ಪ್ರಧಾನಿ ಮೋದಿ ಮನ್ ಕಿ ಬಾತ್ ನಲ್ಲಿ ಕೊಪ್ಪಳದ ಮಲ್ಲಮ್ಮ

ಮೋದಿ ಮೆಚ್ಚಿದ ಮಲ್ಲಮ್ಮ

modi_mann_ki_baatಮಕ್ಕಳು ಯಾವ್ಯಾವುದೋ ವಿಷಯಕ್ಕೆ ಹಠ ಮಾಡುತ್ತಾರೆ. ಆದರೆ ಇವಳು ಹಠ ಮಾಡಿ ಉಪವಾಸ ಕುಳಿತಿದ್ದಳು.   ಹಠಮಾಡಿ ತನಗೆ ಬೇಕಾಗಿದ್ದನ್ನು ಸಾಧಿಸಿಕೊಂಡಳು . ಅವಳ ಸತ್ಯಾಗ್ರಹಕ್ಕೆ ಜಯ ಸಿಕ್ಕಿತ್ತು. ಅವಳ ಸತ್ಯಾಗ್ರಹದ ವಿಷಯ ಪ್ರಧಾನಿಯವರೆಗೂ ಮುಟ್ಟಿತ್ತು. ಪ್ರಧಾನಿ ನರೇಂದ್ರ ಮೋದಿ ಅವಳನ್ನು ತಮ್ಮ ಮನ್ ಕಿ ಬಾತ್  ನಲ್ಲಿ ಶ್ಲಾಘಿಸಿದರು. ಕೊಪ್ಪಳ ಮತ್ತು ಕರ್ನಾಟಕದ ಕೀರ್ತಿ ಹೆಚ್ಚಿದ ಆ ವಿದ್ಯಾರ್ಥಿನಿಯ ಸಾಧನೆ .

