ಪೋಲಿಸ್ ಠಾಣೆಗಳಲ್ಲಿ ದಲಿತ ದಿನಾಚರಣೆಯನ್ನು ಆಚರಿಸಲು ಗೃಹಸಚಿವರಿಗೆ ಮನವಿ

ಕೊಪ್ಪಳ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾಸಾಹೇಬ್ ಎನ್ ಮೂರ್ತಿ ಸ್ಥಾಪಿತ) ರಾಜ್ಯ ಸಮಿತಿ ಯಿಂದ ಜಿಲ್ಲೆಗೆ ಬರ ಪರಿಶಶೀಲನಾ ಸಭೆಗೆ ಆಗಮಿಸಿದ ರಾಜ್ಯದ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಈಗಾಗಲೇ ರಾಜ್ಯದ ಎಲ್ಲಾ ಪೋಲೀಸ್ ಠಾಣೆಗಳಲ್ಲಿ ಪ್ರತಿ ೨ನೇ ರವಿವಾರ ಮತ್ತು ಕೊನೆಯ ರವಿವಾರದಂದು ದಲಿತ ದಿನಾಚರಣೆಯನ್ನು ಆಚರಿಸಬೇಕು ಎಂದು ರಾಜ್ಯ ಪೋಲೀಸ್ ಇಲಾಖೆ ೧೯೮೫ ರಿಂದ ಇದುವರೆಗೂ ಹಲವಾರು ಬಾರಿ ಆದೇಶ ನೀಡಿದರೂ ಸಹ ಕೊಪ್ಪಳ ಜಿಲ್ಲೆಯ ಪೋಲೀಸ್ ಠಾಣೆಗಳಲ್ಲಿ ಇದುವರೆಗೂ ಆಚರಣೆ ಬಂದಿಲ್ಲ. ಈ ಕುರಿತು ಸರ್ಕಾರ ೨೦೧೫ ರ ಡಿಸೆಂಬರ್ ೧೫ ರಂದು ಮತ್ತೆ ಸುತ್ತೋಲೆಯನ್ನು ಹೊರಡಿಸಿದೆ. ಆದರೂ ಅಧಿಕಾರಿಗಳು ಈ ಆದೇಶವನ್ನು ಪಾಲಿಸುತ್ತಿಲ್ಲ. ಕಾಟಾಚಾರಕ್ಕೆ ವರ್ಷಕ್ಕೊಮ್ಮೆ ಸಭೆಗಳನ್ನು ನಡೆಸುವ ಮೂಲಕ ದಲಿತ ವಿರೋಧಿನೀತಿ ಅನುಸರಿಸುತ್ತಿದ್ದಾರೆ. ಈ ಆದೇಶ ಪಾಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ರಾಜ್ಯ ಸಮಿತಿ ಹಿರಿಯ ಸದಸ್ಯ ಹಾಗೂ ಜಿಲ್ಲಾ ಪ.ಜಾತಿ ಪ.ಪಂ ದೌರ್ಜನ್ಯ ತಡೆ ಜಿಲ್ಲಾ ಜಾಗೃತಿ ಸಮಿತಿ ಹಾಗೂ ಉಸ್ತುವಾರಿ ಸಮಿತಿ ಸದಸ್ಯ ಡಾ|| ಬಿ.ಜ್ಞಾನಸುಂದರ ಆಗ್ರಹೀಸಿದರು. ಹಾಗೂ ಈ ಜಿಲ್ಲೆಯಲ್ಲಿ ಅಸ್ಪರ್ಶತೆ ತಾಂಡವವಾಡುತ್ತಿದ್ದು, ಸಂಬಂದಪಟ್ಟ ಗ್ರಾಮ ಪಂಚಾಯತಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಬೇಕು. ಅಸ್ಪರ್ಶತೆ ಮಾಡುತ್ತಿರುವ ಹೋಟೆಲ್ ಕ್ಷೌರದಂಗಡಿಗಳ ಪರವಾನಿಗೆಯನ್ನು ರದ್ದುಪಡಿಸಬೇಕು. ಪರವಾನಿಗೆ ನೀಡುವಾಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಅರಿವು ಮೂಡಿಸಲು ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಅಲ್ಲದೇ ದಲಿತರ ಕುಂದು ಕೊರತೆ ನಿವಾರಿಸಲು ಜಿಲ್ಲಾ ಮಟ್ಟದಲ್ಲಿ ಪೋಲೀಸ್ ವರಿಷ್ಠಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ಕಡ್ಡಾಯವಾಗಿ ಸಭೆಯನ್ನು ಏರ್ಪಡಿಸತಕ್ಕದ್ದು, ಅಲ್ಲದೇ ೨೦೧೦-೧೧ ರಿಂದ ಇಲ್ಲಿಯವರೆಗೆ ಭೂ ಒಡೆತನ ಯೋಜನೆ ಅನುಷ್ಠಾನಗೊಂಡಿರುವುದಿಲ್ಲ. ಹಲವಾರು ಸಭೆ ಸಮಾರಂಭಗಳಲ್ಲಿ ಸಚಿವರ ತ್ರೈಮಾಸಿಕ ಸಭೆಯಲ್ಲಿ ವಿಷಯ ಗಂಭಿರವಾಗಿ ಚರ್ಚಿಸಿದರೂ ಯೋಜನೇ ಜಾರಿ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ರಮ ಕೈಗೊಂಡಿರುವುದಿಲ್ಲ. ಈ ವಿಷಯವನ್ನು ಸಹ ಗಂಭಿರವಾಗಿ ಪರಿಗಣಿಸಿ ಯೋಜನೆ ಸಮರ್ಪಕವಾಗಿ ಜಾರಿಯಾಗಲು ಸಂಬಂದಪಟ್ಟವರಿಗೆ ನಿರ್ದೇಶಿಸಬೇಕು. ಬ್ಯಾಂಕ್‌ಗಳಲ್ಲಿ, ವಿವಿಧ ಸಹಕಾರಿಗಳಲ್ಲಿ ದಲಿತರಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೋಲೀಸ್ ಸಿಬ್ಬಂದಿಗಳಿಗೆ ಮೂಲಸೌಕರ್ಯಗಳನ್ನು ಒದಗಿದಲು ಕ್ರಮವಹಿಸಿ, ಅವರ ಕುಟುಂಬಗಳಿಗೆ ವಾಸಿಸಲು ಸಮರ್ಪಕವಾದ ಮನೆಗಳ ಕೊರತೆ ಇದ್ದು ಕನಿಷ್ಠ ೧೦ ಎಕರೆ ಜಮೀನು ಖರೀದಿಸಿ ಸೌಕರ್ಯ ಒದಗಿಸಬೇಕು. ಮತ್ತು ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಗಳು ಸರಿಯಾಗಿ ಅನುಷ್ಠಾನಗೊಳಿಸಲು ಸೂಕ್ತ ಕ್ರಮವಹಿಸಬೇಕು ಎಂದು ಒತ್ತಾಯಿಸಿ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಕೆ.ಲಕ್ಷ್ಮಣ, ಎಸ್.ಓಬಳೇಶ, ರಾಮಣ್ಣ ಕಂದಾರಿ ಮುಂತಾದವರು ಉಪಸ್ಥಿತರಿದ್ದರು.

Related posts

Leave a Comment