ಬಯಲು ಬಹಿರ್ದೆಸೆ ಮುಕ್ತ ಗ್ರಾಮ ನಿರ್ಮಾಣದತ್ತ ಗಬ್ಬೂರು- ಜಿಪಂ ಸಿಇಓ ರಾಮಚಂದ್ರನ್

ceo_koppal_swacha_bharatಕೊಪ್ಪಳ, : ಸ್ವಚ್ಛ ಭಾರತ್ ಯೋಜನೆಯಡಿ ತಾಲೂಕಿನ ಗುಳದಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಬ್ಬೂರು ಗ್ರಾಮವು ಶೀಘ್ರ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗ್ರಾಮವಾಗಿ ನಿರ್ಮಾಣವಾಗಲಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಹೇಳಿದರು.
ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಪ್ರೇರೇಪಿಸಲು ಗುಳದಳ್ಳಿ ಗ್ರಾ.ಪಂ ವ್ಯಾಪ್ತಿಯ ಗಬ್ಬೂರು ಗ್ರಾಮದಲ್ಲಿ ಹೊಸಪೇಟೆ ಆಕಾಶವಾಣಿ ಕೇಂದ್ರವು ಮಂಗಳವಾರದಂದು ಭೇಟಿ ನೀಡಿ, ಬಯಲು ಶೌಚ ಮುಕ್ತ ಮಾಡುವ ಉದ್ದೇಶದಿಂದ ಗಬ್ಬೂರು ಗ್ರಾಮದಲ್ಲಿ ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳೊಂದಿಗಿನ ವಿಚಾರ ವಿನಿಮಯವನ್ನು ಒಂದು ಗಂಟೆಗಿಂದ ಹೆಚ್ಚು ಕಾಲ ನೇರ ಪ್ರಸಾರ ಕಾರ್ಯಕ್ರಮ ಹಮ್ಮಿಕೊಂಡಿತು.
ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಜಿ.ಪಂ ಸಿಇಒ ಆರ್.ರಾಮಚಂದ್ರನ್ ಅವರು ಬಯಲು ಮಲ ವಿಸರ್ಜನೆಯಿಂದಾಗುವ ತೊಂದರೆಗಳ ಕುರಿತು ವಿವರಿಸಿದರು. ವೈಯಕ್ತಿಕ ಶೌಚಾಲಯ ಹೊಂದಿರದ ಮಕ್ಕಳು ತಮ್ಮ ಪಾಲಕರು, ಪೋಷಕರಿಗೆ ಶೌಚಾಲಯ ನಿರ್ಮಿಸುವಂತೆ ಪತ್ರ ಬರೆಯಬೇಕು ಎಂದು ಹೇಳಿದರು. ನಂತರ ಆಕಾಶವಾಣಿಯ ನೇರ ಪ್ರಸಾರದಲ್ಲಿ ಮಾತನಾಡಿ ಗಬ್ಬೂರು ಗ್ರಾಮದಲ್ಲಿ ಪರಿಣಾಮಕಾರಿಯಾಗಿ ಫಾಲೋಅಪ್ ಕಾರ್ಯ ನಡೆಯುತ್ತಿದ್ದು, ತ್ವರಿತವಾಗಿ ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತ ಮಾಡಲು ಕ್ರಮವಹಿಸಲಾಗುತ್ತದೆ. ಗ್ರಾಮದಲ್ಲಿ ಒಟ್ಟು ೨೮೮ ಕುಟುಂಬಗಳಿದ್ದು, ಈಗಾಗಲೇ ೨೫೪ ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿವೆ. ೧೪ ಕುಟುಂಬಗಳ ಶೌಚಾಲಯ ನಿರ್ಮಾಣ ಪ್ರಗತಿಯಲ್ಲಿದೆ, ಬಾಕಿ ಉಳಿದ ೨೦ ಕುಟುಂಬಗಳ ಶೌಚಾಲಯಗಳನ್ನು ಶೀಘ್ರದಲ್ಲಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಇದಕ್ಕೂ ಮುನ್ನ ಬೆಳ್ಳಂಬೆಳಿಗ್ಗೆ ಜಿ.ಪಂ ಸಿಇಒ ಹಾಗೂ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮನೆ ಮನೆಗೆ ತೆರಳಿ ಶೌಚಾಲಯ ಹಾಗೂ ಸ್ವಚ್ಛತೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಹೊಸಪೇಟೆ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಅನುರಾಧ ಕಟ್ಟಿ, ಗ್ರಾ.ಪಂ ಸದಸ್ಯ ಹನುಮಂತಪ್ಪ ಕುರಿ, ಪಿಡಿಒ ಶಿವಬಸಪ್ಪ, ಸ್ವಚ್ಛ ಭಾರತ್ ಮಿಷನ್ ಸಮಾಲೋಚಕರು, ಶಾಲಾ ಶಿಕ್ಷಕರು, ಮಕ್ಕಳು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸ್ವ-ಸಹಾಯ ಸಂಘದ ಮಹಿಳೆಯರು, ಜಾಗೃತಿ ತಂಡದ ಸದಸ್ಯರಾದ ಕುಬೇರಪ್ಪ ಮಜ್ಜಿಗಿ, ಸಿದ್ದಪ್ಪ, ರಾಮಣ್ಣ, ಅಲಿಸಾಬ್,ಲಕ್ಷ್ಮಣ, ಮೇಲಪ್ಪ, ಗ್ರಾ.ಪಂ ಸಿಬ್ಬಂದಿಗಳು ಭಾಗವಹಿಸಿ ಆಕಾಶವಾಣಿ ಕಾರ್ಯಕ್ರಮದ ನೇರಪ್ರಸಾರದಲ್ಲಿ ತಮ್ಮ ಅನುಭವ ಹಂಚಿಕೊಂಡರು.

Please follow and like us:
error