ಸಭೆಯ ಗಮನಕ್ಕೆ ತಂದರು. ಈ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಅಲ್ಲದೆ ಗ್ರಾಮ ಪಂಚಾಯತಿಗಳಿಗೂ ಈ ಕುರಿತು ಹೆಚ್ಚಿನ ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್., ಜಿಲ್ಲಾ ಮತ್ತು ಜಾಗೃತ ಸಮಿತಿ ಸದಸ್ಯರುಗಳಾದ ಸತ್ಯನಾರಾಯಣರಾವ್ ದೇಶಪಾಂಡೆ ಮತ್ತು ಶೋಭಾ ನಗರಿ, ಅಲ್ಲದೆ ಜಿ.ಪಂ. ಉಪಕಾರ್ಯದಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

Please follow and like us:
error