watch video

ಕೊಪ್ಪಳದ ಗಂಗಾವತಿ ತಾಲೂಕಿನ ಡಣಾಪುರ ಗ್ರಾಮದ ಸರಕಾರಿ ಹಿರಿಯ ಪ್ರೌಢ ಶಾಲೆಯ ೧೦ ನೇ ತರಗತಿಯ ವಿದ್ಯಾರ್ಥಿನಿ ಮಲ್ಲಮ್ಮ ಇಂದು ಇಡೀ ದೇಶದಲ್ಲಿ ಹೆಸರುವಾಸಿಯಾದಳು. ಯಾಕಂತೀರಾ  ಶೌಚಾಲಯಕ್ಕಾಗಿ ಉಪವಾಸ ಕುಳಿತಿದ್ದಕ್ಕಾಗಿ ಹೌದು. ಮಲ್ಲಮ್ಮ ಎನ್ನುವ ಈ ವಿದ್ಯಾರ್ಥಿನಿ  ಮಿಠಾಯಿ ಬೇಕು, ಗೊಂಬೆ ಬೇಕು, ಬಟ್ಟೆ ಬೇಕು ಎಂದು ಉಪವಾಸ ಕುಳಿತಿದ್ದಿಲ್ಲ. ಅವಳು ಶೌಚಾಲಯಕ್ಕಾಗಿ ಮನೆಯಲ್ಲಿ   ಉಪವಾಸ ಮಾಡಿದ್ದಳು.  ಜುಲೈ ತಿಂಗಳ ಮೊದಲ ವಾರದಲ್ಲಿ ಇಂತಹ ವಿಶಿಷ್ಠ ಪ್ರಯತ್ನದಿಂದ ಮನೆಯವರನ್ನು ಒಪ್ಪಿಸಿದ್ದಾಳೆ. ಗ್ರಾಮ ಪಂಚಾಯತಿ ಅಧ್ಯಕ್ಷರು, ಅಧಿಕಾರಿಗಳು, ಆಶಾ ಕಾರ್ಯಕರ್ತೆರು ಸುಮಾರು ಬಾರಿ ಗ್ರಾಮದ ಮನೆ ಮನೆಗೆ ಭೇಟಿ ನೀಡಿ ಶೌಚಾಲಯವನ್ನು ನಿರ್ಮಿಸಿಕೊಳ್ಳುವುದರ ಕುರಿತು ಜಾಗೃತಿ ಮೂಡಿಸಿದರು. ಆದರೂ ಇನ್ನೂ ಗ್ರಾಮ  ಬಯಲು ಶೌಚಾಲಯ ಮುಕ್ತ ಗ್ರಾಮವಾಗಿಲ್ಲ.  ಮಲ್ಲಮ್ಮ ಅವರ ತಾಯಿ ಸಣ್ಣ ನಿಂಗಮ್ಮ ಮಗಳ ಹಠಕ್ಕೆ ಮಣಿದಿದ್ದಾರೆ. ದೇವದಾಸಿಯಾದ ಸಣ್ಣ ನಿಂಗಮ್ಮ ಅವರು ಮನೆಯಲ್ಲಿ ದೊಡ್ಡವರು ಎನ್ನಿಸಿಕೊಂಡ ಗಂಡು ಮಕ್ಕಳು ಯಾರು ಇಲ್ಲ. ಶೌಚಾಲಯಕ್ಕೆ ಬೇಕಾದ ಸಾಮಾಗ್ರಿಗಳನ್ನು ಪಟ್ಟಣಕ್ಕೆ ಹೋಗಿ ತರಲು ನಮ್ಮಿಂದ ಆಗುವುದಿಲ್ಲ ಎಂಬ ಕಾರಣದಿಂದ ಶೌಚಾಲಯ ನಿರ್ಮಿಸಿಕೊಳ್ಳುವುದನ್ನೇ ಕೈ ಬಿಟ್ಟಿದ್ದರು. ಅದರ ವಿರುದ್ಧವಾಗಿ ಮಲ್ಲಮ್ಮ ಊಟ ಬಿಡುವ ಮೂಲಕ ಹಠ ಹಿಡಿದು ತಾಯಿಯನ್ನು ಒಪ್ಪಿಸಿದ್ದಾರೆ.  ಕೊನೆಗೂ ಅವಳ ಉಪವಾಸ ಸತ್ಯಾಗ್ರಹ ಕ್ಕೆ ಜಯಸಿಕ್ಕಿದೆ. ಗ್ರಾಮ ಪಂಚಾಯತಿ ಅಧ್ಯಕ್ಷ ಶಫೀ ಹಾಗೂ ಸದಸ್ಯ ಬೀರಲಿಂಗಪ್ಪ ಆ ಮನೆಗೆ ಶೌಚಾಲಯವನ್ನು ನಿರ್ಮಿಸಿ ಕೊಡುವ ಹೊಣೆ ಹೊತ್ತುಕೊಂಡರು. . ಈ ಮಾಹಿತಿ ತಿಳಿದು ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ರಾಮಚಂದ್ರನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ನಂತರ ಅವರು ವಿದ್ಯಾರ್ಥಿನಿಯೊಂದಿಗೆ ಮಾತುಕತೆ ನಡೆಸಿದ್ರು. ಆದಷ್ಟು ಬೇಗನೆ ನಿಮ್ಮ ಮನೆಗೆ ಶೌಚಾಲಯ ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು. ನಂತರ ಅದರಂತೆ ಶೌಚಾಲಯ ನಿರ್ಮಿಸಿಕೊಟ್ಟರು. ಶೌಚಾಲಯ ಮುಕ್ತ ಜಿಲ್ಲೆ ಎಂದು ಇಡೀ ರಾಷ್ಟ್ರದಲ್ಲಿಯೇ ಹೆಸರು ಮಾಡಿ ಪ್ರಶಸ್ತಿ ಪುರಸ್ಕಾರ ಪಡೆದಿರುವ ಜಿಲ್ಲೆಯನ್ನು ೨೦೧೬-೧೭ ನೇ ಸಾಲಿಗೆ ಬಯಲು ಶೌಚಾ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಉದ್ದೇಶದಿಂದ ಅಧಿಕಾರಿಗಳು, ರಾಜಕಾರಣಿಗಳು ನಾನಾ ಕಸರತ್ತುಗಳನ್ನು ಮಾಡುತ್ತ ಜನರ ಮನ ಒಲಿಸಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವಂತೆ ಮಾಡುತ್ತಿದ್ದಾರೆ. ಆದರೆ ವಿದ್ಯಾರ್ಥಿನಿಯೇ ತಮ್ಮ ಮನೆಯಲ್ಲಿ ಶೌಚಾಲಯ ಇಲ್ಲದಕ್ಕೆ ಊಟ ಮಾಡುವುದನ್ನೇ ಬಿಟ್ಟು ಮನೆಯವರನ್ನು ಶೌಚಾಲಯ ನಿರ್ಮಿಸಿಕೊಳ್ಳವಂತೆ ಮನ ಒಲಿಸಿರುವುದು ನಿಜಕ್ಕೂ ದಾಖಲೆಯೇ ಸರಿ. ಇವಳ ಈ ಸಾಧನೆ ಪ್ರಧಾನಿಯವರಿಗೆ ತಲುಪಿತ್ತು. ಇಂದು ತಮ್ಮ ಮನ್ ಕಿ ಬಾತ್ ನಲ್ಲಿ ಕೊಪ್ಪಳದ ಮಲ್ಲಮ್ಮಳ ಸಾಧನೆಯನ್ನು ಕೊಂಡಾಡಿದರು. ಜೊತೆಗೆ ಗ್ರಾಮ ಪಂಚಾಯತ ಅಧ್ಯಕ್ಷ ಮಹ್ಮದ ಶಫಿ ಶೌಚಾಲಯ ಕಟ್ಟಿಕೊಳ್ಳುವುದಕ್ಕೆ  ಸಹಾಯ ಮಾಡಿದ್ದು ಮತ್ತು ಅಧಿಕಾರಿಗಳ ಪ್ರಯತ್ನವನ್ನು ಶ್ಲಾಘಿಸಿದರು. ಶೌಚಾಲಯಕ್ಕಾಗಿ ಉಪವಾಸ ಮಾಡಿ ಗೆದ್ದ ಮಲ್ಲಮ್ಮಳನ್ನು ಅಗಸ್ಟ್ 15ರಂದು ಜಿಲ್ಲಾಡಳಿತ ಸನ್ಮಾನ ಮಾಡಿತ್ತು. ಮಲ್ಲಮ್ಮಳ ಉಪವಾಸ ಸತ್ಯಾಗ್ರಹ ಇಡೀ ದೇಶದಲ್ಲಿಂದು ಹೆಸರು ಮಾಡಿದೆ.

Please follow and like us:
error

Related posts

Leave a Comment